00621. ಅಹಲ್ಯಾ_ಸಂಹಿತೆ_೩೮ (ಬ್ರಹ್ಮನಿಗೆ ನರನ ಸಲಹೆ, ಸಹಕಾರ)


00621. ಅಹಲ್ಯಾ_ಸಂಹಿತೆ_೩೮ (ಬ್ರಹ್ಮನಿಗೆ ನರನ ಸಲಹೆ, ಸಹಕಾರ)

(Link to previous episode no. 37: https://nageshamysore.wordpress.com/2016/03/26/00618-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ad-%e0%b2%a8%e0%b2%b0%e0%b2%ae%e0%b3%81%e0%b2%a8%e0%b2%bf-%e0%b2%ac/)

ಬ್ರಹ್ಮದೇವನ ಮನಮಥನದಲ್ಲಿ ಮೂಡುತ್ತಿದ್ದ ಕಾರ್ಯಯೋಜನೆಯ ಮಸುಕಾದ ಚಿತ್ರ ಯುಗಾಂತರ ಭವಿತದ ತನ್ನ ರೂಪುರೇಷೆಗಳನ್ನು ಆಗಲೇ ಹಾಕತೊಡಗಿತ್ತು..

ಅಲ್ಲಿ ಪ್ರಸ್ತಾವಗೊಂಡ ಕಲ್ಪನೆಯಲ್ಲಿ ಕುಂತಿಯೆಂಬ ಹೆಸರಿನಿಂದ ಹೆಸರಾಗುವ ಕನ್ಯೆಯ ಚಿತ್ರ ಮತ್ತವಳು ದೂರ್ವಾಸನಿಂದ ಪಡೆಯುವ ವರದ ಕಲ್ಪನೆ.. ದೂರ್ವಾಸ ಮುನಿ ಅವಳು ಇನ್ನೂ ಕನ್ನೆಯಾಗಿರುವಾಗಲೇ ವರ ನೀಡಿ ಅವಳ ಕುತೂಹಲ ಕೆರಳುವಂತೆ ಪ್ರೇರೇಪಿಸಿ ಸೂರ್ಯನೊಡನೆ ವರವನ್ನು ಫಲಿಸುವಂತೆ ಮಾಡಿಬಿಡಬೇಕು ಎನ್ನುವ ಮೂರ್ತಾಲೋಚನೆ…ಆಗ ಸಂದಿಗ್ದದಲ್ಲಿ ಸಿಕ್ಕಿ ಹುಟ್ಟುವ ಮಗುವನ್ನು ಅವಳು ತ್ಯಜಿಸಲೆಬೇಕು – ಕೇವಲ ಕರ್ಣಕುಂಡಲಗಳ ನೆನಪೊಂದನ್ನು ಮಾತ್ರ ಮನದಲ್ಲಿರಿಸಿಕೊಂಡು ಎನ್ನುವ ಧೂರ್ತಾಲೋಚನೆ..

ಹೀಗೆ ಸೂರ್ಯಪುತ್ರ ಕರ್ಣನೆಂಬ ಹೆಸರಿನಲ್ಲಿ ಸಹಸ್ರಕವಚ ಹೆತ್ತವಳಿಂದ ಬೇರಾಗಿ ಹೋದನೆಂದರೆ ಅಲ್ಲಿಗೆ ದೇವರಾಜನ ಮುಖೇನ ನರಮುನಿಂದ್ರನ ಜನನಕ್ಕೆ ದಾರಿ ಸುಗಮವಾಗುತ್ತದೆ – ಅರ್ಜುನನೆಂಬ ಹೆಸರಿನಲ್ಲಿ. ಹೌದು ಈಗ ಪೂರ್ಣ ದೇವಸ್ವರೂಪಿಯಾದ ನರಮುನಿಂದ್ರ ಆ ಜನ್ಮದಲ್ಲಿ ಅರೆ ನರನಾಗಿ ಸಾಮಾನ್ಯ ‘ಜನ’ರಂತೆ ಜನಿಸಬೇಕು, ಅರೆ ದೇವನ ಮುಸುಕನ್ನು ಬದಿಗಿಟ್ಟು.. ಆ ‘ಅರೆ-ಜನ’ನವನ್ನೇ ಹೆಸರಾಗಿಸಿ ಅರೆ..ಜನ್ಯ, ಅರೆ..ಜನ, ಅರ್ಜನ, ಅರ್ಜುನ ಎಂದು ಕರೆದುಬಿಡಬಹುದು.. ಆ ಹೆಸರೇ ಚೆನ್ನಾಗಿದೆ – ಕರಂಡಕದಲ್ಲಿ ನರನ ಶಕ್ತಿಶೇಷ ಕಾದಿಟ್ಟಾಗ ಆ ಹೆಸರನ್ನೇ ಬಳಸಬಹುದು..

