00606. ಅಹಲ್ಯಾ_ಸಂಹಿತೆ_೩೬ (ಸೂರ್ಯನ ವಶದಲ್ಲಿ ಸಹಸ್ರಕವಚ)


00606. ಅಹಲ್ಯಾ_ಸಂಹಿತೆ_೩೬ (ಸೂರ್ಯನ ವಶದಲ್ಲಿ ಸಹಸ್ರಕವಚ)
_____________________________________

(Link to previous episode 35: https://nageshamysore.wordpress.com/2016/03/19/00602-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ab/)

‘ ಸಾಧ್ಯವಿರಬಹುದೆಂದು ಕಾಣುತ್ತದೆ.. ತಾತ್ವಿಕವಾಗಿ. ನನ್ನ ಬೇರೆಯ ಪ್ರಯೋಗಗಳಲ್ಲಿ ವಿನಿಮಯ ತತ್ವವನ್ನು ಈಗಾಗಲೆ ಬಳಸಿದ್ದೇನೆ. ಅದಕ್ಕೆ ನಿಮ್ಮ ಸಿದ್ದಾಂತವನ್ನು ಸಮೀಕರಿಸಬೇಕಾದರೆ ವಸ್ತು-ಪ್ರತಿವಸ್ತುವಿನ ಜಾಗದಲ್ಲಿ ಸಾತ್ವಿಕ-ತಾಮಸ ಶಕ್ತಿಗಳನ್ನು ಆರೋಪಿಸಿಕೊಳ್ಳಬೇಕು ಅಷ್ಟೆ… ಆದರೆ ಅದು ಘಟಿಸಬೇಕಾದರೆ ನನಗೆ ಎರಡು ಶಕ್ತಿಮೂಲಗಳ ಅಗತ್ಯವಿರುತ್ತದೆ.. ಉದಾಹರಣೆಗೆ ಸಹಸ್ರಕವಚನ ತಾಮಸಿ ಶಕ್ತಿಯನ್ನು ರವಾನಿಸುವ / ವಿನಿಮಯಿಸುವ ಮತ್ತೊಬ್ಬ ಸಾತ್ವಿಕ ಶಕ್ತಿಯಿರುವ ವ್ಯಕ್ತಿಯ ಅಗತ್ಯವಿರುತ್ತದೆ. ಆ ಇನ್ನೊಂದು ವ್ಯಕ್ತಿ ಅಥವಾ ಶುದ್ಧ ಶಕ್ತಿಮೂಲವನ್ನು ತರುವುದು ಎಲ್ಲಿಂದ ? ‘ ಎನ್ನುತ್ತಾ ಮಾತು ನಿಲ್ಲಿಸಿದ ಸೂರ್ಯ ತನ್ನಲ್ಲೇ ಚಿಂತನೆ ನಡೆಸುವವನಂತೆ.

ಅದನ್ನು ಕೇಳುತ್ತಿದ್ದ ಹಾಗೆ ಏನೋ ಹೊಳೆದವನಂತೆ ತಟ್ಟನೆ ಹೇಳಿದ ನರ, ‘ಸೂರ್ಯದೇವ, ನೀನೀಗ ಹೇಳುತ್ತಿರುವ ಬಗೆ ನೋಡಿದರೆ ನನಗೊಂದು ಸಾಧ್ಯತೆ ಕಂಡುಬರುತ್ತಿದೆ.. ನನ್ನಲ್ಲಿ ಹೇಗೂ ಸಂಚಿತವಾಗಿರುವ ಅಪಾರ ಸಾತ್ವಿಕ ಶಕ್ತಿಯಿದೆ.. ಅದನ್ನೇ ವಿನಿಮಯ ಮಾಡಿಕೊಂಡು ಈಗಲೇ ಸಹಸ್ರಕವಚನ ಅಸುರಿ ಪ್ರವೃತ್ತಿಗೆ ತುಸು ಕಡಿವಾಣ ಹಾಕಬಹುದೇ ? ಹಾಗಾದಲ್ಲಿ ನಾನು ನಾರಾಯಣನಿಗೆ ಶಕ್ತಿ ವರ್ಗಾಯಿಸಿಕೊಡುವ ಪ್ರಮೇಯ ಬರುವುದಿಲ್ಲ… ಜತೆಗೆ ನಿನ್ನ ಬಯಕೆಯಂತೆ ಅವನನ್ನು ತುಸು ಸಾತ್ವಿಕನನ್ನಾಗಿಸಬಹುದು..’

