00665. ಅರ್ಥವಾಗುವುದೇ ಇಲ್ಲ !


00665. ಅರ್ಥವಾಗುವುದೇ ಇಲ್ಲ ! (2 poems)
__________________________________

ಮನಗಳ ನಡುವಿನ ಸಂವಹನದಲ್ಲಿ, ಪರಸ್ಪರರ ನಿರೀಕ್ಷೆಗಳ ಸುತ್ತ ಸುಳಿದಾಡುವ ಪರಿಯಿಂದಾಗಿ ಅದು ಗೆಳೆಯ – ಗೆಳತಿಯರ ಸಖ್ಯದಲ್ಲಿ ತಂದೊಡ್ಡುವ ಸಂಕಷ್ಟ – ಸಂದಿಗ್ದಗಳ ಪರಿಸ್ಥಿತಿ ಕೆಲವೊಮ್ಮೆ ವಿವರಣೆಯ ಎಟುಕಿಗೆ ನಿಲುಕದ್ದು. ಏನೇನೊ ಚದುರಂಗವಾಡಿಸಿ, ಏನೆಲ್ಲಾ ತಪ್ಪೆಣಿಕೆಗಳ ಸುತ್ತ ಸುತ್ತಾಡಿಸಿ, ಹೊಂದಾಣಿಸಿ- ಮುರಿಸಿ , ಮತ್ತದನೆ ಮರುಕಳಿಸಿ, ಯಾತನೆ ಒತ್ತಡಗಳಲಿ ತಡಕಾಡಿಸಿ ಸುಸ್ತು ಮಾಡಿ ‘ಯಾಕಪ್ಪ ಬೇಕೀ ನಂಟು ?’ ಎಂದು ನಿಟ್ಟುಸಿರಿಡುವಂತೆ ಮಾಡಿಸುವ ಅದರ ಸಹವಾಸ ಎಲ್ಲರಿಗೂ ಪರಿಚಿತವೇ. ಅದರಲ್ಲೂ ಹಳಸಿದ ಸಂಬಂಧದ ಪರಿಧಿಯಾಗಿಬಿಟ್ಟರೆ ತಾವಾಗಿಯೇ ಕಟ್ಟಿಕೊಂಡ ಮೌನದ ಬೇಲಿ ದಾಟಲಾಗದೆ, ಏನೇನೊ ಸ್ವಯಂಕಲ್ಪಿತ ಸಂಕೋಲೆಗಳಡಿ ಕೊರಗುತ್ತ, ಪರಸ್ಪರರಿಗೆ ಅರ್ಥವಾಗದವರಾಗುವ ಸಂಬಂಧದ ಸಂಕೀರ್ಣತೆಯ ಒಂದು ಮುಖ – ‘ಅರ್ಥವಾಗದ ಗೆಳೆಯ’ ಕವಿತೆ; ಅದರ ಮತ್ತೊಂದು ಮುಖ ‘ಅರ್ಥವಾಗದ ಗೆಳತಿ’. ಇವೆರಡು ಕವಿತೆಗಳ ಒಟ್ಟಾರೆ ಮಥಿತಾರ್ಥವನ್ನು ಸಾರದಲ್ಲಿ ಹೇಳುವುದಾದರೆ – ಇದೊಂದು ಪರಸ್ಪರರಿಗೆ ಮತ್ತು ಸ್ವತಃ ತಮಗೂ ಸಹ ತಾವೇನೆಂದು ಅರ್ಥವಾಗದವರ ಆಲಾಪ, ಗೋಳು!

  
01. ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ !
________________________________

ಗೆಳತಿ,
ನಿನಗಿದೆಲ್ಲಾ
ಅರ್ಥವಾಗುವುದಿಲ್ಲ !
ಕಾಲಗರ್ಭದ ಆಳದಲೆಲ್ಲೋ
ಹುದುಗಿದ
ನೋವಿನ ಸೆಲೆ
ಬಸಿರಾಗದ ಸಂಕಟಕ್ಕೆ
ಬಿಕ್ಕಳಿಸುತ್ತಿದೆ ;
ಹರವಾದ ಎದೆಗಿತ್ತ
ಗುದ್ದನ್ನೆಲ್ಲಾ ಸಹಿಸಿ –
ನಿಟ್ಟುಸಿರು ನುಂಗುತ್ತ,
ಸಾಯಲಾಗದೆ
ಬದುಕಿದೆ
ಆಗ..
ನೀನಾದರೂ
ಸಂತೈಸಿ
ಜೀವ ಕೊಡುವೆಯೆಂದರೆ –
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

ವೇದನೆಯ ಮಡು
ಇರುಳಾಗಿ ಕಾಡುತಿದೆ
ಕೆಸರಿನಡಿ ಸಿಲುಕಿ
ಕನಸು ಕಣ್ಮರೆಯಾಗಿದೆ..
ಆಳ ಹೊಕ್ಕು ನೋಡಲೆಂದರೆ
ಹೂತು ಹೋಗುವ ಭಯ !
ಸುಮ್ಮನೆ
ಮೌನದ ಸೆರಗ್ಹಿಡಿದೆ..
ನೀ
ಮತ್ತೆ ಮತ್ತೆ ಕಾಡಿದೆ –
‘ಏನಾಗಿದೆ ನಿನಗೆ ?’
ನಾ ಮೌನದಲೇ ಉಸುರಿದೆ
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

