00614. ಮನದಿಂಗಿತಕೆ ಮೂರಾದ ಹೊತ್ತಲಿ..!


00614.  ಮನದಿಂಗಿತಕೆ ಮೂರಾದ ಹೊತ್ತಲಿ..!
______________________________

   
ಇವತ್ತು ‘ಮನದಿಂಗಿತಗಳ ಸ್ವಗತ’ ಮೊಟ್ಟ ಮೊದಲ ಬಾರಿಗೆ ನನ್ನ ಜತೆ ಮಾತಾಡಿತ್ತು – ‘ಕಂಗ್ರಾಟ್ಸ್, ನಾನೀಗ ಮೂರು ತುಂಬಿದ ಮಗು’ ಅಂತ.

ಮೊದಲೆರಡು ವರ್ಷ ಯಾಕೋ ನೆನೆಸಿಕೊಂಡ ಹಾಗೆ ಕಾಣಲಿಲ್ಲ. ಹೀಗಾಗಿ ಈ ಬಾರಿ ಅಚ್ಚರಿಯ ಜತೆ ‘ಹೌದಲ್ಲ’ ಎನ್ನುವ ಭಾವ. ೨೦೧೩ನೆ ಮಾರ್ಚಿಯ ತಿಂಗಳ ೨೩ರಂದು ಮನದಿಂಗಿತಗಳ ಸ್ವಗತದ ಬಾಗಿಲು ತೆಗೆದ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ (ಅವತ್ತು ಈ ದಿನವೇ ಭಗತ್ ಸಿಂಗ್ ರಾಜಗುರು ಸುಖದೇವರನ್ನು ನೇಣಿಗೇರಿಸಿದ ದಿನ ಅಂತ ಗೊತ್ತಿರಲಿಲ್ಲ.. ಈಗ ಎಂಥಾ ಕಾಕಾತಾಳೀಯತೆ ಅನಿಸುತ್ತಿದೆ).

ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ – ಒಂದೆರಡು ದಿನಗಳ ಹಿಂದಷ್ಟೆ ಹೊಸದೊಂದು ಐಪ್ಯಾಡು ತಂದು ಅದರಲ್ಲೊಂದು ಕನ್ನಡ ಟೈಪಿಸುವ ‘ಆಪ್’ ಇದ್ದದ್ದು ಕಂಡು ಖುಷಿಯಿಂದ ಅದನ್ನು ಡೌನ್ಲೋಡ್ ಮಾಡಿಟ್ಟುಕೊಂಡಿದ್ದೆ.. ಆಗ ಪತ್ರ ಗಿತ್ರ ಗೀಚುವ ಉದ್ದೇಶವಿತ್ತೆ ಹೊರತು ಕಥೆ ಕವನ ಅಂತೆಲ್ಲ ಏನೂ ಇರಲಿಲ್ಲ. ಆವತ್ತು ಮನೆಯಲ್ಲಿ ಒಬ್ಬನೇ ಬೇರೆ ಇದ್ದೆ.. ತುಂಬಾ ಬೇಸತ್ತು ಕೂತು ಹೋಗಿದ್ದ ಕ್ಷಣ. ಆಫೀಸಿನಲ್ಲೂ ಏನೇನೊ ಜಂಜಾಟ, ಮನೆಯಲ್ಲೂ ಮತ್ತಿನ್ನೇನೇನೊ ಹೊಯ್ದಾಟ.. ರಾತ್ರಿಯ ಊಟ ಮಾಡಲೂ ಬೇಸರವಾಗಿ ಸುಮ್ಮನೆ ಹಾಗೆ ಕೂತಿದ್ದೆ..