‘ಅದು ತಾಂತ್ರಿಕವಾಗಿಯೇನೊ ಸುಲಭ ಸಾಧ್ಯ.. ಆದರೆ ನಿನ್ನಿಂದ ಹೇಗೆ ಅವನಿಗೆ ಸಾತ್ವಿಕತೆ ಪ್ರವಹಿಸುವುದೋ, ಅಂತೆಯೇ ಅದರ ವಿನಿಮಯ ರೂಪದಲ್ಲಿ ನಿನಗೆ ಅವನ ಬೇಡದ ತಾಮಸತ್ವದ ಆವಾಹನೆಯಾಗುತ್ತದೆ.. ಈ ತಾಮಸತ್ವ ಒಂದು ರೀತಿಯ ಗಟ್ಟಿ ನೆಲೆಯುಳ್ಳದ್ದು , ಮತ್ತೆ ಬದಲಾಗುವ ಸ್ವರೂಪದ್ದಲ್ಲ. ಹೀಗಾಗಿ ಅದು ನಿನ್ನಲ್ಲಿ ಶಾಶ್ವತವಾಗಿ ನೆಲೆಸಿಹೋಗುತ್ತದೆ..!’

ಸೂರ್ಯದೇವನ ಮಾತು ಕೇಳುತ್ತಿದ್ದಂತೆ ನರನಿಗು ಅಳುಕಾಯಿತು – ಅಂದರಿದು ಶಾಶ್ವತ ಪರಿಣಾಮ!

‘ ಸೂರ್ಯದೇವ ಒಂದುವೇಳೆ ನಾವಿದನ್ನು ಸೂಕ್ತ ಅನುಪಾತದಲ್ಲಿ ನಿಭಾಯಿಸಿದರೆ – ಅರ್ಥಾತ್, ಹೆಚ್ಚುಭಾಗ ಸಾತ್ವಿಕವಿದ್ದು, ನಿಯಂತ್ರಿಸಲು ಸಾಧ್ಯವಿರುವಷ್ಟು ಭಾಗ ಮಾತ್ರ ತಾಮಸ ಸೇರುವಂತೆ ಅನುವು ಮಾಡಿಕೊಟ್ಟರೆ ಈ ಶಾಶ್ವತ ಪರಿಣಾಮವನ್ನು ಮೊತ್ತದಲ್ಲಿ ನಿಭಾಯಿಸಲು ಸಾಧ್ಯವೇ ?’ ಏನೋ ಮಥನದಲ್ಲಿದ್ದ ನಾರಾಯಣ ಅದನ್ನು ಖಚಿತಗೊಳಿಸುವ ಸಲುವಾಗಿ ಕೇಳಿದ.

‘ ಹೌದು ಅದು ತಾರ್ಕಿಕವಾಗಿ ಸಾಧ್ಯ.. ಯಾಕೆಂದರೆ ದುರ್ಬಲ ತಾಮಸದ ಪ್ರಚೋದನೆಯನ್ನು ಪ್ರಬಲ ಸಾತ್ವಿಕ ಕಡಿವಾಣ ಹಾಕಿ ಹಿಡಿದಿಡುವುದರಿಂದ..’