– ನಾಗೇಶ ಮೈಸೂರು

02. ಗೆಳೆಯಾ, ನೀ ನನಗರ್ಥವಾಗುವುದೇ ಇಲ್ಲ!
__________________________________

ಸಂಬಂಧಗಳು
ಹುಟ್ಟುತ್ತವೆ, ಸಾಯುತ್ತವೆ
ಭಾವನೆಗಳಂತೆ !
ಭಾವನೆಗಳು
ಅರಳುತ್ತವೆ – ಕಮರುತ್ತವೆ
ಆಸೆಗಳಂತೆ !
ಆಗೊಮ್ಮೊಮ್ಮೆ
ಗಪ್ಪನೆಯ ಏಕಾಂತ
ನೀರವತೆ ಆವರಿಸಿದಾಗ
ಮುಸುಕಿನೊಳಗಿನ
ಸೆಖೆಗೆ ಬೇಸತ್ತು
ಮೆತ್ತನೆಯ ಮಡಿಲನರಸಿ
ನಿನ್ನತ್ತ ನೋಡುತ್ತೇನೆ,
ಕಣ್ಣರಳಿಸುತ್ತೇನೆ,
ಯಾಚಿಸುತ್ತೇನೆ ಗೆಳೆಯಾ ;
ಇದೆಲ್ಲ – ನಿನಗರ್ಥವಾಗುವುದೇ ಇಲ್ಲಾ ||

ಏಕೆ ಇಲ್ಲದ ಚಿಂತೆ-
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ ;
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ –
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ !
ನಾ ಬೇಸರದಲಿ ನುಡಿವೆ –
‘ಗೆಳೆಯ, ನೀ ನನಗೆ ಅರ್ಥವಾಗುವುದೇ ಇಲ್ಲ!’ ||

– ನಾಗೇಶ ಮೈಸೂರು

(picture source from:
http://cdn.tinybuddha.com/wp-content/uploads/2015/03/Toxic-Relationship.jpg)

ಮೆಲ್ಲುಸಿರೆ ಸವಿಗಾನ….!


(Published in today’s nilume : 20.04.2016)

– ನಾಗೇಶ ಮೈಸೂರು ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ …

Source: ಮೆಲ್ಲುಸಿರೆ ಸವಿಗಾನ….!

00664. ಖಾಲಿ ಬಯಲಿನ ಜಾತ್ರೆ..


00664. ಖಾಲಿ ಬಯಲಿನ ಜಾತ್ರೆ..
________________________

 
(Picture source: https://upload.wikimedia.org/wikipedia/commons/b/b9/Camden_Market_is_empty.jpg)

ಉಳಿಸಿ ಹೋಗಿದ್ದೊಂದು ಪರಿ ಯಾತನೆ
ಬರಿ ನೆನಪುಗಳ ಜಾತ್ರೆ ಸಂತೆ
ಭಣಗುಟ್ಟುತಿದೆ ಖಾಲಿ ಬಯಲು
ಕೂತರೂ ಕೊಳ್ಳುವರಿಲ್ಲ, ಮಾರಲೇನು ?

ಬಿಕರಿಗಿಟ್ಟ ಭಾವನೆಗಳ ಹೊಸ ತರಕಾರಿ
ಮೂಟೆ ಗೂಡೆ ಬುಟ್ಟಿಯೆಲ್ಲಾ ಬಿಚ್ಚಿಟ್ಟು
ಅದೇ ಸರಕಾದರು ಎಳಸು, ಹೊಸತು
ಹಾಸಿ ಸುರಿದು ಕೂತರು ದಿಕ್ಕೆಟ್ಟ ಮೌನ..

ಗಮಗಮಿಸುತಿದೆ ಹಣ್ಣು ಹಂಫಲ ಜೀವ
ಭಾವಕೆ ಜೋಡಿ ತಾನಾಗಿ ಒಕ್ಕೊರಳು
ಜೋಡಿಸಿದ ಚಿತ್ತಾರ ರಂಗೋಲಿಯ ಸೆರಗು
ನೆಚ್ಚಿದ್ದೆಂದರು ನೋಡದೆ ಹೋದ ವ್ಯಥೆಯೆಲ್ಲ..

ರಾಶಿ ರಾಶಿ ಅಲ್ಲೇ ಮೊಲ್ಲೆ ಅರಳಿದ ಹೂವು
ಜೀವ-ಭಾವವ ಬೆಸೆಯೊ ನೂಲಿನಂತೆ ಕಾದಿವೆ
ಸುಡುತಿಲ್ಲದ ಬಿಸಿಲು ಬೀಸುತಿದೆ ತಂಗಾಳಿ
ಮೊಗ್ಗ ಹಿಗ್ಗಿನ ಮಳೆ ಹನಿ ತುಂತುರಲು ನೀನಿಲ್ಲ..

ಒಣಗಿ ಕೊಳೆತು ಮುದುಡಿ ಮುರುಟಿ ಹೋದಾವು
ಎಂದಿನಿತೂ ಕನಿಕರವಿರದೆ ನಡೆದ ನಿಶ್ಯಬ್ದದಲಿ
ಹನಿಗಳೆಲ್ಲ ಕಲಸಿ ಅಳಿಸುತಿವೆ ಸೊಗದ ಚಿತ್ತಾರವ
ಅಸಹಾಯಕ ನೋಟ ಉಳಿಸಿ ನಿರ್ವಾತ ಯಾತನೆ..

– ನಾಗೇಶ ಮೈಸೂರು

00663. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೪


00663. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೪ 

ಇಂದಿನ ರೀಡೂ ಕನ್ನಡದಲ್ಲಿ ಪ್ರಕಟಿತ (೨೦.೦೪.೨೦೧೬) 

ಕಗ್ಗಕೊಂದು ಹಗ್ಗ ಹೊಸೆದು