00660. ಪ್ರಣಯೋನ್ಮಾದ ಪ್ರಕೃತಿ..


00660. ಪ್ರಣಯೋನ್ಮಾದ ಪ್ರಕೃತಿ..
_____________________  

 (Picture source: http://photos1.blogger.com/x/blogger/3477/2535/1600/929360/hebbar%201.jpg)

ಉನ್ಮಾದದ ರುದ್ರವೀಣೆ ನುಡಿಸಿದ ಝೇಂಕಾರ
ಕಾಮನೆಯೊಳತೋಟಿ ಮಿಡಿಯೆ ಅವತರಿಸಿ ತದ್ಭಾವ
ಪ್ರೇಮದ ಸೆರಗುಟ್ಟ ಹಸಿರು, ಗುಟ್ಟಲಿಟ್ಟು ಬಿಸಿಯುಸಿರು
ಆಷಾಢಭೂತಿ ಪ್ರಕೃತಿ, ಬೆತ್ತಲಾಗದು ನೈಜತೆ ಬಸಿರು ..

ಗರ್ಭದೊಳಗಗರ್ಭ ಸಿರಿ, ಬೀಜ ಬಿತ್ತನೆ ಐಸಿರಿ
ಜಯಾಪಜಯೋನ್ಮಾದ, ಸಂಗಮ ಶಿಶು ಸಂವಾದ
ನೆಡಲಷ್ಟಿಷ್ಟು ಸಸಿ ಮರ ಗೋಪುರ ಹೆಸರಿನ ಹಮ್ಮು
ಒಡಲೊಳಗಿನದೇನೊ ಕಾಡುವ ಕೂಡುವ ತಪನೆ…

ಕಂಡಕಂಡಲ್ಲೆಲ್ಲ ಬರೆದಿಟ್ಟು ಹೋಗೆ ಅವಸರ
ಹೆಸರಾಗುವುದೇ ? ಉಳಿವುದೇ ? ಅರಿವೂ ಅಗೋಚರ
ಯಾಕೀ ಧಾವಂತ ಎಲ್ಲೆಡೆ? ಸಹಿಯಾಗುವ ತೆವಲು
ಯಾರ ಪಾಲಿನ ದವಸ , ಯಾರಿಗೋ ದಕ್ಕುವ ನಿಶ್ಚಿತ

ಪ್ರೀತಿ ಪ್ರೇಮ ಪ್ರಣಯ ಕಲಶ ಯಾಕೀ ಕಾಮದ ರಾಗ ?
ಪ್ರತಿ ಋತುಋತು ಬೆತ್ತಲೆ ಮುಸುಕಿಗಷ್ಟೆ ಗೌರವ ಧನ
ಏನೀ ಉನ್ಮಾದದುರಿ ಬೇಗೆ ? ನಿಸರ್ಗದ ಬಯಲಲ್ಲಿ
ಮನವಾಗಿದೆ ತಾದಾತ್ಮ್ಯಕ ದೂರುವುದಾರನ್ನಿಲ್ಲಿ ?

ಬೆತ್ತಲೆ ಕತ್ತಲೆ ಮನದಾಟ ಕಲಿಸುತೆ ಪರಿಸರ ನೀತಿ
ಕಲಿತೂ ಕಾಣಿಸದಂತೆ ಮುಚ್ಚಿಡಬೇಕು ದೇವಗೆ ಪ್ರೀತಿ
ಹೂವಿನ ದುಂಬಿಯ ಸ್ವೇಚ್ಚೆಯಲ್ಹಾರಾಡುತ ಮನಜಾಣ
ತೋರಿಕೆ ಮುಖವಾಡದ ಕೃತಿಮಕೆ ಮೆಚ್ಚುಗೆ ಕಡಿವಾಣದೆ

– ನಾಗೇಶ ಮೈಸೂರು

00659.ಯಾರೋ ಕಟ್ಟಿದ ಭೂಮಿ…….(01/02)


00659.ಯಾರೋ ಕಟ್ಟಿದ ಭೂಮಿ…….(01/02)
___________________________________
(ಯಾರೋ ಕಟ್ಟಿದ ಭೂಮಿ ದಿಗಿಲುಟ್ಟಿಸಿ ಸ್ವಾಮಿ)

