00604. ಕೋಡಗನ ಕೋಳಿ ನುಂಗಿತ್ತಾ


00604. ಕೋಡಗನ ಕೋಳಿ ನುಂಗಿತ್ತಾ
_____________________________

ಬ್ಲಾಗರ್ ಸುಪರ್ಣ ಅವರ ಬ್ಲಾಗಿನಲ್ಲಿ ಶರೀಫರ 'ಕೋಡಗಾನ ಕೋಳಿ ನುಂಗಿತ್ತ' ಸಾಲುಗಳನ್ನು ಹಾಕಿ ಅದರ ಅರ್ಥಗ್ರಹಿಕೆಯನ್ನು ನಾನರಿತಂತೆ ವಿವರಿಸಲು ಕೋರಿದರು. ನಾನು ಸುಮಾರು ದಿನಗಳಿಂದಲೂ ಇದರ ಅಳಕ್ಕಿಳಿದು ಪ್ರಯತ್ನಿಸಬೇಕೆಂದು ಅಂದುಕೊಂಡಿದ್ದರು ಸಾಧ್ಯವಾಗಿರಲಿಲ್ಲ. ಈ ನೆಪದಲ್ಲಾದರೂ ಪ್ರಯತ್ನಿಸಬಾರದೇಕೆ ? ಅನಿಸಿತು. ಅದರ ಫಲಿತ ಈ ಸುಧೀರ್ಘ ವಿವರಣೆ (ಕ್ಷಮಿಸಿ, ಚಿಕ್ಕದಾಗಿ ಬರೆಯಲಾಗದಿರುವುದು ನನ್ನ ಸೀಮಿತತೆ).

ಈ ವಿವರ ಪೂರ್ತಿ ನನ್ನ ಮನಸಿನ ಅನಿಸಿಕೆಯಾದ ಕಾರಣ ಇದು ಸರಿಯಾದ ಅಥವಾ ಸಂಪೂರ್ಣ ವ್ಯಾಖ್ಯೆಯೆಂದು ಹೇಳುವ ಧಾರ್ಷ್ಟ್ಯ ನನ್ನಲ್ಲಿಲ್ಲ. ಇರಬಹುದಾದ ಅನೇಕ ವಿವರಗಳ ಜತೆಗೆ ಇದೂ ಕೂಡ ಹೊಂದಿಕೊಳ್ಳಬಹುದಾದ ಮತ್ತೊಂದು ವಿವರಣೆಯೆಂದು ಪರಿಗಣಿಸಲು ಅಡ್ಡಿಯಿಲ್ಲವೆಂದುಕೊಂಡು ಸೇರಿಸುತ್ತಿದ್ದೇನೆ – ಇದಕ್ಕೆ ಪ್ರಚೋದನೆಯಿತ್ತ ಗೆಳತಿ ಸುಪರ್ಣರಿಗೆ ಥ್ಯಾಂಕ್ಸ್ ಹೇಳುತ್ತ…

ಸುಪರ್ಣಾರ ಕೋರಿಕೆಯ ಬ್ಲಾಗು ಲಿಂಕು ಇಲ್ಲಿದೆ: https://suparnabs.wordpress.com/2016/03/20/245/

ಸುಧೀರ್ಘತೆಯ ಕಾರಣ ವಿವರಣೆಯನ್ನು ಎರಡು ಭಾಗವಾಗಿ ನೀಡಿದ್ದೇನೆ. ಮೊದಲನೆಯದು ಸಂಕ್ಷಿಪ್ತ ಒಟ್ಟಾರೆ ಸಾರಾಂಶ. ಎರಡನೆಯ ಭಾಗದಲ್ಲಿ ಸಾಲಿನ ವಿಶ್ಲೇಷಣಾತ್ಮಕ ವಿವರಣೆ. ಓದುಗರು ತಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು – ಬರಿ ಸಂಕ್ಷಿಪ್ತ ಸಾರಾಂಶ ಅಥವಾ ಜತೆಗಿನ ವಿವರಣಾತ್ಮಕ ಟಿಪ್ಪಣಿ 😊

೦೧. ಸಂಕ್ಷಿಪ್ತ ಒಟ್ಟಾರೆ ಸಾರಾಂಶ
____________________

ಮೊದಲಿಗೆ ಸಾರದಲ್ಲಿ ನನ್ನ ಒಟ್ಟಾರೆ ಗ್ರಹಿಕೆಯೆಂದರೆ, ಇಲ್ಲಿರುವ ಪ್ರತಿ ಪಂಕ್ತಿಯೂ ಒಂದೊಂದು ಮೈಲಿಗಲ್ಲಿನ ಸಂಕೇತದಂತೆ ಬದುಕಿನ ಮತ್ತು ವ್ಯಕ್ತಿಯ ವಿಭಿನ್ನ ಮಜಲುಗಳನ್ನು, ಹೊಯ್ದಾಟಗಳನ್ನು ಸಾಂಕೇತಿಸುವಂತೆ ಭಾಸವಾಗುತ್ತದೆ. ಉದಾಹರಣೆಗೆ ಚಂಚಲ ಮನಸ್ಸು – ಇದು ಇತರ ಎಲ್ಲವನ್ನು ನಿಯಂತ್ರಿಸುವ, ನಿಭಾಯಿಸುವ ಮೂಲ ಪ್ರೇರಕ ಶಕ್ತಿ. ಹೀಗಾಗಿ ಮೊದಲ ಪಂಕ್ತಿಯಾಗಿ ಬಂದ ಈ ಮನಸಿನ ಕುರಿತಾದ ಸಾಲುಗಳು ಪಲ್ಲವಿಯಾಗಿ ಪ್ರತಿ ಪಂಕ್ತಿಯಲ್ಲೂ ಅನುರಣಿಸುತ್ತವೆ – ಎಲ್ಲೆಡೆಯೂ ಹಿನ್ನಲೆಯಲಿದ್ದು ಆಡಿಸುವ ಅದರ ಚಿತಾವಣೆಯ ಪ್ರತೀಕವಾಗಿ.   

ಎರಡನೆ ಪಂಕ್ತಿಯಲ್ಲಿ ಕಾಣುವ ಅಹಮಿಕೆಯನ್ನು ಮೀರಿಸುವ ಸೌಜನ್ಯ ಮತ್ತು ಅಂತರಂಗ ಶುದ್ಧಿಯ ಜತೆಗೆ ನನಗೆ ಕಾಣಿಸಿದ್ದು ಮಾತಿನ ಮಹತ್ವದ ವರ್ಣನೆ. ಬಂಧ ಕಟ್ಟುವುದು ಮಾತೆ, ಮುರಿಯುವುದು ಮಾತೆ. ಅದಕ್ಕೆಷ್ಟು ಅಲಂಕಾರದ ಬಣ್ಣ ಹಚ್ಚಿದರು ಒಳಗಣ ಗಟ್ಟಿತನವಿರದಿದ್ದರೆ ಹೊರಗನ್ನು ಪೇಲವವಾಗಿಸಿಬಿಡುತ್ತದೆ ಮಾತಾಟದ ಪರಿ – ಮುಖ್ಯ ವಾದ್ಯಕ್ಕಿಂತ ಪಕ್ಕವಾದ್ಯವೇ ಪ್ರಾಮುಖ್ಯವಾಗಿ ಹೋದಂತೆ. 

ಇನ್ನು ಮೂರನೆಯ ಪಂಕ್ತಿ ಬದುಕಿನಲ್ಲಿ ಎದುರಿಸಬೇಕಾದ ಕಷ್ಟ ಕಾರ್ಪಣ್ಯ , ತೊಡಕು, ದ್ವಂದ್ವಗಳನ್ನು ಧ್ವನಿಸುತ್ತದೆ. ನೆಟ್ಟಗೆ ನಡೆಯುವ ಬಾಳನ್ನು ಹಾಗಿರಲು ಬಿಡದೆ ಜಾರಿದ ಒನಕೆಯಾಗಿಯೊ, ಮುರಿದ ಗೂಟವಾಗಿಯೊ, ಬರಿ ಮೆಲುಕಷ್ಟೆ ಆದ ನೆನಪಾಗಿಯೋ ಆಗಿಸಿ ಕಾಡುವುದನ್ನು ಪ್ರತಿಬಿಂಬಿಸುತ್ತದೆ.

ಇನ್ನು ನಾಲ್ಕನೇ ಪಂಕ್ತಿ ಅಂತಹ ಬದುಕನ್ನು ನೀಸುತ್ತ ನಡೆಯಲು ಮಾಡಬೇಕಾದ ಹೋರಾಟವನ್ನು ಕರ್ಮಸಿದ್ದಾಂತದಂತೆ ಪ್ರತಿನಿಧಿಸುತ್ತದೆ – ಮಗ್ಗದ ಸಂಕೇತದ ಮೂಲಕ. ಅದು ಅಂತಿಮ ಗಮ್ಯವೋ ಅಲ್ಲವೋ ಎನ್ನುವ ಅರಿವೂ ಇಲ್ಲದೆ ಸುಮ್ಮನೆ ನಿಮಿತ್ತ ಮಾತ್ರರಾಗಿ ಹೊಡೆದಾಡುತ್ತ ಬದುಕು ಸಾಗಿಸುವ, ಅದರಲ್ಲೇ ಕಳುವಾಗಿಹೋಗುವ ಅನಿವಾರ್ಯ, ಸಂದಿಗ್ದಗಳು ಅದರ ತಾಯ್ಪರ್ಯ..

ಇದೆಲ್ಲ ಸಾಗಿ ಕೊನೆಯ ಪಂಕ್ತಿಗೆ ಬಂದಾಗ ಕಾಣುವುದೆ ಪರಿಹಾರದ ದಾರಿ… ಜೀವನ ಜಂಜಾಟ ಹೀಗೆಲ್ಲ ದಿಕ್ಕೆಡಿಸುತ್ತಲೆ ಇರುತ್ತದೆ. ಆದರೆ ಗುರುವೊಂದು ಅರಿವಾದಾಗ ಈ ಎಲ್ಲ ಸಡಿಲ ಸೂತ್ರಗಳನ್ನು ಬಂಧಿಸಿ ನಿಜ ಗಮ್ಯದತ್ತ ನಡೆಸುವ ಹೆದ್ದಾರಿ ಕಾಣಿಸುತ್ತದೆ, ಶರಣಾಗತ ಭಾವದ ವಿನಯದೊಂದಿಗೆ. 

