00628: ಅಹಲ್ಯಾ_ಸಂಹಿತೆ_೩೯ (ಅಂತಿಮ ರೂಪುರೇಷೆ) (ಪ್ರಯೋಗಕ್ಕೆ ಜತೆಯಾದ ಉಚ್ಚೈಶ್ರವಸ್ಸು)


00628: ಅಹಲ್ಯಾ_ಸಂಹಿತೆ_೩೯ (ಅಂತಿಮ ರೂಪುರೇಷೆ) (ಪ್ರಯೋಗಕ್ಕೆ ಜತೆಯಾದ ಉಚ್ಚೈಶ್ರವಸ್ಸು) 
______________________________________________________________

(Link to the previous episode no.38: https://nageshamysore.wordpress.com/2016/03/27/00621-0038_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ae-%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae/ )

ಅಂದು ಬ್ರಹ್ಮದೇವನ ವಿಶೇಷ ಆಹ್ವಾನದನುಸಾರ ಗೌತಮ, ದೇವೇಂದ್ರ, ಸೂರ್ಯದೇವ ಮತ್ತು ಊರ್ವಶಿಯರು ಪ್ರಾತಃಕಾಲಕ್ಕೆ ಬಂದು ಸೇರಿದ್ದಾರೆ ಸಭಾಮಂದಿರದಲ್ಲಿ… ನರನ ಭೇಟಿಯಾಗಿ ಬಂದ ಮೇಲೆ ಪಿತಾಮಹನಿಗೆ ನಿಗದಿಪಡಿಸಿದ್ದ ಸಮಯದವರೆಗೂ ಕಾಯುವ ಸಹನೆಯಿಲ್ಲದೆ ಮರುದಿನವೇ ಅವಸರದ ಭೇಟಿಗೆ ಸಿದ್ದತೆ ನಡೆಸುವವನಂತೆ ಊರ್ವಶಿಗೆ ಸುದ್ದಿ ಕಳಿಸಿದ್ದಾನೆ ಹಿಂದಿನ ದಿನವೇ.. ಈ ಬಾರಿಯ ಮತ್ತೊಂದು ಸೋಜಿಗವೆಂದರೆ ‘ತಂಡದ ಜತೆಗೆ ಉಚ್ಚೈಶ್ರವಸ್ಸಿನ ಜತೆಗೆ ಭೇಟಿ ಸಾಧ್ಯವೇ? ‘ಎಂದು ಬೇರೆ ಪ್ರಶ್ನೆ ಕೇಳಿದ್ದಾನೆ.

ಊರ್ವಶಿ ಮಿಕ್ಕವರಿಗೆಲ್ಲ ಸುದ್ಧಿ ಕಳಿಸಿ ಅವಸರದ ಸಭೆಯ ಮಾಹಿತಿ ಮುಟ್ಟಿಸಿದ್ದಾಳಾದರು ಉಚ್ಚೈಶ್ರವಸ್ಸುವನ್ನು ಹೇಗೆ ಸಂಪರ್ಕಿಸುವುದೊ ಗೊತ್ತಾಗಿಲ್ಲ.. ಪ್ರತಿನಿತ್ಯದಂತೆ ಬೆಳಗಿನ ಹೊತ್ತು ಗಗನದಲ್ಲೇ ದರ್ಶನ ಕೊಟ್ಟುಹೋಗುವ ಆ ಮಾಯಾಕುದುರೆಗೆ ಮರುದಿನ ಬೆಳಗಿನವರೆಗೂ ಕಾಯಬೇಕು.. ಆದರೆ ಅದಕ್ಕೂ ಮುನ್ನ ಸಭೆಯ ಆರಂಭವಾಗಿ ಹೋಗಿರುತ್ತದೆ. ಅದಕ್ಕೆ ಚಾಣಾಕ್ಷತೆಯಿಂದ ದಿನವೂ ಹಾದುಹೋಗುವ ಗವಾಕ್ಷಿಯಿರುವ ಸಭಾಮಂದಿರವನ್ನೆ ಆರಿಸಿದ್ದಾಳೆ ಊರ್ವಶಿ.. ಸಭೆ ನಡೆಯುವಾಗ ಕಣ್ಣಿಗೆ ಬಿದ್ದರೂ ಸಾಕು ಗಮನ ಸೆಳೆಯಲೆತ್ನಿಸಬಹುದು.