ಅದನ್ನು ಕೇಳಿಸಿಕೊಂಡ ನರ ತಕ್ಷಣವೆ ಖಚಿತ ನಿರ್ಧಾರವೊಂದಕ್ಕೆ ಬಂದವನಂತೆ ನುಡಿದ – ‘ಹಾಗಾದರೆ ಈ ದಾರಿಯನ್ನೇ ಹಿಡಿಯುವುದು ಸರಿ.. ನನ್ನಲ್ಲಿನ ಸಾತ್ವಿಕತೆ ಸಹಸ್ರಕವಚನಲ್ಲಿಯು ಶಾಶ್ವತವಾಗಿ ಉಳಿದುಬಿಡುವುದರಿಂದ ಮುಂದಿನ ಯುಗಾಂತರ ರೂಪದಲ್ಲಿ ಅವನು ದಾನವನಾಗದೆ ಈಗಿರುವುದಕ್ಕಿಂತಲು ಹೆಚ್ಚು ಮಾನವ ಗುಣವುಳ್ಳವನಾಗುತ್ತಾನೆ… ಅಂತೆಯೇ ನನ್ನಲ್ಲಿ ಅಸುರಿ ಪ್ರವೃತ್ತಿ ಜಾಗೃತವಾದರು ಅದನ್ನು ನಿಯಂತ್ರಿಸುವ ಸಾತ್ವಿಕದ ಬಲ ಹೆಚ್ಚಿರುತ್ತದೆ , ಜತೆಗೆ ನಾರಾಯಣನ ಪೂರ್ಣ ಸಾತ್ವಿಕಬಲ ಹೇಗೂ ಜತೆಗಿರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಈಗ ನಾರಾಯಣ ಮುಂದುವರೆಸಬೇಕಾದ ಯುದ್ಧದಲ್ಲಿ ನನ್ನಿಂದ ಮತ್ತಷ್ಟು ಶಕ್ತಿಯನ್ನು ಆವಾಹಿಸಿಕೊಳ್ಳುವ ಅಗತ್ಯ ಇರುವುದಿಲ್ಲ… ಇದು ಸದ್ಯದ ಎಲ್ಲಾ ಪ್ರಶ್ನೆಗೂ ಉತ್ತರವೀವ ಏಕೈಕ ಸುವರ್ಣ ಮಾರ್ಗ..’

ಆ ಹೊತ್ತಿನಲ್ಲಿ ತನ್ನ ಮತ್ತು ಬ್ರಹ್ಮದೇವ ಹಾಗು ದೇವೇಂದ್ರರ ನಡುವಿನ ಚರ್ಚೆಯ ವಿವರಗಳನ್ನು ಮತ್ತೆ ವಿವರಿಸಿದ ಸೂರ್ಯ ತಮ್ಮ ಪ್ರಯೋಗದ ಫಲಿತವನ್ನು ಮುಂದಿನ ತೇತ್ರಾಯುಗಕ್ಕೆ ಬದಲು ಅದರ ನಂತರದ ದ್ವಾಪರದ ಯುಗದವರೆಗೂ ಒಯ್ಯಬೇಕಾದೀತೆಂದು , ಅಲ್ಲಿಯವರೆಗೂ ಸಹಸ್ರಕವಚನ ಶಕ್ತಿತೇಜವನ್ನು ನಿಷ್ಕ್ರಿಯವಾಗಿಸಿ ಶೀತಲ ರೂಪದಲ್ಲಿ ಕಾಯ್ದಿಡುವ ಅಗತ್ಯವೂ ಇರುತ್ತದೆಂದು ವಿವರಿಸಿದ..