  
(Picture source from : https://en.m.wikipedia.org/wiki/File:The_Earth_seen_from_Apollo_17.jpg)

ಯಾರೋ ಕಟ್ಟಿಸಿಬಿಟ್ಟ ಭೂಮಿ
ದಿಗಿಲುಟ್ಟಿಸಿ ಕಳವಳ ಸ್ವಾಮಿ
ಇರುವುದೆ ಇದ್ದಂತೆ ಆಸಾಮಿ ?
ಹೊತ್ತೋಗದೆಲೇ ತ್ಸುನಾಮಿ! ||

ಈಚೆಗೆ ಜಾಗತಿಕ ಶಾಖವಂತೆ
ಇಂಗಾಲದ ಹೆಜ್ಜೆ ಗುರುತಂತೆ
ಹಸಿರುಮನೆ ಪರಿಣಾಮ ಕಥೆ
ನಮಗೋ ದಿನ ದಿನದ ಚಿಂತೆ 😔||

ಆತಂಕವಾದಿಗಳ ಭೀತಿ ಮದ
ಎಲ್ಲಾಗುವುದೊ ಸ್ಪೋಟ ಸದಾ
ಭೀಕರತೆ ಸಂತೆ ಒಳಗಿಟ್ಟಪಾದ
ಗುಟುಕು ಗುಟುಕಾಗಿ ನುಂಗಿದ 😟||

ಪ್ಲಾಸ್ಟಿಕ್ಕುಮಯ ಜಗ ಹೃದಯ
ಆಧುನಿಕ ನಾಗರಿಕತೆ ಸಮಯ
ವಿದ್ಯುನ್ಮಾನ ತ್ಯಾಜ್ಯ ಪರಿಚಯ
ಪರಿಸರವೆ ಅಡವಿಟ್ಟಾ ವಿಷಯ😒 ||

ಎಸೆದಾಟದ ಕಸ ಕುಪ್ಪೆ ಗುಪ್ಪೆ
ಬೆಳೆಯುತಲೆ ತಟವಟ ತಪ್ಪೆ
ನಮ್ಮಾತ್ಮವಂಚನೆ ಮನ ಕಪ್ಪೆ
ಹೊಸತ ರೋಗಾಣು ಬಂದಪ್ಪೆ 😭||

– ನಾಗೇಶ ಮೈಸೂರು

ಕವಿ ಭಾವ: ಯಾರೊ ಪುಣ್ಯಾತ್ಮರು ಕಟ್ಟ್ಕೊಟ್ಟು ಹೋದ ಭೂಮಿಯಲ್ಲಿ ನಾವು ಜೀವನ ನಡೆಸಲು ಏನೆಲ್ಲ ಅಡ್ಡಿ ಆತಂಕಗಳು! ಕೆಲವು ಮಾನವ ಪ್ರೇರಿತ ಹಾಗೂ ಪೋಷಿತವಾದರೆ, ಇನ್ನು ಕೆಲವು ಪ್ರಕೃತಿ, ನಿಸರ್ಗದ ಆವೇಶದುರಿತ. ಅಂತ ಕೆಲವು ಆತಂಕಗಳ ಪಟ್ಟಿ – ಯಾರೊ ಕಟ್ಟಿಸಿದ ಭೂಮಿ….

00658. ನಮ್ಮ ಚಿತ್ರ ನಿಮ್ಮ ಕವನ – ೩೬ (3K ನಮ್ಮ ಚಿತ್ರ ನಿಮ್ಮ ಕವನ – ೩೬)


00658. ಕಾಲಯಾನದ ಕ(ನ)ಸು
______________________________
(3K ನಮ್ಮ ಚಿತ್ರ ನಿಮ್ಮ ಕವನ – ೩೬) 

 

