00646. ಅಹಲ್ಯಾ_ಸಂಹಿತೆ_೪೦ (ಜೀವಕೋಶದ ಕಸಿ!)


00646. ಅಹಲ್ಯಾ_ಸಂಹಿತೆ_೪೦ (ಜೀವಕೋಶದ ಕಸಿ!)
___________________________________________

(Link to previous episode 39: https://nageshamysore.wordpress.com/2016/03/31/00628-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%af-%e0%b2%85%e0%b2%82%e0%b2%a4%e0%b2%bf%e0%b2%ae-%e0%b2%b0/)

“ಊರ್ವಶಿಯನ್ನು ನೋಡುವವರೆಗೆ ಅವಳೊಂದು ಅದ್ಭುತ ಸೃಷ್ಟಿಯೆಂಬ ಪ್ರಜ್ಞೆಯುದಿಸಿತ್ತೆ ಹೊರತು ಅದನ್ನು ನೈಸರ್ಗಿಕವಾಗಿ, ಸ್ವನಿಯಂತ್ರಿತ ಪ್ರಕ್ರಿಯೇಯನ್ನಾಗಿ ಸಾಧಿಸಬೇಕಾದರೆ ಏನು ಮಾಡಬೇಕೆಂಬ ಸುಳಿವು ಸಿಕ್ಕಿರಲಿಲ್ಲ.. ಆದರೆ ನರ ಮುನಿಂದ್ರನ ಭೇಟಿಯ ತರುವಾಯ ನನ್ನನ್ನು ಕೊರೆಯುತ್ತಿದ್ದ ಒಂದು ಪ್ರಶ್ನೆ – ಯಾಕೆ ಉಚ್ಚೈಶ್ರವಸ್ಸನ್ನು ಮಾದರಿಯನ್ನಾಗಿ ಪರಿಗಣಿಸಿ ಬಳಸಿಕೊಳಿರೆಂದು ಸಲಹೆ ನೀಡಿದನೆಂದು ಮನವರಿಕೆಯಾಗಿರಲಿಲ್ಲ..” ಬ್ರಹ್ಮದೇವ ತನ್ನ ವಿವರಣೆಯನ್ನು ಆರಂಭಿಸಿದ.

” ಪಿತಾಮಹ.. ನಿಜ ಹೇಳುವುದಾದರೆ ಇದುವರೆವಿಗೂ ನನಗೂ ಅದೇ ಪ್ರಶ್ನೆಯಿದೆ ಮನದಲ್ಲಿ.. ಸೈದ್ದಾಂತಿಕವಾಗಿ ಏನೇ ಹೋಲಿಕೆ ಸಾಧ್ಯವಿದ್ದರೂ ಧ್ರುವಾಂತರವಿರುವ ಎರಡು ಜೀವಗಣಗಳನ್ನು ಹೋಲಿಸಿ ನೋಡಿ, ಮಾದರಿಯನ್ನಾಗಿ ಹೇಗೆ ಬಳಸುವುದೊ ಎಂದು ಇನ್ನೂ ನನಗೆ ಹೊಳೆದಿಲ್ಲ..” ಬ್ರಹ್ಮನ ಮಾತು ಮುಂದುವರೆಯುವ ಮೊದಲೇ ಮಾತು ಜೋಡಿಸಿದ ದೇವರಾಜ.

“ಹೌದು ದೇವರಾಜ.. ನನಗು ಮೊದಲಿದ್ದ ಅನಿಸಿಕೆ ಅದೇ.. ಆದರೆ ಆ ಭೇಟಿಯಲ್ಲಿ ನಡೆಸಿದ ಚರ್ಚೆ, ಮತ್ತೀಗ ಉಚ್ಚೈಶ್ರವಸ್ಸಿನ ಪ್ರತ್ಯಕ್ಷ್ಯ ದರ್ಶನದಿಂದ ಎಲ್ಲವೂ ಕೊಂಚಕೊಂಚವೆ ನಿಲುಕಿಗೆ ಸಿಗುತ್ತಿದೆ… ”

“ಅಂದರೆ.. ನಾವು ಬಳಸಬಹುದಾದ ಸುಳಿವಿನ ಅಂಶವೇನಾದರು ದೊರಕಿತೆ ಬ್ರಹ್ಮದೇವ ?” ಈ ಬಾರಿಯ ಕುತೂಹಲದ ದನಿ ಗೌತಮನದಾಗಿತ್ತು..