ಹೀಗಾದಾಗ ಒಂದೆ ಶಕ್ತಿಮೂಲದ ಕರ್ಣಾರ್ಜುನರು ಕುಂತಿಯೆಂಬ ಒಂದೇ ಯೋನಿಮೂಲದಿಂದ ಜನಿಸಿಯೂ ಅದರ ಅರಿವಿಲ್ಲದೆ ಹೋಗಿ, ಮುಂದಿನ ಅವರ ಕಾಳಗಕ್ಕೆ ವೇದಿಕೆ ನಿರ್ಮಿಸಿದಂತಾಗುತ್ತದೆ… ಅದನ್ನು ಹೇಗೆ ನಿಭಾಯಿಸಬೇಕು, ಅದಕ್ಯಾವ ಜಂಜಾಟಗಳ ಆವರಣ ನಿರ್ಮಿಸಬೇಕೊ ಎನ್ನುವುದು ಈಗಿನ ಅವಸರವಲ್ಲ. ಅದರಲ್ಲಿ ಎಷ್ಟೊ ಸಂಧರ್ಭಾನುಸಾರ ತಾನೇ ಅನಾವರಣವಾಗುತ್ತದೆ.. ತಾನಿಲ್ಲಿ ನಿಗಾ ವಹಿಸಬೇಕಾದದ್ದು ಮುಖ್ಯವಾಹಿನಿಯ ವಸ್ತು ವಿಷಯಕ್ಕೆ… ಅಲ್ಲಿರುವ ಮುಖ್ಯ ಪಾತ್ರಗಳು ನರನಾರಾಯಣ ಸಹಸ್ರಕವಚರು ಮಾತ್ರ…

ಇನ್ನು ಆ ಜನ್ಮದಲ್ಲಿ ನರನ ಜತೆಗಿರುವ ನಾರಾಯಣ ದೇವಮಾನವನಂತಿದ್ದರು ಪ್ರಕಟವಾಗಿ ಹಾಗೆ ತೋರಿಸಿಕೊಳ್ಳುವಂತಿಲ್ಲ.. ಹುಣ್ಣಿಮೆ ಚಂದ್ರನ ಸಾಮರ್ಥ್ಯವಿದ್ದರೂ ಕೃಷ್ಣಪಕ್ಷದ ಚಂದಿರನ ಮುಖವಾಡವನ್ನು ಹೊತ್ತೆ ತನ್ನ ಭೂಮಿಕೆ ನಿಭಾಯಿಸಬೇಕು – ಅವನು ದೇವಮಾನವನೇ ಅಥವಾ ನರಮಾನವನೆ ಎಂಬ ಗೊಂದಲ, ಸಂಶಯ ಅವನ ಜೀವಿತದ ಸದಾಕಾಲವೂ ಜೀವಂತವಾಗಿರಬೇಕು.. ಎಲ್ಲವನ್ನು ಅಮಾವಾಸೆಯ ಚಂದ್ರನಂತೆ ಮುಚ್ಚಿಡುವ ಅನಿವಾರ್ಯವಿರುವ ಅವನ ಜನನವನ್ನು ಕೃಷ್ಣಪಕ್ಷದಲ್ಲೆ ಆಗಿಸಿ ಅವನ ಹೆಸರಲ್ಲೇ ಅವನ ಜನ್ಮದಿಂಗಿತವನ್ನು ಹುದುಗಿಸಿಟ್ಟುಬಿಡಬೇಕು – ಕೃಷ್ಣಪಕ್ಷದಲ್ಲಿ ಹುಟ್ಟಿ ತೆರೆಮರೆಯ ಚಂದ್ರನಂತೆ ಕಾರ್ಯ ನಿಭಾಯಿಸುವವನ ಹೆಸರು ಕೃಷ್ಣಾ ಎಂದೆ ಆಗಲಿ…ಕರಂಡಕದಲ್ಲಿ ನಾರಾಯಣನ ಶಕ್ತಿಶೇಷ ಕಾದಿಟ್ಟಾಗ ಆ ಹೆಸರನ್ನೇ ಬಳಸಬಹುದು..

