00669. ಅಹಲ್ಯಾ_ಸಂಹಿತೆ_೪೧ (ಕೋಶದ ಜೀವಾವಧಿ ವಿಸ್ತರಣಾ ತಂತ್ರ !) 


00669. ಅಹಲ್ಯಾ_ಸಂಹಿತೆ_೪೧ (ಕೋಶದ ಜೀವಾವಧಿ ವಿಸ್ತರಣಾ ತಂತ್ರ !) 
_______________________________________

(Link to last episode 40: https://nageshamysore.wordpress.com/2016/04/09/00646-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a6-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6%e0%b2%a6/)

ಅಧ್ಯಾಯ – ೧೨
____________

ಅಲ್ಲಿಂದಾಚೆಗೆ ಎಲ್ಲಾ ಕ್ಷಿಪ್ರಗತಿಯಲ್ಲಿ ಸಾಗತೊಡಗಿತು – ಸಮಾನಾಂತರ ಕಿರುಪಥಗಳಲ್ಲಿ. ಗೌತಮ ಊರ್ವಶಿಯ ಮುಖೇನ ಎಲ್ಲರಿಗು ಸುತ್ತೋಲೆ ಕಳಿಸಿ ಸ್ಪಷ್ಟಪಡಿಸುವಂತೆ ಹೇಳಿದ್ದ – ಪ್ರತಿ ತಂಡದ ಪ್ರಯೋಗಕ್ಕೂ ಜೀವಕೋಶದ ಮೂಲಸಿದ್ದಾಂತ ಒಂದೇ ಇರಬೇಕೆಂದು. ಹೀಗಾಗಿ ಯಾರೂ ತಮತಮಗೆ ತೋಚಿದ ವಿಭಿನ್ನ ಹಾದಿ ಹಿಡಿಯದೆ ಒಂದೆ ನೆಲೆಗಟ್ಟಿನ ಮೂಲತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಿತ್ತು. ಇದರಿಂದಾಗಿ ಸ್ಥಳೀಯವಾಗಿ ತಾತ್ಕಾಲಿಕ ವೇಗದ ಕುಂಠಿತವಾಗುವುದಾದರು ತದನಂತರದ ಕ್ಲೇಷಗಳಿಗೆ ಆರಂಭದಲ್ಲೇ ತಡೆ ಹಾಕಲು ಇದೇ ಸೂಕ್ತ ದಾರಿಯಾಗಿತ್ತು. ಆದರು ಅವರೆಲ್ಲ ತಂತಮ್ಮ ಪ್ರಯೋಗಗಳನ್ನು ಸೀಮಿತ ಮಟ್ಟದಲ್ಲಿ ಸದ್ಯದ ಮಾದರಿಯ ಆಧಾರದಲ್ಲೇ ನಡೆಸಿಕೊಳ್ಳುತ್ತ ಪೂರ್ವಸಿದ್ದತಾ ತೀರ್ಮಾನಗಳನ್ನು , ಅಂತಿಮ ಪ್ರಯೋಗದ ಸಿದ್ದತೆಯ ರೂಪುರೇಷೆಗಳನ್ನು ಮಾಡಿಕೊಳ್ಳಲು ಅಡ್ಡಿಯಿರಲಿಲ್ಲ.

ಈ ಅವಸರದ ಪ್ರತಿಬಂಧಕವನ್ನು ಅಳವಡಿಸಿಕೊಂಡಾದ ಮೇಲೆ ಪ್ರತಿತಂಡದಿಂದಾಯ್ದ ಎಲ್ಲಾ ಜೀವಕೋಶ ತಜ್ಞರ ತಂಡದ ಸಮಷ್ಟಿತ ಗುಂಪಿನ ಜತೆ ಪ್ರಮುಖ ಅಂಶದ ಮೊದಲ ಹಂತದ ಪ್ರಯೋಗ ಆರಂಭವಾಯ್ತು. ಗೌತಮನೆ ಅದರ ಮುಂದಾಳತ್ವ ವಹಿಸಿ ಕೆಲವು ಖಚಿತ ಗುರಿಗಳನ್ನು ನಿಗದಿಪಡಿಸಿ, ಪ್ರತಿ ಗುರಿಗೂ ಒಂದೊಂದು ಸಣ್ಣಗುಂಪನ್ನು ಪುನರ್ವಿಂಗಡಣೆ ಮಾಡಿ ಪ್ರತಿಯೊಬ್ಬರೂ ಒಂದು ವಿಷಯದ ಮೇಲೆ ಮಾತ್ರ ಕಾರ್ಯ ನಿರ್ವಹಿಸುವಂತೆ ಆಯೋಜಿಸಿದ. ಆ ಪ್ರಮುಖ ವಿಷಯಗಳು ಅವರು ಅದುವರೆವಿಗೂ ಚರ್ಚಿಸಿ ನಿರ್ಧರಿಸಿದ ವಿಷಯಗಳ ಸಾರವೇ ಆಗಿತ್ತು.