ಎಲ್ಲರೂ ಬಂದು ಸೇರುತ್ತಿದ್ದಂತೆ ಬ್ರಹ್ಮದೇವ ತನ್ನ ಮತ್ತು ನರನೊಂದಿಗಿನ ಭೇಟಿಯ ವಿವರಗಳನ್ನೆಲ್ಲ ಸಂಕ್ಷಿಪ್ತವಾಗಿ ಬಿತ್ತರಿಸಿದ . ಅದರಲ್ಲೂ ಮುಂದಿನ ಭೂಮಿಕೆ ನಿಭಾಯಿಸಬೇಕಿದ್ದ ಸೂರ್ಯದೇವ ಮತ್ತು ದೇವರಾಜರ ಪಾತ್ರಗಳನ್ನು ವಿವರಿಸಿ ಎಲ್ಲರು ಸಮಾನ ಸ್ತರದ ಮಾಹಿತಿ ಹೊಂದಿರುವಂತೆ ಮಾಡಿ ನಂತರ ಸಂಶೋಧನೆಯ ವಿಷಯಕ್ಕೆ ಬಂದ..

” ನರ ಮುನೀಂದ್ರನಿಗೆ ಸಂಶೋಧನೆಗೆ ನಾವು ಹಿಡಿದ ಹಾದಿಯ ಸಂಕ್ಷಿಪ್ತ ವಿವರಣೆ ನೀಡಿ, ಅದು ಸರಿಯಾದದ್ದೇ, ಅಲ್ಲವೇ ಎಂದು ಚರ್ಚಿಸಿದ್ದೇನೆ.. ನಾವು ಇಟ್ಟ ಹೆಜ್ಜೆಗೆ ನರನೂ ಕೂಡ ಸಹಮತ ತೋರಿಸಿ ಅದು ಸಾಧುವಾದದ್ದೇ ಎಂದು ಅಭಿಪ್ರಾಯಪಟ್ಟಿದ್ದಾನೆ.. ಅವನಿತ್ತ ಸಲಹೆ ಸೂಚನೆಗಳಲ್ಲಿ ಎರಡು ಅಂಶಗಳು ಮಾತ್ರ ಪ್ರಮುಖವಾದವು..”

” ಅವನಂತಹ ಜ್ಞಾನವೇತ್ತನಿಂದ ಅನುಮೋದನೆ ಪಡೆಯುವುದೆಂದರೆ ಒಂದು ದೊಡ್ಡ ಅನುಮಾನವನ್ನೇ ಪರಿಹರಿಸಿಕೊಂಡ ಹಾಗೆ.. ಅಲ್ಲಿಗೆ ನಾವು ನಿರ್ಧರಿಸಿದ ದಾರಿಯಲ್ಲಿ ಸರಾಗವಾಗಿ ಮುಂದುವರೆಯಬಹುದು ಎಂದಾಯ್ತು.. ಆ ಎರಡು ಅಂಶಗಳು ಯಾವುವು ಬ್ರಹ್ಮದೇವಾ? ” ನರನ ಅಭಿಪ್ರಾಯವನ್ನು ಅರಿಯಲು ಅತೀವ ಆಸಕ್ತಿಯಿಂದ ಆಲಿಸುತ್ತಿದ್ದ ಗೌತಮ ಕೇಳಿದ. ಎಲ್ಲರ ಮನದಲ್ಲೂ ಅದೇ ಪ್ರಶ್ನೆಯಿರುವುದೆಂದರಿತಿದ್ದ ಪಿತಾಮಹ ಅದರ ಸಾರವನ್ನು ಸಂಕ್ಷಿಪ್ತವಾಗಿಯೆ ವಿವರಿಸಿದ…

” ಮೊದಲಿಗೆ ನಾವು ಚರ್ಚಿಸಿದ ಜೀವಕೋಶದ ಸ್ವಯಂಭುತ್ವದ ವಿಷಯ. ಇದನ್ನು ಸಾಧಿಸುವ ಕುರಿತು ಅವನಿಗೆ ಅನುಮಾನವಿದ್ದಂತಿಲ್ಲವಾದರು, ತದನಂತರ ಅದು ಹೇಗೆ ತಂತಾನೆ ಕಡಿವಾಣ ಹಾಕಿ ನಿರ್ವಹಿಸಿಕೊಳ್ಳಬಹುದೆಂಬ ಬಗ್ಗೆ ಆತಂಕವಿರುವಂತಿದೆ. ಅದರ ಯಶಸ್ಸಿನ ಮೇಲೆ ನಮ್ಮ ಪ್ರಯೋಗದ ಯಶಸ್ಸು ಅವಲಂಬಿಸಿದೆ ಎಂದವನ ಅನಿಸಿಕೆ..”