೦೨. ವಿವರಣಾತ್ಮಕ ಟಿಪ್ಪಣಿ
_________________


ಕೋಡಗನ ಕೋಳಿ ನುಂಗಿತ್ತಾ
ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ ||ಪ||

ಮೊದಲಿಗೆ ಈ ಕೆಲವು ಸರಳ ಪದಗಳ ಅರ್ಥವೇನಿದೆ ನೋಡಿ ನಂತರ ಒಟ್ಟರ್ಥವನ್ನು ಹುಡುಕುವ ಯತ್ನ ಮಾಡೋಣ.

ಕೋಡಗ ಅಂದರೆ ಕೋತಿ, ಕಪಿ, ಅಥವಾ ಆ ರೀತಿಯ ಚಂಚಲ ಮನ ಅಥವಾ ಸ್ವಭಾವ ಇರುವ ವ್ಯಕ್ತಿ ಎಂದರ್ಥವಿದೆ. ಹಾಗೆಯೇ ಕೋಳಿ ಎಂದಾಗ ನಮಗೆಲ್ಲ ಗೊತ್ತಿರುವ ಕುಕ್ಕುಟ ಪಕ್ಷಿ ಮಾತ್ರವಲ್ಲದೆ ಹಳದಿ ಮತ್ತು ಕೆಂಪು ಬಣ್ಣಗಳ ಹೂವುಗಳಿಂದ ತುಂಬಿದ ಕುಟುಮನ ಗಿಡ ಎಂಬ ಇನ್ನೊಂದು ಅರ್ಥವೂ ಇದೆ..

ಇನ್ನು ಮೇಲ್ನೋಟಕ್ಕೆ ನೋಡಿದರೆ ಕೋತಿಯನ್ನ ಕೋಳಿಯೊಂದು ನುಂಗಿತ್ತ ಎನ್ನುವ ಅರ್ಥ ಕಾಣುತ್ತದೆ. ಇದು ಸಾಧುವೆ ? ಕೋಳಿ ನೆಲದಲ್ಲಿ ಸಿಕ್ಕುವ ಹುಳು ಹುಪ್ಪಟೆಗಳನ್ನಾಯ್ದು ತಿನ್ನುವ ಪ್ರಾಣಿ. ಅದಕ್ಕಿರುವ ಇಷ್ಟೆ ಅಗಲದ ಕೊಕ್ಕು ತೆರೆದು ಅದು ಕೋಡಗ ಅಥವಾ ಕೋತಿಯಂತ ದಢಿಯನನ್ನು ನುಂಗಿ ನಿಭಾಯಿಸಲು ಸಾಧ್ಯವೇ? ಹಾಗೆ ಯತ್ನಿಸಿದರೆ ತಾನೇ ಸುಲಭದಲ್ಲಿ ಬಿಟ್ಟುಬಿಡುವುದೆ ಕೋಡಗ ? ಹಾಗಾದರೆ ಏನಿದರ ನಿಜವಾದ ಒಳಾರ್ಥಾ ?

ಮೊದಲಿಗೆ ಇಲ್ಲಿನ ಸಾಂಕೇತಿಕತೆಯನ್ನು ಪರಿಗಣಿಸಿದರೆ – ದೊಡ್ಡದು ಎಂದು ಭಾವಿಸಿದ್ದನ್ನು ಚಿಕ್ಕದೊಂದು ಅಸ್ತಿತ್ವ ನುಂಗಿಬಿಟ್ಟಿತು ಎನ್ನುವಂತಿದೆ. ಅರ್ಥಾತ್ ಎಷ್ಟೋ ದೊಡ್ಡ, ಗಹನ ವಿಷಯಗಳನ್ನು ನುಂಗಿ ಹಾಕಿ ಮಣ್ಣುಪಾಲು ಮಾಡುವುದು ಎಷ್ಟೋಬಾರಿ ತೀರಾ ಕ್ಷುಲ್ಲಕ ಅಥವಾ ಕ್ಷುದ್ರ ವಿಷಯಗಳೇ.. ದೊಡ್ಡದೊಡ್ಡ ಜೀವಿಗಳ ಅಂತಃಸತ್ವವನ್ನು ಅಲ್ಲಾಡಿಸಿ ಅವನ್ನು ನೆಲಕಚ್ಚಿಸುವ ಇಂತಹ ಸಣ್ಣ ಸಂಗತಿಗಳನ್ನು ಅದು ಸಣ್ಣದೆಂಬ ಕಾರಣಕ್ಕೆ ನಿರ್ಲಕ್ಷಿಸಿಬಿಡುತ್ತೇವೆ.. ಆದರೆ ಅವೇ ನಿಧಾನವಾಗಿ ಬೇರೂರಿ ವ್ಯಾಪಿಸಿಕೊಳ್ಳೂತ್ತ ದೊಡ್ಡವೆನಿಸಿಕೊಂಡವನ್ನು ಮಖಾಡೆ ಮಲಗಿಸಿಬಿಡಬಲ್ಲದೆಂದು ಇದರ ಒಳಾರ್ಥ.

ಆದರೆ ಇಲ್ಲಿ ಕಪಿ ಮತ್ತು ಕೋಳಿಯ ಪ್ರಸ್ತಾಪವೇ ಯಾಕೆ ಬರಬೇಕು ? ಬೇರೆ ಯಾವುದಾದರು ಪ್ರಾಣಿಯೂ ಅಗಬಹುದಿತ್ತಲ್ಲ ? ಅದಕ್ಕೂ ಸಕಾರಣ ತರ್ಕ ಇರುವಂತಿದೆ. ಕೋಡಗನೆಂದರೆ ಅದರಂತೆ ಆಡುವ ಚಂಚಲ ಮನದ ಸಂಕೇತ. ಮನಸೆಂಬುದು ದೊಡ್ಡ, ಅಗಾಧ ವ್ಯಾಪ್ತಿಯ ಅಳೆಯಲಾಗದ ಗಹನ.. ಆದರೆ ಅದನ್ನು ಕಂಗೆಡಿಸಿ ಆಟವಾಡಿಸಿ ದಾರಿ ತಪ್ಪಿಸುವುದು ಬಾಹ್ಯ ಜಗದ ಬಣ್ಣಬಣ್ಣದ ಸಣ್ಣಸಣ್ಣ ಪ್ರಚೋದನೆಗಳು… ಮಾಯೆಯೆಂಬ ಹೆಸರಲ್ಲಿ ಕಾಡುವ ಈ ಪ್ರಲೋಭನೆ ಸಣ್ಣದಾಗಿಯೆ ಕಂಡರು ವಿಶಾಲವಾಗಿ ಆವರಿಸಿಕೊಂಡು ಕಪಿ ಮನಕ್ಕೆ ಕಳ್ಳು ಕುಡಿಸಿ ಬೇಕಾದಂತೆ ಆಟವಾಡಿಸುವ ಮಹಾನ್ ಛಾತಿಯ ಮಾಯಾವಿ. ಇಲ್ಲಿ ಕೋಳಿಯ ಬಣ್ಣ ಬಣ್ಣದ ರೆಕ್ಕೆಪುಕ್ಕಗಳು (ಅಥವಾ ಆ ಹೆಸರಿನ ಗಿಡದಲ್ಲಿರುವ ಹಳದಿ ಕೆಂಪು ಹೂಗಳ ಆಕರ್ಷಣೆಯು) ಮಾಯೆಯ ಆಕರ್ಷಣೆಯಾಗಿ ಕೋಡಗನಂತೆ ಗಢವ (ಗಟ್ಟಿ) ಗಾತ್ರದಲ್ಲಿದ್ದ ಮನಸನ್ನು ಚಂಚಲವಾಗಿಸಿ ಸೋಲಿಸಿಬಿಡುವುದು (ನುಂಗಿಹಾಕಿಬಿಡುವುದು). ಹೀಗೆ ಚಿಕ್ಕದೆಂದುಕೊಂಡಿದ್ದ ದೊಡ್ಡದನ್ನು ಕೂಡ ಕೋಳಿ ಚೂರುಚೂರಾಗಿ ಕುಕ್ಕಿ ಕುಕ್ಕಿ ತಿಂದು ಬಿಡುವ ಹಾಗೆ, ನುಂಗಿಹಾಕಿಬಿಡುತ್ತವೆ – ವ್ಯಸನ, ಚಿಂತೆಗಳೆಂಬ ನೂರಾರು ಅವತಾರಗಳನ್ನು ತಾಳಿ. ಲೋಕದಲ್ಲಿ , ಬದುಕಿನಲ್ಲಿ ಇದನ್ನೆಲ್ಲಾ ಕಂಡ ಶಿಶುನಾಳರ ಕವಿ ಮನ ಇದನ್ನು ಗ್ರಹಿಸಿದ್ದು ಕೋಳಿಯೆ ಕೋಡಗನನ್ನು ನುಂಗುವ ಪ್ರತಿಮಾ ರೂಪದಲ್ಲಿ.. ಎರಡು ಸಾಲಿನ ಗ್ರಹಿಕೆಗೆ ವಿವರಣೆಯ ವ್ಯಾಖ್ಯೆಯೆ ಎಷ್ಟು ದೊಡ್ಡದಾಯಿತು ನೋಡಿ !ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ, ತಂಗಿ ||೧ ||