೧. ಮೊದಲ ಕಿರುತಂಡ : ಎರಡು ವಿಭಿನ್ನ ಸ್ತರದ ಜೀವಕೋಶಗಳನ್ನು ಕಸಿ ಮಾಡುವುದು ಮತ್ತು ಪರಿಪೂರ್ಣವಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಹೊಸ ಸಂಯುಕ್ತ ಜೀವಕೋಶದ ಸೃಷ್ಟಿ ಮಾಡುವುದು ಮತ್ತದರ ಬೀಜವಿನ್ಯಾಸವನ್ನು ಸಿದ್ದಪಡಿಸುವುದು ( ಅದನ್ನು ಪ್ರತಿ ತಂಡವೂ ತಮ್ಮ ಕ್ಷೇತ್ರಕ್ಕೆ ಅಳವಡಿಸಿಕೊಳ್ಳುವ ಹಾಗೆ).

೨. ಎರಡನೆ ಕಿರುತಂಡ : ಜೀವಕೋಶದ ಆಯಸ್ಸು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಿ ಅದರ ಮೂಲಸಿದ್ದಾಂತದ ಅಳವಡಿಕೆಯ ಸಾಧ್ಯತೆಯ ಪ್ರಯೋಗ ನಡೆಸುವುದು. ಪ್ರಯೋಗದ ಪೂರಕ ಫಲಿತಾಂಶವನ್ನು ಹೊಸತಾಗಿ ಸೃಜಿಸಿದ ಜೀವಕೋಶಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಬೀಜವಿನ್ಯಾಸವನ್ನು ಸಿದ್ದಪಡಿಸುವುದು.

೩. ಮೂರನೆ ಕಿರುತಂಡ : ಜೀವಕೋಶದ ಸ್ವಯಂ-ನಿಯಂತ್ರಣ ಸಾಧ್ಯವಾಗುವಂತಹ ಸ್ವಯಂಭುತ್ವದ ಪರಿಶೀಲನೆ, ಪ್ರಯೋಗ ನಡೆಸಿ ಅದರ ಪೂರಕ ಫಲಿತಾಂಶವನ್ನು ಮೂಲಸಿದ್ದಂತದ ರೂಪದಲ್ಲಿ ಕಸಿ ಮಾಡಿದ ಹೊಸ ಜೀವಕೋಶಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಬೀಜವಿನ್ಯಾಸವನ್ನು ಸಿದ್ದಪಡಿಸುವುದು.

೪. ನಾಲ್ಕನೇ ಕಿರುತಂಡ: ಮಿಕ್ಕ ಮೂರರ ಫಲಿತವನ್ನು ಸಂಯುಕ್ತ ರೂಪದಲ್ಲಿ ಕ್ರೋಢೀಕರಿಸಿ ಹೊಸದಾಗಿ ಕಸಿಯಾದ ಕೋಶದಲ್ಲಿ ಸೂಕ್ತವಾಗಿ ಅಳವಡಿಸಿ, ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆ. ಜತೆಗೆ ನಂತರದ ಹಂತದ ಪ್ರಯೋಗಗಳಿಗೆ ಮತ್ತದರ ತಂಡಗಳ ಅಗತ್ಯಗಳಿಗೆ ಅನುಸಾರವಾಗಿ ಸೂಕ್ತ ಹೊಂದಾಣಿಕೆ, ಮಾರ್ಪಾಡುಗಳನ್ನು ನೋಡಿಕೊಳ್ಳುವ ಜವಾಬ್ದಾರಿ. ಈ ನಾಲ್ಕನೇ ತಂಡವನ್ನು ಸ್ವತಃ ಗೌತಮನೆ ಮುನ್ನಡೆಸಲು ನಿರ್ಧರಿಸಿದ್ದ.

ಈ ಹಂತದ ನಾಲ್ಕು ಕಿರುತಂಡಗಳ ಕಾರ್ಯ ಮುಗಿಯುತ್ತಿದ್ದಂತೆ ಎರಡನೆ ಹಂತದಲ್ಲಿ ಪ್ರತಿಯೊಬ್ಬರೂ ಅದರ ಫಲಿತವನ್ನು ಬಳಸಿ, ಯಥಾನುಸಾರ ಅಳವಡಿಸಿಕೊಂಡು ತಂತಮ್ಮ ಸಂಶೋಧನೆಯನ್ನು ಮುಂದುವರೆಸಬೇಕೆಂದು ಈಗಾಗಲೇ ನಿರ್ಧರಿಸಿಯಾಗಿದ್ದ ಕಾರಣ ಎಲ್ಲರೂ ಈ ಹಂತದ ಫಲಿತಕ್ಕೆ ಕಾತರದಿಂದ ಕಾಯುವ ಸ್ಥಿತಿ ನಿರ್ಮಾಣವಾಗಿಹೋಗಿತ್ತು.