“ನರ, ತತ್ ಕ್ಷಣಕ್ಕೆ ಸಹಸ್ರಕವಚನಲ್ಲಿ ಶಕ್ತಿ ವಿನಿಮಯ ನಡೆಸಿ ಸಾತ್ವಿಕತೆಯ ಭಾಗಂಶವನ್ನು ಆರೋಪಿಸುವ ಮಟ್ಟಕ್ಕೆ ನಾವಿನ್ನು ತಲುಪಿಲ್ಲ. ಹೀಗಾಗಿ ನಾರಾಯಣನ ಯುದ್ಧ ಈ ರೀತಿಯಲ್ಲೇ ಮುಂದುವರೆಸದೆ ವಿಧಿಯಿಲ್ಲ.. ಬೇಕಿದ್ದರೆ ನಿನ್ನ ಶಕ್ತಿಯನ್ನು ಅವನಿಗೆ ರವಾನಿಸುವುದರಿಂದ ಸಹಾಯವಾದೀತೆಂದರೆ ಹಾಗೆ ಮಾಡು. ನಮ್ಮ ಈ ವಿನಿಮಯ ಪ್ರಯೋಗವನ್ನು ನಾವು ಈ ಯುದ್ದಾನಂತರವೆ ಆರಂಭಿಸಬೇಕು.. ಆ ನಂತರವೂ ನೀನು ನಿನ್ನ ಪಾಲಿನ ಕೊನೆಯ ಯುದ್ಧವನ್ನು ಆರಂಭಿಸಿ ಸಹಸ್ರಕವಚನ ಶಕ್ತಿಯನ್ನು ಎಷ್ಟು ಕುಗ್ಗಿಸಲು ಸಾಧ್ಯವೋ ಅಷ್ಟು ಕುಗ್ಗಿಸಿಬಿಡು. ಹಾಗಾದಾಗಷ್ಟೆ ಸಹಸ್ರಕವಚನ ಶೇಷಶಕ್ತಿಯನ್ನು ನಮಗೆ ಬೇಕಾದ ಹಾಗೆ ಕೇಳುವಂತೆ ಪಳಗಿಸಬಹುದು… ಕೊನೆಯಲ್ಲಿ ನಿಗ್ರಹಿಸದೆ ಉಳಿದ ಭಾಗವನ್ನು ಮಾತ್ರ ಸ್ಥೂಲೀಕರಿಸಿ ನನ್ನ ಪ್ರಯೋಗಾಲಯಕ್ಕೊಯ್ದರು ಮುಂದಿನ ಯುಗಕ್ಕೆ ಸಿದ್ದನಾಗಿಸಲು ಬೇಕಾದ ಸಮಯ ಇರುವುದಿಲ್ಲ.. ಅವನ ಶಕ್ತಿಯನ್ನು ಹಾಗೆ ಕಾದರಿಸಿ, ಮುಂದಿನ ಯುಗದಲ್ಲಿ ಅದರ ವಿನಿಮಯ ಪರಿವರ್ತನೆಯ ಕಾರ್ಯ ಆರಂಭಿಸಬೇಕು. ಈ ವಿನಿಮಯ ಪ್ರಯೋಗ ನಿರೀಕ್ಷೆಯಂತೆ ಯಶಸ್ಸಾಗದೆ ಹೆಚ್ಚು ಸಮಯ ಹಿಡಿದರೆ ಅದು ಫಲಿತವಾಗುವ ತನಕ ಅವನ ಶೇಷಶಕ್ತಿಯನ್ನು ಶೀತಲರೂಪದಲ್ಲಿ ನಿಶ್ಚೇಶ್ಟಿತ ರೂಪದಲ್ಲಿರಿಸಿ ಕಾಯಬೇಕಾಗಿ ಬಂದರೂ ಬರಬಹುದು.. ಒಂದು ವೇಳೆ ಅಂತಿಮ ವಧೆಯ ಕಾರ್ಯ ಆಗ ಇನ್ನೂ ಆಗದ ಕಾರ್ಯವೆನಿಸಿದರೆ ಇನ್ನೂ ಮುಂದಿನ, ದ್ವಾಪರ ಯುಗಕ್ಕೆ ಹೋಗಿಬಿಡುತ್ತದೆ ” ಎಂದ..

ಅನಂತರ ಅವರ ನಡುವೆ ಮತ್ತಷ್ಟು ಚರ್ಚೆ ವಾದಗಳು ನಡೆದು ಕೊನೆಗೆ ಅದೇ ಸರಿಯಾದ ತೀರ್ಮಾನವೆಂದು ಒಮ್ಮತದಿಂದ ನಿರ್ಧರಿಸಿದರು. ಸೂರ್ಯನಿಗಂತು ಅದರಿಂದ ಹೆಚ್ಚಿನ ಸಂತಸವಾಗಿತ್ತು …

ಸಹಸ್ರಕವಚ ತನ್ನ ದೈತ್ಯ, ದಾನವನೆಂಬ ಅಸುರಿ ಪೋಷಾಕನ್ನು ಕಿತ್ತೊಗೆದು ಬಹುತೇಕ ಸಾತ್ವಿಕನೆಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಾಧ್ಯವಾಗಿಸಲಿತ್ತು ಈ ಯೋಜನೆ.. ಅದು ಮುಂದೆ ಸೂರ್ಯಪುತ್ರನೆಂಬ ಬಿರುದಿನ ಜತೆ ಕರ್ಣನೆಂಬ ಹೆಸರಲ್ಲಿ ಅನಾವರಣವಾಗಲಿರುವ ಪಾತ್ರದ ಮುನ್ಸೂಚನೆಯಾಗಿತ್ತು…!