ಇಲ್ಲಿಯೂ ಮೊದಲ ಸಾಲಿನಲ್ಲಿ ಅದೇ ಸಾಂಕೇತಿಕತೆ – ' ಆಡು ಆನೆಯ ನುಂಗಿ ' ಎಂದಾಗ ಮೇಕೆಯಂತಹ ಸಣ್ಣ ಪ್ರಾಣಿಯೊಂದು ಆನೆಯಂತಹ ದೊಡ್ಡ ಗಾತ್ರದ್ದನ್ನು ನುಂಗಿ ಹಾಕಿತು ಎಂದು. ಇನ್ನು ಸ್ವಲ್ಪ ಆಳಕ್ಕಿಳಿದರೆ 'ಆಡು' ಪದವನ್ನು ನಾಮಪದವಾಗಿ ಮಾತ್ರ ಪರಿಗಣಿಸದೆ ಕ್ರಿಯಾಪದವಾಗಿ ನೋಡಿದರೆ ಅದಕ್ಕೆ (ಆಟ)ಆಡು, ನಿಂದಿಸು, ತೆಗಳು (ಆಡಿಕೊ) ಎಂಬೆಲ್ಲ ಅರ್ಥ ಬರುತ್ತದೆ. ಹಾಗೆಯೇ ಆನೆ ದೊಡ್ಡ ಗಾತ್ರದ ದ್ಯೋತಕ. ಇಲ್ಲಿ ಆನೆಯಂತ ದೊಡ್ಡ ಘನ ವ್ಯಕ್ತಿತ್ವದವರೆ ಆದರು ಆಡಿಕೊಳ್ಳುವವರ ಬಾಯಿಗೆ ಸಿಗುವಂತಹ ಕೆಲಸ ಮಾಡಿಬಿಟ್ಟರೆ ಮುಗಿಯಿತು. ಆ ಮಾತುಗಳೇ ಅವರನ್ನು ನುಂಗಿ ನೀರು ಕುಡಿದು ಬಿಡುತ್ತದೆನ್ನುವ ಅರ್ಥದಲ್ಲಿ ನೋಡಬಹುದು. ಮಾನ, ಮರ್ಯಾದೆಗಂಜುವ ನಮ್ಮ ಸಮಾಜದ ಪರಿಸ್ಥಿತಿಯಲ್ಲಿ ಮಾನ ಹೋಯಿತೆಂದು ಕುಗ್ಗಿ, ಕುಸಿದುಹೋದ ಎಷ್ಟು ಉದಾಹರಣೆಗಳಿವೆಯೊ! ಅಂತಹವರನ್ನು ನೋಡಿಯೇ ಆಡಿರಬೇಕು ಶಿಶುನಾಳರು ಆಡಿಕೊಳ್ಳೊ ಮಾತಿಗೆ ಆನೆಯಂತಹವನನ್ನು ನುಂಗಿಹಾಕಿಬಿಡುವ ಶಕ್ತಿ ಇದೆಯೆಂದು.

ಇನ್ನು ಗೋಡೆ ಸುಣ್ಣದ ಮಾತು ಹೇಳುವಂತೆಯೇ ಇಲ್ಲ.. ಸುಣ್ಣ ಬಳಿಯುವುದೆ ಗೋಡೆಯ ಅಲಂಕಾರಕ್ಕೆ ಮತ್ತು ಗೋಡೆಯ ಹುಳುಕೇನಾದರು ಇದ್ದಾರೆ ಮುಚ್ಚಿಹಾಕುವುದಕ್ಕೆ. ಗೋಡೆಯೆಂಬುದು ಮನೆಗಾಧಾರವಾದರು ಅದು ಶಿಥಿಲವಾಗದಿದ್ದರಷ್ಟೆ ತನ್ನ ಶಕ್ತಿಯಿಂದ ಮನೆಯನ್ನು ರಕ್ಷಿಸಬಲ್ಲದು. ಹೀಗಾಗಿ ಅದಕ್ಕೆ ಸಹಕಾರ ನೀಡುವ ಪಾತ್ರವಹಿಸಿದರೇನೊ ಸರಿ – ಸುಣ್ಣ ಅಲಂಕಾರಕ್ಕು ಆಗುತ್ತದೆ, ರಕ್ಷಣೆಗೂ ಸಹ. ಅದರ ಬದಲು ವಸ್ತಿ ಹಿಡಿದ ಗೋಡೆಯ ದೆಸೆಯಿಂದ ಸುಣ್ಣವೆ ಉದುರಿಹೋಗಿ, ತನ್ನ ರಕ್ಷಣಾ ಕವಚವನ್ನು ತಾನೇ ದುರ್ಬಲವಾಗಿಸಿಕೊಂಡುಬಿಟ್ಟರೆ ? ತನಗೆ ಹಚ್ಚಿದ ಸುಣ್ಣವನ್ನು ತಾನೇ ಕಬಳಿಸಿದ ಗೋಡೆ ಆಮೇಲೆ ಪ್ರಕೃತಿಶಕ್ತಿಗೆದುರಾಗಿ ಉಳಿಯಲು ಸಾಧ್ಯವೇ ? ಅಂತೆಯೇ ಪ್ರತಿಯೊಬ್ಬರ ಬದುಕಿನಲ್ಲೂ ಯಾವುದೋ ತೆಳುವಾದ ಸುಣ್ಣದಂತ ಪೊರೆಯೊಂದು ಕಾವಲು ಕಾದಿರುತ್ತದೆ. ಅದು ಎಷ್ಟೆ ದುರ್ಬಲದ್ದೆನಿಸಿದರೂ ಸರಿ, ತುಸುವಾದರೂ ರಕ್ಷಣೆ ಇರುತ್ತದೆ. ಅದು ಕರಗಿಹೋಯ್ತೆಂದರೆ ಗೋಡೆಯೆನ್ನುವ ಅಂತಃಸತ್ವವು ಕರಗಿ ಮಣ್ಣಾಗಿಹೋಗುವುದು ಸುಲಭವಾಗಿಬಿಡುತ್ತದೆ. ಒಳಗೇನೆ ಹುಳುಕಿದ್ದರು ಅದನ್ನು ಮುಚ್ಚುವ ಥಳುಕುಬಳುಕು ಸುಣ್ಣವನ್ನು ಮಾಯವಾಗದಂತೆ ನೋಡಿಕೊಳ್ಳಬೇಕು. ಸಂಸಾರದ ಗುಟ್ಟುಗಳು ಕೂಡ ಗೋಡೆಗೆ ಹೊದಿಸಿದ ಸುಣ್ಣದ ಹಾಗೆ.. ವ್ಯಾಧಿ ರಟ್ಟಾಗದಂತೆ ಆ ಸುಣ್ಣದಡಿಯಲ್ಲಿ ಜತನದಿಂದ ಕಾಪಿಟ್ಟುಕೊಂಡು ಹೋಗದಿದ್ದರೆ ಸಂಸಾರದ ಮಾನ ಮರ್ಯಾದೆಗಳು ಹರಾಜಾಗಿ ಹೋಗುತ್ತವೆ ನಡುಬೀದಿಯಲ್ಲಿ. ಇನ್ನು ಶಿಥಿಲವಾಗುವ ಗೋಡೆಯನ್ನು ನಮ್ಮ ದೇಹವೆನ್ನುವ ಹೊರ ಭಿತ್ತಿಗೆ ಸಮೀಕರಿಸಿದರಂತೂ, ಅದಕ್ಕೆ ಚೇತನವೀಯುತ್ತಿದ್ದ ಶುಭ್ರ ಶ್ವೇತ ಸುಣ್ಣವೆನ್ನುವುದು ಅಂತರಾತ್ಮದ ಪ್ರತೀಕವಾಗಿಬಿಡುತ್ತದೆ. ಮಾಯೆಯಾಟವೆಂಬ ಹೆಸರಿನಲ್ಲಿ ಬಾಹ್ಯದ ಪ್ರೇರಣೆಗಳಿಗೆ ಸಿಕ್ಕಿ ದೇಹವೆಂಬ ಗೋಡೆ ತಾನೇ ಶಿಥಿಲವಾಗಿ, ಅದರ ಪೂರ ಆವರಿಸಿಕೊಂಡು ಚೇತನವೀಯುತ್ತಿದ್ದ ಸುಣ್ಣದಂತಹ ಅಂತರಾತ್ಮಕ್ಕು ತಾವಿಲ್ಲದಂತಾಗಿಸಿಬಿಡುತ್ತದೆ ಎನ್ನುವ ಅರ್ಥವನ್ನು ಪ್ರಕ್ಷೇಪಿಸಿದಾಗ, ದೇಹದ ಒಳ-ಹೊರಗುಗಳಿಗೆ ಇರುವ ಅಗೋಚರ ಸೇತುಬಂಧ ದೃಗ್ಗೋಚರವಾಗಿಬಿಡುತ್ತದೆ. 

ಇನ್ನು ಕೊನೆಯ ಸಾಲಿನ ಭಾವವೂ ಅದೇ ರೀತಿಯದು. 'ಆಡಲು ಬಂದ ಪಾತರದವಳು' ಎಂದರೆ ನಟನೆಯೋ, ನಾಟ್ಯವೊ ಒಂದನ್ನು ಆಡಿ ತೋರಿಸಲು ತನ್ನ ಪಕ್ಕವಾದ್ಯದವರ ಸಮೇತ ಬಂದ 'ಪಾತ್ರದವಳು' (ಪಾತ್ರಧಾರಿಣಿ, ನರ್ತಕಿ..). ಅಲ್ಲಿ ನಡೆಯಬೇಕಾಗಿರುವ ಪ್ರಮುಖ ಆಕರ್ಷಣೆ ಅವಳ ಪಾತ್ರ ಅಥವಾ ನೃತ್ಯ. ಆದರೆ ಅವಳ ಪ್ರದರ್ಶನವನ್ನು ಮೃದಂಗದ (ಮದ್ದಿಲಿ) ಸದ್ದು ಅಥವಾ ಅರ್ಭಟವೆ ಮರೆಮಾಚಿಬಿಟ್ಟರೆ – ಚಿತ್ತಾರವನ್ನೆಲ್ಲ ಮಸಿ ನುಂಗಿತು ಎನ್ನುವ ಹಾಗೆ ? ಪಕ್ಕವಾದ್ಯ ಪಕ್ಕದ ವಾದ್ಯದಂತೆ ಇರಬೇಕೆ ಹೊರತು ಮುಖ್ಯ ಪ್ರದರ್ಶನವನ್ನು ನುಂಗಿ ಹಾಕುವಂತಿರಬಾರದು. ಇಲ್ಲಿಯೂ ಕೂಡ ಕ್ಷುಲ್ಲಕವೆನಿಸುವ ಸಂಗತಿಗಳು ಗಹನವನ್ನು ನುಂಗಿ ನೆಲಸಮ ಮಾಡುವ ಇಂಗಿತ ಕಾಣಿಸಿಕೊಳ್ಳುತ್ತದೆ. ಅಂತೆಯೇ ಇಹ ಜಗಕ್ಕೆ ಬರುವ ಪ್ರತಿಯೊಬ್ಬರೂ ಯಾವುದೋ ಮೂಲ ಪಾತ್ರ ನಿಭಾಯಿಸಲು ಬರುವವವರಾದರು, ಮಾಯಾಜಗದ ಸದ್ದುಗದ್ದಲದಲ್ಲಿ ಸಿಕ್ಕಿ, ತಲ್ಲೀನರಾಗಿ ಆ ಮೂಲಪಾತ್ರದ ಮುಖ್ಯ ಭೂಮಿಕೆಯನ್ನು ಮರೆತುಬಿಡುವರೆಂಬ (ನೇಪಥ್ಯಕ್ಕೆ ಸರಿಸಿಬಿಡುವರೆಂಬ) ಭಾವವೂ ಇಲ್ಲಿ ಅಂತರ್ಗತ. ಮಾಯೆಯ ಜಾಲದಲ್ಲಿ ಮರೆತುಹೋಗುವ ಮೂಲೋದ್ದೇಶದ ಸಾಂಕೇತಿಕ ಚಿತ್ರಣ. 