ಇಷ್ಟೆಲ್ಲಾ ಸಿದ್ದತೆಗಳಾದ ಬಳಿಕ ಎಲ್ಲಾ ನಾಲ್ಕು ತಂಡಗಳು ತಂತಮ್ಮ ವ್ಯಾಪ್ತಿಯಲ್ಲಿ ಕಾರ್ಯಯೋಜನೆಯನ್ನು ಆರಂಭಿಸಿಬಿಟ್ಟವು – ಸಾಧ್ಯವಿದ್ದಷ್ಟು ವೇಗದಲ್ಲಿ. ಆ ವೇಗದ ತೀವ್ರತೆ ಎಷ್ಟಿತ್ತೆಂದರೆ ಅದರಲ್ಲಿ ತೊಡಗಿಸಿಕೊಂಡವರಾರಿಗು ಸಮಯ ಕಳೆದುದಾಗಲಿ, ಉರುಳಿದ್ದಾಗಲಿ ಅರಿವಿಗೆ ನಿಲುಕದಷ್ಟು ಕ್ಷಿಪ್ರವಾಗಿ. ಅದನ್ನು ಅದ್ಭುತವಾಗಿ ಸಂಯೋಜಿಸಿ, ಸೂತ್ರಧಾರಿಯಂತೆ ಪ್ರತಿಯೊಂದು ಕೊಂಡಿಯನ್ನು ಅಚ್ಚುಕಟ್ಟಾಗಿ ಸಮಷ್ಟಿಸುತ್ತ ನಿಭಾಯಿಸಿಕೊಂಡು ಹೋದ ಗೌತಮನಿಗೆ ನಿಜಕ್ಕೂ ಬೆನ್ನೆಲುಬಾಗಿ ಸಹಕರಿಸಿದವಳು ಊರ್ವಶಿಯೆ. ಆದರೆ ಗೌತಮನ ನಿರೀಕ್ಷೆಗೂ ಮೀರಿದ ಅಮೋಘ ಸಹಕಾರ ದೊರಕಿದ್ದು ದೇವರಾಜನ ಮೂಲಕ. ಎಲ್ಲಾ ಬಿಡಿ ಭಾಗಗಳು ಯಾವ ರೀತಿಯ ಕೊಂಡಿಯಲ್ಲಿ ಸಂಪರ್ಕವಿರಿಸಿಕೊಳ್ಳಬೇಕು, ಯಾವ ರೀತಿ ಸಂವಹಿಸಬೇಕು, ಹೇಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು, ಹೇಗೆ ಸಹಕರಿಸಬೇಕು – ಎಂಬೆಲ್ಲಾ ಮೂಲ ನೀತಿಸಂಹಿತೆಯನ್ನು ರೂಪಿಸಿ ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಯೋಜನೆ ರೂಪಿಸಿ, ಹಾಗೆಯೇ ನಡೆಯುವಂತೆ ನೋಡಿಕೊಂಡವನು ಅವನೇ. ಅವನ ಶಿಸ್ತುಬದ್ಧ ವ್ಯವಸ್ಥಾಪಕ ವಿಧಾನಕ್ಕೆ ಮಾರುಹೋದ ಗೌತಮನೂ, ಮೊದಲಿಗಿಂತ ಹೆಚ್ಚಾಗಿಯೇ ಅವನ ಸಲಹೆ, ಸಹಕಾರದ ನೆರವು ಪಡೆಯತೊಡಗಿದ.

************

ಸಮಯ ಉರುಳಿದಂತೆ ಸಂಶೋಧನೆಯ ಪ್ರಯೋಗಗಳೆಲ್ಲ ಭರದಿಂದ ಸಾಗತೊಡಗಿದ್ದವು – ನಿರೀಕ್ಷೆಗೂ ಮೀರಿದ ವೇಗದಲ್ಲಿ ಫಲಿತಾಂಶ ನೀಡುತ್ತ. ಅದರಲ್ಲೆಲ್ಲ ಪ್ರಮುಖವಾದದ್ದೆಂದರೆ ಮೊದಲ ಕಿರುತಂಡದ ಜೀವಕೋಶದ ಕಸಿಮಾಡುವ ಪ್ರಯತ್ನ. ಉಚ್ಚೈಶ್ರವಸ್ಸನ್ನು ಸೃಜಿಸಿದ ಮಾದರಿಯಲ್ಲಿ ಊರ್ವಶಿಯ ಉನ್ನತ ಶ್ರೇಣಿಯ ಪರಿಪಕ್ವ ಜೀವಕೋಶದ ತಳಿಯನ್ನು ಚಾಲ್ತಿಯಲ್ಲಿರುವ ಅಪಕ್ವ ಜೀವಕೋಶದ ತಳಿಯ ಜೊತೆ ಸಮೀಕರಿಸಿ ಕಸಿ ಮಾಡಬೇಕಿತ್ತು. ಆದರೆ ಆಗ ಮೊದಲು ಎದುರಾದ ಪ್ರಶ್ನೆ – ಊರ್ವಶಿಯ ಕೋಶದ ಜತೆ ಕಸಿ ಮಾಡಲು ಯಾರ ಕೋಶ ಬಳಸುವುದು? ಎಂದು.