ಆಗ ಆಪ್ತ ಗೆಳೆಯನ ಮೆಯಿಲ್ ಬಂದಿತ್ತು.. ನನಗೂ ಗೊತ್ತಿದ್ದ ಅವನ ಕಸಿನ್ ಒಬ್ಬ – ತೀರಾ ಎಳೆಯ ಪ್ರಾಯದವನು, ತೀರಿಕೊಂಡ ಎಂಬ ಸುದ್ದಿ…

ಆ ಗಳಿಗೆಯ ಆ ಮನಸ್ಥಿತಿಯಲ್ಲಿ ಅದೇನಾಯ್ತೋ , ಏನೋ.. ಎಲ್ಲೆಲ್ಲೊ ಹೆಪ್ಪುಗಟ್ಟಿದ್ದ, ಜಡ್ಡುಗಟ್ಟಿದ್ದ ಯಾವಾವುದೋ ಭಾವನೆಗಳ ಒಡ್ಡನ್ನು ಯಾರೋ ಒದ್ದು ಕೆಡವಿದಂತೆ ಒಳಗೆಲ್ಲ ಏನೋ ಹೇಳಲಾಗದ ನೋವು, ಹತಾಶೆ, ದಿಗ್ಭ್ರಾಂತಿ, ನಿಂತಲ್ಲಿ ನಿಲ್ಲಲಾಗದ ಕೂರಲಾಗದ ಚಡಪಡಿಕೆ.. ಇನ್ನು ತಡೆಯಲೇ ಆಗದು ಅನಿಸಿದಾಗ ಕಣ್ಣಿಗೆ ಬಿತ್ತು ಐಪ್ಯಾಡು – ಜತೆಗೆ ಇಪ್ಪತ್ತು ವರ್ಷಗಳಿಂದ ಹಳಿ ತಪ್ಪಿದಂತೆ ಮರೆಯಾಗಿಹೋಗಿದ್ದ ಬರೆಯಬೇಕೆನ್ನುವ ತುಡಿತ..

ಆ ಗಳಿಗೆಯಲ್ಲಿ ದೆವ್ವ ಹೊಕ್ಕವನಂತೆ, ಐಪ್ಯಾಡಿನಲ್ಲಿ ಆ ಸಾವಿನ ಹಿನ್ನಲೆಯಲ್ಲಿ ತೋಚಿದ, ಚಾಚಿದ, ಹೊರಸೂಸಿದ ಭಾವಗಳನ್ನೆಲ್ಲ ಟೈಪಿಸತೊಡಗಿದೆ – ‘ಸಾವೆಂಬ ಸಕಲೇಶಪುರ’ ಅನ್ನುವ ಕವನದ ಹೆಸರಲ್ಲಿ.. ಅದೆಷ್ಟು ಹೊತ್ತು ಟೈಪಿಸಿದೇನೊ ಗೊತ್ತಿಲ್ಲ, ಏನು ಬರೆದೆ ಎನುವುದರ ಅರಿವೂ ಇರದ ‘ಟ್ರಾನ್ಸ್’ನಲ್ಲಿದ್ದಂತಹ ಸ್ಥಿತಿ.. ಸುಮಾರು ಉದ್ದದ ಸುಧೀರ್ಘ ಕವನ – ನೀರು ಹರಿದಷ್ಟೆ ಸರಾಗವಾಗಿ ಹರಿಯುತ್ತಿತ್ತು ಅವಿರತವಾಗಿ.. ಇನ್ನೇನು ಎರಡೇ ಸಾಲಲ್ಲಿ ಮುಗಿಯಲಿದೆ ಎನ್ನುವಾಗ ಅನಿರೀಕ್ಷಿತವಾಗಿ ಅದು ಸಂಭವಿಸಿತು..!