ಆಂತರ್ಯದಲ್ಲಿ ಇವೆಲ್ಲ ಹೇಳುವ ಒಂದೆ ಸಾರ : ಲೌಕಿಕದ ಕ್ಷುಲ್ಲಕ ಸಂಗತಿಗಳು ನಮ್ಮನ್ನೆಲ್ಲ ಬಂಧಿಸಿ (ನುಂಗಿ ಹಾಕಿ) , ನಿಜದತ್ತ ನಡೆಯದಂತೆ ನಿರಂತರವಾಗಿ ಯತ್ನಿಸುತ್ತ ನಿರ್ಬಂಧಿಸಿಬಿಡುತ್ತವೆ – ಎಂಬುದು.ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ಮೆಲ್ಲು ನುಂಗಿತ್ತಾ, ತಂಗಿ ||೨ ||

ಬದುಕಲ್ಲಿ ನಡೆಯುವ ಈ ತರದ ಅಸಂಗತಗಳಿಗೆ ಕೊನೆ ಮೊದಲುಂಟೆ ? ಸತ್ಯಾನ್ವೇಷಣೆಯ ಹಾದಿಯಲ್ಲಿ ದಾರಿ ತಪ್ಪಿಸಿ ಮಿಥ್ಯಾನ್ವೇಷಣೆಗೆ ತುಯ್ಯುವ ಈ ವಿಪರ್ಯಾಸಗಳದು ಕೊನೆ ಮೊದಲಿಲ್ಲದ ಯಾದಿ. ಮೊದಲ ಸಾಲಿನ ಒರಳುಕಲ್ಲಿನ ಪ್ರಸ್ತಾಪದಲ್ಲಿ ಅದು ಒನಕೆಯನ್ನೆ ನುಂಗಿಬಿಡುವ ಮಾತಿದೆ. ಒನಕೆಯನ್ನೆ ನುಂಗಿ ಹಾಕಿಬಿಟ್ಟರೆ ಒರಳಲ್ಲಿ ಕುಟ್ಟುವುದಾದರು ಹೇಗೆ ? ಬತ್ತದ ಹಾಗಿರುವ ಬದುಕನ್ನು ಕುಟ್ಟಿ ಅಕ್ಕಿ ಮಾಡಲು ಬಿಡದು ಈ ದಿಕ್ಕು ತಪ್ಪಿಸುವ ಕಷ್ಟ ಕಾರ್ಪಣ್ಯಗಳು. ಅಂದಹಾಗೆ ನನಗೆ ಇಲ್ಲೂ ಒಂದು ಒಳಾರ್ಥ ಕಾಣುತ್ತದೆ – 'ಒರಳು' ಪದಕ್ಕಿರುವ 'ಅರಚು, ಕೂಗು' ಎನ್ನುವ ಮತ್ತೊಂದು ಅರ್ಥ ನೋಡಿದಾಗ. ಒನಕೆ ಕುಟ್ಟುವ ಲಯಬದ್ದ ಶಬ್ದ ಸಹನೀಯ ಶಿಸ್ತು, ಕ್ರಮಬದ್ದ ಜೀವನದ ಸಂಕೇತ.. ಆದರೆ ಅದನ್ನು ಕೆಡಿಸುವ ಅರಚಾಟ, ಕೂಗಾಟಗಳ (ಅಸ್ತವ್ಯಸ್ತ , ಶಿಸ್ತಿಲ್ಲದ ಪರಿಯ) ಗಲಭೆಯೇ ಹೆಚ್ಚಾಗಿ ಅದು ಒನಕೆಯ ಸಕ್ರಮತೆಯನ್ನೆಲ್ಲ ಕೆಡಿಸಿ (ನುಂಗಿ ಹಾಕಿ) ಕಂಗಾಲಾಗಿಸಿಬಿಟ್ಟರೆ ? ಹಾಗೆಯೆ ಒನಕೆಯೆಂಬುದು ಬದುಕೆಂಬ ಒರಳಿನಲ್ಲಿ ಬರುವ ಕಷ್ಟಕಾರ್ಪಣ್ಯಗಳನ್ನೆಲ್ಲ ಪುಡಿ ಮಾಡಿ ಮುನ್ನುಗ್ಗುವ ಸಾಮರ್ಥ್ಯ, ಕಾಠಿಣ್ಯತೆಯ ಸಂಕೇತ. ಆ ಒನಕೆಯೆ ದುರ್ಬಲವಾಗಿ, ಬದುಕೆಂಬ ಒರಲೆ ಅದನ್ನು ಅಲುಗಾಡದಂತೆ ನುಂಗಿ ಹಿಡಿದುಬಿಟ್ಟರೆ ? ಎನ್ನುವ ತಾತ್ಪರ್ಯಕ್ಕು ಎಡೆ ಮಾಡಿಕೊಡುತ್ತದೆ. 

ಅದೇ ರೀತಿಯಲ್ಲಿ ಹಿಟ್ಟು ಬೀಸುವ ಕಲ್ಲು – ಒಂದರ ಮೇಲೊಂದು ಕೂತು ನಡುವೆ ಹಿಟ್ಟು ಬೀಸುವ ಕಲ್ಲಿಗೆ ಮೇಲಿನ ಕಲ್ಲಿಗೆ ಹಾಕಿರುವ ಹಿಡಿಕೆ ಅಥವಾ ಗೂಟವೆ ಮುಖ್ಯನಿಯಂತ್ರಕ ಮತ್ತು ನಿರ್ವಾಹಕ. ಆ ಗೂಟವನ್ನು (ಜೀವನದಲ್ಲಿ ಗೂಟದಂತಿರುವ ಸೂಕ್ತ ನಿಯಂತ್ರಣವನ್ನು) ಹಿಡಿದು ತಿರುಗಿಸುತ್ತಲೇ ಹಿಟ್ಟು ಬೀಸಲು (ಸುಗಮ ಜೀವನ ನಡೆಸಲು) ಸಾಧ್ಯ. ಆ ಗೂಟವೆ ಕಲ್ಲಡಿ ಸಿಕ್ಕೋ, ಕಲ್ಲು ನುಂಗಿಯೊ ಮಾಯಾವಾಗಿಬಿಟ್ಟರೆ ? ನಿಯಂತ್ರಣವಿಲ್ಲದ ದಿಕ್ಕೆಟ್ಟ ನಾವೆಯಂತಾಗಿಬಿಡದೆ ಬದುಕು ? ಅಲ್ಲಿಂದ ಬೀಸುವ ಹಿಟ್ಟೂ ಮಾಯಾ , ಅದರೊಂದಿಗಿದ್ದ ನೆಮ್ಮದಿಯೂ ಮಾಯಾ. ಬೀಸುವ ಕಲ್ಲಿನ ಗೂಟದ (ಅಂತರಂಗ) ಗಾತ್ರ ಸಾಮಾನ್ಯದ್ದಾದರು ಅದು ನಿಯಂತ್ರಿಸುವ ಬೀಸುವ ಕಲ್ಲಿನ (ದೇಹದ) ಗಾತ್ರ ದೊಡ್ಡದು. ಎಲ್ಲಿಯ ತನಕ ಗೂಟದ ಭಾಗಾಂಶ ಮಾತ್ರ ಕಲ್ಲಿನಲ್ಲಿ ಹುದುಗಿದ್ದು, ಹಿಡಿಕೆಯ ರೂಪದಲ್ಲಿ ಬಳಸಲು ಸಾಧ್ಯವೋ ಅಲ್ಲಿಯವರೆಗೆ ಬೀಸುವ ಕಲ್ಲನ್ನು ಸರಾಗವಾಗಿ ಬೀಸಲು (ಬದುಕು ನಡೆಸಲು) ಸಾಧ್ಯ. ಹದ, ನಿಯಂತ್ರಣ ತಪ್ಪಿ ಬೀಸುವ ಕಲ್ಲೆಂಬ ದೇಹ ತನ್ನ ಆಳದೊಳಕ್ಕೆ ಸೆಳೆದುಕೊಳ್ಳುತ್ತ (ಐಹಿಕ ಜಾಂಜಾಟಗಳಿಗೆ ಸಿಕ್ಕಿ ಜಾರುತ್ತ) ಗೂಟವನ್ನೆ ಪೂರ್ತಿ ನುಂಗಿಬಿಟ್ಟರೆ ಹಿಡಿದು ತಿರುಗಿಸುವ ಆಸರೆಯಾಗಿದ್ದ ಗೂಟ (ನಿಯಂತ್ರಣದ ಸಂಕೇತ) ನಿಷ್ಕ್ರೀಯವಾದಂತೆಯೆ ಲೆಕ್ಕ ಅಲ್ಲವೇ ? ಅದು ಕೊನೆಗೆ ಕಲ್ಲಿನ ತಿರುಗುವಿಕೆಯನ್ನೇ ನಿರ್ಬಂಧಿಸಿಬಿಡುತ್ತದೆ (ಚಲನೆಯಿಲ್ಲದ ದೇಹದ ಅಂತ್ಯವಾಗುವ ಹಾಗೆ ). ಇಲ್ಲಿ ಬೀಸುವ ಕಲ್ಲು ಚಲನೆಯ, ಜೀವಂತಿಕೆಯ ಸಂಕೇತ – ಮಾನವ ದೇಹದ ಹಾಗೆ. ಆದರೆ ಅದರ ಚಲನೆಯನ್ನು ಅಡ್ಡಾದಿಡ್ಡಿಯಾಗಿರದಂತೆ ನಿಯಂತ್ರಿತ ಮತ್ತು ನಿಶ್ಚಿತ ಗತಿಯಲ್ಲಿ ನಡೆಸುವ ಗೂಟ ಅಂತರಂಗಿಕ ಸ್ತರಗಳಾದ ಅಂತಃಕರಣಕ್ಕೆ ಹೋಲಿಸಬಹುದಾದದ್ದು (ಮನಸು, ಚಿತ್ತ, ಬುದ್ಧಿ, ಅಹಂಕಾರ). ಹಾಗೆಯೆ ನಮ್ಮ ಆಧ್ಯಾತ್ಮಿಕ ಪರಿಕಲ್ಪನೆಯಲ್ಲಿ ಚಲನಶೀಲವಾದುದು ಮಾಯೆ ( ಇಲ್ಲಿನ ಬೀಸುಕಲ್ಲಿನ ಹಾಗೆ ). ಅದರ ಪರ್ಯಾಯವಾದ ಜಡಶಕ್ತಿಯ ಪ್ರತೀಕವಾಗುವುದು ಸ್ಥಿರತೆಯನ್ನು ನೀಡುವ ಗೂಟ. ಮಾಯೆಯಡಿ ಸಿಕ್ಕಿ ಮಾಯವಾಗುವ ಅಥವಾ ದುರ್ಬಲವಾದಂತೆ ಕಾಣಿಸಿಕೊಳ್ಳುವ ಅಂತಃಶಕ್ತಿಯ ಪ್ರತೀಕ ಗೂಟವೆಂದು ಕೂಡ ಅರ್ಥೈಸಬಹುದು. 

