ಬಡ್ಜೆಟ್ಟೆಂಬ ಬಕಾಸುರ


ಬಜೆಟ್ಟಿನ ಕುರಿತಾದ ನಿಲುಮೆಯಲ್ಲಿ ಪ್ರಕಟವಾಗಿದ್ದ (೦೮.೦೪.೨೦೧೬) ಬರಹವೊಂದು ಇಲ್ಲಿದೆ. ಕಾಮೆಂಟಿನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀಯುತ ಹೇಮಾಪತಿಯವರು ‘ಬಡ್ಜೆಟ್’ ಪದ ಪ್ರಯೋಗ ತಪ್ಪು, ‘ಬಜೆಟ್’ ಎಂದು ಉಚ್ಚರಿಸಬೇಕು ಎಂದು ತಿದ್ದಿದ್ದಾರೆ. ದಯವಿಟ್ಟು ಓದುವ ಹೊತ್ತಿನಲ್ಲಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದು ವಿನಂತಿ.

ನಿಲುಮೆ

– ನಾಗೇಶ ಮೈಸೂರು

union-budget-inner14-newಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.

ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ…

View original post 597 more words

00649. ಸೆಲ್ಪೀಪುರಾಣಾ !


00649. ಸೆಲ್ಪೀಪುರಾಣಾ !
________________________

  

(Picture source: https://www.hastac.org/blogs/lstrombergsson/2015/11/03/vandyvienna2015-using-instagram-selfie-critical-lens-and-identity)

ಹೋದ್ಯಾ ಪುಟ್ಟಾ ? ಬಂದ್ಯಾ ಪುಟ್ಟ ?
ಮೇಲ್ಹತ್ತಿದ್ರೇನು ನಮ್ಮನೇದೆ ಅಟ್ಟ
ಹಂಗೆ ತೆಗ್ದೆ ತಾನೇ ಸೆಲ್ಪೀ ಮೊಬೈಲು ?
ಬೆಳಗಿನ್ಹೊತ್ತಲಿ ಕೂತ್ ಕೆರೆ ಗದ್ದೇ ಬಯಲು !

ರೀಲ್ ಹಾಕಂಗಿಲ್ಲ ಪ್ರಿಂಟ್ ಮಾಡಂಗಿಲ್ಲ
ಸರಿ ಕ್ಯಾಮರ ಇದೆಯಾ ಕೇರ್ ಮಾಡಂಗಿಲ್ಲ
ಆರ್ಕಾಸಿನ ಮೊಬೈಲ್ಗೂ ಕ್ಯಾಮರ ಕಣ್ಣು
ತಗಿ ಕೂತ್ಕಡೆ ನಿಂತ್ಕಡೆ ವಯ್ಯಾರದ ಹೆಣ್ಣು !

ತೆಗೆದಿದ್ ಗಳಿಗೆಲೆ ಅಪ್ಲೋಡು ಜಗಕೆಲ್ಲ
ಲೈಕು ಕಾಮೆಂಟು ಹಿಂಡಿಂಡೆ ಬಂದ್ವಲ್ಲ
ರಾಶಿ ರಾಶಿ ಲೈಕು ಮುಖ ನೋಡ್ದೆಲೆ ಹಾಕು
ಬಾಣಲೆ ತುಂಬಾ ತುಂಬ್ಕೊಂಡರೆ ಸಾಕು !

ಗುಂಪ್ಗುಂಪಾಗಿ ಸೇರೋ ಸಮೂಹ ಸನ್ನಿ
ಹೊಡೆದಿದ್ದೆ ಸೆಲ್ಪಿ ಎಷ್ಟೊಂದ್ ಜನ ನನ್ನೀ
ಬದುಕೋದೇ ಸ್ಟೈಲು ಸೆಲ್ಪೀ ತರ ಡೌಲು
ಇರಲಪ್ಪ ಸ್ವಲ್ಪ ಭೂಮಿ ಮೇಲ್ ಕಾಲು !

ಪರ್ಸ್ನಲ್ಲು ಫೋಟೊ ಪ್ರೈವೇಟಾಗಿಟ್ಟಿರು
ಸಿಕ್ಸಿಕ್ದಂಗೆಲ್ಲ ಹಾಕ್ಕೊಬಾರ್ದು ಮ್ಯಾಟರು
ಗೊತ್ತಿಲ್ದಿರೊ ಮಂದಿ ಕೈಗ್ಹಾಕದೆ ನಮ್ಮನ್ನೇ
ಸೆಲ್ಪಿ ತೊಗೊ ಸೇಫಾಗಿ ಕತ್ತಿಗ್ ಬರ್ದಂಗೆ !

– ನಾಗೇಶ ಮೈಸೂರು

00648. ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?


00648. ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?
__________________________________________

  
(Picture source: https://upload.wikimedia.org/wikipedia/commons/2/26/Blood_1.svg)

ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?
ಬಗೆಹರಿಯದ ಜಿಜ್ಞಾಸೆ ಗೊಂದಲ ಮಡುಗಟ್ಟಿ
ಬಿಚ್ಚಿದೆ ಪದರ ಪದರ ಕಾಯದ ಚದರ ಚದರ ಅಡಿಗೆ
ಕಂಡಂತಾಗಿಸಿ ಕಾಣದೆ ಮಾಯವಾಗೋ ಒಗಟು..

ಏನಿದರರ್ಥ ಮರುಳೆ ನೀ ಮಾಯೆಯೊಳಗೊ ?
ಸಿಕ್ಕಿಬಿದ್ದ ಜೀವ ಜೀವನ ಜಂಜಾಟದ ಬಂಧದೆ
ಆಡಿಸಿದಂತೆ ಆಡುತ ಮಾಯೆಯ ಮೋಹದಲಿ
ಕುಣಿಸಿದಂತೆ ಕುಣಿತ ಮದ ಮತ್ಸರ ಪಾಶ ಕುಣಿಕೆ..