ಈ ಯೋಜನೆಯ ದೆಸೆಯಿಂದ ಆವಾಹಿತವಾದ ಸಾತ್ವಿಕತೆ ಅವನನ್ನು ಒಂದೆಡೆ ದಾನಶೂರ ಕರ್ಣ, ಅಸೀಮ ಸ್ವಾಮಿಭಕ್ತ ಮತ್ತು ನಿಷ್ಠಾವಂತ ಗೆಳೆಯನನ್ನಾಗಿಸಿದರೆ, ಮೂಲರೂಪದ ವೀರತ್ವ , ತಾಮಸತೆಯ ಪಳೆಯುಳಿಕೆಗಳು ಅವನನ್ನು ಧರ್ಮದ ಹಾದಿಗೆ ಬದಲು ಅಧರ್ಮದ ಹೊಸಿಲೇರುವಂತೆ ಮಾಡಲಿತ್ತು – ಸಹಸ್ರಕವಚನ ಕೊನೆಯ ವಧೆಗೆ ವೇದಿಕೆಯಾಗುವಂತೆ… ಬಹುಶಃ ಅವನ ಸಾತ್ವಿಕ ನೈತಿಕತೆಯನ್ನು ಕುಗ್ಗಿಸಲೋ ಏನೋ ಎಂಬಂತೆ, ಕುಂತಿಯಲ್ಲಿ ವಿವಾಹದ ಮೊದಲೇ ಜನಿಸಿ, ಸೂತಪುತ್ರನಾಗಿ ಕೀಳರಿಮೆಯಲ್ಲಿ ನರಳಿ ನಲುಗುವ ಭಾದೆಗು ಒಳಗಾಗಿಸಲಿತ್ತು… ದೇವರಾಜನ ಸುತನಾಗಿ ಅರ್ಜುನನೆಂಬ ಹೆಸರ ನರನಷ್ಟೆ ಸಮಾನಾಧಿಕಾರದಲ್ಲಿ ಹುಟ್ಟಿಯೂ ಪಾಡುಪಡಬೇಕಾಗಿ ಬಂದರು – ಹಿಂದಿನ ಬಾರಿಯ ಸಹಸ್ರಕವಚನೆಂಬ ದೈತ್ಯ ಕಳಂಕವನ್ನು ಅಳಿಸಲಂತೂ ಸಾಧ್ಯವಾಗಲಿದೆಯೆಂಬುದೆ ಸೂರ್ಯನಿಗೆ ಸಮಾಧಾನ ತಂದ ವಿಷಯ..

ಇನ್ನು ತಾಮಸದ ಆವಾಹನೆಯಿಂದ ಕಲುಷಿತನಾದ ನರನು, ಅದೇ ಕುಂತಿಯ ಅದೇ ಶಕ್ತಿತೇಜದ ಭಾಗವಾಗಿ ಜನಿಸಿ ಕೊನೆಗೂ ಮೇಲುಗೈ ಸಾಧಿಸಲಿರುವುದು ಕೂಡಾ ಈ ಯೋಜನೆಯ ತಾರ್ಕಿಕ ಫಲಿತವಾಗಲಿತ್ತು… ತನ್ನ ಕದನದ ಪಾಳಿ ಮುಗಿಸಿದ್ದ ನಾರಾಯಣ, ಕೇವಲ ಅರ್ಜುನ ರೂಪಿ ನರನಿಗೆ ಸಹವರ್ತಿಯಾಗಿದ್ದುಕೊಂಡು ಕೃಷ್ಣನ ಅವತಾರದಲ್ಲಿ ಸಹಸ್ರಕವಚನ ಕೊನೆಯ ವಧೆಗೆ ನಿಮಿತ್ತ ಮಾತ್ರನಂತೆ ಕೈ ಜೋಡಿಸಿದ್ದು ಕೂಡ ಕಾಕತಾಳೀಯವಾಗಿರದೆ ಈ ಯೋಜನೆಯ ವಿಸ್ತೃತ ಅಂಶವೇ ಆಗಲಿತ್ತು ..