ಬ್ರಹ್ಮದೇವನು ಹೇಳುತ್ತಿರುವ ಪ್ರತಿ ಮಾತನ್ನು ಟಿಪ್ಪಣಿಯಾಗಿಸಿಕೊಳ್ಳುತ್ತಿದ್ದಾಳೆ ಊರ್ವಶಿ – ಮುಂದಿನ ಪರಾಮರ್ಶೆಗೆ ಸುಲಭವಾಗಿ ಸಿದ್ದವಾಗಿ ದೊರಕುವಂತೆ..

” ಇನ್ನು ಎರಡನೆ ಅಂಶ ನಿಜದಲ್ಲಿ ಅವನಿತ್ತ ಸಲಹೆಯ ರೂಪದ ಸುಳಿವು.. ನಾವು ಸಂಶೋಧನೆಯ ವೇಗದ ಕುರಿತು ಮಾತಾಡುತ್ತ ಊರ್ವಶಿಯನ್ನು ಮಾನದಂಡವಾಗಿರಿಸಿಕೊಂಡಿರುವುದನ್ನು ತಿಳಿಸಿದೆ. ಅದಕ್ಕೆ ಜತೆಯಾಗಿ ಉಚ್ಚೈಶ್ರವಸ್ಸಿನಂತಹ ಸೃಷ್ಟಿಯನ್ನು ಪರಾಮರ್ಶಿಸಿದರೆ ಕೆಲವು ಹೆಚ್ಚಿನ ಸುಳಿವು ಸಿಗುವುದೆಂದು ನುಡಿದ. ಅತ್ಯುತ್ಕೃಷ್ಟ ಸೃಷ್ಟಿಯ ಗಮ್ಯದಲ್ಲಿ ಉಚ್ಚೈಶ್ರವಸ್ಸು ಉತ್ತಮ ಮಾದರಿಯಾಗಬಲ್ಲದು – ಯಾಕೆಂದರೆ ಅದರ ಸೃಷ್ಟಿಯ ಹಿನ್ನಲೆಯಲ್ಲೂ ಅಂತದ್ದೆ ಉದ್ದೇಶವಿತ್ತು ಎಂದ..”

ಅದನ್ನು ಕೇಳುತ್ತಿದ್ದಂತೆ ಎಲ್ಲರೂ ಮುಖಾಮುಖ ನೋಡಿಕೊಂಡರು ಊರ್ವಶಿಯೊಬ್ಬಳ ಹೊರತಾಗಿ. ಹಾರುವ ಕುದುರೆಯೇ ಇರಬಹುದು, ಹಾಗೆಂದು ಅದರ ಮಾದರಿ ಮಾನವ ಜೀವಿಯ ಸೃಷ್ಟಿಗೆ ಮಾದರಿಯಾಗಲೂ ಸಾಧ್ಯವಾದೀತೆ ? ಎಂಬ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಖದಲ್ಲೂ ಕಾಣಿಸಿಕೊಂಡಿತ್ತು..

ಆಗ ಊರ್ವಶಿಯೆ ಮಾತನಾಡಿದಳು.. ” ನಾವೀಗ ತತ್ವದ ಮಟ್ಟದಲ್ಲಿ ಚರ್ಚಿಸುತ್ತಿರುವುದು.. ಉಚ್ಚೈಶ್ರವಸ್ಸು ಯಾವ ತರದಲ್ಲೂ ನಮ್ಮ ಸಂಶೋಧನೆಯ ನೇರ ಮಾದರಿ ಆಗದಿದ್ದರೂ, ಅದರ ಸೃಷ್ಟಿ ಕ್ರಿಯೆಯೇ ಒಂದು ದೊಡ್ಡ ಪ್ರಯೋಗವೆನ್ನುವುದನ್ನು ಮರೆಯಬೇಡಿ.. ಆ ಅಂಶಗಳು ನಮ್ಮ ಪ್ರಯೋಗಕ್ಕೂ ಸುಳಿವು, ಉಪಾಯಗಳನ್ನು ಒದಗಿಸಬಹುದೆಂದಿರಬೇಕು ನರಮುನೀಂದ್ರನ ಅಭಿಪ್ರಾಯ.. ಸಂಶ್ಲೇಷಿಸಿ ನೋಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ..” ಎಂದಳು.