” ಸುಳಿವೆನ್ನಬಹುದಾದರೆ ಅಹುದೆನ್ನು.. ಅಥವಾ ಬರಿಯ ಮರೀಚಿಕೆಯೇ ಎಂದೂ ಹೇಳಲಾಗದು ಈ ಕ್ಷಣದಲ್ಲಿ.. ಆದರೆ ನಾವು ಮುಂದುವರೆಯಲು ಬೇಕಾದ ದಾರಿಯ ಮತ್ತೊಂದು ಕವಲು ಕಾಣಿಸುತ್ತಿದೆಯೆಂದು ಮಾತ್ರ ಹೇಳಬಲ್ಲೆ…” ಎಂದ ಬ್ರಹ್ಮದೇವ..

ಅದುವರೆಗೂ ಮೌನದಲ್ಲಿ ಅವನ ಮಾತು ಕೇಳುತ್ತಿದ್ದ ಸೂರ್ಯದೇವ, ” ಪಿತಾಮಹ..ಇಷ್ಟು ಕುತೂಹಲ ಕೆರಳಿಸಿದ್ದು ಸಾಕು.. ಇನ್ನಾದರು ಅದೇನೆಂದು ಬಿಡಿಸಿ ಹೇಳು.. ನಮ್ಮೆಲ್ಲರ ಕುತೂಹಲ ಈಗಾಗಲೇ ಕೆರಳಿ ನಿಂತಿದೆ ” ಎಂದ..

ಇನ್ನು ಎಲ್ಲರ ಗಮನ ತನ್ನ ಮಾತಿನತ್ತ ಕೇಂದ್ರೀಕೃತವಾಗಿದೆಯೆಂದರಿತ ಬ್ರಹ್ಮದೇವ ತನ್ನ ಮಾತನ್ನು ಮುಂದುವರೆಸಿದ, ” ನೀವೀಗಾಗಲೆ ಸೂಕ್ಷ್ಮವಾಗಿ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ… ಉಚೈಶ್ರವಸ್ಸಿನಲ್ಲಿ ಎರಡು ವಿಭಿನ್ನ ಜೀವ ತತ್ವಗಳು ಸೀಮಾತೀತವಾಗಿ ಅಂತರ್ಗತವಾಗಿವೆ…”

ಅವನ ಮಾತಿನ ಎಳೆ ಹಿಡಿದವಳಂತೆ ಈಗ ಚಕ್ಕನೆ ನುಡಿದವಳು ಊರ್ವಶಿ ..” ಅಂದರೆ ಸಾಮಾನ್ಯ ಅಶ್ವದ ತತ್ವ ಮತ್ತು ಹಾರಾಡಬಲ್ಲ ಪಕ್ಷಿಯ ತತ್ವಗಳ ಸಂಗಮವಾಗಿಸಿದ ಸಂಗತಿಯೇನು ?”

ಅವಳತ್ತ ಮತ್ತೆ ಮೆಚ್ಚುಗೆಯ ದಿಟ್ಟಿ ಹರಿಸಿದ ಬ್ರಹ್ಮ..” ಭೇಷಾಗಿ ಹೇಳಿದೆ ಊರ್ವಶಿ … ನಿಜ.. ಒಂದು ನೆಲದಲ್ಲಿ ನಡೆದಾಡುವ ಜೀವತತ್ವವನ್ನು ಮತ್ತೊಂದು ಹಾರಾಡುವ ಜೀವತತ್ವದೊಡನೆ ಸಮೀಕರಿಸಿ ಅವೆರಡು ಜೊತೆಜೊತೆಯಾಗಿ ಪರಸ್ಪರ ಪೂರಕವಾಗಿ ಅಸ್ತಿತ್ವದಲ್ಲಿರುವಂತೆ ಮಾಡಿರುವ ಈ ಸಂಯೋಜನೆಯ ಸಂಶೋಧನೆ ಅದ್ಭುತವೆನಿಸುವುದಿಲ್ಲವೇ ?”