ಕಷ್ಟವೋ ಸುಖವೋ ಒನಕೆ ಕುಟ್ಟುತ್ತಾ, ಹಿಟ್ಟು ಬೀಸುತ್ತ ಬದುಕುವ ಜೀವ ಹೇಗಾದರು ಬದುಕಬೇಕಲ್ಲ ? ಮುದುಕಿಯೆನ್ನುವ ನುರಿತ ಅನುಭವೀ ಜೀವಿ ಹೇಗೊ ಹೆಣಗಿಕೊಂಡೆ ಬದುಕುತ್ತ ಅಲ್ಲೇನಾದರು ಮೆಲ್ಲಲು ( ತಿನ್ನಲು ) ಸಿಕ್ಕೀತೋ ಎಂದು ಒರಳು ಕಲ್ಲಲ್ಲಿ, ಹಿಟ್ಟಿನ ಬೀಸುಕಲ್ಲಲ್ಲಿ ತಡಕಾಡುತ್ತದಂತೆ. ಅಲ್ಲಿದ್ದರೆ ತಾನೇ ಸಿಗುವುದು ? ಆ ಹೊತ್ತಿನಲ್ಲಿ ತುಂಬಿತುಳುಕುತ್ತಿದ್ದ ಆ ಹಳೆಯ ವೈಭವವೆಲ್ಲ ನೆನಪಾಗಿ ಆ ಮುದುಕಿಯನ್ನು ಗದ್ಗದಿತವಾಗಿಸುತ್ತವಂತೆ. ಅವಳನ್ನು ಆ ನೆನಪುಗಳೇ (ಮೆಲ್ಲು = ಮೆಲುಕು) ನುಂಗಿ ಹಾಕಿ ಕಣ್ಣೀರಿಡುವಂತೆ ಮಾಡಿಬಿಡುತ್ತವೆ. ಮುದುಕಿಯೇನ್ನುವುದು ಕೂಡ ಇಲ್ಲಿ ಸಾಂಕೇತಿಕವೆ. ಧೀರ್ಘಾನುಭವದಲ್ಲಿ ನೊಂದ ಜೀವಿಗಳ ಪಾಡಿಗವಳು ಅಭಿವ್ಯಕ್ತಿಯಾಗುತ್ತಾಳಷ್ಟೆ. ಮುದುಕಿಯೆಂಬುದು ಅನುಭವದಿಂದ ಮಾಗಿದ ಒಂದು ರೀತಿಯ ತಡವಾದ, ವಯಸಾದ ಮೇಲಿನ ಸ್ಥಿತಿ. ದೇಹದಲ್ಲಿ ಕಸುವಿದ್ದಾಗ ಮೊದಲಿಂದಲು ಇರಬೇಕಿದ್ದ ಅರಿವು, ತಿಳುವಳಿಕೆ, ಮಾನಸಿಕ ಪ್ರಬುದ್ಧತೆ ಸೂಕ್ತವಾಗಿ ವಿಕಸಿಸದೆ, ವೃದ್ಧಾಪ್ಯವನ್ನಪ್ಪಿದಾಗ ಘಟಿಸತೊಡಗಿದರೆ ಆಗುಂಟಾಗುವ ಜ್ಞಾನೋದಯ ಮೆಲ್ಲುವ ಆಶಯವನ್ನೇನೋ ಹುಟ್ಟಿಸುತ್ತದೆ. ಆದರೆ ಅದುವರೆಗೂ ಮೆದ್ದ ಬದುಕಿನ ತಿನಿಸು (ಮೆಲ್ಲು, ತಿಂದುಕೊಂಡು ಬಂದ, ಬದುಕಿಕೊಂಡು ಬಂದ ರೀತಿ) ತನ್ನೆಲ್ಲ ಧಾಳಿಯಿಂದ ಆ ದೇಹವನ್ನು ಅದೆಷ್ಟು ಜರ್ಝರಿತವಾಗಿಸಿಬಿಟ್ಟಿದೆಯೆಂದರೆ, ಆ ಬದುಕಿನ ರೀತಿಯೆ ಅವಳನ್ನು ನುಂಗಿಹಾಕತೊಡಗಿದೆ, ಈಗ ಸರಿಯಾದ ತಿನಿಸಿದ್ದರೂ ತಿನ್ನಲಾಗದಂತೆ ಅಥವಾ ತಿನ್ನಲು ಬೇಕಾದ ವ್ಯವಧಾನ ಇಲ್ಲವಾಗುತ್ತ. ಹಿಟ್ಟಿನಂತಹ ಮೂಲಭೂತ ಅಗತ್ಯದ ವಸ್ತುವನ್ನು ಬಿಟ್ಟು, ಏನೇನನ್ನೊ ಬೆನ್ನಟ್ಟಿ ಹೋಗಿ ಕೊನೆಗೆ ಅದೇ ಹಿಟ್ಟನ್ನೆ ಜೀರ್ಣಿಸಿಕೊಳ್ಳಲಾಗದ ಹಂತ ತಲುಪುವ ವಿಪರ್ಯಾಸ ಇಲ್ಲಿ ಕಾಣಿಸಿಕೊಳ್ಳುತ್ತದೆ. 


ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೇ ಮಣಿಯು ನುಂಗಿತ್ತಾ, ತಂಗಿ ||೩ ||

ಈ ಪಂಕ್ತಿಯ ಸಾರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಜೀವನಾನುಭವ, ಲೋಭ ಮತ್ತು ಅನಿವಾರ್ಯಗಳೆಲ್ಲದರ ಸಮಷ್ಟಿತ ಮೊತ್ತವೆನ್ನಬಹುದು. ಬದುಕು ನಡೆಸಲೊಂದು ಉದ್ಯೋಗ ಬೇಕಲ್ಲ ? ಅದು ಇಲ್ಲಿನ ನೇಯ್ಗೆ ಯಂತ್ರ (ಮಗ್ಗ) ವಾಗಿ ಕಾಣಿಸಿಕೊಂಡಿದೆ. ಮಗ್ಗವಿದ್ದರೆ ಸಾಲದಲ್ಲ – ಅದರಲ್ಲಿ ಹಗಲಿರುಳು ದುಡಿಯುವವರು ಬೇಕು, ಹಗ್ಗದಂತೆ ಗಟ್ಟಿ ಆಧಾರವಾಗಿ ನಿಲ್ಲುತ್ತಾ. ಇಡಿ ಹಗ್ಗವೇ ಮಗ್ಗವನ್ನೆಲ್ಲ ಆವರಿಸಿಕೊಂಡು ಮಗ್ಗವೇ ಕಾಣದಷ್ಟು ಬಟ್ಟೆ (ದುಡಿಮೆ) ತುಂಬಿಕೊಂಡಂತಾಗಿಬಿಡುತ್ತದೆ ಆ ಅವಿರತ ಕಾಯಕದಲ್ಲಿ – ಬಟ್ಟೆ ನೇಯಲಿಟ್ಟ ಹಗ್ಗವೇ ಮಗ್ಗವನ್ನು ಮುಚ್ಚಿ ನುಂಗಿ ಹಾಕಿಬಿಟ್ಟಿತೇನೊ ಎನ್ನುವಂತೆ. ಹಾಗೆ ಮಗ್ಗವನ್ನು ನುಂಗಿಸಲು ಸಾಧ್ಯವಾಗಿಸುವುದು ಲಾಳಿ (ನೇಯಲು ಬಳಸುವ ಸಾಧನ, ಆಯುಧ) . ಅದು ದುಡಿದಷ್ಟು ಮಗ್ಗದ ಮೈತುಂಬಾ ಅರಳುತ್ತದೆ – ನೂತ ಬಟ್ಟೆಯ ಹಾಸು. ಒಟ್ಟಾರೆ ಹಗ್ಗ ಮತ್ತು ಲಾಳಿಗಳೆರಡು ಮಗ್ಗವನ್ನೇ ನುಂಗುವಷ್ಟು ಸಕ್ರಿಯರಾಗಿ ದುಡಿಯುವಾಗ ಅದನ್ನು ಆಗಿಸುತ್ತಿರುವ ಹುರಿಯಾಳು ಅದರಿಂದ ಹೊರಗಿರಲಾದೀತೆ ? ಒಂದೊ ಜೀವನ ನಡೆಸುವ ಅನಿವಾರ್ಯತೆಯಿಂದಲೊ ಅಥವಾ ಅತಿಯಾಸೆಯ ಲೋಭದಿಂದಲೊ ಹಗಲಿರುಳು ಅಲ್ಲಿ ದುಡಿದು ಜೀವ ತೇಯುವ ಮನೆಯ ಯಜಮಾನನನ್ನು ಆ ಸಕ್ರೀಯತೆಯೆ ಬಲಿಯಾಗಿಸಿಬಿಡುವ ವಿಪರ್ಯಾಸ ಅಪರೂಪವೇನಲ್ಲ. ಇಲ್ಲಿ ಮಣಿ ಎಂದಾಗ ಧ್ವನಿಸುವ ಲೋಭದಂತೆಯೆ ಅದು ಕಾಲಸೂಚಿಯೂ (ಕಾಲನೊತ್ತಡಕ್ಕೆ ಮಣಿಯುವುದು) ಆಗುವುದನ್ನು ಪರಿಭಾವಿಸಿಕೊಳ್ಳಬಹುದು.


ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತಾ, ತಂಗಿ ||೪ ||

ಇದುವರೆಗಿನ ಪ್ರತಿ ಪಂಕ್ತಿಯು ಬದುಕಿನ ಒಂದೊಂದು ಘಟ್ಟದ ಅಥವಾ ಮಜಲಿನ ಬವಣೆಯನ್ನು ಹೇಳುತ್ತ ಹೇಗೆ ಚಿಕ್ಕದೆನಿಸಿಕೊಂಡವು ಕೂಡಾ ದೊಡ್ಡದನ್ನು ಕಬಳಿಸಿಬಿಡಬಲ್ಲವಾಗಿಬಿಡುತ್ತವೆ ಎಂದು ನಿರೂಪಿಸಿದ್ದನ್ನು ಕಂಡೆವು. ಈಗ ಕೊನೆಯ ಪಂಕ್ತಿಯಲ್ಲಿ ಅಂತಿಮ ಸತ್ಯದ ಸರದಿ. ಇಲ್ಲಿ ನನಗೆ ಎರಡು ರೀತಿಯ ಹೊಳಹು ಕಾಣಿಸುತ್ತದೆ. ಮೊದಲನೆಯದು ಯಥಾ ರೀತಿ ಚಿಕ್ಕದು ದೊಡ್ಡದನ್ನು ನುಂಗಿಹಾಕುವುದು. ಮತ್ತೊಂದು ದೊಡ್ಡದು ಚಿಕ್ಕದ್ದನ್ನು ನುಂಗಿಹಾಕಿ ಕಾಪಾಡುವುದು ..!

ಗುಡ್ಡ ಗುಹೆಗಿಂತ ದೊಡ್ಡದು. ಗುಡ್ಡದ ಗರ್ಭದಲ್ಲಿ ತಾನೇ ಗವಿಯಿರಲು ಸಾಧ್ಯ ? ಈ ಮನಸು ಕೂಡ ಗವಿಯಂತದ್ದೆ – ಅದು ಗುಡ್ಡವೊಂದರ ರಕ್ಷಣೆಯಲ್ಲಿದ್ದರೆ ತಾನೇ ಕ್ಷೇಮ ? ಅಂದರೆ ದೊಡ್ಡದು ಚಿಕ್ಕದನ್ನು ಗುರುವಿನಂತೆ ಕಾಯುತ್ತಿದೆ ಇಲ್ಲಿ. ಆದರೆ ಗುಡ್ಡಕ್ಕೆ ಹಾಗೆಯೇ ಕುಳ್ಳಗಿರುವ, ಕುಬ್ಜ, ಶಿಷ್ಯ ಎಂದೆಲ್ಲ ಅರ್ಥವಿದೆ. ಅಂದರೆ ಚಿಕ್ಕದು ಎನ್ನುವ ಭಾವ. ಗುರುವಿಗಿಂತ ಚಿಕ್ಕವನೆನಿಸುವ ಶಿಷ್ಯ (ಗುಡ್ಡ) ಗವಿಯನ್ನೇ ನುಂಗಿದ ಎಂದರೆ ಗುರುವನ್ನೇ ಮೀರಿಸಿದ ಎಂದೂ ಅರ್ಥೈಸಬಹುದು.

ಹಾಗೆಯೇ ಎರಡನೆ ಸಾಲಿನಲ್ಲಿ ಗವಿ ಇರುವೆಯನ್ನು ನುಂಗಿತು ಎಂದಾಗ ಎಷ್ಟೊ ಜೀವಿಗಳಿಗೆ ಆಶ್ರಯ ತಾಣವಾಗಿರುವ ಗವಿ ಇರುವೆಯಂತ ಕ್ಷುದ್ರಜೀವಿಗೂ ತಾವಿತ್ತು ಪೊರೆಯುತ್ತದೆ ಎಂದು ಅರ್ಥೈಸುವುದು ಸಾಧ್ಯ. ಅದನ್ನೇ ಸ್ವಲ್ಪ ವಿಭಿನ್ನವಾಗಿ ಅರ್ಥೈಸಿ 'ಇರುವೆಯ' ಎನ್ನುವುದನ್ನು ' ಇರುವಿಕೆಯ ' ಎಂದು ನೋಡಿದರೆ – ಸುಭದ್ರ ಗವಿಯಂತಹ ಗುರುವಿನ ಸಾಂಗತ್ಯದಿಂದ ಕಷ್ಟ ಕೋಟಲೆಯ ನಡುವೆಯೂ ಇರುವಿಕೆಯೂ ಸಹನೀಯವಾಗುತ್ತದೆನ್ನುವ ಇಂಗಿತವನ್ನು ಕಾಣಬಹುದು. 'ಇರುವೆ'ಗೆ ಜೋಮು ಹಿಡಿದ – ಎನ್ನುವ ಅರ್ಥವೂ ಇದೆ. ಜಂಜಾಟಗಳಲಿ ಸಿಕ್ಕಿ ಜೋಮು ಹಿಡಿದಂತಾದ ಬದುಕಿಗೆ ಮತ್ತೆ ಚೇತನವಿತ್ತು ಸಕ್ರೀಯವಾಗಿಸುವ ಆಶಯ ಎಂದೂ ಅರ್ಥೈಸಬಹುದು.

ಇನ್ನು ಕೊನೆಯ ಸಾಲಿನಲ್ಲಿ, ಗುರುವಿನ ಪಾದವನ್ನು ನಂಬಿ ಶರಣಾದ ಕಾರಣ ಆ ಪಾದದಡಿಯ ರಕ್ಷಣಾ ಕವಚದಲ್ಲಿ ನುಂಗಿಸಿಕೊಂಡು ತಾನೂ ಸುರಕ್ಷಿತನಾದೆ ಎನ್ನುವ ಭಾವ ಹೊಮ್ಮುತ್ತದೆ. ಇದರಲ್ಲೂ ಅಡಗಿರುವ ಮತ್ತೊಂದು ಭಾವ 'ನನ್ನನೆ ನುಂಗಿತ್ತಾ' – ಎನ್ನುವಾಗ , ನಾನು ಎನ್ನುವ 'ಅಹಂ' ಅನ್ನು ಗೋವಿಂದ ಗುರುವಿನ ಶರಣಾಗತ ಭಾವ ನುಂಗಿ ಹಾಕಿತ್ತು ಎಂದಾಗುತ್ತದೆ.

ಒಟ್ಟಾರೆ ನೂರೆಂಟು ಹಳವಂಡಗಳಲ್ಲಿ ತೊಳಲಾಡಿ ಬಳಲುವ ಮನಕೆ ಕೊನೆಗೆ ಶಾಂತಿ ದೊರಕುವುದು ನಿಜ ಸತ್ಯದ ಅರಿವೆನ್ನುವ ಗವಿಯತ್ತ ನಡೆದಾಗಲೇ. ಆ ಅರಿವು ಬಂದರೆ ಶಾಂತಿಯತ್ತ , ಗಹನ ಮುಕ್ತಿಯತ್ತ, ಮೋಕ್ಷದತ್ತ ಇರಿಸುವ ಹೆಜ್ಜೆಗೆ ನಾಂದಿಯಾಗುತ್ತದೆ ಎನ್ನುವ ಸಾರ ಇದರಲ್ಲಡಗಿದೆ.