ಹೀಗೆಲ್ಲಾ ಚಿಂತನೆ ನಡೆಸಿದ್ದ ಬ್ರಹ್ಮನನ್ನು ಮತ್ತೆ ವಾಸ್ತವಕ್ಕೆಳೆದಿತ್ತು ನರನ ದನಿ..” ಬ್ರಹ್ಮದೇವ.. ಅದಕ್ಕೇನಾದರೂ ದಾರಿ ಕಾಣಿಸಲು ಇನ್ನೂ ಸಮಯವಿದೆ.. ಅದನ್ನು ಸದ್ಯಕ್ಕೆ ಬದಿಗಿಡುವ.. ನಿನ್ನ ಸಂಶೋಧನಾ ಪ್ರಯೋಗದಲ್ಲೇ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ನನ್ನ ಸಹಾಯ ಬೇಕೆಂದಿದ್ದೆಯಲ್ಲ ? ಆ ಕುರಿತು ಚರ್ಚಿಸೋಣವೇ ?” ಎಂದಿದ್ದ ನರ.

ಅವನ ಮಾತು ಕೇಳುತ್ತಿದ್ದಂತೆಯೆ ತಾನು ಕೇಳಬೇಕೆಂದುಕೊಂಡಿದ್ದ ಪ್ರಶ್ನೆಗಳೆಲ್ಲವು ಒತ್ತರಿಸಿಕೊಂಡು ಬಂದಂತಾಗಿ ತನ್ನ ಭವಿತ ಚಿತ್ರದ ಸಾಧ್ಯತೆಯನ್ನು ಬದಿಗೊತ್ತಿದವನೇ ವಾಸ್ತವಕ್ಕೆ ಬಂದ ಬ್ರಹ್ಮದೇವ. ಮೊದಲಿಗೆ ಅವನ ಮಾತಾಗಿ ಬಂದದ್ದು ಊರ್ವಶಿಯ ಕುರಿತಾದ ಪ್ರಶಂಸೆ..

“ನರ ಮುನೀಂದ್ರ.. ಮೊದಲಿಗೆ ಊರ್ವಶಿಯಂತಹ ಉತ್ಕೃಷ್ಟ ಸೃಷ್ಟಿಗೆ ನನ್ನ ಅಭಿನಂದನೆಗಳು… ಮಂತ್ರದಿಂದ ಸೃಜಿಸಿದಂತೆ ಅನಾವರಣವಾದ ಆ ಚಿತ್ರವನ್ನು ನಾನು ನೋಡಿರದಿದ್ದರೆ ಖಂಡಿತ ಅದರ ಹಿನ್ನಲೆಯಲ್ಲಿರಬಹುದಾದ ವಿಜ್ಞಾನವನ್ನು ಮರೆತು ಅದ್ಭುತ ಪವಾಡವೆಂದೆ ಭಾವಿಸಿಬಿಡುತ್ತಿದ್ದೆ..” ಎಂದ.

ಅದನ್ನು ಕೇಳಿದ ನರ ಜೋರಾಗಿ ನಕ್ಕು..” ಇಲ್ಲ ಬ್ರಹ್ಮದೇವಾ.. ಅದು ನಡೆದದ್ದೇ ಒಂದು ದುರಂತ.. ಅಲ್ಲಿಯತನಕ ಹೋಗಬಾರದಿತ್ತು.. ಸರಿ ಆದದ್ದಾಯಿತು, ಅದರ ಕುರಿತೀಗ ಚರ್ಚಿಸಿ ಫಲವಿಲ್ಲ.. ನನ್ನ ತಪಸ್ಸಿನ ವಿರಾಮ ಹೆಚ್ಚಿದಷ್ಟು ಏಕಾಗ್ರತೆಯ ಮರುಕಳಿಕೆ ಕಠಿಣವಾಗುತ್ತದೆ. ಹಾಗಾಗಿ ನಿನ್ನ ಪ್ರಶ್ನೆಗಳೇನಿದ್ದರೂ ನೇರ ಚರ್ಚಿಸಿಬಿಡುವಾ ” ಎಂದ .