ಅವಳತ್ತ ಮೆಚ್ಚುಗೆಯ ದೃಷ್ಟಿ ಹರಿಸಿದ ಬ್ರಹ್ಮದೇವ, ” ಅದು ಸರಿಯಾದ ಗ್ರಹಿಕೆ ಊರ್ವಶಿ.. ಸರಿ, ಇದೋ ಇಲ್ಲಿದೆ

ನೋಡಿ ನರಮುನಿಂದ್ರನು ನೀಡಿದ ಅವನ ಸಂಶೋಧನಾ ವಿವರಗಳ ಕಟ್ಟು, ಜ್ಞಾನ ಭಂಢಾರ.. ಇದೆಲ್ಲವನ್ನು ಅಭ್ಯಸಿಸಿ ಟಿಪ್ಪಣಿ ಮಾಡುವಂತೆ ಮಿಕ್ಕ ತಂಡಗಳಿಗೆ ಆದೇಶ ಕೊಡಿ.. ” ಎನ್ನುತ್ತಿದ್ದಂತೆ ಅವನ ಮಾತಿನ ನಡುವೆಯೇ ಸರಕ್ಕನೆ ಎದ್ದು ಗವಾಕ್ಷಿಯ ಹತ್ತಿರ ಓಡಿ ಕೈಯಾಡಿಸುತ್ತ ಸನ್ನೆ ಮಾಡತೊಡಗಿದ್ದಳು ಊರ್ವಶಿ..

ಕೂತಲ್ಲಿಂದಲೆ ಅವಳಿಗೆ ಉಚ್ಚೈಶ್ರವಸ್ಸಿನ ಹಾರುವಿಕೆಯ ದೃಶ್ಯ ಗೋಚರಿಸಿತ್ತು ಗವಾಕ್ಷದ ಮೂಲಕ.. ದಿನವೂ ಅವಳು ನಿಂತು ನೋಡುತ್ತಿದ್ದ ಜಾಗಕೆದುರಾಗಿ ಗಗನದಲ್ಲೇ ತುಸು ಹೊತ್ತು ನಿಂತು ಹೋಗುತ್ತಿದ್ದ ಉಚ್ಚೈಶ್ರವಸ್ಸಿಗೆ ಅವಳ ಇಂದಿನ ಚರ್ಯೆ ವಿಚಿತ್ರವೆನಿಸಿದರೂ , ಕಡೆಗವಳು ತನ್ನನ್ನೇ ಕರೆಯುತ್ತಿರಬಹುದೆನ್ನುವ ಪ್ರಜ್ಞೆಯುದಿಸಿ ತಾನು ಹಾರುತ್ತಿದ್ದ ಪಥದಿಂದ ಕೋನದಲ್ಲಿ ಕೆಳಗಿಳಿಯುತ್ತ ಗವಾಕ್ಷದ ದಿಕ್ಕಿನಲ್ಲೇ ತನ್ನ ರೆಕ್ಕೆ ಹಾರಿಸಿಕೊಂಡು ಬರತೊಡಗಿತು..