ಈಗ ಮತ್ತೆ ಬಾಯಿ ಹಾಕಿದವನು ದೇವರಾಜ..” ಅದು ಸರಿ ಪಿತಾಮಹ.. ಇದೊಂದು ಅದ್ಭುತ ಪರಿಕಲ್ಪನೆಯೆಂದು ಇಡೀ ಜಗವೇ ಕೊಂಡಾಡುತ್ತಿದೆ. ಅದೊಂದು ಅದ್ಭುತವೆನ್ನುವುದರಲ್ಲಿ ಅಚ್ಚರಿಯೇ ಇಲ್ಲ ಬಿಡಿ.. ಆದರೆ ಇದು ನಮ್ಮ ಸಂಶೋಧನೆಗೆ ಹೇಗೆ ಸಹಾಯಕವಾದೀತು ಎನ್ನುವ ಪ್ರಶ್ನೆ ಇನ್ನೂ ಬಗೆಹರಿಯದೆ ಹಾಗೆಯೇ ಉಳಿದಿದೆಯಲ್ಲಾ?”

” ತಾಳ್ಮೆ ದೇವರಾಜ ತಾಳ್ಮೆ… ನಾನೂ ಅಲ್ಲಿಗೆ ಬರುತ್ತಿದ್ದೇನೆ.. ಅವಸರಿಸುವ ಮೊದಲು ನನ್ನ ಮಾತಿನ ಹಿಂದಿರುವ ತರ್ಕವನ್ನೇ ಗಮನಿಸುತ್ತಿರು.. ನಿನಗೇ ಅರಿವಾಗುತ್ತದೆ ಹೇಗೆ ಸಂಬಂಧ ಕಲ್ಪಿಸಬಹುದು ಎಂದು..” ಎಂದೆನ್ನುತ್ತ ಗೌತಮನತ್ತ ತಿರುಗಿದ ಬ್ರಹ್ಮದೇವ..

” ತಾಳ್ಮೆ ದೇವರಾಜ ತಾಳ್ಮೆ… ನಾನೂ ಅಲ್ಲಿಗೆ ಬರುತ್ತಿದ್ದೇನೆ.. ಅವಸರಿಸುವ ಮೊದಲು ನನ್ನ ಮಾತಿನ ಹಿಂದಿರುವ ತರ್ಕವನ್ನೇ ಗಮನಿಸುತ್ತಿರು.. ನಿನಗೇ ಅರಿವಾಗುತ್ತದೆ ಹೇಗೆ ಸಂಬಂಧ ಕಲ್ಪಿಸಬಹುದು ಎಂದು..” ಎಂದೆನ್ನುತ್ತ ಗೌತಮನತ್ತ ತಿರುಗಿದ ಬ್ರಹ್ಮದೇವ..

“ಬ್ರಹ್ಮದೇವ ನನ್ನನಿಸಿಕೆ ಸರಿಯಿರುವುದಾದರೆ – ನೀವು ಬೊಟ್ಟು ಮಾಡಿ ತೋರಿಸುತ್ತಿರುವುದು ಇವೆರಡು ಸತ್ವಗಳು ಬೆರೆತು ಹೊಸತೊಂದು ತತ್ವವಾಗಿ ಉಗಮಿಸಿದ ವೇಗದ ಕುರಿತಲ್ಲವೇ ? ಒಂದು ವೇಳೆ ಇದೆ ಕ್ರಿಯೆ ನೈಸರ್ಗಿಕವಾಗಿ ನಡೆಯಬೇಕಿದ್ದಲ್ಲಿ ಲಕ್ಷಾಂತರ, ಕೋಟ್ಯಾಂತರ ವರ್ಷಗಳು ಕಳೆದರೂ ತಂತಾನೆ ಆಗುತ್ತಿತ್ತೋ ಇಲ್ಲವೋ ಖಚಿತವಾಗಿ ಹೇಳುವುದು ಅಸಾಧ್ಯ.. ಇಂತಿರುವಲ್ಲಿ ನರನಾರಾಯಣರ ಈ ಸೃಷ್ಟಿ ಅಷೆಲ್ಲಾ ವರ್ಷಾಂತರಗಳ ಹಂಗಿಲ್ಲದೆ ತನ್ನದೇ ಆದ ರೀತಿಯಲ್ಲಿ, ತನ್ನದೇ ಆದ ವೇಗದಲ್ಲಿ ವಿಕಾಸವನ್ನು ಸಾಧಿಸಿಕೊಂಡುಬಿಟ್ಟಿದೆ – ಕೃತಕವಾಗಿಯಾದರೂ.. ಅದನ್ನು ತಾನೇ ನೀವು ಎತ್ತಿ ತೋರಿಸಬಯಸುತ್ತಿರುವುದು ? ” ಗೌತಮ ತನ್ನ ತಳಿವಿಜ್ಞಾನ ಜ್ಞಾನದ ಸಂಪತ್ತನ್ನು ಬಳಸಿಕೊಂಡು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಗೊಳಪಡಿಸುತ್ತ ನಿಷ್ಕರ್ಷಿಸಿದ ತೀರ್ಮಾನವನ್ನು ಮುಂದಿಡುತ್ತ ನುಡಿದಿದ್ದ.

