00754. ಸಮ ಭೋಗ ಪ್ರವರ (01 & 02)


00754. ಸಮ ಭೋಗ ಪ್ರವರ (01 & 02)
_______________________________

ಪುರುಷ ಪ್ರಕೃತಿ ಸಂಯೋಗದ ಸ್ವರೂಪದಲ್ಲಿ ಸೃಷ್ಟಿ ಪ್ರಕ್ರಿಯೆಯನ್ನು ಆಯೋಜಿಸಿದ ಆ ನಿಯಾಮಕನ ವೈಜ್ಞಾನಿಕ ಜಾಣ್ಮೆಯನ್ನು ಹೊಗಳಲು ಖಾಲಿ ಪದಗಳಿಗೆ ಸಾಮರ್ಥ್ಯವಿಲ್ಲ. ಆ ಪ್ರಕ್ರಿಯೆಯ ಮೂಲ ವಿನ್ಯಾಸವಾಗಲಿ, ರೂಪುರೇಷೆಯಾಗಲಿ, ಅದರ ನಿರಂತರತೆಯನ್ನು ಕಾಯ್ದಿಡುವ ನೈಸರ್ಗಿಕ ಕ್ರಿಯೆಯಾಗಲಿ, ಹದ್ದು ಮೀರದ ನಿಯಂತ್ರಣದಲ್ಲಿರಲು ಅನುವಾಗುವಂತೆ ಗಂಡು- ಹೆಣ್ಣಿನ ನಡುವೆ ವಿಭಜಿಸಿಟ್ಟ ಚಾತುರ್ಯವಾಗಲಿ – ಎಲ್ಲವು ಅದ್ಭುತ ಅತಿಶಯಗಳೆ. ಇಂತಹ ಅದ್ಭುತವನ್ನು ಸರಳ ಸಾಮಾನ್ಯ ಕಾರ್ಯವಾಗಿಸಿ ಜನಜೀವನದ ಸಾಮಾನ್ಯ ಸಾಮಾಜಿಕ ಸಂಭವವಾಗಿಸಿದ್ದು ಅದಕ್ಕೂ ಮೀರಿದ ಅದ್ಭುತ.

ಆ ಅದ್ಭುತದ ಲಹರಿಯನ್ನು ಪದಗಳ ಹಿಡಿಯಲ್ಲಿ ಆದಷ್ಟು ಹಿಡಿದಿಡುವ ಯತ್ನ ಕೆಳಗಿನ ಎರಡು ಪದ್ಯಗಳದ್ದು ..

01. ಬೀಜಾಂಕುರ ಸುರತಿ
_____________________________________

(Picture source from : http://sugamakannada.com/assets/images/article/hasya/ganduhennu.jpg)