ಉಚ್ಚೈಶ್ರವಸ್ಸುವನ್ನು ಅವರೆಲ್ಲ ದೂರದಿಂದ ಅನೇಕ ಬಾರಿ ನೋಡಿದ್ದರೂ ಯಾರಿಗೂ ಅದು ಇಷ್ಟರ ಮಟ್ಟಿಗಿನ ಅದ್ಭುತವೆಂದು ಊಹೆಗೂ ನಿಲುಕಿರಲಿಲ್ಲ – ಅಷ್ಟು ಹತ್ತಿರದಿಂದ ನೋಡುವತನಕ… ಅಷ್ಟರಮಟ್ಟಿಗಿನ ದೃಶ್ಯಾದ್ಭುತವಾಗಿತ್ತು ಕಣ್ಣೆದುರೆ ನಿಂತ ಅದರ ಅಸ್ತಿತ್ವ. ಒಬ್ಬೊಬ್ಬರು ಒಂದೊಂದು ಅಂಗವನ್ನು, ವಿನ್ಯಾಸವನ್ನು, ರಚನೆಯನ್ನು ಅಚ್ಚರಿ ಮತ್ತು ದಿಗ್ಭ್ರಾಂತಿಯಿಂದ ನೋಡುತ್ತಿದ್ದರೆ ಆ ಹೊತ್ತಿನ ವಿಸ್ಮೃತಿಗೆ ವಾಸ್ತವದ ತೇರುಕಟ್ಟಿ ಮತ್ತೆ ಭೂಮಿಗಿಳಿಸಿದವನು ಸ್ವತಃ ಬ್ರಹ್ಮದೇವನೆ.

“ಸುಮ್ಮನೆ ಎಲ್ಲಾ ಹೀಗೆ ನೋಡುತ್ತಾ ನಿಂತುಬಿಟ್ಟಿರೇಕೆ ? ನಾ ಮೊದಲೇ ನುಡಿದ ಹಾಗೆ ಉಚ್ಚೈಶ್ರವನ ಆಗಮನವೂ ನರ ಮುನೀಂದ್ರನ ಸಲಹೆಯನುಸಾರವೆ; ಆದರೆ ವಿಶೇಷ ಸಿದ್ದತೆಯಿರದೆ ಉಚ್ಚೈಶ್ರವಸ್ಸನ್ನು ಈ ದಿನ ಕರೆಸಿಕೊಳ್ಳಲು ಸಾಧ್ಯವಾಗುವುದೋ ಇಲ್ಲವೋ ಅನುಮಾನವಿತ್ತು.. ಊರ್ವಶಿಯ ಕಾರ್ಯಕ್ಷಮತೆಯಿಂದ ಅದೂ ಆದಂತಾಯ್ತು.. ಬಾ ಉಚ್ಚೈಶ್ರವ, ನಿನಗೆ ಸುಸ್ವಾಗತ..”

” ಇದು ಪೂರ್ವನಿಯೋಜಿತವೇನೂ ಅಲ್ಲ ಬ್ರಹ್ಮದೇವ.. ಈ ಹೊತ್ತಿಗೆ ಸರಿಯಾಗಿ ಆಕಾಶದಲ್ಲಿ ಹಾರುವ ಉಚ್ಚೈಶ್ರವಸ್ಸನ್ನು ಪ್ರತಿದಿನವೂ ನೋಡುತ್ತಿದ್ದೆ… ಇಂದೂ ಆ ಜಾಡನ್ನೆ ಹಿಡಿದು ನೋಡಿದೆ , ಯಾವ ಯೋಜನೆಯೂ ಇಲ್ಲದೆ ಬರಮಾಡಿಕೊಳ್ಳಲು ಸಾಧ್ಯವಾಯಿತು – ಇದು ಬರಿ ಕಾಕತಾಳೀಯವಷ್ಟೆ ” ಎಂದು ನಕ್ಕಳು ಊರ್ವಶಿ.