” ನಮ್ಮ ಸಂಶೋಧನೆಯ ಪ್ರಗತಿಗೆ ಇದು ಬಹು ಮುಖ್ಯ ಅಂಶ.. ಊರ್ವಶಿಯ ತಳಿಯ ಶ್ರೇಷ್ಠತೆ ಬಗ್ಗೆ ಎರಡು ಮಾತಿಲ್ಲ. ಆದರೆ ಅದರ ಜತೆಗೆ ಹೊಂದಾಣಿಸುವ ಕೋಶದ ಪಕ್ವತೆ ಅಥವಾ ಸಿದ್ದತೆ ತೀರಾ ಕನಿಷ್ಠ ಮಟ್ಟದ್ದಾದರೆ, ನಾವು ನಡೆಸಬೇಕಾದ ಕಸಿ ಆವರ್ತಗಳ ಸಂಖ್ಯೆ ಹೆಚ್ಚಾಗಬೇಕಾಗುತ್ತದೆ. ಅರ್ಥಾತ್ ಮೊದಲ ಯತ್ನದಲ್ಲಿ ಸಿಕ್ಕ ಯಶಸನ್ನು ಮೂಲವಸ್ತುವನ್ನಾಗಿಸಿಕೊಂಡು ಎರಡನೆ ಪ್ರಯೋಗ, ತದನಂತರ ಅದೇ ರೀತಿ ಮೂರು, ನಾಲ್ಕು, ಐದನೆಯದನ್ನು ನಡೆಸಬೇಕಾಗುತ್ತದೆ – ನಾವು ಎದುರು ನೋಡುತ್ತಿರುವ ಅಂತಿಮ ಫಲಿತಾಂಶವನ್ನು ಸಾಧಿಸುವತನಕ. ಆದರೆ ಆರಂಭದಲ್ಲಿಯೇ ಸಾಧ್ಯವಾದಷ್ಟು ಉತ್ತಮ ತಳಿಯನ್ನು ಬಳಸಲು ಸಾಧವಾಗುವುದಾದರೆ ಆ ಆವರ್ತಗಳ ಸಂಖ್ಯೆಗೆ ಕಡಿವಾಣ ಹಾಕಬಹುದು..” ಎಂದು ಮಾತಿಗಾರಂಭಿಸಿದ ಗೌತಮ. ಯಾರ ಕೋಶ ಬಳಸಬೇಕೆಂಬುದರ ಚರ್ಚೆಗಾಗಿಯೇ ಆ ಸಭೆ ಕರೆಯಲಾಗಿತ್ತು ಬ್ರಹ್ಮದೇವ, ದೇವರಾಜ, ಸೂರ್ಯದೇವ, ಗೌತಮ ಮತ್ತು ಊರ್ವಶಿಯರ ಉಪಸ್ಥಿತಿಯಲ್ಲಿ.

ಗೌತಮನ ಪ್ರಶ್ನಾರ್ಥಕ ಮಾತಿನಿಂದ ಆರಂಭವಾದ ಈ ಸಂವಾದ ಪರಸ್ಪರರ ಅಭಿಪ್ರಾಯ, ಆಲೋಚನೆಗಳನ್ನು ಮಂಡಿಸುವ ಧೀರ್ಘ ಚರ್ಚೆಯಾಗಿ ಪ್ರತಿ ಸಾಧ್ಯತೆಯ ಸಾಧಕ ಬಾಧಕಗಳ ಮಂಡನೆ, ತುಲನೆಯ ಅಖಾಡವಾಗಿ ಪರಿವರ್ತಿತವಾಗಿತ್ತು. ಆವರ್ತನ ಯತ್ನಗಳ ಗಣನೆಯನ್ನು ಲೆಕ್ಕಿಸದೆ ಯಾವುದಾದರೊಂದು ಆಯ್ಕೆಯೊಡನೆ ಮುಂದುವರೆಯಬೇಕೆಂಬುದು ದೇವರಾಜನ ಅಭಿಪ್ರಾಯವಾಗಿದ್ದರೆ ಸೂರ್ಯದೇವನದು ಅದಕ್ಕೆ ತದ್ವಿರುದ್ಧವಾದ ಉತ್ಕೃಷ್ಟವಾದ ಆಯ್ಕೆಯನ್ನೇ ಪರಿಗಣಿಸಬೇಕೆಂಬ ವಾದವಾಗಿತ್ತು.

” ಸೂರ್ಯದೇವ..ನಿನ್ನ ಮಾತು ಕೇಳುತ್ತಿದ್ದರೆ, ನಿನ್ನ ಮನದಲ್ಲಾಗಲೇ ಯಾವುದೋ ಒಂದು ಆಯ್ಕೆಯ ಸಾಧ್ಯತೆಯನ್ನು ಪರಿಗಣಿಸಿಕೊಂಡೆ ಈ ಮಾತಾಡುತ್ತಿರುವಂತಿದೆ. ಹಾಗೇನಾದರು ಇದ್ದಲ್ಲಿ ಸೂಚಿಸಬಹುದಲ್ಲ ?” ಎಂದು ಸೂರ್ಯದೇವನನ್ನೆ ಪ್ರಚೋದಿಸಿದ ದೇವರಾಜ.

ಅವನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ, “ಇರುವುದೇನೋ ನಿಜವೇ ಮಹೇಂದ್ರ.. ಬ್ರಹ್ಮದೇವನ ಅಭ್ಯಂತರವೇನು ಇಲ್ಲವೆಂದಾದರೆ ನನ್ನ ಅನಿಸಿಕೆಯನ್ನು ನಿವೇದಿಸಿಕೊಳ್ಳಬಲ್ಲೆ..” ಎಂದ ಸೂರ್ಯ.