ಆಗಿನ್ನೂ ಈ ಆಪ್ಗಳಲ್ಲಿ ಬರೆದು ಅಷ್ಟು ಅಭ್ಯಾಸವಿರಲಿಲ್ಲ – ಹೆಚ್ಚುಕಮ್ಮಿ ಅದೇ ಮೊದಲ ಬಾರಿ.. ಹಾಗೆ ಟೈಪಿಸುವಾಗ ಬಹುಷಃ ಅಲ್ಲಿ ಗರಿಷ್ಠ ಪದಗಳ ಮಿತಿಯಿತ್ತೋ ಅಥವಾ ಅದಾವುದಾದರು ತಂತ್ರಾಂಶದ ದೋಷವಿತ್ತೊ ಅರಿಯೆ – ಇದ್ದಕ್ಕಿದ್ದಂತೆ ನಾನು ಬರೆದಿದ್ದೆಲ್ಲಾ ಒಂದೇ ಏಟಿಗೆ ಪರದೆಯಿಂದ ಯಾರೋ ಬಂದು ಅಳಿಸಿದಂತೆ ಮಂಗಮಾಯಾ! ಅಂಡೂ ಮಾಡಿದರು ಇಲ್ಲಾ ಏನು ಮಾಡಿದರೂ ಇಲ್ಲ.. ಹೆಚ್ಚುಕಡಿಮೆ ಎರಡು ಗಂಟೆಯ ಫಸಲೆಲ್ಲ ಹೇಳದೆ ಕೇಳದೆ ಕಣ್ಣೆದುರಲ್ಲೆ ಕರಗಿ ಇಂಗಿಹೋಗಿತ್ತು.. ಏನು ಮಾಡಿದರು ರಿಕವರ್ ಆಗಲೇ ಇಲ್ಲಾ… ಅದು ಎಷ್ಟು ದೊಡ್ಡದೆಂದರೆ ಏನು ಬರೆದಿದ್ದೆನೆಂದು ಕೂಡ ನೆನಪಿನಲ್ಲಿರಲಿಲ್ಲ.. ಏನು ಮಾಡುವುದೊ ತೋಚಲಿಲ್ಲ.. ಅಷ್ಟೊಂದು ನಿರಾಶೆ, ಹತಾಶೆ, ಬೇಸರ ಯಾವತ್ತು ಆಗಿರಲಿಲ್ಲ.. ಐಪ್ಯಾಡ್ ಎಸೆದು ಆ ರಾತ್ರಿಯೆಲ್ಲ ನಿದ್ದೆಯಿಲ್ಲದೆಯೇ ಕಳೆದಿದ್ದೆ.. ಆವತ್ತು ಕವನವೊಂದಕ್ಕಾಗಿ ಕಣ್ಣೀರು ಹಾಕಿದ್ದೋ, ಅದನ್ನು ಬರೆಸಿದ ಸಾವಿಗೆ ಅತ್ತಿದ್ದೋ ನನಗೆ ಇವತ್ತಿಗೂ ಗೊತ್ತಾಗಿಲ್ಲ..

ಅದಾದ ಎರಡು ದಿನದ ನಂತರ – ಮಾರ್ಚಿ ಇಪ್ಪತ್ಮೂರರಂದು ಮನಸು ಸ್ವಲ್ಪ ತಹಬಂದಿಗೆ ಬಂದಿತ್ತು. ಕಳೆದುಕೊಂಡ ನಷ್ಟ ತುಂಬಲಸಾಧ್ಯವೆಂದರಿವಾಗಿಯೊ ಏನೋ ವಿಧಿಯಿಲ್ಲದೇ ಹೊಂದಿಕೊಳ್ಳುತ್ತಿದ್ದ ಮನಕ್ಕೆ ಮತ್ತೆ ಕಣ್ಣಿಗೆ ಬಿತ್ತು ಐಪ್ಯಾಡು. ಹಾಗೆ ಕೈಗೆತ್ತಿಕೊಂಡು ಕೂತಾಗ ಅಂದು ಬರೆದ ಕೆಲವು ಸಾಲುಗಳು ತುಸು ಏರುಪೇರಾಗಿ ಮತ್ತೆ ಮನದಲ್ಲಿ ಮೂಡತೊಡಗಿದವು. ಸರಿ, ಸುಮ್ಮನೆ ಅನ್ಯಮನಸ್ಕತೆಯಲ್ಲಿ, ಉದ್ದೇಶರಹಿತ ಮನಸ್ಥಿತಿಯಲ್ಲೇ ಗ್ರಹಿಕೆಗೆ ನಿಲುಕಿದಷ್ಟನ್ನು ನೆನಪಿನಿಂದ, ಭಾವದಿಂದ ಹೆಕ್ಕಿ ಹೆಕ್ಕಿ ಬರೆಯತೊಡಗಿದೆ.. ನೋಡನೋಡುತ್ತಿದ್ದಂತೆ ಆ ಪದ್ಯದ ಭಾವದಲ್ಲೇ ಮೂಡಿದ ಹೊಸ ಕವನ ರಚಿತವಾಗಿ ಹೋಗಿತ್ತು. ಈ ಬಾರಿ ಎರಡೆರಡು ಸಾಲಿಗೊಮ್ಮೆ ಕಾಪಿ ಮಾಡಿಕೊಳ್ಳುತ್ತ ಎಚ್ಚರವಹಿಸಿದ್ದರೂ ಕ್ರಾಶ್ ಏನೂ ಆಗಲಿಲ್ಲ – ಯಾಕೆಂದರೆ ಈ ಬಾರಿ ಬರೆದ ಕವನ ಮೊದಲಿನ ಅರ್ಧದಷ್ಟೂ ಆಗಿರಲಿಲ್ಲ.. ಆಗಲೇ ವರ್ಡ್ಪ್ರೆಸ್ಸ್ ಬ್ಲಾಗಿನ ಮಾಹಿತಿ ಸಿಕ್ಕಿತ್ತಾಗಿ ‘ಮನದಿಂಗಿತಗಳ ಸ್ವಗತ’ವನ್ನು ಸೃಜಿಸಿ ಈ ಕವನವನ್ನು ಅಲ್ಲಿ ಡ್ರಾಫ್ಟ್ ರೂಪದಲ್ಲಿ ಸೇವ್ ಮಾಡಿಟ್ಟುಕೊಂಡೆ. ಮುಂದೊಮ್ಮೆ ಅದನ್ನೇ ತಿದ್ದಿ ಪ್ರಕಟಿಸಿದ್ದೆ ಕೂಡ.