ಅಲ್ಲಿಂದ ಮುಂದಿನದೆಲ್ಲ ಚಟಪಟನೆ ನಡೆದು ಹೋಯ್ತು. ಎಲ್ಲಕ್ಕೂ ಮುಖ್ಯವಾಗಿ ಉಚ್ಚೈಶ್ರವಸ್ಸು ದಿನನಿತ್ಯವೂ ಬೆಳಗಿನ ಹೊತ್ತು ನಿಗದಿತ ವೇಳೆಯಲ್ಲಿ ಬಂದು ಹೋಗುವುದಕ್ಕೆ, ಜತೆಗೆ ಪ್ರಯೋಗದಲ್ಲಿ ಊರ್ವಶಿಯ ಹಾಗೆ ನಮೂನೆ, ಮಾದರಿಯ ರೀತಿ ಸಹಕರಿಸಲು ಕೂಡ ಬೇಡಿಕೆಯಿತ್ತಿದ್ದ ಗೌತಮ. ಇದನ್ನೆಲ್ಲಾ ಆಗಲೇ ಎದುರು ನೋಡುತ್ತಿದ್ದವನಂತೆ ಆಗಲೆಂದು ಒಪ್ಪಿಗೆ ಸೂಚಿಸಿದ್ದ ಉಚ್ಚೈಶ್ರವಸ್ಸು. ಅದರ ಮಿಕ್ಕ ವಿವರಗಳನೆಲ್ಲ ಊರ್ವಶಿಯೆ ವ್ಯವಸ್ಥೆ ಮಾಡುವುದೆಂದು ನಿರ್ಧರಿಸಿ ಅವಳಿಗೆ ಹೊಣೆಯೊಪ್ಪಿಸಿದ ಮೇಲೆ ಎಲ್ಲರೂ ಉಚ್ಚೈಶ್ರವಸ್ಸಿನ ಸುತ್ತ ನೆರೆದು ಕೂಲಂಕುಷವಾಗಿ, ಬಲು ಹತ್ತಿರದಿಂದ ಪರೀಕ್ಷಿಸಿ ನೋಡತೊಡಗಿದರು. ತಮ್ಮತಮ್ಮಲೆ ಚರ್ಚಿಸುವ ಸಿದ್ದತೆಗೆಂಬಂತೆ ತಮ್ಮ ಸಂಶಯ, ಅನುಮಾನಗಳನ್ನೆಲ್ಲ ಪ್ರಶ್ನೋತ್ತರದ ಮೂಲಕವೂ ಪರಿಹರಿಸಿಕೊಳ್ಳುತ್ತ ಅದರ ಕಿರು ಟಿಪ್ಪಣಿಗಳನ್ನು ಮಾಡಿಕೊಂಡರು. ಸುಮಾರು ಹೊತ್ತಿನ ಪರೀಕ್ಷಣೆ, ಪರಿವೀಕ್ಷಣೆಗಳ ನಂತರ, ತಮಗೆ ಸಾಕಷ್ಟು ಮಾಹಿತಿ ಸಂಗ್ರಹಿತವಾಯ್ತೆಂದು ಮನದಟ್ಟಾದ ಮೇಲೆ ಉಚ್ಚೈಶ್ರವನಿಗೆ ಅಂದಿನ ದಿನಕ್ಕೆ ಬಿಡುಗಡೆಯಿತ್ತರು – ಮತ್ತೆ ತನ್ನ ಸ್ವೇಚ್ಚೆಯ ಹಾರಾಟಕ್ಕೆ.

ಉಚ್ಚೈಶ್ರವಸ್ಸು ಹಾರಿಹೋಗುತ್ತಿದ್ದ ಹಾಗೆಯೇ ಮಿಕ್ಕ ಐವರು ಮತ್ತೆ ಚರ್ಚೆಗಿಳಿದಿದ್ದರು – ತಾವು ಸಂಗ್ರಹಿಸಿದ್ದನ್ನೆಲ್ಲ ಕ್ರೋಢೀಕರಿಸಿ ಏನು ಮಾಡಬೇಕೆಂದು ನಿರ್ಧರಿಸುವ ಸಲುವಾಗಿ..

” ಮೂಲತಃ ಕೋಶರಚನೆ , ವಿನ್ಯಾಸದಲ್ಲಿ ನನಗೆ ಹೆಚ್ಚೇನು ವ್ಯತ್ಯಾಸವಿರುವಂತೆ ಕಾಣುತ್ತಿಲ್ಲ.. ಊರ್ವಶಿಯಲ್ಲಿರುವ ಉತ್ತಮ ತಳಿಯ ಲಕ್ಷಣಗಳೆಲ್ಲ ಇಲ್ಲೂ ಇರುವಂತಿದೆ.. ತನ್ನಂತಾನೆ ಸ್ವಯಂಶುದ್ಧಿಕರಿಸಿಕೊಳ್ಳುವ ಸ್ವಯಂಭುತ್ವದ ಲಕ್ಷಣವೂ ಸೇರಿದಂತೆ” ಎಂದ ಗೌತಮ..

” ನಿಜ ಗೌತಮ.. ನೋಡುತ್ತಿದ್ದಂತೆಯೇ ಅದ್ಭುತ ಸೃಷ್ಟಿಯೆಂಬ ಕಾಣ್ಕೆ ಇಬ್ಬರಲ್ಲೂ ಎದ್ದು ಕಾಣುವ ಸಮಾನ ಅಂಶ” ಈ ಬಾರಿ ದನಿಗೂಡಿಸಿದ ದೇವರಾಜ.