” ಇಲ್ಲಿ ಬಿಚ್ಚು ಮಾತಿನ ಅಭಿಪ್ರಾಯ ಮಂಡನೆಗೆ ಯಾವತ್ತೂ ಅಡ್ಡಿ ಆತಂಕಗಳಿರುವುದಿಲ್ಲ ಸೂರ್ಯದೇವ.. ನಿನ್ನ ಅಭಿಪ್ರಾಯವನ್ನು ನಿರಾಳವಾಗಿ ಹೇಳುವಂತವನಾಗು” ಎಂದು ಸ್ವತಃ ಅನುಮತಿಯಿತ್ತ ಬ್ರಹ್ಮದೇವ.

“ಬ್ರಹ್ಮದೇವಾ.. ಇದರಲ್ಲಿ ಯೋಚಿಸಿ ಹೇಳಲಿಕ್ಕೆ ತಾನೇ ಏನಿದೆ? ಈ ಸಂಶೋಧನೆಯ ಪ್ರಮುಖ ರೂವಾರಿ ನೀನೆ ತಾನೇ ? ನಮ್ಮಲ್ಲಿರುವ ಯಾವುದೇ ವ್ಯಕ್ತಿಯನ್ನು ಪರಿಗಣಿಸಿದರೂ ಅದರಲ್ಲಿ ವಯೋವೃದ್ಧ, ಜ್ಞಾನವೃದ್ಧಾ, ಅನುಭವಿ ಮತ್ತು ಪರಿಪಕ್ವ ವ್ಯಕ್ತಿತ್ವವೆಂದರೆ ನಿನ್ನದೇ ತಾನೇ? ಪ್ರಯೋಗದ ಒಡೆತನವೂ ನಿನ್ನದೇ ಆಗಿರುವುದರಿಂದ ಈ ತಳಿ ಕಸಿಗೆ ಬೇಕಾದ ಜೀವಕೋಶ ನಿನ್ನದೇ ಏಕಾಗಬಾರದು ? ನಿನಗಿಂತಲೂ ಉತ್ಕೃಷ್ಠ ಮಟ್ಟ ಇಲ್ಲಿ ಸಿಕ್ಕುವುದಾದರೂ ಉಂಟೆ..? ನನ್ನ ಅಭಿಪ್ರಾಯದಲ್ಲಿ ಇದು ಚರ್ಚೆಯ ವಿಷಯವೇ ಅಲ್ಲ.. ನೀನೆ ಇದರ ಪೂರಕ ಶಕ್ತಿಯಾದರೆ ಎಲ್ಲವೂ ಬಗೆಹರಿದಂತೆ. ನೀನು ಸೃಷ್ಟಿಕರ್ತನ ಹೊಣೆಗಾರಿಕೆ ಹೊತ್ತವನಾದ ಕಾರಣ ಇದು ನಿನಗೆ ಹೊಂದಿಕೆಯೂ ಆಗುತ್ತದೆ.. ಈ ಸಂಶೋಧನೆಯಲ್ಲಿ ಫಲಿತವಾಗಿ ಬರುವ ಜೀವಿಗೆ ನೀನು ಜೈವಿಕ ಮತ್ತು ಮಾನಸ ಪಿತೃವಾಗಿಬಿಡುವುದರಿಂದ ನಿನ್ನದೇ ಸಂತತಿಯ ಅನಾವರಣವಾದಂತಾಗುತ್ತದೆ – ಉತ್ಕೃಷ್ಟ ತಳಿಯ ರೂಪದಲ್ಲಿ..” ಎಂದು ತನ್ನ ವಾದವನ್ನು ಬಲವಾಗಿಯೇ ಮಂಡಿಸಿದ ಸೂರ್ಯದೇವ.

ಸೂರ್ಯನ ಈ ಅಭಿಪ್ರಾಯ ಎಲ್ಲರಿಗು ಚೆನ್ನಾಗಿ ಹಿಡಿಸಿಬಿಟ್ಟಿತು. ದೇವರಾಜನಂತು ಬಹಿರಂಗವಾಗಿಯೆ ಸೂರ್ಯದೇವನನ್ನು ಅಭಿನಂದಿಸಿಬಿಟ್ಟ. ಗೌತಮನ ಮನಸಿನಲ್ಲೂ ಹೆಚ್ಚುಕಡಿಮೆ ಇದೇ ಅಭಿಪ್ರಾಯವಿದ್ದ ಕಾರಣ ಇದು ಅವನಿಗೂ ಸಮ್ಮತವೇ ಆಗಿತ್ತು. ಮಿಕ್ಕವರಲ್ಲಿ ಊರ್ವಶಿಗೆ ಅದರ ಕುರಿತೂ ಯಾವ ಅಭಿಪ್ರಾಯವೂ ಇರಲಿಲ್ಲ; ಯಾರಾದರೇನು , ಎಲ್ಲವೂ ಸರಿಯೇ ಎನ್ನುವ ನಿರ್ಲಿಪ್ತ ಧೋರಣೆಯಲ್ಲಿ. ಬ್ರಹ್ಮದೇವ ಮಾತ್ರ ಆ ಕುರಿತು ತುಸು ತೀವ್ರವಾಗಿ ಆಲೋಚಿಸಿದಂತಿತ್ತು. ಯಾವ ಕೋನದಿಂದ ನೋಡಿದರೂ ಅವನಿಗೂ ಸೂರ್ಯನ ಮಾತಿನಲ್ಲಿ ತಥ್ಯವಿದೆಯೆನಿಸುತ್ತಿತ್ತು. ಜತೆಗೆ ಸೃಷ್ಟಿಕರ್ತನಾಗಿ ಅದು ತನ್ನ ಜವಾಬ್ದಾರಿಯಾದ ಕಾರಣ ಅದರಲ್ಲಿ ತನ್ನ ಛಾಪನ್ನು ಮೂಡಿಸಲು ನೇರ ಅವಕಾಶವೀಯುತ್ತದೆ. ಹೆಚ್ಚುಕಡಿಮೆ, ಒಳ್ಳೆಯದು ಮತ್ತು ಕೆಟ್ಟದ್ದಕ್ಕೆಲ್ಲ ಯಾರನ್ನು ದೂರುವ ಅವಕಾಶವಿರುವುದಿಲ್ಲ – ತನ್ನ ಹೊರತಾಗಿ…

