00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..


00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..
______________________________________________

ಇವತ್ತು ನನ್ನ ‘ಮನದಿಂಗಿತಗಳ ಸ್ವಗತ’ ಬ್ಲಾಗು ಪಿಸುಗುಟ್ಟಿತು – ಹತ್ತು ಸಾವಿರ ಕ್ಲಿಕ್ಕು ಎಂದು. ಸರಿಸುಮಾರು ನಾಲ್ಕು ಸಾವಿರ ಅತಿಥಿಗಳಿಗೆ ಹೊಂದಿಸಿದರೆ ಪ್ರತಿಯೊಬ್ಬರಿಗೆ ಸರಾಸರಿ ೨.೫ ಕ್ಲಿಕ್ಕುಗಳು. ಬರಿ ಅನಿಸಿದ್ದೆಲ್ಲ ಹಾಕುವ ಮನದ ಮೂಲೆಯ ತೊಟ್ಟಿಗೊಂದು ಮೂರ್ತರೂಪ ಎಂದುಕೊಂಡು ಬ್ಲಾಗ್ ಆರಂಭಿಸಿದ ನನ್ನ ಮಟ್ಟಿಗೆ ಇದೊಂದು ಮೊದಲ ಮೈಲಿಗಲ್ಲು. ನನ್ನಂತಹ ಸಾಧಾರಣ ಬ್ಲಾಗಿನ ಬರಹಗಾರನಿಗೆ ನೀವೆಲ್ಲ ಓದುಗರಿತ್ತ ಅಪಾರ ಗೌರವದ ಕುರುಹು. ಅದಕ್ಕೆ ಧನ್ಯವಾದ ಮತ್ತು ಕೃತಜ್ಞತೆಗಳು.   

ಆದರೆ ಈ ಹತ್ತು ಸಾವಿರ ನಿಜಕ್ಕೂ ತುಂಬ ಸಣ್ಣ ಸಾಧನೆ. ನಾನೇ ಕಂಡಹಾಗೆ ಕನ್ನಡದಲ್ಲೇ ಲಕ್ಷಾಂತರ ಕ್ಲಿಕ್ಕುಗಳನ್ನು ದಾಟಿದ ಎಷ್ಟೊ ಬ್ಲಾಗುಗಳನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ. ಆ ಮಟ್ಟಕ್ಕೆ ಏರುವ ತಾಕತ್ತು ನನ್ನ ಬ್ಲಾಗಿಗಿಲ್ಲ ಅನಿಸುತ್ತಿದೆ (ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ – ರಾಜ್ ಹಾಡು ನೆನಪಾಗುತ್ತಿದೆ 😊). ಹಾಗೆ ಅಂದುಕೊಳ್ಳುತ್ತ ಕೂತ ಹೊತ್ತಲ್ಲಿ ಮನಸಿಗೆ ಬಂದ ಮಾತುಗಳಿಗೆ ಹಾಯ್ಕು ಧಾಟಿಯಲ್ಲಿ ಲಘು ಹಾಸ್ಯದ ಲೇಪನದಲ್ಲಿ ಸಾಲು ಕಟ್ಟತೊಡಗಿದೆ – ‘ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆ ತುಡಿಯುವುದು ಬೇಡ’ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತಲೇ, ಅದನ್ನು ಅಧಿಗಮಿಸುವ ಪದ- ಅಚಾತುರ್ಯ ನಡೆಸುತ್ತ.. ಆ ಲಹರಿ ಈ ಕೆಳಗೆ 😊