ಮೊಗ್ಗರಳುವ ಮೊದಲೇ
ಸೋತು ಮಲಗಿಬಿಟ್ಟೆ ಹೀಗೆ
ಕಾಲಯಾನದೆ ನಿದ್ರೆ;
ಹೇಗೊ ಮಾಡಲ್ಹವಣಿಸುತ್ತ
ಕಾಲಯಂತ್ರದ ಮಾದರಿ ನಮೂನೆ.
ಏನಿದ್ದರೇನು ಬಿಟ್ಟರೇನು ಸರಕು ?
ಸಾಕೀ ಗುಜರಿ ಮಾಲು ದಿಮ್ಮಿ ಸರಪಳಿ
ಕೆತ್ತುವೆನದರಲ್ಲೇ ಹೊಸತು
ಖರ್ಚಿಲ್ಲದ ಕಾಲಯಂತ್ರ
ಕಾಸಿಲ್ಲದ ದೂರ ಪಯಣ..
ಕನಿಷ್ಠ ಕನಸಿನಲ್ಲಾದರೂ..!
ಮರೆತು ಹೊಟ್ಟೆ ಬಟ್ಟೆ ಸುಪ್ಪತ್ತಿಗೆ
ಬಿಸಿಲು ಗಾಳಿ ಮಳೆ ಚಳಿ
ಋತುಗಾನದ ತುರ್ತು..
ಎಲ್ಲರೂ ಹೇಳುತ್ತಿದ್ದಾರೆ
ಭವಿತ ಸುಂದರ ಮಧುರವೆಂದು
ತಾಳಲಾಗದೀ ಬೇಗುದಿ ಬದುಕು
ಜಿಗಿದುಬಿಡುವೆ ಆ ಭವಿತಕೆ
ಸಿದ್ದವಾದೊಡನೆ ಕಾಲದ ಹಕ್ಕಿ
ಒಂದೆಟಿಗೆ ದಾಟೆಲ್ಲ ಬವಣೆಗಳ ಕಾಲ
ಸುಖದ ಮಡಿಲಿನ ಚೀಲಕೆ
ನನಸಾಗದಿದ್ದರೇನು ?
ಕನಸಲ್ಲಾದರೂ..

– ನಾಗೇಶ ಮೈಸೂರು

00657. ಹಾಯ್ಕು – ೧೭.೦೪.೨೦೧೬


00657. ಹಾಯ್ಕು – ೧೭.೦೪.೨೦೧೬
____________________

(೦೧)
‘ಚಾರ್’ಲಿ ಚಾಪ್ಲಿನ್
‘ಚಾರೋ ತರಪ್’ ನಗು
– ಮಾತಪಹಾಸ್ಯ !

(೦೨)
ಚಾದರ ಹೊದ್ದು
ಮಲಗಿದ ಹುಡುಗಿ..
– ಮುಗುದೆ ಮೊಗ..!

(೦೩)
ಮುಡಿಮಲ್ಲಿಗೆ
ಗಮಗಮಿಸಬೇಕು..
– ಸವಿ ಮಾತಲಿ..

(೦೪)
ಸುಲಭವಲ್ಲ..
ಬದುಕಲು ಜಿಗುಟು
– ಸೋರೀತು ಜೇನು..

(೦೫)
ಜಗದ ಕೆಳೆ
ಮಗ್ಗದ ನೂಲ ಪರಿ
– ನೇಯ್ದಂತೆ ವಸ್ತ್ರ !

(೦೫)
ಬುಡುಬುಡುಕೆ
ಮಾತುಗಳೇ ಮಡಿಕೆ
– ಹುಡಿ ಸಂಬಂಧ !

(೦೬)
ವಿನಾಕಾರಣ
ದೂರಾಗಿ ಮಾತು ಸ್ತಬ್ಧ..
– ನಾನಾ ಕಾರಣ !

(೦೭)
ಬದುಕಿಗೆಂತ
ಭಾವ ಬಂಧ ಸಂಬಂಧ ?
– ಮಾರಾಟದರ!

(೦೮)
ಇಬ್ಬರ ದೂರ
ಕುದುರೆ ಜೊತೆಗಾರ
– ಚದುರೆ ಗರ !

(೦೯)
ಕದ ತೆರೆದು
ನೋಡುವ ಅವಸರ
– ಗುಟ್ಟು’ಗಳಿಗೆ’!

(೧೦)
ತಣ್ಣನೆ ಕರ
ಹೃದಯ ಬೆಚ್ಚಗಾಗಿ
– ಕೈ ಹಿಡಿದಾಗ!

– ನಾಗೇಶ ಮೈಸೂರು