ಇದೆಲ್ಲಾ ಆಲೋಚನೆಗಳ ನಡುವೆ ಅನುಮಾನ ಪರಿಹರಿಸಿಕೊಳ್ಳುವ ಕಿರು ಚರ್ಚೆ ನಡೆದು ಅದೇ ಸರಿಯಾದ ಹಾದಿಯೆಂಬ ತೀರ್ಮಾನದೊಂದಿಗೆ ಅಂತಿಮವಾಗಿತ್ತು ಅಂದಿನ ಸಭೆ.

ಅಲ್ಲಿಂದಾಚೆಗೆ ಮತ್ತೆ ನಾಗಾಲೋಟದ ಗತಿಯಲ್ಲಿ ಕಸಿಯ ಪ್ರಯೋಗ ಮುಂದುವರೆಯಿತು. ನಿರ್ಧರಿಸಿದಂತೆ ಬ್ರಹ್ಮದೇವನ ಮತ್ತು ಊರ್ವಶಿಯ ಜೀವಕೋಶಗಳ ಮಾದರಿಗಳನ್ನು ಸಂಗ್ರಹಿಸಿ ಅವನ್ನು ಕಸಿ ಮಾಡುವ ಹಲವಾರು ವಿಕಲ್ಪಗಳನ್ನು ಸಮಾನಾಂತರವಾಗಿ ನಡೆಸತೊಡಗಿತ್ತು ಆ ವಿಜ್ಞಾನಿಗಳ ತಂಡ. ಹಂತಹಂತವಾಗಿ ನಡೆಯುತ್ತಿದ್ದ ಈ ಪ್ರಯೋಗಕ್ಕೆ ನರನಾರಾಯಣರು ಮಾಡಿಟ್ಟಿದ್ದ ಟಿಪ್ಪಣಿಗಳು ಅತ್ಯುಪಯೋಗಿ ಸರಕಾಗಿ, ಹಲವಾರು ಅಂಶಗಳನ್ನು ನೇರವಾಗಿ ಅಳವಡಿಸಿಕೊಳ್ಳುವಂತೆ ಮಾಡಿ ಕೆಲಸವನ್ನು ಇನ್ನು ಸುಲಭವಾಗಿಸಿಬಿಟ್ಟಿದ್ದವು. ಮುನ್ನೆಚ್ಚರಿಕೆಯ ಕ್ರಮವಾಗಿ ವಿವಿಧ ವಿಕಲ್ಪದಲ್ಲಿ ನಡೆಸಿದ ಪ್ರಯೋಗದ ಕಾರಣದಿಂದ ಅನೇಕ ಮಾದರಿಗಳು ಲಭ್ಯವಾಗಿ, ಒಂದು ಸೋತಲ್ಲಿ ಮತ್ತೊಂದಕ್ಕೆ ಹೊಸತಾಗಿ ಸಮಯ ವ್ಯಯಿಸದೆ ಪ್ರಯೋಗ ಮುಂದುವರೆಸಲು ಸಾಧ್ಯವಾಗಿತ್ತು.

