00652. ರಾಜಣ್ಣನ ಹತ್ತು ವರ್ಷದ ದೂರ..


00652. ರಾಜಣ್ಣನ ಹತ್ತು ವರ್ಷದ ದೂರ..
____________________________

  
(Picture source : one India )

ಕೈ ಬೀಸಿ ನಡೆದೆ ನೀನು
ಬಂಗಾರದ ಮನುಷ್ಯ
ಮಾಡಿಟ್ಟು ಕನ್ನಡ ಸಿನಿಮಾ
ನೀನಾಳಿದ ಸಾಮ್ರಾಜ್ಯದ ಸಂಭ್ರಮ || ಕೈ ಬೀಸಿ ||

ಹತ್ತಾಯಿತು ನೋಡಿಗಾಗಲೆ
ಯಾಕೋ ಹತ್ತಿಲ್ಲವಿನ್ನು ಈ ತಲೆಗೆ!
ನೀನಿಲ್ಲಿಲ್ಲ ಎನ್ನುವ ಸತ್ಯ
ಏರಬಿಡದ ನೆನಪಿನ ಭತ್ಯ ! || ಕೈ ಬೀಸಿ ||

ಬಿಡಲೆಲ್ಲಿ ಸಿನಿಮಾ ಸಾಲು
ಟಿವಿ ಪರದೆ ಮೊಬೈಲು ಹಾಲು
ಗುಣುಗುಣಿಸುತಿರೆ ನಿನ್ನದೇ ಧ್ಯಾನ
ನೀ ಹೋದೆಯೆಂದು ಹೇಗೆ ನಂಬೋಣಾ ? || ಕೈ ಬೀಸಿ ||

ನೀ ಬರೆದು ಹೋದೆ ಸುವರ್ಣ ಯುಗ
ತುಂಬಿಲ್ಲ ಇನ್ನು ಬಿಟ್ಟು ಹೋದ ಜಾಗ
ಬಂದರು ಹೋದರು ನೂರಾರು
ಮೂರು ದಿನದ ಸವಕಲು ತೇರು.. || ಕೈ ಬೀಸಿ ||

ಬಂದವರು ಜಪಿಸುತ ನಿನ್ನನೆ
ನಿನ್ನಭಿಮಾನಿಗಳ ಎದೆಯೊಳಗೆ
ತಾವಿಗಿಷ್ಟು ತಪಿಸುತಲೇ ಇಹರು
ದೇವತಾಮನುಷ್ಯ ನೀನೆಂದರಿಯದೆ.. || ಕೈ ಬೀಸಿ ||

– ನಾಗೇಶ ಮೈಸೂರು

00651. ಹನಿಗಳು – ೧೧.೦೪.೨೦೧೬


00651. ಹನಿಗಳು – ೧೧.೦೪.೨೦೧೬
_________________________

(೦೧)
ವರುಣನೊಡಲು
ಕಡೆದಾ ಅಲೆ ಕೊಸರು
ಒಗೆದರು ತೀರಕೆ ತೆರೆಯಾಗಿ
ಮತ್ತೆ ಮರಳುವ ಕುಹಕ
– ಸುಖ ದುಃಖ.

(೦೨)
ಸಾವಿನ ಸುದ್ಧಿ
ಮನ ಗುದ್ದಿದ ಗಳಿಗೆ
ಲೊಚಗುಟ್ಟುತ ಸಾವಿನ ಮನೆ
ದಹಿಸುತಿರೆ ಹೊಟ್ಟೆಯುರಿ
– ಹಾಳು ಹಸಿವು.

(೦೩)
ಚೆಲ್ಲು ಚೆಲ್ಲು ಹುಡುಗಿ
ಅನುಮಾನದ ಗುಟುಕು
ಮೊದಲವನಾ, ಕೊನೆಯವನಾ ?
ತನಗೆಷ್ಟನೆಯವಳವಳು ?
– ಕಾಣದ ಬೆನ್ನು.