“ನರ ಮುನಿಂದ್ರ ಎಲ್ಲಾ ಸಂಕ್ಷಿಪ್ತದಲ್ಲೆ ವಿವರಿಸಿಬಿಡುವೆ.. ನೀನೀಗ ಸೃಷ್ಟಿಸಿರುವ ಊರ್ವಶಿಯ ಮಾನದಂಡವೇ ನಮ್ಮ ಸೃಷ್ಟಿಕ್ರಿಯೆಯ ಅಂತಿಮಗುರಿ. ಸರ್ವೋತ್ಕೃಷ್ಟ ತಳಿಯೊಂದನ್ನು ಸೃಷ್ಟಿಸಿ ಭೂಮಿಯಲ್ಲಿ ಅನಾವರಣ ಮಾಡುವುದು ಯಾವತ್ತೂ ನಮ್ಮ ಧ್ಯೇಯವಾಗಿತ್ತಲ್ಲವೆ? ಅದರಲ್ಲೂ ಮುಖ್ಯವಾಗಿ ಅದು ತಂತಾನೆ ನಿಭಾಯಿಸಿಕೊಂಡು ಸ್ವಯಂಭುವಿನಂತೆ ಮುಂದುವರೆಯುವ ಹಾಗೆ. ದುರದೃಷ್ಟಕ್ಕೆ ಕೋಟ್ಯಾಂತರ ಯುಗಾಂತರ ವರ್ಷಗಳ ಸತತ ಪ್ರಯತ್ನದಿಂದಲು ಇದು ಸಾಧ್ಯವಾಗಿಲ್ಲ. ಜೀವಿಯ ವಿಕಾಸ ಹಂತಹಂತದಲ್ಲಿ ಉನ್ನತವಾಗುತ್ತ ಸಾಗಿದೆಯೇ ವಿನಃ ನಾವಂದುಕೊಂಡ ಗುರಿಯನ್ನು ಮುಟ್ಟಲು ಇದುವರೆವಿಗೂ ಸಾಧ್ಯವಾಗಿಲ್ಲ.. ಅದೆಷ್ಟು ಸಹಸ್ರ ಕೋಟಿ ವರ್ಷಗಳು ಹಿಡಿದೀತೊ ಎಂದೂ ಗೊತ್ತಿಲ್ಲ.. ಆದರೆ ನಿನ್ನ ಕೈಯಿಂದಾದ ಊರ್ವಶಿಯ ಸೃಷ್ಟಿಯನ್ನು ನೋಡಿ ಈ ಪ್ರಕ್ರಿಯೆಯನ್ನು ತೀವ್ರವಾಗಿಸಿ ವೇಗವನ್ನು ಸಾಧಿಸಬಹುದೇನೊ ಎನ್ನುವ ಆಸೆ ಹುಟ್ಟಿದೆ.. ಆ ಆಶಯವನ್ನು ಸಾಕಾರಗೊಳಿಸಲು ಹುಟ್ಟು ಹಾಕಿದ ಮಹಾನ್ ಸಂಶೋಧನೆ – ಅಹಲ್ಯ. ಊರ್ವಶಿಯ ಸೃಷ್ಟಿಯನ್ನೆ ಮಾನದಂಡವಾಗಿರಿಸಿಕೊಂಡು ನಮ್ಮ ಈಗಿರುವ ಸೃಷ್ಟಿಯ ಅಂತರ – ನ್ಯೂನತೆಗಳನ್ನು ತೊಡೆದು ಹಾಕಿದರೆ, ಏಕಾಏಕಿ ನಮ್ಮೀಗಿನ ಸೃಷ್ಟಿಯ ಗುಣಮಟ್ಟವನ್ನು ಹೆಚ್ಚಿಸಬಹುದೆನ್ನುವ ಆಶಯ… ಆದರೆ ಇರುವ ಅಗಾಧ ಅಂತರ ಮತ್ತು ಕಾರ್ಯಬಾಹುಳ್ಯ ನೋಡಿದರೆ ಈ ಸಂಶೋಧನೆಯೇ ಲಕ್ಷಾಂತರ ವರ್ಷಗಳಾಗುವ ಸೂಚನೆ ಕಾಣಿಸುತ್ತಿದೆ.. ಅದರ ವೇಗವರ್ಧನೆಗೆ ನಿನ್ನ ಸಲಹೆ, ಸಹಾಯ, ಸಹಕಾರ ಬೇಕು…” ಎಂದವನೇ ಧೀರ್ಘವಾಗಿ ಉಸಿರೆಳೆದುಕೊಂಡ ಬ್ರಹ್ಮದೇವ.