ಇದೆ ಹೊತ್ತಿನಲ್ಲಿ ಎರಡನೆ ಕಿರುತಂಡವೂ ತಂಬ ಪ್ರಯೋಗದಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸತೊಡಗಿತ್ತು. ಹೇಗಾದರೂ ಮಾಡಿ ಜೀವಕೋಶದ ಆಯಸ್ಸು ಹೆಚ್ಚಿಸಬೇಕೆಂಬುದು ಅದರ ಗುರಿ. ಅದರ ಹಿನ್ನಲೆಯೂ ಸರಳವಾಗಿಯೇ ಇತ್ತು. ದೇಹದ ರಚನೆಯಲ್ಲಿ ಪ್ರತಿನಿತ್ಯವೂ ಹೊಸ ಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ ಮತ್ತು ಹಳತಾದವು ಸಾಯುತ್ತಲೇ ಇರುತ್ತವೆ. ಬಾಲ್ಯದಲ್ಲಿ, ಪ್ರಾಯದಲ್ಲಿ ಹೊಸದಾಗಿ ಹುಟ್ಟುವ ಕೋಶಗಳ ಸಂಖ್ಯೆ ಹೆಚ್ಚಿರುವುದರಿಂದ ಅದರನುಸಾರ ದೇಹದ ಬೆಳವಣಿಗೆಯೂ ಆಗುತ್ತಿರುತ್ತದೆ. ಆದರೆ ಕ್ರಮೇಣ ವೃದ್ಧಾಪ್ಯದತ್ತ ನಡೆಯುವ ಹೊತ್ತಿಗೆ ಹೊಸತರ ಉತ್ಪಾದನೆ ಕುಂಠಿತವಾಗಿಬಿಡುತ್ತದೆ ಮತ್ತು ನಶಿಸಿಹೋಗುವ ಹಳತರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಯಾವಾಗ ಇವೆರಡರ ನಡುವಿನ ಅಂತರ ಜೀವಿಯ ಉಳಿವಿಗೆ ಸಾಕಾಗುವಷ್ಟು ಶಕ್ತಿಮೂಲವನ್ನು ಒದಗಿಸಲಾಗುವುದಿಲ್ಲವೋ ಆಗ ಆ ದೇಹಕ್ಕೆ ಸಾವು ಹತ್ತಿರವಾಯ್ತೆಂದು ಅರ್ಥ. ಅದನ್ನು ವಿಲಂಬಿಸಬೇಕೆಂದರೆ ಒಂದು ಕಡೆ ಹೊಸ ಕೋಶದ ಉತ್ಪಾದನೆ ನಿರಂತರವಿರುವಂತೆ ನೋಡಿಕೊಳ್ಳಬೇಕು. ಮತ್ತೊಂದೆಡೆ ಜೀವಕೋಶದ ನಶಿಸುವ ಕಾಲದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ಗಮನಿಸಬೇಕು. ಇವೆರಡು ಯಶಸ್ವಿಯಾದರೆ ಅಷ್ಟರ ಮಟ್ಟಿಗೆ ಧೀರ್ಘಾಯಸ್ಸಿನ ಪ್ರಯೋಗ ಯಶಸ್ಸು ಕಂಡಂತೆ. ಆದರೆ ಅದನ್ನು ಸಾಧ್ಯವಾಗಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರವಿದ್ದಿದ್ದು ಮೂರನೆಯ ಕಿರುತಂಡದ ‘ಜೀವಕೋಶದ ಸ್ವಯಂಭುತ್ವ’ ಪ್ರಯೋಗದ ಫಲಿತದಲ್ಲಿ !

ಮೂರನೆಯ ಕಿರುತಂಡದ ಉತ್ಸಾಹದ ಪ್ರಯೋಗದಲ್ಲಿ ಒಂದು ಉಪಯುಕ್ತ ಮಾಹಿತಿ ಅನಾವರಣವಾಗಿಹೋಗಿತ್ತು. ಅದೆಂದರೆ – ಜೀವಕೋಶ ಬದುಕಲು ಮತ್ತು ಸಾಯಲು ಮೂಲಕಾರಣವಾದ ಒಂದು ರಾಸಾಯನಿಕ ಬೀಜವಸ್ತು. ಹೊಸದಾಗಿ ಹುಟ್ಟಿದ ಜೀವಕೋಶದಲ್ಲಿ ಈ ರಾಸಾಯನಿಕ ತಂತು ತೀರಾ ಚುರುಕಾಗಿ, ಸಕ್ರಿಯವಾಗಿರುವತನಕ ಜೀವಕೋಶವೂ ಲವಲವಿಕೆಯಿಂದ ಚಟುವಟಿಕೆಯಿಂದ ಬದುಕಿಕೊಂಡು ಇರುತ್ತಿತ್ತು. ಅದೇಕೋ ಎಂತೋ ಈ ರಾಸಾಯನಿಕ ತಂತು ನಡುವಲ್ಲೊಮ್ಮೆ ಇದ್ದಕ್ಕಿದ್ದಂತೆ ನಿಷ್ಕ್ರಿಯವಾಗಿ, ತನ್ನ ಚಟುವಟಿಕೆಗಳ ಕಾರ್ಖಾನೆಯನ್ನು ನಿಲ್ಲಿಸಿಬಿಡುತ್ತಿತ್ತು. ಆಗಲೆ ಆ ಕೋಶದ ಸಾವಿಗೆ ಮುನ್ನುಡಿ ಆಗುತ್ತಿದ್ದುದ್ದು. ಅದನ್ನು ಯಾವುದಾದರೊಂದು ರೀತಿಯಲ್ಲಿ ಮತ್ತೆ ಉದ್ರೇಕಿಸಿ ಸಕ್ರೀಯಗೊಳಿಸಿಬಿಟ್ಟರೆ ಅದು ಸಾವಿನತ್ತ ನಡೆಯುವ ಬದಲು ಮತ್ತೆ ಚೈತನ್ಯದ ಚಿಲುಮೆಯಾಗಿಬಿಡುತ್ತಿತ್ತು. ಹಾಗೆ ಮಾಡಬಲ್ಲ ಮತ್ತೊಂದು ರಾಸಾಯನಿಕವನ್ನು ಕಂಡುಹಿಡಿದು ಅದನ್ನು ಸಫಲವಾಗಿ ಬಳಸುವ ವಿಧಾನವನ್ನು ಕಂಡುಹಿಡಿದಿದ್ದೆ ಈ ತಂಡದ ಸಾಧನೆ.. ಹೀಗಾಗಿ ಈ ವಿಧಾನದಲ್ಲಿ ಜೀವಕೋಶದ ಜೀವಾವಧಿಯನ್ನು ಲಂಬಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಹೋಗಿತ್ತು. ಮಿಕ್ಕಿದ್ದೇನಿದ್ದರು ಅಳವಡಿಕೆಯಲ್ಲಿ ಸರಿಯಾಗಿ ಪ್ರವರ್ತಿಸುವ ನಿಗದಿತ ಪ್ರಮಾಣವನ್ನು ನಿರ್ಧರಿಸುವುದಷ್ಟೆ ಕಂಡುಕೊಳ್ಳಬೇಕಾಗಿತ್ತು. ಇದೇ ಸೂತ್ರದ ಮಾದರಿಯನ್ನು ಅನುಕರಿಸಿ ಹೊಸ ಜೀವಕೋಶಗಳ ಸೃಷ್ಟಿಗೂ ಕೂಡ ಇದೇ ಪ್ರಚೋದಕ ರಾಸಾಯನವನ್ನೆ ಬಳಸಬಹುದೆಂದು ಕಂಡುಕೊಂಡಿದ್ದರಿಂದ ಎರಡನೆಯ ತಂಡದ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಸಿಕ್ಕಂತಾಗಿ ಅವರ ಪ್ರಯೋಗ ನಿರಾಯಾಸವಾಗಿ ಸಾಗಿಸಲು ಅನುಕೂಲವಾಗಿ ಹೋಯ್ತು.