ಹೀಗಾಗಿ ಜನಿಸಿದ ಕೂಸಲ್ಲೀಗ ಆರುನೂರಕ್ಕು ಹೆಚ್ಚು ಬರಹಗಳ ಜಾತ್ರೆ. ಕೂತಾಗ, ನಿಂತಾಗ, ಬಸ್ಸಿನಲ್ಲಿ, ಬಸ್ಟಾಪಿನಲ್ಲಿ, ಮಳೆ ನಿಲ್ಲಲೆಂದು ನೆರಳಡಿ ನಿಂತ ಹೊತ್ತಲ್ಲಿ ಹೀಗೆ ಸಿಕ್ಕ ಅವಕಾಶದಲೆಲ್ಲ ಕನವರಿಸಿ ಜನಿಸಿದ ಸಾಲುಗಳು ಏನೆಲ್ಲಾ ಆಕಾರ ತಾಳಿ ಇಲ್ಲಿ ಅನಾವರಣಗೊಂಡಿವೆ. ಎಳ್ಳು ಜೊಳ್ಳು ಎಲ್ಲವನ್ನು ಆಪ್ಯಾಯತೆಯಿಂದ ಆಲಂಗಿಸಿ ನಿರಂತರವಾಗಿ ಪ್ರೋತ್ಸಾಹಿಸಿದ ಓದುಗರು, ಬ್ಲಾಗರು, ಬ್ಲಾಗಿಣಿಯರ ದೊಡ್ಡ ದಂಡೆ ಇದೆ.. ಅವರೆಲ್ಲರಿಗೂ ಹೇಗೆ ತಾನೇ ಕೃತಜ್ಞತೆ ಹೇಳಲಿ – ಇಲ್ಲೊಂದು ಹೃದಯಪೂರ್ವಕ ನಮನ ಹೇಳುವುದರ ಹೊರತಾಗಿ ? ಬಾಯಿ ಕಟ್ಟಿದಂತಾಗಿ ಹೋಗಿದೆ ನನ್ನ ಪದಾಡಂಬರ ಜಾತ್ರೆಯನ್ನು ಅವರೆಲ್ಲ, ನೀವೆಲ್ಲಾ ಪ್ರೋತ್ಸಾಹಿಸಿದ ಪರಿಗೆ..

ಹೀಗೆ ಇರಲಿ ನಿಮ್ಮ ಆದರ, ಪ್ರೀತಿ. 

ಅಂದು ಕಾಡಿದ ಆ ಕವನ ಇಲ್ಲಿ ಮತ್ತೆ ಸೇರಿಸುತ್ತಿದ್ದೇನೆ – ನೆನಪಿನ ಕುರುಹಾಗಿ..