” ಅರ್ಥವಾಯಿತು ಬ್ರಹ್ಮದೇವ.. ನಿಜ ಹೇಳುವುದಾದರೆ ನಮ್ಮ ಪ್ರಯೋಗದ ಮೂಲ ಉದ್ದೇಶವೇ ಇಂತದ್ದೊಂದು ಉತ್ತರ ಕಂಡು ಹಿಡಿದು ನಿನಗೊಪ್ಪಿಸುವುದಾಗಿತ್ತು… ಆದರೆ ಬೇಡದ ಅನಿವಾರ್ಯದ ಕದನದಲ್ಲಿ ಸಿಕ್ಕಿ ನಮ್ಮ ಶ್ರಮ ಯತ್ನಗಳೆಲ್ಲ ಎಲ್ಲೆಲ್ಲೊ ವ್ಯಯವಾಗಿಹೋಗುತ್ತಿವೆ. ಆದರೆ ಶಕ್ತಿಯ ತೇಜಸ್ಸಿನ ಕೋಲಾಟದಲ್ಲಿ ನಾವು ಅಸಹಾಯಕರು.. ಎಲ್ಲಿಯವರೆಗೆ ತಾಮಸ ಶಕ್ತಿಯನ್ನು ಮಟ್ಟಹಾಕುವುದಿಲ್ಲವೊ ಅಲ್ಲಿಯವರೆಗೂ ನಾವು ಸೃಜಿಸುವ ಸಾತ್ವಿಕ ಶಕ್ತಿಗೂ ಉಳಿಗಾಲವಿಲ್ಲ. ಹೀಗಾಗಿ ಯುದ್ಧದ ನೆಪದಲ್ಲಿ ಮತ್ತದರ ಹಂಗಿನಲ್ಲಿ ತಾಮಸವನ್ನು ನಿಷ್ಕ್ರಿಯವಾಗಿಸದೆ ವಿಧಿಯಿಲ್ಲ. ಸುದೈವಕ್ಕೆ ನಾವು ಈ ತರತರದ ಅವತಾರಗಳನ್ನು ತಾಳುವ ಪ್ರವೃತ್ತಿಯ ಬೆನ್ನಟ್ಟಿ ಬೇಡದ ಶಕ್ತಿಯ ದಮನಕ್ಕೆ ಹೋರಾಡುತ್ತ ಸೃಷ್ಟಿಯ ಸುಸ್ಥಿತಿಯನ್ನು ಕಾಪಾಡಲು ಯತ್ನಿಸುವಾಗಲೇ, ನಿನ್ನ ಕಡೆಯಿಂದ ಸೃಷ್ಟಿಯ ಮೂಲದಲ್ಲೆ ಬೇಡದ ಜೊಳ್ಳನ್ನು ಸೋಸಿ ಬರಿ ಉತ್ಕೃಷ್ಟ ಕಾಳನ್ನು ಸೃಜಿಸುವ ಪ್ರಯೋಗಕ್ಕೆ ನಾಂದಿಯಾಗುತ್ತಿದೆ. ಇವೆರಡು ಸಮಾನಾಂತರದಲ್ಲೆ ನಡೆಯಬೇಕಿರುವ ಕಾರ್ಯ – ಅಂತಿಮ ಗುರಿ ತಲುಪುವತನಕ…” ದನಿಯಲ್ಲಿನ ತನ್ನ ಮೆಚ್ಚುಗೆಯನ್ನು ಬಚ್ಚಿಡದೆ ನುಡಿದಿದ್ದ ನರ.