ಅವನ ಮಾತು ಕೇಳುತ್ತಿದ್ದಂತೆಯೆ ಅದು ಸರಿಯಾದ ತರ್ಕವೆನ್ನುವ ಭಾವನೆ ಮೂಡಿಸುವಂತೆ ಬ್ರಹ್ಮದೇವನ ಮುಖದಲ್ಲಿ ಸಂತೃಪ್ತಿಯ ಮುಗುಳ್ನಗೆಯೊಂದು ಹಾದುಹೋಯ್ತು… ” ನಿಜಾ ಗೌತಮ.. ನೀನು ಸರಿಯಾಗಿಯೇ ಗ್ರಹಿಸಿದೆ.. ಎಷ್ಟೆ ಆಗಲಿ ಪರಿಪಕ್ವ ತಳಿಶಾಸ್ತ್ರಜ್ಞನಲ್ಲವೆ ನೀನು ? ಈಗ ನೀನು ವಿವರಿಸಿದ ಆಲೋಚನೆಯ ಧಾಟಿಯನ್ನೆ ಹಿಡಿದು ನಮ್ಮ ಸಂಶೋಧನೆಯಲ್ಲಿ ಇದನ್ನು ಹೇಗೆ ಬಳಸಬಹುದೆಂದು ಊಹಿಸಿ ಹೇಳಬಲ್ಲೆಯಾ? ” ಎಂದು ಗೌತಮನನ್ನೆ ಮತ್ತೆ ಪ್ರಚೋದಿಸಿದ ಬ್ರಹ್ಮದೇವ.

ಗೌತಮ ತುಸುಹೊತ್ತು ಆಲೋಚನಾಮಗ್ನನಾಗಿದ್ದವನು ನಂತರ, ” ಇದು ಸರಿಯಾದ ಪರಿಪೂರ್ಣ ಊಹೆಯೆಂದು ಹೇಳಲಾರೆ.. ಆದರೆ ತಾತ್ವಿಕ ಮಟ್ಟದಲ್ಲಿ ಉಚ್ಚೈಶ್ರವಸ್ಸಿನ ಎರಡು ತತ್ವಗಳನ್ನು ಬೆಸೆಯುವಲ್ಲಿ ಸಿಕ್ಕಿರುವ ಯಶಸ್ಸು ನಮಗೂ ದಾರಿದೀಪವಾದೀತೆಂದು ನನ್ನ ಅನಿಸಿಕೆ.. ಅದರ ಪ್ರತಿಫಲವಾಗಿ ನಮಗೂ ನರನಾರಾಯಣರಿಗೆ ಸಿಕ್ಕ ವೇಗದ ಫಲಿತಾಂಶ ಸಿಕ್ಕುವ ಸಾಧ್ಯತೆ… ಆದರೆ ಸೂಕ್ಷ್ಮಮಟ್ಟದಲ್ಲಿ ಅದನ್ನು ಹೇಗೆ ಸಾಧಿಸಬಹುದೆನ್ನುವ ಸಿದ್ದಾಂತವಾಗಲಿ, ಊಹೆಯಾಗಲಿ ನನಗಿನ್ನೂ ತೋಚುತ್ತಿಲ್ಲ.. ಅದೇನೆ ಇದ್ದರು ಉಚ್ಚೈಶ್ರವಸ್ಸಿನ ಅಧ್ಯಯನದಿಂದ ದೊರಕುವ ಜ್ಞಾನ ಮತ್ತು ಸುಳಿವುಗಳನ್ನು ಬಳಸಿ ನಮ್ಮ ಸಂಶೋಧನೆಗೂ ಅನ್ವಯಿಸಿಕೊಂಡರೆ ವೇಗದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದೆನ್ನುವ ಆತ್ಮವಿಶ್ವಾಸ ನನ್ನಲ್ಲೂ ಹುಟ್ಟುತ್ತಿದೆ.. ಆದರೆ ಅದು ಉಚ್ಚೈಶ್ರವಸ್ಸಿನ ಉದಾಹರಣೆಯ ಹಾಗೆ ಸುಲಭವೆಂದು ಹೇಳುವಂತಿಲ್ಲ.. ಏಕೆಂದರೆ ಅಲ್ಲಿ ಎರಡು ವಿಭಿನ್ನ ತತ್ವಗಳನ್ನು ಹೊಂದಿಸಬೇಕೆನ್ನುವ ಆಶಯವಿತ್ತು – ಒಂದು ಅಶ್ವ ಮತ್ತೊಂದು ಹಾರುವ ಜೀವಿ. ಆದರೆ ನಮ್ಮ ಪ್ರಯೋಗ ಜೀವಕೋಶಗಳ ಮಟ್ಟದಲ್ಲಿ… ಅದರಲ್ಲೂ ನಮ್ಮಲ್ಲಿ ಆ ಎರಡು ವಿಭಿನ್ನ ತತ್ವಗಳ ಬಳಕೆಯಾಗುವಂತಿಲ್ಲ.. ನಮ್ಮಲ್ಲಿರುವುದು ಒಂದೆ ತತ್ವ – ಈ ಜೀವಕೋಶದ ಸುತ್ತಲ ತತ್ವ.. ಇದಕ್ಕೆ ಮೀರಿದ್ದೇನಾದರು ಇದ್ದರೆ ಬ್ರಹ್ಮದೇವನೆ ಬೆಳಕು ಚೆಲ್ಲಬೇಕು” ಎಂದು ಸುದೀರ್ಘ ವಿವರಣೆಯಿತ್ತು ಸುಮ್ಮನಾದ.