ಆ ಜನುಮದಲ್ಲಿ ಕೃಷ್ಣ ಹೆಚ್ಚು ದೇವಮಾನವನಾಗಿದ್ದುಕೊಂಡು, ಅರ್ಜುನ ಹೆಚ್ಚು ನರಮಾನವನಂತೆ ಪ್ರವರ್ತಿಸಲು ಕಾರಣವಾಗಿದ್ದ ಸಾತ್ವಿಕ ತಾಮಸಗಳ ವಿಭಿನ್ನ ಅನುಪಾತದ ವಿಂಗಡಣೆಗು ಮೂಲ ಅಸ್ತಿಭಾರ ಹಾಕಿದ್ದು ಅದೇ ಯೋಜನೆಯೇ..

ಮಹಾಭಾರತದ ಮುಂದಿನ ಕಥೆಯನ್ನು ಭವಿತದಲ್ಲಿ ನೋಡಿದರೆ ಅವರ ಈ ಯೋಜನೆ ಸಂಪೂರ್ಣ ಯಶಸ್ವಿಯಾಯ್ತೆಂದು ಸುಲಭವಾಗಿಯೇ ತಿಳಿಯುವುದಾದರೂ, ಅದಕ್ಕೆ ಅಸ್ತಿಭಾರ ಹಾಕಿದ್ದ ಆ ಗಳಿಗೆಯಲ್ಲಿ ಅದರ ಖಚಿತ ಅರಿವು ಮುನ್ಸೂಚನೆ ಅವರಾರಿಗೂ ಇರಲಿಲ್ಲ…!

ಅಲ್ಲಿಂದ ಮುಂದಿನದೆಲ್ಲ ಇತಿಹಾಸ ಎನ್ನುವುದಕ್ಕಿಂತ ಪೂರ್ವ ನಿಯೋಜಿತ ಎನ್ನುವುದೇ ಸರಿಸೂಕ್ತವೇನೊ…

ಸೂರ್ಯದೇವನ ಸಲಹೆಯಂತೆ ನರನಿಂದ ಭಾಗಶಃ ಶಕ್ತಿಯನ್ನು ಎರವಲು ಪಡೆದ ನಾರಾಯಣ ತನ್ನ ಕದನವನ್ನು ಮುಂದುವರೆಸಿದ್ದ ಆ ಒಂಭೈನೂರ ತೊಂಭತ್ತೊಂಭತ್ತನೆ ಕವಚವನ್ನು ಯಶಸ್ವಿಯಾಗಿ ನಿಗ್ರಹಿಸುವ ತನಕ…

ತರುವಾಯ ತನ್ನ ಬಾರಿಯ ಕದನವನ್ನು ಆರಂಭಿಸಿದ್ದ ನರ – ಕಟ್ಟ ಕಡೆಯ ಕವಚವನ್ನು ಹಣಿದು ದುರ್ಬಲಗೊಳಿಸುವ ಸಲುವಾಗಿ. ತನಗುಳಿದಿರುವ ಬಲದಲ್ಲಿ ಸಂಪೂರ್ಣ ನಿಗ್ರಹ ಅಸಾಧ್ಯವೆಂಬ ಅರಿವಿದ್ದರು ಸೂರ್ಯದೇವನ ಮಾತಿನಂತೆ ಎಷ್ಟು ಸಾಧ್ಯವೋ ಅಷ್ಟು ಮೆತ್ತಗಾಗಿಸುವ ಉದ್ದೇಶದಿಂದ ಆರಂಭಿಸಿದ್ದ ಆ ಕದನದಲ್ಲಿ ಕನಿಷ್ಠ ಆರುನೂರು ಏಳುನೂರರಷ್ಟು ವರ್ಷಗಳನ್ನು ತಳ್ಳುವುದು ಸಾಧ್ಯವಾಗುವುದಾದರೆ ಸಾಕಿತ್ತು. ಮಿಕ್ಕುಳಿದ ಮುನ್ನೂರು, ನಾನೂರು ವರ್ಷಗಳ ಶೇಷ ಕದನ ಮುಂದಿನ ಯುಗದಲ್ಲಿಯೇ ಆದರು, ಅಷ್ಟರಮಟ್ಟಿಗೆ ಸುಲಭವಾಗಲಿತ್ತು.. ಆ ಉತ್ಸಾಹದಿಂದಲೆ ನರ ತನ್ನೆಲ್ಲಾ ಸಮಷ್ಟಿ ಶಕ್ತಿಯನ್ನು ಕ್ರೋಢೀಕರಿಸಿ ಸಹಸ್ರಕವಚನ ಶಕ್ತಿಯನ್ನು ಕುಂದಿಸುವುದರಲ್ಲಿ ಯಶಸ್ವಿಯೂ ಆಗಿದ್ದ..