” ಹೌದು ನರ, ಮೂಲತಃ ಸರ್ವೋತ್ಕೃಷ್ಟ ಸಾತ್ವಿಕ ಶಕ್ತಿತೇಜವೆ ಮೂಲಗುರಿಯಾಗಿದ್ದರೂ ನಾವದನ್ನು ಸಾಧಿಸಲಾಗದೆ ತಡಕುವಂತಾಗಿದೆ.. ಅಲ್ಲದೆ ಈ ತಾಮಸ ಶಕ್ತಿಯ ಅಟ್ಟಹಾಸ ಈ ಮಟ್ಟಕ್ಕಿರಬಹುದೆನ್ನುವ ಕಲ್ಪನೆಯೇ ನಮಗಾರಿಗೂ ಇರಲಿಲ್ಲ.. ಆ ಪ್ರಜ್ಞೆ ಮೂಡಲು, ನಾವಿರುವ ಕಡೆ ತಾಮಸವಾದರೂ ಎಲ್ಲಿತ್ತು ? ಈಗ ಒಂದೆಡೆ ಸಹಸ್ರಕವಚನಂತಹವರನ್ನು ಕದನದಲ್ಲಿ ಮಟ್ಟಹಾಕುತ್ತ ಬಂದರು, ಮಿಕ್ಕೆಲ್ಲೆಡೆ ಅದು ಸಣ್ಣ ಪ್ರಮಾಣದಲ್ಲಾದರು ವ್ಯಾಪಕವಾಗಿ ಹಬ್ಬಿ ಪ್ರತಿಸೃಷ್ಟಿಯ ಅಂತಃಸತ್ವವೆ ಆಗಿ ಹೋಗುವಾಗ, ವಿಧಿಯಿಲ್ಲದೇ ಶಿವನ ಲಯದ ಪ್ರಯೋಗ ನಡೆಸಿ ಪ್ರಳಯದ ಹೆಸರಲ್ಲಿ ಎಲ್ಲವನ್ನು ಒಂದೇ ಏಟಿಗೆ ಅಳಿಸಿಹಾಕಿ ಮತ್ತೆ ಹೊಸತಾಗಿ ಆರಂಭಿಸುವ ಅನಿವಾರ್ಯ ಉಂಟಾಗಿಬಿಟ್ಟಿದೆ. ಶಿವನೇನೊ ಭುವಿಯ ಮಟ್ಟಿಗಿನ ಸಂಚಲನೆ ನಡೆಸಿ ಚೊಕ್ಕವಾಗಿಸಿ ಕೊಡುತ್ತಿದ್ದಾನಾದರು ಮರುಸೃಷ್ಟಿಯಲ್ಲಿ ಮತ್ತೆ ಮತ್ತೆ ನಾವದೇ ಶಕ್ತಿಗಳ ನಡುವಿನ ತಾಕಲಾಟಕ್ಕೆ ಸಿಕ್ಕಿ, ಮತ್ತದೇ ಚಕ್ರದಲ್ಲಿ ಸುತ್ತಿ ನರಳುವಂತಾಗಿದೆ.. ಪ್ರತಿ ಪ್ರಳಯದ ನಂತರವೂ ಮುಂದಿನ ಸೃಷ್ಟಿಚಕ್ರ ಹೆಚ್ಚು ದಕ್ಷತೆ ಮತ್ತು ಗುಣಮಟ್ಟದಿಂದ ಹೊರಹೊಮ್ಮುತ್ತಿದ್ದರೂ ಅದು ತೀರಾ ಸಣ್ಣ ಪ್ರಮಾಣದ ಪ್ರಗತಿಯ ಹಂತಗಳಲ್ಲಿ ನಡೆಯುತ್ತಿದೆ. ಹೀಗಾಗಿ ಅದೆಷ್ಟು ಚಕ್ರಗಳ, ಯುಗಗಳ ಪುನರಾವರ್ತನೆಯಾಗಬೇಕೊ ತಿಳಿಯದು. ಜತೆಗಿರುವ ಮತ್ತೊಂದು ತೊಡಕೆಂದರೆ ಪ್ರತಿ ಚಕ್ರದಲ್ಲೂ ಬೇಡದ ತಾಮಸತ್ವವು ತನ್ನ ಅಂತಃಸತ್ವವನ್ನು ವೃದ್ಧಿಸಿಕೊಂಡು ಬಲವಾಗುತ್ತಿದೆ.. ಹೀಗಾಗಿ, ಇದಕ್ಕೆಲ್ಲ ಮೂಲರೂಪದಲ್ಲಿ ಒಂದೇ ಬಾರಿಗೆ ಪರಿಹಾರ ಒದಗದಿದ್ದರೆ ಇದು ಮುಗಿಯದ ನಿರಂತರ ಚಕ್ರವಾಗಿಬಿಡುತ್ತದೆ… ಈಗ ಆ ದಿಸೆಯಲ್ಲಿ ನಿನ್ನ ಊರ್ವಶಿ ಒಂದು ದೊಡ್ಡ ಆಶಾಕಿರಣ. ಅಹಲ್ಯ ಪ್ರಯೋಗದಲ್ಲಿ ನಾವು ಊರ್ವಶಿಯ ಮಟ್ಟವನ್ನು ಸ್ವಯಂನಿಯಂತ್ರಿತ ಸ್ವಯಂಭು ಪರಿಸರದಲ್ಲಿ ಮರುಕಳಿಸಲು ಸಾಧ್ಯವಾದರೆ ನಮ್ಮ ಯತ್ನ ಫಲ ಕಂಡಂತೆ.. ಅದಕ್ಕೇನು ಮಾಡಬೇಕೆಂಬ ಸಲಹೆ, ಮಾರ್ಗದರ್ಶನ, ಕಾರ್ಯತಂತ್ರಕ್ಕೆ ನಿನ್ನ ಸಹಾಯ ಬೇಕು..”