ಬ್ರಹ್ಮದೇವನಿಗೆ ಅಷ್ಟು ಸಾಕಿತ್ತು ಮಿಕ್ಕ ಆಲೋಚನೆಯ ಚಿತ್ರಣವನ್ನು ಅವರ ಮುಂದೆ ತಂಡಿಡಲು.. ” ನೀನು ಹೇಳಿದ ಸೈದ್ಧಾಂತಿಕ ಮಟ್ಟದ ತರ್ಕ ಹೊಂದಾಣಿಕೆಯಾಗುವ ಮಾತೇನೋ ಸತ್ಯ ಗೌತಮ.. ಆದರೆ ಕೊನೆಯಲ್ಲಿ ನುಡಿದೆಯಲ್ಲ, ‘ನಮ್ಮಲ್ಲಿ ಆ ಎರಡು ವಿಭಿನ್ನ ತತ್ವಗಳ ಬಳಕೆಯಾಗುವಂತಿಲ್ಲ’ ಎನ್ನುವ ಮಾತು ? ಅದು ನನಗೆ ಸಮ್ಮತವಾಗದ ತೀರ್ಮಾನ. ಯಾಕೆಂದರೆ ಸೂಕ್ಷ್ಮಸ್ತರದಲ್ಲಿ ಅದನ್ನು ಅನ್ವಯಿಸಲು ಸಾಧ್ಯವಾಗುವಂತಿದ್ದರೆ ಮಾತ್ರ ನಮ್ಮ ಸಂಶೋಧನೆಯಲ್ಲಿ ಅದನ್ನು ಬಳಸಿಕೊಳ್ಳಲು ಸಾಧ್ಯ..”

ಎಲ್ಲಾ ಮಾತನ್ನು ತದೇಕಚಿತ್ತದಲ್ಲಿ ಆಲಿಸುತ್ತ ನಡುನಡುವೆ ಅದರ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದ ಊರ್ವಶಿ ತಲೆಯೆತ್ತಿದವಳೆ ತಟ್ಟನೆ ಕೇಳಿದಳು..” ಬ್ರಹ್ಮದೇವ.. ಹಾಗೆ ಬಳಸಿಕೊಳ್ಳುವ ರೀತಿಯೊಂದು ನಿನಗಾಗಲೇ ಹೊಳೆದಿರುವಂತೆ ಕಾಣಿಸುತ್ತಿದೆ.. ಹೌದೆ ? ”