(೦೪)
ಶೀಲ ಪವಿತ್ರ
ಕಾದುಕೊಳ್ಳಬೇಕು ಜತನ
ಉಪದೇಶ ಕಾಪಿಡೆ ಕನ್ನೆತನ..
ಗುಟ್ಟಿನ ಮನದ ವ್ಯಾಪಾರ ?
– ಪರವಾಗಿಲ್ಲ!

(೦೫)
ನ್ಯಾಯಾ ನೀತಿ
ನಿಜಾಯಿತಿ ಎಲ್ಲಾ ಸರಿ
ಬರಿ ಮಾತಲಿ ಪುಟ ಪಠದಲಿ
ಮುರಿ ನಿಯಮ ಗುಟ್ಟಲಿ
– ಕಾಣದಿದ್ದರೆ ಸರಿ !

(೦೬)
ಕಪಟ ವಂಚನೆ ಮೋಸ
ಗಳಿಸು ಹೇಗಾದರು ಸರಿ
ಹೊಗಳುವರೆಲ್ಲ ಚಾಣಾಕ್ಷ ಚತುರ
ತಪ್ಪು ದಾರಿಯಲ್ಲ ಅಡಚಣೆ
– ಸಿಕ್ಕಿಬೀಳದಿದ್ದರೆ ಸರಿ !

(೦೭)
ಹೋದರೆ ಹೋಗಲಿ
ಮಾನ ಮರ್ಯಾದೆ
ಗೊತ್ತಾಗಬಾರದು ಹೊರಗೆ
ಆದರಾಗಲಿ ಅವಮಾನ
– ಗುಟ್ಟಲೆಲ್ಲಾ ಸಹ್ಯಾ!

– ನಾಗೇಶ ಮೈಸೂರು

00650. ಹಾಯ್ಕು – ೧೧.೦೪.೨೦೧೬


00650. ಹಾಯ್ಕು – ೧೧.೦೪.೨೦೧೬
____________________________

(೦೧)
ಪ್ರಾಸಕೆ ದಾಸ್ಯ
ಕವಿಗಂಟಿದ ಶಾಪ
– ಬೆಳೆದಾಗಲೇ..

(೦೨)
ಕವಿಯ ಮೋಹ
ಅಂತರಂಗ ಮುಚ್ಚಿಸೋ
– ಬಾಹ್ಯ ಸೌಂದರ್ಯ…

(೦೩)
ಯುದ್ದ ಗೆದ್ದರು
ಹೆಣ್ಣಿನ ಸಲುವಾಗಿ
– ನಂತರ ಬಂಧಿ..

(೦೪)
ಸ್ವಾಭಿಮಾನದ
ಬಡತನ ಬದುಕು
– ಬಿಟ್ಟುಕೊಡದು..

(೦೫)
ಬೇಡವೆಂದರು
ಹಂಗಿನರಮನೆಯೆ
– ನಮ್ಮ ಬದುಕು..

(೦೬)

ನಿಲ್ಲಬೇಕಲ್ಲ
ನಮ್ಮ ಕಾಲಿನ ಮೇಲೆ
– ಹುಡುಕಿ ಜೀತ..

(೦೭)
ಬಾಸಿನ ಮಾತು
ತಲೆದೂಗಿಸೊ ಕುರಿ
– ಮನೆಯ ಹುಲಿ…

(೦೮)
ದುರುಪಯೋಗ
ಮಾಡಬಾರದು ನಿಜ
– ಬಿಟ್ಟಿ ಸಿಕ್ಕರೆ ?

(೦೯)
ನಮ್ಮನೆ ಕಸ
ಹೊರ ಬಿದ್ದರೆ ಸರಿ
– ಬಿದ್ದು ಬೀದಿಗೆ..

(೧೦)
ಹಸಿವಿಗಿಂತ
ತೃಷೆ ತೀರಿಸೋ ಹಮ್ಮು
– ದೌರ್ಜನ್ಯ ಕದ..

– ನಾಗೇಶ ಮೈಸೂರು