ಸಮಭೋಗ ಸಮರ
ಸೌಹಾರ್ದ ಸಾಗರ
ಸಹಜದೆ ಸಹಕಾರ
ಅಸಹಜ ಅನಾದರ ||

ಎರಡು ಜೀವ ಶುದ್ಧಿ
ಸೆಳೆತದಡಿ ಸಂವೃದ್ಧಿ
ಬುದ್ಧಿ ಸಂತಾನವೃದ್ಧಿ
ಸಹಯೋಗ ಕೆಳದಿ ||

ನೆಪವೆಷ್ಟು ಸರಸಕೆ
ಪೀಳಿಗೆಗೆ ಸರಸರಕೆ
ಜೋಳಿಗೆ ತುಂಬಾಕೆ
ಮಾಳಿಗೆ ಎಂಬಾಕೆ ||

ಕತ್ತಲೇಕೋ ಧನ್ಯಾ
ಬೆತ್ತಲೆಯೆ ಸುಕನ್ಯ
ಹಿತ್ತಲೇಕೊ ಕನ್ಯಾ
ಗುಟ್ಟು ಕಥೆಗಳಗಣ್ಯ ||

ವಸ್ತು ಸ್ಥಿತಿ ಮಾಹಿತಿ
ಕಾಮ ದೇವನ ಆಸ್ತಿ
ರೋಮಾಂಚಕೆ ಸ್ವಸ್ತಿ
ಬೀಜಾಂಕುರ ಸುರತಿ ||

– ನಾಗೇಶ ಮೈಸೂರು

02. ಗಂಡ್ಹೆಣ್ಣು ಸೃಷ್ಟಿಮನ
_________________________


(Picture source: http://www.nammabanavasi.com/?info=ಪುನರಾಭಿವೃದ್ದಿಗೆ-ಹೆಣ್ಣು-ಸ)

ತೆವಲು ತಿಕ್ಕಲು ತನು
ತಾಡಗಳ ಸಿಹಿ ಜೇನು
ಸುಖ ಬೆವರಿದರೇನು
ಸೊಗವಲ್ಲೆ ಇರದೇನು? ||

ಬೆರೆತಾಗಿಸಿ ಬೆವರು
ಒಳತಾಗಿಸಿ ನೀರು
ಒಳಿತಿಗೊಡ್ಡಿ ತೇರು
ಸೇರಲಿಲ್ಲವೆ ಮೇರು ? ||

ಪ್ರಕೃತಿ ಸಂಯೋಗ
ಪುರುಷ ಸುಯೋಗ
ಜನ್ಮಾಂತರ ಪ್ರಯೋಗ
ಫಲಿತ ಕರ್ಮಯೋಗ ||

ಆಗಿದ್ದರು ಸುಕೃತಿ
ಆಗಿಸುವ ವಿಕೃತಿ
ಮನಕಿಟ್ಟ ಸನ್ಮತಿ
ಜನಕಿಟ್ಟರೆ ಸದ್ಗತಿ ||

ಸಮ ಭೋಗ ಆರಾಮ
ದೈನಿಕ ವ್ಯಾಯಾಮ
ಆತಂಕ ಬಿಡೆ ಧಾಮ
ಗಂಡ್ಹೆಣ್ಣು ಸೃಷ್ಟಿ ಮನ ||

– ನಾಗೇಶ ಮೈಸೂರು

00753. ಆಸೆ?


00753. ಆಸೆ?
___________________


ಆಸೆ ಅನ್ನೋದು ಹೇಗಂದ್ರೆ –
ಬರೆದದ್ದು ತುಂತುರು ಮಳೆಯಾದರು
ಲೈಕು ಶೇರುಗಳು ಮುಂಗಾರು ಮಳೆಯಾಗಿರ್ಬೇಕು !

ಹಾಗೆ ಅಲ್ವಾ ಬದುಕು ?
ಹಾಕಿದ್ದು ಮೂರು ಅಕ್ಕಿ ಕಾಳಾದರು
ಹಕ್ಕಿ ಮಾತ್ರ ಬದುಕೆಲ್ಲ ಬಿದ್ದಿರಬೇಕು ಜೊತೆಗೆ..

– ನಾಗೇಶ ಮೈಸೂರು

00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)


00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)
___________________________________________________________

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ : ಇವತ್ತಿನ ರೀಡೂ ಕನ್ನಡದಲ್ಲಿ ಪ್ರಕಟಿತ (೩೦.೦೫.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00751. ನೆನೆದಿದ್ದು ಮಳೆಯೋ, ಮನವೊ ?


00751. ನೆನೆದಿದ್ದು ಮಳೆಯೋ, ಮನವೊ ?
________________________________


ತುಂತುರು ಮಳೆಯಲಿ ನೆನೆಯುತ್ತ
ಏನೇನನೊ ಮನದಲಿ ನೆನೆಯುತ್ತ
ಸಾಗಿದ್ದೆ ತುಂತುರು ಹನಿಸುತ್ತ ಮನಕೆ
ನೆನಪಿನ ಹನಿ ಹನಿ ಎರಚಿತ್ತಾ ಮುದಕೆ

ಯಾರನೊ ಮನಸದು ನೆನೆಸಿತ್ತು
ತುಂತುರು ಹನಿ ತಲೆಯ ನೆನೆಸಿತ್ತು
ನೆನೆದಿದ್ದು ಒಳಗೊ ಹೊರಗೊ ಗೋಜಲು
ಒಳಗ್ಹೊರಗೆಲ್ಲ ಒದ್ದೆಯಾಗಿ ಜುಳು ಜುಳು..