” ಹೌದು ಊರ್ವಶಿ.. ನಮಗೀಗ ಅತ್ಯುತ್ಕೃಷ್ಟ ಮಟ್ಟದ ನಿನ್ನ ಜೀವಕೋಶದ ಜತೆಗೆ ಸದ್ಯದ ಅಪರಿಪಕ್ವತೆಯ ಮಟ್ಟದ ಜೀವಕೋಶದ ಲಭ್ಯತೆಯಿದೆಯಲ್ಲವೇ ? ಅರ್ಥಾತ್ ನಮ್ಮಲ್ಲೂ ಎರಡು ತತ್ವವಿದ್ದಂತೆ ಆಗಲಿಲ್ಲವೇ ? ಉಚ್ಚೈಶ್ರವಸ್ಸಿನಂತೆ ತೀರಾ ವಿಭಿನ್ನ ತತ್ವಗಳಲ್ಲವಾದರೂ ನಮ್ಮಲ್ಲಿರುವ ಇವೆರಡೂ ಜೀವಕೋಶದ ಮಾದರಿಗಳ ನಡುವೆ ಅಜಗಜಾಂತರ ಎನ್ನುವುದನ್ನು ಮರೆಯುವಂತಿಲ್ಲ.. ಇವೆರಡರ ಅಂತರವನ್ನು ಕುಗ್ಗಿಸಲು ನಾವು ಉಚ್ಚೈಶ್ರವಸ್ಸಿನಲ್ಲಿ ಬಳಸಿಕೊಂಡಿರುವ ತತ್ವವನ್ನು ಅಳವಡಿಸಿಕೊಂಡರೆ ನಮಗೂ ಅದೇ ರೀತಿಯ ವೇಗ ಸಿದ್ದಿಸಬೇಕಲ್ಲವೆ..? ”

ಈಗ ಸೂರ್ಯದೇವನ ಸರದಿ..” ಪಿತಾಮಹಾ ನಿನ್ನ ಮಾತೇನೋ ಸರಿ.. ಸೂಕ್ಷ್ಮಮಟ್ಟದಲ್ಲಿ ಅದನ್ನು ಸಾಧಿಸುವ ಬಗೆಯೆಂತು ಅನ್ನುವುದಕ್ಕೂ ಸೂಕ್ಷ್ಮ ಸಿದ್ಧಾಂತದ ಅಗತ್ಯವಿದೆಯಲ್ಲವೇ ?” ಎಂದು ಪ್ರಶ್ನಿಸಿದ..

” ಸಿದ್ದಾಂತ ಇದೆ ಸೂರ್ಯದೇವ.. ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಆ ಸಿದ್ದಾಂತವನ್ನು ಕಸಿ ವಿಜ್ಞಾನವೆನ್ನುವರು – ತಳಿಶಾಸ್ತ್ರದಲ್ಲಿ… ಒಂದು ವಿಧದಲ್ಲಿ ಅದನ್ನು ಮೊದಲಬಾರಿಗೆ ಬಳಸಿರುವುದು ಉಚ್ಚೈಶ್ರವಸ್ಸಿನ ಸೃಷ್ಟಿಯಲ್ಲೆ ಎನ್ನಬಹುದು.. ” ಎಂದು ತನ್ನ ಮೂಲ ಆಲೋಚನೆಯ ಒಡಪನ್ನು ತೆರೆದಿಟ್ಟ ಬ್ರಹ್ಮದೇವ..