” ನಿಜವೇ.. ಆದರೆ ನನಗೆ ಅಚ್ಚರಿ ತಂದ ಅದ್ಭುತ ಅದಲ್ಲ.. ನರನಾರಾಯಣರು ಬರಿ ಅದೊಂದನ್ನೆ ಸಾಧಿಸಿಲ್ಲ.. ಕುದುರೆ ಮತ್ತು ಹಾರುವ ಹಕ್ಕಿಗಳೆಂಬ ಎರಡು ವಿಭಿನ್ನ ಜೀವರಾಶಿಗಳ ಸಮೂಲವನ್ನು ಪ್ರತ್ಯೇಕಿಸಿ ಅವೆರಡನ್ನು ಒಂದಾಗಿ ಜೋಡಿಸುವ ಅದ್ಭುತವನ್ನು ಸಾಧಿಸಿದ್ದಾರೆ .. ಈ ತರದ ಜೋಡಣೆಯ ಸಜಾತಿ ಪ್ರಕ್ರಿಯೆಗೆ ನಾನೆಷ್ಟು ಪಾಡುಪಟ್ಟಿರುವೆನೆಂದು ಹೇಳಲಸದಳ. ಆದರಿಲ್ಲಿ ಅವರು ವಿಜಾತಿ ತಳಿಗಳನ್ನು ಕೂಡಿಸಿದ್ದು ಮಾತ್ರವಲ್ಲದೆ ಜೀವಂತ ಕಾರ್ಯ ನಿರ್ವಹಿಸುವ ಹಾಗೆ ಸೃಜಿಸಿಯೂ ಬಿಟ್ಟಿದ್ದಾರೆ ..ಇದು ನಾವು ಗಮನದಲ್ಲಿರಿಸಬಹುದಾದ ಪ್ರಮುಖ ಅಂಶವೆಂದು ನನ್ನ ಭಾವನೆ..” ತನ್ನ ಪ್ರಯೋಗದ ಜತೆ ತುಲನೆ ಮಾಡುತ್ತ ನುಡಿದಿದ್ದ ಸೂರ್ಯದೇವ.

ಅವನ ಮಾತನ್ನೇ ಗಮನವಿಟ್ಟು ಆಲಿಸುತ್ತಿದ್ದ ಬ್ರಹ್ಮದೇವ ಈಗ ನುಡಿದ,”ಹೌದು ಸೂರ್ಯ..ನಿನ್ನ ಮಾತು ನಿಜ.. ಆ ಅಂಶ ಅತ್ಯಾಮೂಲ್ಯ ಮಾಹಿತಿಯೆಂದು ನನಗೂ ಅನಿಸುತ್ತಿದೆ.. ಯಾಕೆಂದರೆ ನಾವೀಗ ಎದುರಿಸುತ್ತಿರುವ ಸಂಶೋಧನೆಯ ವೇಗದ ಸಮಸ್ಯೆಗೂ ಅದರಲ್ಲೇ ಉತ್ತರವಿರಬಹುದೆಂದು ನನ್ನ ಭಾವನೆ..”

‘ವೇಗ ಸಾಧನೆ’ ಅನ್ನುತ್ತಿದ್ದಂತೆ ಎಲ್ಲರ ಕಿವಿ ನಿಮಿರಿ ಕತ್ತು ಮುಂದಕ್ಕೆ ಚಾಚಿಕೊಂಡಿತು , ‘ಅದೇನು ವಿವರಿಸಿ ಹೇಳು’ ಎಂದು ಕೇಳುವಂತೆ. ಅದನ್ನರಿತವನಂತೆ ತನ್ನ ಗ್ರಹಿಕೆಯನ್ನು ವಿವರಿಸತೊಡಗಿದ ಬ್ರಹ್ಮದೇವ – ಎಲ್ಲರಿಗು ಅರ್ಥವಾಗುವ ಸರಳ ರೂಪದಲ್ಲಿ..

(ಇನ್ನೂ ಇದೆ)

(Link to next episode 40: https://nageshamysore.wordpress.com/2016/04/09/00646-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a6-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6%e0%b2%a6/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s