ಇವನ್ನೆಲ್ಲ ಸಮಷ್ಟಿಸುತ್ತಿದ್ದ ನಾಲ್ಕನೇ ಕಿರಿತಂಡದ ಮೇಲ್ವಿಚಾರಣೆಯ ಚಾಕಚಕ್ಯತೆಯಿಂದಾಗಿ ಮೂರು ತಂಡಗಳೂ ಅತಿ ಶೀಘ್ರದಲ್ಲೆ ತಂತಮ್ಮ ಗಮ್ಯ ತಲುಪಿ ಮೊದಲ ಫಲಿತಾಂಶಗಳೊಂದಿಗೆ ಪ್ರಾಥಮಿಕ ಪರೀಕ್ಷೆ , ವಿಮರ್ಶೆಗೆ ತಯಾರಾಗಿಬಿಟ್ಟಿದ್ದವು – ಅನತಿ ಕಾಲದಲ್ಲೇ..!

(ಇನ್ನೂ ಇದೆ)

(Link to next episode no. 42: https://nageshamysore.wordpress.com/2016/04/24/00669-0041_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a7/)

00668. ರಾಜ್ ಇಲ್ಲದ ಕನ್ನಡವೆಂತು ?


00668. ರಾಜ್ ಇಲ್ಲದ ಕನ್ನಡವೆಂತು ?
___________________________

ಏನಪ್ಪಾ ಗತಿ ಕನ್ನಡ ?
ನಿನ್ನ ಹೆಸರಿಲ್ಲದಿದ್ದರೆ ಅಡ್ಡ
ನುಂಗಿ ನೀರು ಕುಡಿದು ಸಕಲ
ಕನ್ನಡ ಹುಡುಕಿದರೂ ಸಿಗದ ಕಾಲ..

ಕಾಲಾಡಿಸಲು ಬಂದವರು
ಜೀವಕಾಲವಿಲ್ಲೇ ಕಳೆವ ಜನರು
ಕಲಿತಾಡಲಿ ಕನ್ನಡನುಡಿ ಬೆರೆಯುತ್ತೆ
ನೋಡಲಿ ಸಾಕು ಸಿನಿಮಾಗಳೆ ಕಲಿಸುತ್ತೆ..

ಮಕ್ಕಳು-ಮರಿಗು ರೀತಿ
ಜೀವನಮೌಲ್ಯದ ಪಾಠ ನೀತಿ
ಬೇಕಲ್ಲವೆ ಬದುಕಿನಡಿಪಾಯ ಸೂತ್ರ
ತೋರಿಸಿ ಸಾಕು ರಾಜಣ್ಣನ ಜೀವನ ಚೈತ್ರ..

ಜನುಮ ದಿನ ಬರಿ ನೆಪ
ನಿತ್ಯ ಸಿನಿಮ ಹಾಡಲಿ ಜಪ
ನೋಡಿ ಕನ್ನಡ ಟೀವಿ ಚಂದದಲಿ
ಚಂದನ ಸುಗಂಧ ಕಸ್ತೂರಿ ಹರಡಲಿ..

ಬೇಡಿನ್ನೇನು ಸ್ಮರಣೆ ನೆನಪು
ಕನ್ನಡ ಮಾತಾಡಿದರದೆ ಕಂಪು
ನಾಡುನುಡಿ ಉಳಿಸೆ ಜೊತೆಗೂಡೆ
ಜತೆಯಾಗಿ ಸದಾ ಕನ್ನಡ ರಾಜನ ಹಾಡೆ..

– ನಾಗೇಶ ಮೈಸೂರು