ಸಾವೆಂಬ ಸಕಲೇಶಪುರದಲ್ಲಿ….!
_________________________

ಹೊತ್ತು ಕಳೆದದ್ದೇ ತಿಳಿಯಲಿಲ್ಲ
ಪ್ರಾಯದಿಂದಭಿಪ್ರಾಯದತನಕ
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ
ಬೆಳ್ಳಿ ರೇಖೆಯಂತೆ
ಅಲ್ಲೊಂದು ಇಲ್ಲೊಂದು
ಕಾಣಿಸೆಬಿಟ್ಟಿತಲ್ಲ
ನೊರೆಗೂದಲೂ !
ನಲವತ್ತಕ್ಕೆ ಮತ್ತೈದುದುರಿ
ಹಣೆ ಸುಕ್ಕುಗಳು ಒಳಗೊಳಗೇ ಮುದುರಿ
ಕೆನ್ನೆ ಒಳಗೆಳೆದು
ಕನ್ನಡಿಯೇ ಅದುರಿ
ಕನ್ನಡಕದೊಳಗೆ ಅವಿತುಕೊಂಡಾಗ
ಶೀತಲ ನೆನಪು ಪಿಸುಗುಟ್ಟಿತು
ಕಳೆದಾಯ್ತು ಹರೆಯ, ಮುಟ್ಟಿದೆಯ ಗುರಿಯ?

ಥಟ್ಟನೆ ಹಿಂತಿರುಗಿ ನೋಡಿದರೆ ಕೆಳಗೆ
ಹೆಜ್ಜೆ ಮೊದಲ ಮೆಟ್ಟಿಲ ಒಳಗೊಳಗೇ
ಮುಂದೆ ಮತ್ತಿನ್ನೂರು ಹೊಚ್ಚ ಹೊಸ ಮಳಿಗೆ!
ಟುಸ್ಸ್ ಎಂದು ಬತ್ತಿ ಉತ್ಸಾಹವೆಲ್ಲ
ಕುಗ್ಗಿ ಕೊನರಾಡಿದರೂ
ಬಂಡನಂತೆ ಉತ್ತರ ಪೌರುಷದಲ್ಲಿ
ನುಗ್ಗಿ ಹೆಣಗಾಡುವ
ಅನಿವಾರ್ಯಕ್ಕೆ ಅಚ್ಚರಿಗೊಂಡು
ಅಕಟಕಟ!
ನಾನು ಅನಂತನೆಂಬ
ಮೂರ್ಖ ಭ್ರಮೆಯಲ್ಲಿ
ಮುಳುಗೇಳುತಿದ್ದಂತೆ
ಸಕಲೇಶಪುರದಿಂದ ಬಂತವನ ಸಾವಿನ ಸುದ್ದಿ …
ಛೆ! ಏನಾಗಿತ್ತವನ ವಯಸ್ಸು
ಮಿಕ್ಕಿರಲಿಕ್ಕಿಲ್ಲ ಸಹ ಐವತ್ತು?

ಅರೆ ಗಂಟೆ, ಅರ್ಧ ದಿನ ಕಾಡಿತ್ತು ನ’ಮನ
ಏನಾಯಿತಾಮೇಲೆ?
ದಿನದಿನದಂತೆ ಗಮನ
ಜಗಕೆ ಹೊಸದೇನಲ್ಲ ಸಾವಿನ ಸುದ್ದಿ
ಸೋಜಿಗವು
ನಮಗನ್ವಯಿಸದೆಂಬ ಮೊಂಡ ಬುದ್ದಿ!
ನಮ್ಮೊಳಡಗಿದೆ ನಿರಂತರ ಭಯ,ಭೀತಿ
ಆದರೂ ಸದ್ಯಕ್ಕಲ್ಲ
ಮುಂದೆಂದೋ ಎಂಬ ಹುಸಿ ಭ್ರಾಂತಿ!
ಕಳೆದಂತೆ ಅರೆ ಆಯಸ್ಸು
ಉಳಿದಿದೆಯ ನಿಜಕ್ಕೂ ಅರ್ಧ?
ಅರ್ಧದಲ್ಲರ್ಧದಲ್ಲರ್ಧದಲ್ಲರ್ಧ?
ಬಲ್ಲವರಾರು? ಸಲ್ಲುವವರಾರು?
ಸಾವೆಂಬ ಸಕಲೇಶಪುರ ಸಮರ
ಗೆಲ್ಲುವವರಾರು?
ಅರಿತು ಮೆಲ್ಲುವವರಾರು?