“ಸರಿ ಬ್ರಹ್ಮದೇವ.. ಈ ವಿಷಯದ ಕುರಿತಾದ ನಮ್ಮ ಸಂಶೋಧನೆ, ಫಲಿತಗಳ ತಾಳೆಗರಿಗಳನ್ನೆಲ್ಲ ನಿನಗೆ ಹಸ್ತಾಂತರಿಸುತ್ತೇನೆ..ನಿನಗದು ಉಪಯೋಗಕ್ಕೆ ಬರುತ್ತದೆ… ಜತೆಗೆ ನಿನಗೊಂದು ಮುಖ್ಯವಾದ ಸುಳಿವನ್ನು ಕೊಡುತ್ತೇನೆ.. ನೀನು ಉಚ್ಚೈಶ್ರವಸ್ಸನು ನೋಡಿರುವೆಯಲ್ಲವೆ ? ನಾವದನ್ನು ಸೃಜಿಸಿದ್ದು ಕೂಡ ನೀನು ಹೇಳುತ್ತಿರುವ ಇದೇ ಉತ್ಕೃಷ್ಟ ಸೃಷ್ಟಿಯ ಪರಿಕಲ್ಪನೆಯ ಸಾಕಾರಕ್ಕಾಗಿ. ಊರ್ವಶಿಯ ಜತೆಗೆ ಅದನ್ನೂ ಪರಿಗಣಿಸಿದರೆ ನಿನ್ನ ಸಂಶೋಧನೆಯ ವೇಗವರ್ಧನೆಗೆ ಸಹಕಾರಿಯಾದೀತು.. ಇನ್ನು ನಿನ್ನ ಸಂಶೋಧನೆ ಹಿಡಿದಿರುವ ದಿಕ್ಕು, ದೆಸೆಯನ್ನು ಸಾರಾಂಶದಲ್ಲಿ ಹೇಳಿಬಿಡು.. ಅಲ್ಲೇನಾದರು ಸಲಹೆ, ಸೂಚನೆಯಿದ್ದರೆ ನೀಡುತ್ತೇನೆ..” ಎಂದ ನರ ಮುನೀಂದ್ರ.