(೦೧)
ಮುಗ್ಗುರಿಸುತ್ತ
ಮನದಿಂಗಿತ ಸ್ವಗತ
ಹತ್ತು ಸಾವಿರ 😁

(೦೨)
ಐನೂರು ಪೋಸ್ಟು
ನೂರಿಪ್ಪತ್ತು ಪುಟಕು
ಶುಲ್ಕ ಸಮಯ 😊

(೦೩)
ಸಾವಿರ ಲಕ್ಷ
ಸಾಗರದಾಚೆ ಸಖ್ಯ
ಹೇಗಪ್ಪ ಸಾಧ್ಯ ? 😟

(೦೪)
ಮೊಟ್ಟ ಮೊದಲು
ಸಾವಿರ ದಾಟಿ ನೋಟ
ಬೋನಸ್ ಮಾಸ 👍

(೦೫)
ಸ್ವಗತ ಬ್ಲಾಗು
ಕಂಪನಿ ವಹಿವಾಟು
ಮಾಡಿ ದುಪ್ಪಟ್ಟು 😀

(೦೬)
ಬಂದರು ಖುಷಿ;
ಇರದೇ ಹೋದರಲ್ಲ
ಖೇದ ಸಂಗತಿ 😭

(೦೭)
ಮಾರ್ಕೆಟಿಂಗಿಗೆ
ತಾಕತ್ತಿಲ್ಲ ಬ್ಲಾಗಿಗೆ
ಬಾಯಲೆ ಮಾಡಿ 😂

(೦೮)
ಒಳ್ಳೊಳ್ಳೆ ಎಳ್ಳು
ಸಿಗುತ್ತೆ ಸೋಸೆ ಜೊಳ್ಳು
ಆಗೋಲ್ಲ ಮೋಸ 😎

(೦೯)
ಅಟ್ಟ ಏರಾಯ್ತು
ಏರಿಸಿ ಬೆಟ್ಟಕೆ ಮತ್ತೆ
ತಡವಿನ್ನೇಕೆ ? 🤓

(೧೦)
ಮರೆಯೊ ಮುನ್ನ
ಕೈ ಹಿಡಿದಿರಿ ನನ್ನ
ನಮ್ರ ನಮನ 🙏👍

-ನಾಗೇಶ ಮೈಸೂರು

 

  

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

5 thoughts on “00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..”

 1. ಅಸಾಧಾರಣ ಬರಹಗಾರ ಮತ್ತು ಬರೆಯುವ ಸೆಲೆಯನ್ನು ನಿರಂತರ ಹರಿಸುವ ಛಲಗಾರನಂತೆ ನೀವು ನಮಗೆ ಪ್ರಕಟ. ನನ್ನ ತಿಳಿವಳಿಕೆಯಂತೆ ನೆನಪಿನ ಸಂಚಿ ಬ್ಲಾಗ್ ಹೆಚ್ಚು ಜನರನ್ನು ಮುಟ್ಟಿದೆ. ಆ ನಿಟ್ಟಿನಲ್ಲಿ ನೀವೂ ಸಾಗುತ್ತಿದ್ದೀರಿ. ಅಭಿನಂದನೆಗಳು ಮತ್ತು
  ಸಾರಸ್ವತ ಲೋಕ ನಿಮ್ಮಿಂದ ಮತ್ತಷ್ಟು ನಿರೀಕ್ಷಿಸುತ್ತದೆ. ಶುಭ ಆಶಯಗಳು.

  Liked by 2 people

  1. ನಮಸ್ಕಾರ ಅನಂತ ರಮೇಶ್, ನಿಮ್ಮ ಮಾತು ನಿಜ – ನೆನಪಿನ ಸಂಚಿ ತಲುಪಿರುವ ದೂರ ಮತ್ತು ಗಾತ್ರ ಅಸಾಧಾರಣ ಮಟ್ಟದ್ದು – ಕನ್ನಡಕ್ಕೊಂದು ಹೆಮ್ಮೆ ಕೂಡ. ಅದರ ಭಾಗಶಃ ಯಶಸ್ಸಾದರೂ ಸರಿ – ಕನ್ನಡ ಬ್ಲಾಗಿಗರಿಗೆಲ್ಲ ಸಿಗಲಿ ಎಂದು ಆಶಿಸೋಣ. ಬರೆದ ಜೀವಕ್ಕೆ ತಲುಪಿದ ದೂರವೆ ಸಂತೃಪ್ತಿಯ ಅಳತೆಯಂತೆ. ಸಂಖ್ಯೆಯ ಜತೆಗೆ, ಅದು ತಲುಪಿದವರ ಮನಸಿನಾಳಕ್ಕೆ ತಟ್ಟಿ ಮಿಡಿಯುವ ಹಾಗಾದರೆ ಸರಿ. ನಮ್ಮೆಲ್ಲರ ಸಮಷ್ಟಿಯ ಬರಹಗಳು ಕನ್ನಡಮ್ಮನ ಸಂಚಿಗೆ ಸೇರಿ ಅವಳನ್ನು ಮತ್ತಷ್ಟು ಶ್ರೀಮಂತಳನ್ನಾಗಿಸಲಿ ಎಂದು ಹಾರೈಸುವ. ನಿಮ್ಮ ಆದರಪೂರ್ವಕ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು 🙏😊