– ನಾಗೇಶ ಮೈಸೂರು

(picture source: http://tanamatales.com/wp-content/uploads/2014/01/Third-anniversary.jpg)

blog Link:
00060. ಸಾವೆಂಬ ಸಕಲೇಶಪುರದಲ್ಲಿ….! – ಮನದಿಂಗಿತಗಳ ಸ್ವಗತ
https://nageshamysore.wordpress.com/060-%e0%b2%b8%e0%b2%be%e0%b2%b5%e0%b3%86%e0%b2%82%e0%b2%ac-%e0%b2%b8%e0%b2%95%e0%b2%b2%e0%b3%87%e0%b2%b6%e0%b2%aa%e0%b3%81%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf/

– ನಾಗೇಶ ಮೈಸೂರು

 

00613. ಹಾಯ್ಕು (?) 😛


00613. ಹಾಯ್ಕು (?) 😛
______________________

(೦೧)
ಬಿಸಿಲ ಬೇಗೆ
ಧಗೆಗೆ ಮಳೆಯಾಗಿ
ಬೆವರ ಹನಿ..

(೦೨)
ಬಿಸಿಲ ಮಳೆ
ಭುವಿಗುದುರಿಸಿದ್ದು
ತರಗೆಲೆಯ..

(೦೩)
ಬೇಸಿಗೆ ಜಳ
ದೂಸರ ಮಾತಿಲ್ಲದೆ
ಮರದ ಮೌನ ..

(೦೪)
ಸುಂಕದವನ
ಲೆಕ್ಕ, ಬಿಸಿ ಗಾಳಿಗೆ
ಫಂಕಕೆ ದೂರು..

(೦೫)
ಹಾಳು ಬೇಸಿಗೆ
ಬಿಲ್ಲಲ್ಲಿ ಉಳಿತಾಯ
ಕರೆಂಟೇ ಇಲ್ಲ..!

– ನಾಗೇಶ ಮೈಸೂರು

00612. ನನ್ನ ಹಾಯ್ಕುಗಳು (ಮತ್ತಷ್ಟು)


00612. ನನ್ನ ಹಾಯ್ಕುಗಳು (ಮತ್ತಷ್ಟು)
__________________________
(೨೩.೦೩. ೨೦೧೬)

ಅವಳಿಗೇಕೊ
ಕೇಳದು ಪಿಸುಮಾತು
ಕಿವಿಗೆ ಪೋನು ||

ನೀನಾಗೆ ದೂರ
ನನ್ನೆದೆಯಾಗಿ ಭಾರ
ನಾನೇ ಹಗುರ ||

ಬಿಚ್ಚಿಟ್ಟು ಮಾತು
ಮುಚ್ಚಿಟ್ಟಾಗ ಕವಿತೆ
ಕಟ್ಟಿತ್ತು ಬಾಯಿ ||

ಸೋಲು ಗೆಲುವು
ಬದುಕಲಿ ಸಹಜ
ಮಾಗಿಸಿ ಕಾಲ ||

ಬಾತ ಟಬ್ಬಲಿ
ಖಾಸಗಿ ಈಜುಕೊಳ
ಮನ ತಬ್ಬಲಿ ||

ನಲ್ಲಿ ನೀರಾಗಿ
ಹರಿದಿರಬೇಕಿತ್ತು
ಪ್ರೀತಿ ಕುದುರೆ ||

ಮೈಯ ಸೋಪಂತೆ
ತೊಳೆದು ಬಿಡಲೆಂತು ?
ನಮ್ಮದು ಪ್ರೀತಿ ||

ತೆಗೆ ಬಾಗಿಲು
ಹರಿಯಲಿ ಸರಾಗ
ಪ್ರೀತಿ ಪ್ರಣಯ ||

ಬೊಕ್ಕ ತಲೆಯ
ತುಂಬಾ ನೆಟ್ಟುಕೊಂಡಿವೆ
ಆಸೆ ಚಿಕುರ ||

ಕೊರೆವ ಚಳಿ
ಆಚೆ ಹೋಗುವಂತಿಲ್ಲ
ಬೆಚ್ಚನೆ ಮನೆ ||

– ನಾಗೇಶಮೈಸೂರು