ನೆನೆದಾಕೆಯ ನಗು ನೆನೆದಾ ವದನ
ಹನಿ ಜತೆ ಬೆವರು ಸಾಲುಗಟ್ಟಿ ತೋರಣ
ನೆನಪಿನಾ ತೋಟದಲೆಲ್ಲಾ ಆವರಣ
ಬಿದ್ದ ಮಳೆ ಹನಿಗಾಯ್ತೆ ಗುಟ್ಟು ಅನಾವರಣ..

ಕಳ್ಳ ಹನಿಯೆ ತೊಡೆಯದಿರು ನೆನೆದಿರುವಾಗ
ಹನಿ ಹನಿಯ ತೊಳೆದರೆ ಮತ್ತದೇ ಜಾಗ
ಬಿಡು ಆಸ್ವಾದಿಸಲಿ ನೆನೆದ ನೆನಪ ಹನಿಗಳ
ಕಟ್ಟು ಹನಿಯ ಮೊಡವೆ ಸರ ಪೋಣಿಸಿ ಜಾಲ..

ಬೇಡ ಮುಸಲಧಾರೆ ತೊಟ್ಟಿಕ್ಕಿಸೊ ಧಾರಾಕಾರ
ಉಳಿಸದೇನೂ ನೆನಪ ನೆನೆಯಲೂ ನಿರಾಕಾರ
ಸುರಿವ ಹೊತ್ತ ಮಬ್ಬಲಿ ಕೂತು ನೋಡುವೆ ವಿಸ್ಮಯ
ಸೃಷ್ಟಿಯೆಲ್ಲ ನಿಗೂಢವ ಬಚ್ಚಿಟ್ಟುಕೊಂಡ ಅಯೋಮಯ..

– ನಾಗೇಶ ಮೈಸೂರು

00750. ಹೇಗಿರಬೇಕು, ಹೇಗಿರಬಾರದು (ಬ್ಲಾಗು)


00750. ಹೇಗಿರಬೇಕು, ಹೇಗಿರಬಾರದು (ಬ್ಲಾಗು)
_______________________________

ಬ್ಲಾಗು ಫೇಸ್ಬುಕ್ಕು ಹೇಗಿರಬೇಕು, ಹೇಗಿರಬಾರದು, ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲಾ ತರದ ಪ್ರಶ್ನೆಗಳು ಎಲ್ಲರನ್ನು ಕಾಡುವುದು ಸಹಜ.. ಅದು ಕಾಡಿದ ಹೊತ್ತ ಅನಿಸಿಕೆಗಳಿಗಷ್ಟು ಪದ ಲೇಪನ ಕೊಟ್ಟಾಗ ಮೂಡಿದ ಸಾಲುಗಳಿವು. ನಿಮಗೂ ಹೀಗೆ ಅಥವಾ ಇನ್ನೇನೇನೋ ಅನಿಸಿದ್ದರೆ ಕಾಮೆಂಟಲಿ ಹಂಚಿಕೊಳ್ಳಿ 😊


ಬ್ಲಾಗಿರಬೇಕು ಹೇಗಿರಬೇಕು ?
__________________________

(೦೧)
ಮೊದಲಿರುತ್ತಿತ್ತು
ಸೈಡಿನಲೊಂದು ಬ್ಯಾಗು
ಈಗಿದ್ದರೆ ಸಾಕು ನಿಮದೆ ಬ್ಲಾಗು..