   Liked by 2 people

 2. ಬಹುಶಃ ಅನಂತ ಲಹರಿಗೆ ಒಡ್ಡುವ ಅನಂತಣ್ಣನ ಬ್ಲಾಗಿನ ಮೂಲಕ ಇತ್ತೀಚೆಗಷ್ಟೇ ನಿಮ್ಮ ಬ್ಲಾಗಿನ ಪರಿಚಯವಾಯ್ತು .. ಓದಿದ ಮೊದಲ ಪೋಷ್ಟಿನಲ್ಲೇ ನಿಮ್ಮೊಳಗಿನ ಅನೂಹ್ಯ ಬರಹಗಾರನ ಕಂಡುಕೊಂಡೆ.. ಅಂದೇ Bookmark ಮಾಡಿಟ್ಟುಕೊಂಡದ್ದು ಆಯ್ತು.. ಮೂರು ವರ್ಷಗಳ ಹೃಸ್ವ ಅವಧಿಯಲ್ಲಿ ಐನೂರಕ್ಕು ಹೆಚ್ಚಿನ ಪೋಸ್ಟ್ , ನಿಮ್ಮೊಳಗಿನ ಬ್ಲಾಗರನ್ನು ಸ್ಥಿರ ಮತ್ತು ಸಕ್ರಿಯವಾಗಿಟ್ಟದ್ದಕ್ಕೆ ಸಾಕ್ಷಿ [ಈ ನಿಟ್ಟಿನಲ್ಲಿ ಕಿರಿಯ ನನಗಿಂತ ತುಂಬಾ ಹೆಜ್ಜೆ ಮುಂದಿದ್ದೀರಿ],. ಸಣ್ಣ ಕಥೆ, ಲಘು ಹಾಸ್ಯ, ಪುರಾಣ ಸರಣಿ, ಹಾಯ್ಕುಗಳು, ಹೀಗೆ ಯಾವುದೇ ಒಂದು ಪ್ರಕಾರಕ್ಕೆ ಸೀಮಿತವಾಗದೇ ಎಲ್ಲಾ ಪ್ರಕಾರಗಳಲ್ಲೂ ನಿಮ್ಮತನವನ್ನು ಕಾಪಿಟ್ಟುಕೊಂಡು ಓದುಗನ ಮನಸ್ಸಿಗೆ ಲಗ್ಗೆಯಿಡುವ ಕಲೆ ನಿಮ್ಮ ಬರಹದ ವಿಶೇಷತೆಗಳಲ್ಲೊಂದು. ನಾನು ಓದಿದ ಕೆಲವು ಬರಹಗಳಲ್ಲಿ ಮನುಷ್ಯ ಪ್ರೀತಿಯ ಸಹಜ ಕಕ್ಕುಲಾತಿ ಸಮುದ್ರದಷ್ಟು ವಿಶಾಲವಾಗಿ ಹರಡಿಕೊಂಡಿದೆ.. ಹತ್ತರಲ್ಲಿ ಹನ್ನೊಂದಾಗದೆ, ವಿಶೇಷವಾಗಿ ಗುರುತಿಸಲ್ಪಟ್ಟ ಬ್ಲಾಗ್ಗಳ ಸಂಖ್ಯೆ ಬಹಳ ಕಡಿಮೆಯಿದೆ, ಅಂಥದ್ದರಲ್ಲಿ ನಿಮ್ಮ ಬ್ಲಾಗ್ ಮೂರುವರ್ಷಗಲ್ಲಿ ತನ್ನದೇ ಆದ ಅಸ್ಮಿತೆಯನ್ನು ಪಡೆದುಕೊಂಡಿದೆ.. ಹತ್ತು ಸಾವಿರಗಳು ಲಕ್ಷಗಳಾಗಲಿ, ಲಕ್ಷಗಳು ಕೋಟಿಗಳಾಗಲಿ.. ಕನ್ನಡ ಬ್ಲಾಗ್ ಪ್ರಪಂಚದಲ್ಲಿ “ಮನದಿಂಗಿತಗಳ ಸ್ವಗತ” ಮತ್ತಷ್ಟು ಎತ್ತರಕ್ಕೇರಲಿ ಎಂದು ತುಂಬು ಮನದಿಂದ ಹಾರೈಸುತ್ತೇನೆ …

