00641. ವಿದೇಶದಲಿ ಯುಗಾದಿ


00641. ವಿದೇಶದಲಿ ಯುಗಾದಿ
_______________________

ತಳಿರು ತೋರಣವಿಲ್ಲ
ಸದ್ದು ಗದ್ದಲವಿಲ್ಲ
ಸಂತೆ ಕೊಳ್ಳುವ ತರದೂದಿಲ್ಲ
ತುಟ್ಟಿ ಹೂ ಮಾವಿಗೆ ಗೊಣಗುವಂತಿಲ್ಲ
ನಮದೂ ಯುಗಾದಿ !

ಆಫೀಸಿಗೆ ರಜೆಯಿಲ್ಲ
ನೆರೆಯವಗೆ ಹಬ್ಬವೂ ಇಲ್ಲ
ಸಸ್ಯ ಮಾಂಸಾಹಾರದ ಪರಿವಿಲ್ಲ
ಪೂಜೆ ನೈವೇದ್ಯ ಮಾಡುವ ಗೋಜಿಲ್ಲ
ನಮದೂ ಯುಗಾದಿ !

ಹಬ್ಬದ ನೆನಪೂ ಇಲ್ಲ
ಹಾರೈಕೆ ಕಳಿಸಲೂ ಇಲ್ಲ
ಶುಭಾಶಯದ ವಿನಿಮಯವಿಲ್ಲ
ಬರಿ ಖಾಲಿ ಖಾಲಿ ಮನಸಿನ ವಿಲ್ಲಾ
ನಮದೂ ಯುಗಾದಿ !

ನಾವಿಲ್ಲಿ ಮನಸಿಲ್ಲಿಲ್ಲ
ನೀವಲ್ಲಿ ಮನಸಲ್ಲಿಲ್ಲ
ಯಾರಲ್ಲೂ ನಿರಾಳವೆ ಇಲ್ಲ
ಏನೋ ಎಂತೋ ಆಚರಿಸದೆ ವಿಧಿಯಿಲ್ಲ
ನಮದೂ ಯುಗಾದಿ !

ಹಬ್ಬಕೆ ಮನ ಕೇಳದಲ್ಲ
ಚಡಪಡಿಕೆ ಊರ ಕರೆಯಿತಲ್ಲ
ದೂರವಾಣಿ ಕರೆಯ ಮಾತಾಯ್ತಲ್ಲ
‘ನೀವಿಲ್ಲದೆ ನಮಗೂ ಹಬ್ಬವಿಲ್ಲ’
ನಮ್ಮೆಲ್ಲರ ಯುಗಾದಿ !

ಯುಗಯುಗಾದಿ ಬಿಡಿರಲ್ಲ
ವರುಷವರುಷ ಬಹುದಲ್ಲ
ಅದೇ ರಾಗ ಅದೇ ತಾಳ ಕಂಜರ
ಕುಸ್ತಿ ಮತ್ತದೇ ಬದುಕಿನಸ್ತಿ ಪಂಜರ
ಯುಗಾದಿ ನಮಗಿಲ್ಲ !

– ನಾಗೇಶ ಮೈಸೂರು

00640. ಹಾಯ್ಕು (07.04.2016)


00640.  ಹಾಯ್ಕು (07.04.2016)
___________________________________

(೦೧)
ಪಿಜ್ಜಾ ಬರ್ಗರು
ಅನ್ನಾ ಸಾರು ಕುಕ್ಕರು
– ಯಾರಿಗೆ ಯಾರು ?

(೦೨)
ಬೀಸುವ ಕಲ್ಲು
ಪ್ಲೋರು ಮಿಲ್ಲು ಹಿಟ್ಟಿಗೆ
– ಪುಡಿಯಾಗೋಯ್ತೆ ?

(೦೩)
ದೈನಿಕ ವಾರ
ಮಾಸಪತ್ರಿಕೆ ಮಂಕು
– ಸುದ್ಧಿ ಕ್ಷಣಿಕ..

(೦೪)
ಸಪ್ಪೆ ಬದುಕು
ಕ್ಲಿಕ್ಕು ಲೈಕು ಹಂಚಿಕ್ಕು
– ಗರಂ ಮಸಾಲೆ..!

(೦೫)
ಬರೆವ ಸಂತ
ಕೃಷಿಗೆ ಸಂತೆಯೂ ಸೈ
– ಅನಂತ ಚಿತ್ತ..

00639. ಯುಗಾದಿಗಿನ್ನೊಂದಷ್ಟು ಹಾಯ್ಕು (೦೩)


00639. ಯುಗಾದಿಗಿನ್ನೊಂದಷ್ಟು ಹಾಯ್ಕು (೦೩)
___________________________________

(೦೧)
ಯುಗ ಯುಗಾದಿ
ಸದ್ಯ ಬರುತಲಿದೆ
– ಕಳುವಾಗದೆ !

(೦೨)
ಅಡ್ಡ ಬೀಳುತ
ನಮಸ್ಕರಿಸೆ ಕಾಸು
– ಮಕ್ಕಳ ಆಸೆ ..

(೦೩)
ಚಪ್ಪರದಡಿ
ಹಗಲು ರಾತ್ರಿ ಹಬ್ಬ
– ಎಲೆಯಾಟಕೆ..!

(೦೪)
ಕಾಮನೆ ನೂರು
ಹೊಸ ವರ್ಷದ ಜೋರು
– ತುಟ್ಟಿಗೆ ಬೈದು..

(೦೫)
ಬಾಡೂಟ ಗುರು
ನಿನ್ನೆಗಾಯ್ತು ಹೋಳಿಗೆ
– ವರ್ಷದುಡುಕು..

– ನಾಗೇಶ ಮೈಸೂರು