ಹೀಗೆ ಪ್ರತಿಬಾರಿಯೂ ನೋಡಿದಾಗಲು ಒಂದೊಂದು ಕೋನದಲ್ಲಿ ಒಂದೊಂದು ಅರ್ಥ , ಹೊಳಹು ಕಾಣಿಸಿಕೊಳ್ಳುತ್ತದೆ ಈ ಪದಗಳಲ್ಲಿ.. ಅದರಲ್ಲೂ ಆಧ್ಯಾತ್ಮಿಕಕ್ಕೆ ಅನ್ವಯಿಸುತ್ತ ಹೊರಟರೆ ಕಾಣುವ ಒಳಾರ್ಥದ ತಿರುಳು ಪ್ರತಿ ಸಾಲುಗಳಲ್ಲೂ ಅನುರಣಿಸುತ್ತದೆ. ಪದಗಳ ಅರ್ಥದ ಸೂಕ್ತ ಅರಿವು, ತಿಳುವಳಿಕೆಯಿರದೆ ಪರಿಮಿತ ಅರಿವಿನ ಪರಿಧಿಯಲ್ಲಿ ನೋಡಿದರೆ ಕಾಣುವ ಅರ್ಥಗಳು ಸೀಮಿತವೇ. ನನಗೆ ಕಂಡಂತೆ, ಅರಿತಂತೆ ಇಲ್ಲಿ ಕಾಣಿಸಿದ್ದೇನೆ. ನನ್ನ ಗ್ರಹಿಕೆಯಲ್ಲಿ ದೋಷವಿದ್ದರೆ ದಯವಿಟ್ಟು ಕ್ಷಮೆಯಿರಲಿ – ಅದು ನನ್ನ ಸೀಮಿತ ಜ್ಞಾನದ ಕಾರಣದಿಂದಾಗಿ. ಅಂತೆಯೇ ತಿದ್ದಿ ಹೇಳಿದರೆ ನಾನು ಚಿರ ಕೃತಜ್ಞ 

– ನಾಗೇಶ ಮೈಸೂರು

from. FB comments

Shankar Nanjundappa;

ಬಹಳಾ ವಿಸ್ತ್ರುತ ವಾದ ತಮ್ಮ ವಿಶ್ಲೇಷಣೆ ಓದಿದೆ ನನ್ನದು ಕೆಲ ಅಭಿಪ್ರಾಯ ಗಳು
ಮುಖ್ಯವಾಗಿ ಶರೀಪರ ಪದಗಳಲ್ಲಿ ಅಷ್ಟೋಂದು ಸಂಕೀರ್ಣ ಅರ್ಥ ಗಳನ್ನು ಸೇರಿಸಿರುತ್ತಾರೆಂದು ನಂಬಲಾಗದು,
ಯಾಕೆಂದರೆ ಅವರೊಬ್ಬ ಜನರ ಕವಿ,ಆಯಾ ಸನ್ನಿವೇಶ ಸಂಧರ್ಭಕ್ಕೆ ತಕ್ಕಂತೆ ಜನರ ಮದ್ಯದಲ್ಲೇ ಪದಗಳನ್ನು ರಚಿಸಿ ಅದನ್ನಾರೋ ಬರೆದು ದಾಖಲೆ ಮಾಡಿರುವಂತ ಹುದು
ಮತ್ತು ಈ ಪದಕ್ಕೆ ( ಬರಕೋ ಪದಾ ಬರಕೋ) ಬಂದರೆ ಎಲ್ಲಾ ಪ್ರತಿಮೆಗಳ ಹಿಂದೆ ಕೊನೆಗೆ ಒಂದು ಉದ್ದಿಶ್ಯ ವಿರುವಂತೆ ಕರೆ ದೊಯ್ಯು ತ್ತದೆ,
ಕೊನೆಗೆ ಗೋವಿಂದ ಗುರುವಿನ ಪಾದ ನನ್ನೆದೆ ನುಂಗಿತ್ತಾ, ಎಂದು ಕೊನೆ ಹಾಡುತ್ತಾರೆ,
ಕೇವಲ ಗೋವಿಂದ ಗುರುವಿನ ಪಾದ ನನ್ನೆದೆ ನುಂಗಿತ್ತಾ,ಎಂದೇ ಹೇಳಿದ್ದರೆ ಅದಕ್ಕೆ ಅಷ್ಟೋಂದು ತೂಕ ಬರುತ್ತಿರಲಿಲ್ಲ ಜನರ ಮನಸ್ಸನ್ನು ತಲುಪುವ ಓಘ ಇರುತ್ತಿರಲಿಲ್ಲ.
ಅದೇ ವಿಷಯ ವನ್ನು ಪ್ರತಿಮೆಗಳ ಸಾಲಿನೊಂದಿಗೆ ಹೇಳುತ್ತಾ ಬಂದು ಕೊನೆಗೆ ಮೂಲ ಉದ್ದಿಶ್ಯ ಗೋವಿಂದ ಗುರುವಿನ ಪಾದ ನನ್ನೆದೆ ನುಂಗಿತ್ತಾ, ಎಂದು ಅದರ ಪ್ರತಿಮಾ ಸಾರ್ಥಕತೆ ಪಡೆಯುವಂತೆ ಹೇಳಲಾಗಿದೆ, ಒಂದು ಸಣ್ಣಪ್ರಜ್ಞೆ ಇಷ್ಟೊಂದು ದೊಡ್ಡ ಚೇತನ ವನ್ನು ಹೊಂದುವುದನ್ನು ಒತ್ತಿ ಒತ್ತಿ ಹೇಳಿ ಅದರ ಉದ್ದಿಶ್ಯ ಸಾಧಿಸುವುದೇ ಆಗಿದೆ.
ಮತ್ತು ಕೆಲವು ಕಡೆ ಪದ್ಯದ ಸಾಹಿತ್ಯ ತಪ್ಪಾಗಿ ಹೇಳುತ್ತಿರುವಂತೆ ಬಹಳಾ ದಿವಸಗಳಿಂದ ನನಗೆ ಅನ್ನಿಸುತ್ತಿದೆ,
ಉ- ಮಗ್ಗಾದೊಳಗಿರುವ ಅಣ್ಣಾನನ್ನೇ ಮಣಿಯು ನುಂಗಿತ್ತಾ ಎಂಬುದು,
ಅಲ್ಲಿ ಹಗ್ಗ ,ಮಗ್ಗ,ಲಾಳಿ,ಇವುಗಳ ಮದ್ಯೆ ಮಣಿ ಎಂಬ ಪದ ಹೇಗೆ ಬಂತೆಂದು ಗೊತ್ತಾಗುತ್ತಿಲ್ಲ.
ಈ ಹಗ್ಗ,ಮಗ್ಗ,ಲಾಳಿ,ಗಳ ಮಧ್ಯೆ ಬರಬೇಕಿರುವುದು ಮಣಿ ಯಲ್ಲ,ಗುಣಿ, ಕೈ ಮಗ್ಗ ನೈಯುವಾಗ ನೈಯುವಾತ ಕುಳಿತು ಕೊಳ್ಳುವ ಗುಣಿ,
" ಮಗ್ಗಾದೊಳಗಡೆ ಕುಳಿತಿರುವಣ್ಣನ ಗುಣಿಯು ನುಂಗಿತ್ತಾ ಎಂಬುದೇ ಅರ್ಥಕ್ಕು ಪ್ರಾಸಕ್ಕೂ ಸರಿ ಹೊಂದುವುದು.
ಮತ್ತು ಗುಡ್ಡ ಗವಿಯನ್ನು ನುಂಗಿ ಗವಿಯು ಇರುವೆಯ ನುಂಗಿ ಎಂಬುದು ಅಪಬ್ರಂಶ ವಾಗುತ್ತದೆ,
ಅಲ್ಲಿರಬೇಕಾದುದು ಗುಡ್ಡಾ ಗವಿಯನ್ನು ನುಂಗಿ ಗವಿಯು ಗವ್ವಾರ ನುಂಗಿ ಎಂದು ( ಗವ್ವಾರ- ಬಂಡೆಯ ಒಳಗಿರುವ ಕೊರಕಲು) .
ಎಂದಲ್ಲವೇ?.

Nagesha Mysore:
ಸರ್ ತಮ್ಮ ಪ್ರತಿಕ್ರಿಯೆಗೆ ಮೊದಲು ಅನಂತ ಧನ್ಯವಾದಗಳು.

ಮೊದಲಿಗೆ ಸಾಹಿತ್ಯ ತಪ್ಪಾಗಿರಬಹುದಾದ ಸಾಧ್ಯತೆ ಕುರಿತು : ನಾನು ಈ ಟಿಪ್ಪಣಿ ಬರೆದದ್ದು ಗೆಳೆಯರೊಬ್ಬರ ಕೋರಿಕೆಯಂತೆ. ಆಗ ಅವರ ಬ್ಲಾಗಿನಲ್ಲಿದ್ದ ಆವೃತ್ತಿಯನ್ನೆ ಬಳಸಿಕೊಂಡು ವಿವರಿಸಿದ್ದೆ. ಅಂತರ್ಜಾಲದಲ್ಲಿ ಕೆಲವಾರು ಪ್ರಚಲಿತ ಆವೃತ್ತಿಗಳು ಇರಬಹುದಾದ ಕಾರಣ ನನಗೆ ಸಿಕ್ಕಿರುವ ಅವೃತ್ತಿಯಲ್ಲಿ ತಪ್ಪಿರಬಹುದಾದ ಸಾಧ್ಯತೆ ಇದ್ದೇ ಇದೆ. ಇದನ್ನು ನಾನೊಮ್ಮೆ ಪರಿಶೀಲಿಸಿ ಹಾಕಬೇಕಿತ್ತು. ಅದು ನನ್ನದೇ ತಪ್ಪು. ಪದಗಳು ತಪ್ಪಾಗಿದ್ದರೆ ವಿವರಣೆಯೂ ತಪ್ಪಿರುವುದು ಸಹಜವೆ. ಸರಿಯಾದ ಆವೃತ್ತಿ / ಸಾಹಿತ್ಯ ನಿಮ್ಮಲ್ಲಿದ್ದರೆ ದಯವಿಟ್ಟು ಇಲ್ಲಿ ಹಾಕಿ. ಅದನ್ನು ಬಳಸಿಕೊಂಡು ತಿದ್ದುಪಡಿ ಮಾಡುತ್ತೇನೆ. ಈಗಿರಬಹುದಾದ ದೋಷವನ್ನು ಎತ್ತಿ ತೋರಿಸಿದ್ದಕ್ಕೆ ನಿಜಕ್ಕು ಧನ್ಯವಾದಗಳು.