ಅವನು ಕಸಿಶಾಸ್ತ್ರವೆನ್ನುತ್ತಿದ್ದಂತೆ ಏಕಾಏಕಿ ಚುರುಕಾಗಿದ್ದು ಗೌತಮನ ಕಿವಿ ಮತ್ತು ಮನಸಿನ ಚಿಂತನೆ.. ” ಅರೆರೆ.. ಅರ್ಥಾತ್ ಊರ್ವಶಿಯ ಉನ್ನತ ಸ್ತರದ ಜೀವಕೋಶಗಳ ಜತೆಗೆ ಈಗಿನ ಮಟ್ಟದ ಜೀವಕೋಶಗಳನ್ನು ಕಸಿಮಾಡಲು ಪ್ರಯತ್ನಿಸಬಹುದು ಎಂದು ನಿನ್ನಿಂಗಿತವಲ್ಲವೆ ಬ್ರಹ್ಮದೇವ ? ಹೀಗೆ ಕಸಿಯಾಗಿ ಅದರ ಫಲಿತವಾಗಿ ಉತ್ಪನ್ನವಾದ ಕೋಶಗಳು ಎರಡರ ಸತ್ವದಿಂದ ಈಗಿರುವುದಕ್ಕಿಂತ ಉತ್ತಮ ತಳಿಯಾಗಿ ಹೊರಹೊಮ್ಮಲೇಬೇಕು – ಅದಕ್ಕಾಗಿ ನಿಧಾನ ಮತ್ತು ಸಹಜ ವಿಕಾಸದ ಹಾದಿ ಹಿಡಿಯದೆ ಇದ್ದರೂ ಸಹ.. ಇದೆ ತರ್ಕವನ್ನು ವಿಸ್ತರಿಸಿಕೊಂಡು ಹೋದರೆ ನಾವು ಬಯಸುವ ಮಟ್ಟದ ಜೀವಕೋಶದ ಮಾದರಿ ಉತ್ಪತ್ತಿಯಾಗುವವರೆಗೂ ಈ ತಳಿ ಕಸಿಯನ್ನು ಮುಂದುವರೆಸಿಕೊಂಡು ಹೋಗಬೇಕು.. ಆಗ ಕೆಲವೇ ಕಾಲದಲ್ಲಿ ನಮಗೆ ಬೇಕಾದ ಫಲಿತ ದೊರಕುತ್ತದೆ – ಲಕ್ಷಾಂತರ, ಕೋಟ್ಯಾಂತರ ವರ್ಷಗಳ ಲೆಕ್ಕದಲ್ಲಿ ಅಲ್ಲ..” ಎಂದ ಬ್ರಹ್ಮದೇವನ ತರ್ಕಕ್ಕೆ ಮತ್ತಷ್ಟು ಸ್ಪಷ್ಟ ರೂಪು ನೀಡುತ್ತ.

ಅದಕ್ಕೊಂದು ಅಂತಿಮ ವ್ಯಾಖ್ಯೆ ನೀಡುವವನಂತೆ ನುಡಿದ ಬ್ರಹ್ಮದೇವ..” ನಾವು ಮಾಡುವ ಕಸಿಯಲ್ಲಿ ಊರ್ವಶಿಯ ತಳಿಪ್ರಜ್ಞೆ ಹೆಚ್ಚು ಜಾಗೃತವಿದ್ದು ಮಿಕ್ಕದ್ದು ಹಿನ್ನಲೆಯಲ್ಲಿರುವಂತೆ ಎರಡರ ಕಸಿ ಮಾಡಬೇಕು.. ಅರ್ಥಾತ್ ಈ ಸಿದ್ದಾಂತಕ್ಕು ಸಾಕಷ್ಟು ಸಮಯ ಮತ್ತು ಪ್ರಯೋಗದ ಅವಶ್ಯಕತೆಯಿದೆ… ಸರ್ವರೀತಿಯಲ್ಲು ಉತ್ಕೃಷ್ಟ ಕೋಶದ ಬೀಜರೂಪವನ್ನು ಅನ್ವೇಷಿಸಬೇಕು ನಾವು.. ಅದಾದಲ್ಲಿ ನಮ್ಮ ಬಹುದೊಡ್ಡ ಆತಂಕ ನಿವಾರಣೆಯಾದ ಹಾಗೆ.. ಆ ದಿಕ್ಕಿನಲ್ಲಿ ನಮ್ಮೆಲ್ಲರ ಪ್ರಯತ್ನವನ್ನು ಕೇಂದ್ರೀಕರಿಸೋಣ” ಎಂದ.

ಅಲ್ಲಿಂದಾಚೆಗೆ ಮತ್ತಷ್ಟು ಚರ್ಚೆಗಳು ನಡೆದು ಪ್ರತಿಯೊಬ್ಬರಿಗೂ ಅದರ ಪೂರ್ಣ ಮಾಹಿತಿ ಮತ್ತು ಜ್ಞಾನ ದೊರಕುವಂತೆ ಮಾಡಿದ ನಂತರ ಆ ದಿನದ ಮಟ್ಟಿಗೆ ಸಭೆ ಮುಕ್ತಾಯವಾಗಿತ್ತು.

(ಇನ್ನೂ ಇದೆ)

(Link to next episode no. 41: https://nageshamysore.wordpress.com/2016/04/24/00669-0041_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a7/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s