  ಸದಾ ನಿಮ್ಮವನೇ,
  ಹುಸೇನಿ, ನೆನಪಿನ ಸಂಚಿ ಬ್ಲಾಗ್

  Liked by 2 people

  1. ಹುಸೇನಿಯವರೆ ನಮಸ್ಕಾರ 😊
   ಸಾಧ್ಯವಾದ ಕಡೆಯೆಲ್ಲ ಓದಿ ಕಾಮೆಂಟು ಹಾಕಿ ಎಲ್ಲರನ್ನು ನಿರಂತರ ಪ್ರೋತ್ಸಾಹಿಸುವ ಅನಂತರಮೇಶರ ಮೂಲಕವೆ ನಿಮಗೆ ನನ್ನ ಬ್ಲಾಗೂ ಪರಿಚಯವಾಗಿದ್ದು ಕಾಕತಾಳೀಯವೇ ಇರಬೇಕು. ತನ್ಮೂಲಕ ನಿಮ್ಮ ಬ್ಲಾಗಿಗೂ ಇಣುಕಲು ಸಾಧ್ಯವಾಗಿ ಮತ್ತೊಂದು ಹೊಸಲೋಕದ ಪರಿಚಯ ಮಾಡಿಸಿತು. ಸಂಖ್ಯೆಯಲ್ಲಿ ಹೆಚ್ಚಿದ್ದು ವಸ್ತು ವೈವಿಧ್ಯದಲ್ಲಿ ಸ್ವಲ್ಪ ವಿಭಿನ್ನತೆ ಇರಬಹುದಾದರೂ ಎಲ್ಲವು ಉತ್ತಮ ಗುಣಮಟ್ಟದ್ದೆ ಎಂದು ಹೇಳಲಾಗದು. ಅನಿಸಿದ್ದೆಲ್ಲ ಅಲ್ಲಿ ಪದಗಳಾಗಿವೆ ಎನ್ನುವುದು ಬಿಟ್ಟರೆ ಮತ್ತೇನು ಹೆಚ್ಚುಗಾರಿಕೆ ಇಲ್ಲ. ಆದರೆ ಅದನ್ನೂ ಓದಿ ಆಸ್ವಾದಿಸಿ, ಮೆಚ್ಚಿ, ಬೆನ್ನು ತಟ್ಟುವ ನಿಮ್ಮಂತಹ ಸಹೃದಯಿ ಓದುಗ ಬಳಗದಿಂದಾಗಿ ಸ್ವಲ್ಪ ಕುದುರಿ ಜೀವ ಹಿಡಿದುಕೊಂಡೆ ಮುನ್ನಡೆದಿದೆ ಎನ್ನುವುದೂ ನಿಜ. ಬರೆಯಬೇಕೆಂಬ ತುಡಿತ, ಹಂಬಲ ಜತೆ ಸೇರಿದ್ದಾಗಿ ಸ್ವಗತಗಳೂ ಅಗಣಿತವಾಗುತ್ತಾ ಸಾಗುತ್ತಿವೆ – ಮನದಿಂಗಿತಗಳ ಮೆಲುಕಿನಲ್ಲೆ. ತಮ್ಮ ಹಾರೈಕೆ, ವಿಶ್ವಾಸಕ್ಕೆ ಚಿರಋಣಿ ಮತ್ತು ಹೃದಯಪೂರ್ವಕ ಧನ್ಯವಾದಗಳು🙏😊

   Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s