ಇನ್ನು ಅರ್ಥೈಸುವ ವಿಚಾರಕ್ಕೆ ಬಂದರೆ : ಶಿಶುನಾಳರಂತಹವರ ಸಾಹಿತ್ಯದಲ್ಲಿ ಒಂದೆಡೆ ಲೋಕಾನುಭವದ ಸರಳ ಚಿತ್ರಣ ಕಂಡುಬರುವುದು ನಿಜವೇ ಆದರು ಅದರ ಹಿನ್ನಲೆಯಲ್ಲಿ ಆಳವಾದ ಪಾರಮಾರ್ಥಿಕವೊ, ಆಧ್ಯಾತ್ಮಿಕವೊ, ತಾತ್ಮಿಕವೊ ಆದ ಹಿನ್ನಲೆಯಿರುವುದು ಅಪರೂಪವೇನಲ್ಲ. ಇಂತಹ ಸಾಹಿತ್ಯದಲ್ಲಿ ಸಾಮಾನ್ಯನು ಸರಳತೆ ಕಂಡಂತೆ ಬಲ್ಲವರು ಗಹನತೆಯನ್ನು ಕಾಣಬಹುದು. ಹೀಗಾಗಿ ಒಂದಕ್ಕಿಂತ ಹೆಚ್ಚಿನ ಅರ್ಥ ಸಾಧ್ಯತೆ ಇರುವುದು ಸಾಧ್ಯವಿದೆಯೆಂದು ನನ್ನ ಅಭಿಪ್ರಾಯ. ಅದೇ ಕೊನೆಯ ಖಚಿತ ಅಭಿಪ್ರಾಯವೆಂದು ವಾದಿಸಿ ಸಾಧಿಸಿ ತೋರುವ ಪಾಂಡಿತ್ಯ ನನ್ನಲ್ಲಿಲ್ಲ. ನಿಮ್ಮಂತಹ ಬಲ್ಲವರು ಕೊಡುವ ಅಭಿಪ್ರಾಯಗಳೆಲ್ಲವನ್ನು ಕ್ರೋಢಿಕರಿಸಿ ಸಮೀಪದ ವಿವರಣೆಯನ್ನು ಸ್ವೀಕರಿಸಬಹುದೆಂದು ನನ್ನ ಭಾವನೆ.

ಇಂತಹ ಒಂದು ಚರ್ಚೆಯಿಂದ ಅಂತಿಮವಾಗಿ ಹೆಚ್ಚು ಸೂಕ್ತವಾದ , ಸ್ಪುಟವಾದ ವಿವರಣೇ ನಮಗೆಲ್ಲರಿಗು ಸಿಕ್ಕರೆ ಅದೇ ಲಾಭ. ಸಮುದಾಯದ ತಿಳುವಳಿಕೆ ಸಕಲರಿಗು ಹಂಚಿಕೆಯಾಗುತ್ತದೆ. ಆ ನಿಟ್ಟಿನಲ್ಲಿ ನಿಮ್ಮ ತಾಳ್ಮೆಯ ವಿಸ್ತೃತ ವಿವರಣೆಗೆ ಮತ್ತೆ ಶರಣೂ 🙏🙏🙏😊

ದಯವಿಟ್ಟು ಕ್ಷಮಿಸಿ ನಾನ್ಯಾವ ಬಲ್ಲವನೂ ಅಲ್ಲ ( ಕನ್ನಡ ಹತ್ತನೇ ತರಗತಿ ಫೇಲು)
ನಾನು ಹಿಂದೆ ಮುವತೈದು ವರ್ಷಗಳ ಹಿಂದೆ ಸಾಹಿತ್ಯ ಪರಿಷತ್ತು ಪ್ರಕಟಿಸಿದ " ಬರಕೋ ಪದಾ ಬರಕೋ" ಹೆಸರಿನ ಪುಸ್ತಕ ದಲ್ಲಿ ಕೆಲ ಪದಗಳನ್ನು ಬಾಯಿ ಪಾಠ ಮಾಡಿಕೊಂಡಿದ್ದೆ ( ಜನಪದ, ಭಾವಗೀತೆ, ಹಾಡುವುದು ನನ್ನ ಹವ್ಯಾಸ)
ಅದರಲ್ಲಿದ್ದ ಸಾಹಿತ್ಯವೇ ಬೇರೆ ಇತ್ತೀಚೆಗೆ ಎಲ್ಲಾಕಡೆ ನೋಡುತ್ತಿರುವ ಪಾಠವೇ ಬೇರೆಯಾಗಿದೆ , ಏಕೆಂದು ನನಗರ್ಥ ವಾಗುತ್ತಿಲ್ಲ ( ಆ ಪುಸ್ತಕ ಯಾರೋ ಓದಲು ಕೊಂಡೋಯ್ದು ವಾಪಸ್ಸು ಬರಲಿಲ್ಲ)
ಕೊಂಡ ಕೆಲದಿನಗಲ್ಲೇ ಪುಸ್ತಕ ಹೋಗಿ ಮತ್ತಾವುದೂ ನೆನಪಿಲ್ಲ.
ಇನ್ನು ಆಳವಾಗಿ ವಿಶ್ಲೇಷಿಸಿ ಅರ್ಥ ಮಾಡಿಕೊಳ್ಳುವ ಶಕ್ತಿ ನನಗಿಲ್ಲ,( ಹಾಗೇ ಭಗವದ್ಗೀತೆ ಯನ್ನು ನೋಡಿ ಯಾರ್ಯಾರು ಏನೇನೋ ಅರ್ಥ ಮಾಡಿಕೊಂಡು ಏನೇನೋ ಹೇಳುತ್ತಾರೆ)
ನಾನು ಏಕೆ ಈ ವಿಷಯ ಹೇಳಿದೆ ನೆಂದರೆ ನಾನೊಬ್ಬ ನೇಕಾರ ನೇಯ್ಗೇ ಸಂಬಂದ ಪಟ್ಟಂತೆ ಕೆಲ ವಿವರಗಳನ್ನು ಕೊಡಬಲ್ಲೆ ಎನ್ನಿಸಿ ಬರೆದೆ.

Nagesha mysore
ಸಾರ್ ನನ್ನ ಕನ್ನಡವು ಹತ್ತರ ಕೆಳಗಿನದೆ! ಹೀಗಾಗಿ ನನ್ನದೇನು ಹೆಚ್ಛಿಲ್ಲ ಬಿಡಿ. (ಯಾಕೊ, ತೇಜಸ್ವಿ ಹುಟ್ಟಿದಾಗ ಕುವೆಂಪು ಬರೆದ ಸಾಲೊಂದು ನೆನಪಾಯ್ತು: ಮಗು ನೀ ಎರಡು ವರ್ಷದ ಕಂದ, ನಾ ಎರಡು ವರ್ಷದ ತಂದೆ)! ಆದರೆ ನಿಮ್ಮ ನೇಕಾರ ವೃತ್ತಿಯನುಭವದಿಂದ ನೀವು ಹೇಳುವ ಮಾತಲ್ಲಿ ತಥ್ಯವಿರಲೇಬೇಕು. ವಿಷಾದವೆಂದರೆ ನಿಮ್ಮ ಪುಸ್ತಕ ನಿಮ್ಮಲ್ಲಿಲ್ಲದೆ ಹೋಗಿರುವುದು. ಚಿಂತೆಯಿಲ್ಲ ಬಿಡಿ – ನಿಮ್ಮ ಪದಗಳ ವಿವರಣೆಯನ್ನು ಜತೆಗೆ ಸೇರಿಸಿಬಿಡುತ್ತೇನೆ – ಸಂಪೂರ್ಣತೆಯ ದೃಷ್ಟಿಯಿಂದಲಾದರೂ ವಿವರಣೆ ಒಟ್ಟಾಗುತ್ತದೆ. ನೇಕಾರ ವೃತ್ತಿಯ ಬಗ್ಗೆ ಮತ್ತಷ್ಟು ವಿವರಣೆ ಬೇಕೆಂದರೆ ನಿಮ್ಮ ಸಹಾಯ ತೆಗೆದುಕೊಳ್ಳುತ್ತೇನೆ. ಧನ್ಯವಾದಗಳು.🙏

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

4 thoughts on “00604. ಕೋಡಗನ ಕೋಳಿ ನುಂಗಿತ್ತಾ”

  1. ಎಳ್ಳೊ ಜೊಳ್ಳೊ ನನ್ನಿಂದ ಅದನ್ನು ಬರೆಸಿದ ಶ್ರೇಯಸ್ಸು ನಿಮಗೆ ಸಲ್ಲಬೇಕು ಸುಪರ್ಣ. ಅದಕ್ಕೆ ನಿಮಗೆ ನನ್ನ ಕೃತಜ್ಞತೆಗಳು ಮತ್ತು ಧನ್ಯವಾದಗಳು 🙏👍😊

   I don’t say mine is a perfect explanation but it is one of the possible perspective I hope. Glad you liked it – I was a bit worried thinking it may be below par for your expectation 😊

   Liked by 1 person

 1. ಆಡುಭಾಷೆಯ ಶರೀಫರ ಹಾಡಿನ ವಿಸ್ತೃತ ಭಾವಗಳನ್ನು, ಅರ್ಥಗಳನ್ನು ಮತ್ತು ಅದಕ್ಕೂ ಮೀರಿದ ಒಂದು ಕೃತಿಯ ಸಾರ್ಥಕ ಮುಖಗಳನ್ನು ನಿಮ್ಮ ಲೇಖನ ಕೊಟ್ಟಿದೆ. ಕವಿಯ ಒಗಟಿನ ಪದಗಳನ್ನು ಬಿಡಿಸುವ ನಿಮ್ಮ ಬರವಣಿಗೆಗೆ ದೊಡ್ಡದೊಂದು ವಂದನೆ.

  Liked by 1 person

  1. ಮೇಲ್ನೋಟಕ್ಕೆ ಕಾಣುವ ಸಾಮಾನ್ಯ ಅರ್ಥವನ್ನು ಅಧಿಗಮಿಸಿ ಮತ್ತೇನಾದರೂ ಹೊಳಹು ಕಾಣಬಹುದೇನೋ ಎಂದೆ ಹುಡುಕಿ ಬರೆದ ಕಾರಣ ಸ್ವಲ್ಪ ವಿಭಿನ್ನ ದೃಷ್ಟಿಕೋನವು ಬಂದಿದೆಯೆಂದು ಭಾವಿಸುತ್ತೇನೆ. ತಪ್ಪಾಗಿ ಅರ್ಥೈಸಿರದ್ದರೆ ಸಾಕು 😊

   ತಮ್ಮ ಅವಿರತ ಮೆಚ್ಚಿಗೆಯ ಪ್ರತಿಕ್ರಿಯೆಗೆ ನಾನು ಚಿರ ಕೃತಜ್ಞ. ನಿಜಕ್ಕೂ ಹೃತ್ಪೂರ್ವಕ ಧನ್ಯವಾದಗಳು !

   Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s