ಆಗೊಮ್ಮೆ ನಡುವೆ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ ಸಹಸ್ರಕವಚ; ಜತೆಗೆ ಕದನ ವಿರಾಮದ ಸಮಯ ಬೇರೆ. ಆ ಹೊತ್ತಿಗೆ ಅಲ್ಲಿಗೆ ಬಂದ ಸೂರ್ಯದೇವ ಅಲ್ಲಿಗೆ ಕದನವನ್ನು ಸ್ಥಗಿತಗೊಳಿಸುವಂತೆ ಹೇಳಿ, ಸಹಸ್ರಕವಚನ ದೇಹವನ್ನು ಹೊತ್ತೊಯ್ದುಬಿಟ್ಟಿದ್ದ. ಮುಂದಿನ ಸಾತ್ವಿಕ-ತಾಮಸ ಶಕ್ತಿ ವಿನಿಮಯದ ಸಲುವಾಗಿ ಅವನ ದೇಹವನ್ನು ಅಣಿಗೊಳಿಸುವ ಮೊದಲು ಅವನ ದೇಹದ ಮಿಕ್ಕ ಶಕ್ತಿಯನ್ನು ಆಚರ ಮತ್ತು ಸ್ಥಿರರೂಪದ ಶಕ್ತಿಯಾಗಿರುವಂತೆ ಪರಿವರ್ತಿಸಿ ಕಾಯ್ದಿಡಬೇಕಿತ್ತು. ಒಂದು ರೀತಿಯ ಧೀರ್ಘ ನಿದಿರೆಗೆ ತಳ್ಳುವ ಕೆಲಸ ಅದು.. ಇಡೀ ದೇಹದ ಜೀವಕೋಶಗಳೆಲ್ಲ ಸ್ಥಗಿತಗೊಂಡು ನಿಲ್ಲಿಸಿಬಿಟ್ಟ ಗಡಿಯಾರದಂತೆ ನಿಶ್ಚಲವಾಗಿಬಿಟ್ಟು ತಾನಿರುವ ಸ್ಥಿತಿಯಲ್ಲಿ ಜಡಶಕ್ತಿಯಾಗಿ ಸ್ಥಬ್ದವಾಗಿಬಿಡುವ ಪ್ರಕ್ರಿಯೆ ಅದು. ಪ್ರಳಯ ಕಾಲದಲ್ಲಿ ಕೂಡ ಅದೇ ರೂಪದಲ್ಲಿದ್ದು ಪ್ರಳಯೋತ್ತರ ಕಾಲದಲ್ಲಿ ತನ್ನ ಜಡರೂಪವನ್ನು ಚೇತನಾರೂಪವಾಗಿ ಪರಿವರ್ತಿಸಿಕೊಂಡು, ನಿಷ್ಕ್ರಿಯವಾಗಿದ್ದ ಜೀವಕೋಶಗಳನ್ನು ಮತ್ತೆ ಎಚ್ಚರವಾಗಿಸುವ ಕಾರ್ಯ ನಡೆಸಬೇಕಿತ್ತು – ವಿನಿಮಯದ ಕಾರ್ಯ ಆರಂಭಿಸಲು..

ಸಹಸ್ರಕವಚನನ್ನು ತಂದು ತನ್ನ ಪ್ರಯೋಗಾಲಯದಲ್ಲಿ ಇರಿಸಿ ತನ್ನ ಯೋಜನೆಯ ಮೊದಲ ಹಂತವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಲೇ ನಿರಾಳವಾದ ನಿಟ್ಟುಸಿರುಬಿಟ್ಟಿದ್ದ ಸೂರ್ಯದೇವ..

(ಇನ್ನೂ ಇದೆ)

(Link to next episode no. 37: https://nageshamysore.wordpress.com/2016/03/26/00618-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ad-%e0%b2%a8%e0%b2%b0%e0%b2%ae%e0%b3%81%e0%b2%a8%e0%b2%bf-%e0%b2%ac/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s