ನಿನ್ನೊಳು ಮಾಯೆಯೆಂದೊಡೆ ಗೆದ್ದಂತೇನವಳ ?
ಮುಷ್ಟಿಯಲ್ಹಿಡಿದಿಟ್ಟಂತೆ ಆಡಿಸುವ ಬೆರಗೇನು ?
ನುಂಗಿದರೇನು ಅವಳ ಶಿವಲಿಂಗದಂತೆ ಆತ್ಮೈಕ್ಯ
ಆಡಿಸುತಾಳೆ ಕೂತೊಳಗೆ ತೊಡಿಸಜ್ಞಾನದ ಬಲೆಯ..

ಶರಣಾಗತ ಭಾವವದು ನೀ ಮಾಯೆಯೊಳಗಾದರೆ
ಇಹಪರ ಒಪ್ಪಿಸಿ ಕರ್ಮಕೆ ಮುನ್ನಡೆಯುವ ಸೊಗಡೆ
ನಿನ್ನೊಳಿದ್ದರೆ ಮಾಯೆ ತಾನಾಗುತ ಅಜ್ಞಾನ ಅಹಮಿಕೆ
ಕೊಬ್ಬಿದ ಕುರಿಯಾಗಿಸುವಳು ಬಲಿತಷ್ಟು ಅವಳ ಲಾಭ..

ಬಿಡು ಒಳಗೊ ಹೊರಗೋ ಸಾಪೇಕ್ಷ ಸಿದ್ಧಾಂತ ಬರಿದೆ
ಒಳಗ್ಹೊರಗೆಲ್ಲ ಅವಳದೆ ಹಾಸು ಅಂದ ಮೇಲೆ ಮತ್ತೇನು ?
ಅವಳೊಳಗಿರೆ ಗರ್ಭದ ಕೂಸು ನೀನ್ಹೊರಗಿರೆ ಸೃಷ್ಟಿ ನಕಾಶೆ
ಒಳಗ್ಹೊರಗೆಲ್ಲೆಡೆ ಪೋಷಿಸೋ ಒಂದೇ ಮಾಯಿ ಮಾಯೆಯಂತೆ !

– ನಾಗೇಶ ಮೈಸೂರು

00647. ನಾ ನನ್ನನೆ ಹುಡುಕಿ…


00647. ನಾ ನನ್ನನೆ ಹುಡುಕಿ…
________________________________

  
(Picture from : https://psychlopedia.wikispaces.com/Introspection)

ನಾನು ನನ್ನೇ ಹುಡುಕಿ ಹೊರಟಿದ್ದ ಗಳಿಗೆ
ತೊಟ್ಟು ಸೂಟೂ ಬೂಟು ಕಂಠ ಕೌಪೀನ
ನಾನೇ ನನ್ನೆಲ್ಲಿ ಹುಡುಕಲಿತ್ತೊ ಅರಿವಿಲ್ಲ
ಗೊತ್ತು ಗುರಿಯಿಲ್ಲದ ನನ್ನನೆ ನಾ ಹೊತ್ತು ||

ನಾನಲ್ಲಿರುವೆನೆಂದರು ಕಂಡವರವರಿವರು
ಅಲ್ಲಲ್ಲ ಇಲ್ಲೆಂದು ತೋರಿ ದಾರಿ ಕೆಲವರು
ಅಲ್ಲರ್ಧ ಹೆಜ್ಜೆ ಇಲ್ಲರ್ಧ ಮೊತ್ತ ಇದ್ದಲ್ಲೇ
ನಿಂತಲ್ಲೆಲ್ಲಿ ನಿಲುವುದು ತಳ್ಳಾಟದ ಮಧ್ಯೆ ||

ನನ್ನೇ ತೋರುವೆನೆಂದು ಪಣ ತೊಟ್ಟವರ
ನಂಬದಿರಲೆಂತು ನಂಬಿ ನಡೆದಿದ್ದುಂಟು
ನಾನು ನಾನೆಂದರು ಕಂಡ ಕಲ್ಲುಗಳೆಲ್ಲ
ನಾನಲ್ಲವೆನಲು ಬಿಡದ ಮಾಯೆಯ ಸೊಲ್ಲು ||

ನಡೆದು ದಣಿದು ಸಾಕಾಗಿ ಕೂತರು ಸುಸ್ತಾಗಿ
ನನ್ನ ಕಾಣದ ನಿಟ್ಟುಸಿರು ನಿರಾಶೆ ಕೊರಗಲಿ
ನಾನಾದವರೊಬ್ಬರನು ಕಾಣದ ಚಿತ್ರಪಠ
ಅಂತೆಕಂತೆಗಳಂತೆ ಕಾಣುತಲಿ ನಿರ್ವಾತ ||

ಕುಕ್ಕರಿಸಿ ಕೂತೆ ತಲೆ ತಗ್ಗಿಸಿ ನಿರಾಶಾಜನಕ
ತಟ್ಟನೆ ಕಂಡಿತಲ್ಲೆ ನನ್ನೊಳಗೇನೊ ಪುಳಕ
ತಗ್ಗಿದ ತಲೆಗೆ ಕಂಡಿತ್ತಲ್ಲಿ ಒಳಗಿನ ನಾನು
ಇರುವೆಡೆಯ ಬಿಟ್ಟಿಲ್ಲದೆಡೆಗೆ ಹುಡುಕಿ ಬೇಸ್ತು ||

– ನಾಗೇಶ ಮೈಸೂರು