ಬ್ರಹ್ಮದೇವ ಅದುವರೆಗಿನ ಮಾಹಿತಿಯನ್ನೆಲ್ಲ ಒಟ್ಟಾಗಿಸಿ ಅದನ್ನೆಲ್ಲ ಸಾರಾಂಶದ ರೂಪದಲ್ಲಿ ನರನಿಗರುಹಿದ. ಅದರಲ್ಲೂ ತಾವು ಕಂಡ ಜೀವಕೋಶದ ಮಟ್ಟದ ವ್ಯತ್ಸಾಸ, ಅದರ ಕಾಲಗತಿಯ ವೇಗ ಮತ್ತು ಆಯಸ್ಸಿನ ಮಾಹಿತಿಯ ಜತೆಗೆ ಊರ್ವಶಿಯ ಸೃಷ್ಟಿಯಲ್ಲಿ ಪ್ರತಿಕೋಶದ ಮಟ್ಟದಲ್ಲೂ ಸಾಧಿಸಿರುವ ಸ್ವಯಂಭುತ್ವದ ಬಗ್ಗೆಯೂ ವಿವರಿಸಿದ. ಎಲ್ಲವನ್ನು ಸಹನೆಯಿಂದ ಆಲಿಸಿದ ನರ ನಡುವೆ ಉದ್ದಕ್ಕೂ ಸಲಹೆ, ಸೂಚನೆ ನೀಡುತ್ತ ಯಾವ ಅಂಶಕ್ಕೆ ಗಮನವೀಯಬೇಕೆಂದು ಸುಳಿವು ನೀಡಿದವನೆ ಕೊನೆಯಲ್ಲೊಂದು ಮಾತು ನುಡಿದ..

“ಬ್ರಹ್ಮದೇವ.. ಈ ಗಳಿಗೆಯಲ್ಲಿ ಇಷ್ಟು ಮಾತ್ರ ಹೇಳಬಲ್ಲೆ.. ನಿನ್ನ ಸಂಶೋಧನೆ ಹಿಡಿದ ಹಾದಿ ಸರಿಯಾಗಿಯೇ ಇದೆ. ಆದರೆ ಒಂದು ವಿಷಯದತ್ತ ಮಾತ್ರ ಎಚ್ಚರವಿರಲಿ. ಜೀವಕೋಶಮಟ್ಟದ ಸ್ವಾಯತ್ತತೆ ಮತ್ತು ಸ್ವಯಂಭುತ್ವದ ಸಾಧನೆಯೇನು ಕಠಿಣವಲ್ಲ.. ನಿಜವಾದ ತೊಡಕು ಬರುವುದು ಅದರ ಸ್ವನಿಯಂತ್ರಣ ಮತ್ತು ಪರಿಮಿತಿಯ ಕಡಿವಾಣದ ಪರಿಧಿಯನ್ನು ನಿರ್ಧರಿಸುವಲ್ಲಿ… ಅಲ್ಲಿರುವ ಸುವರ್ಣ ಮಧ್ಯಮ ಮಾರ್ಗ ಗೋಚರಿಸುವತನಕ ನಿನ್ನ ಪ್ರಯೋಗ ಬರಿ ತಾಂತ್ರಿಕ ಯಶಸ್ಸನ್ನಷ್ಟೆ ಕಾಣಲು ಸಾಧ್ಯ… ಇದನ್ನು ಗಮನದಲ್ಲಿರಿಸಿಕೊಂಡು ಮುಂದುವರೆಯಲು ಹೇಳು ನಿನ್ನ ಸಂಶೋಧನಾ ತಂಡಗಳಿಗೆ..” ಎಂದವನೇ ಮಾತು ಮುಗಿಸಿದ.

ಅವನಿತ್ತ ತಾಳೆಗರಿಯೋಲೆಗಳ ಅಪಾರ ಜ್ಞಾನ ಸಂಪತ್ತಿನ ಭಾರವನ್ನು ಹೊತ್ತು ಹೊರನಡೆದ ಬ್ರಹ್ಮದೇವನ ಮನಸು ಮಾತ್ರ ಹೂವಿನಂತೆ ಹಗುರಾಗಿತ್ತು – ಆ ಫಲಪ್ರದ ಭೇಟಿಯ ನಂತರ.

(ಇನ್ನೂ ಇದೆ)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s