(೦೨)
ಅನಿಸಿದ್ದೆಲ್ಲ ಹೇಳೋಕಾಗಲ್ಲ
ಕೇಳೊ ಜನರಿಗೆ ಅರ್ಥವಾಗಲ್ಲ
ಇಲ್ಲಿ ಮನಸಿಗೆ ಬಂದದ್ದೆಲ್ಲಾ ವಾಂತಿ
ಸಿಕ್ಕರೂ ಸಿಗಬಹುದೇನೋ ಶಾಂತಿ..

(೦೩)
ಕೇಳಿದರ್ಯಾರೊ ನೀತಿ ನಿಯಮ
ಕಟ್ಟುವುದೇನು ಮನೆಯಾ, ಮದುವೆಯಾ ?
ಏನಾದರು ಕಟ್ಟು ಒಪ್ಪ ಓರಣದಲಿ
ಟ್ಯಾಗು ಕೆಟಗರಿ ವಿಷಯ ವಸ್ತು ಬಯಲಲಿ..

(೦೪)
ಅಶಿಸ್ತೆ ನಮ್ಮನೆ ದೇವರು ಗೊತ್ತಾ?
ಅಂದವರ ಬ್ಲಾಗಿಗೆ ಫೇಸ್ಬುಕ್ಕೆ ಸಾಕು
ಹಾಕು ಮನಸಿಗೆ ತೋಚಿದ್ದ ಶೋಧಿಸಿ ಶುದ್ಧ
ಸ್ಟೇಟಸ್ಸು ಪೋಸ್ಟು ಲೈಕು ಶೇರು ಸಮೃದ್ಧ..


(೦೫)
ಬ್ಲಾಗು ಫೇಸ್ಬುಕ್ಕು ಇದ್ದರೇನಿಲ್ಲ ನಿಶ್ಚಿಂತೆ
ಕನಸಲ್ಲೂ ಕಾಡಿ ಹಿಂಬಾಲಕರಿಲ್ಲದ ಚಿಂತೆ
ಬರೆದು ಸುರಿದರು ದಂಡಿ ಬರದ ಲೈಕ ರೀತಿ
ಯಾರಿಗೂ ಬೇಡದವರಾಗಿಬಿಟ್ಟೇವೆ ? ಒಳ ಭೀತಿ!

(೦೬)

ಜಾಸ್ತಿ ಲೈಕು ಬೇಕು, ಹಿಂಬಾಲಕರು ಬರಬೇಕು
ಮಾಡು ಹಾಗಿದ್ದರೆ ಶೇರು, ಬೇರೆಯವರ ಸರಕು
ಬರಿ ಹಾಳುಮೂಳಲ್ಲ, ಅಳೆದು ತೂಗಿದ ಸಾಮಾನು
ಮೌಲ್ಯವಿದ್ದೆಡೆ ಮೆಲ್ಲ, ಬಲ್ಲ ಜನ ಬರುವುದೆ ಕಾನೂನು..!

(೦೭)
ಸಖ್ಯ ಬೆಳೆಸುವುದು ಮುಖ್ಯ, ಸಾಲು ಸಾಲು ಗೋಜಲು
ಗೊತ್ತು ಗುರಿಯಿಲ್ಲದೆ, ಮಿತ್ರರಾಗುವ ಹವಾ ಮಹಲು
ಇರಲೊಂದು ಸಂತೆ, ಗದ್ದಲಕೆಂದೆ ಮೀಸಲಾದ ಖಾತೆ
ಮತ್ತೊಂದು ಖಾಸಗಿ ನಿಯಮಿತ, ಸಮಮನಸ್ಕರ ಜೊತೆ !

(೦೮)
ಸುಮ್ಮನೆ ನೋಡಿದರೆ ಸರಾಸರಿ ಲೆಕ್ಕಾಚಾರ
ಶೇಕಡಾ ಐದರಿಂದ ಹತ್ತರೊಳಗೆ ಮೆಚ್ಚುವ ಸಾರ
ಮಿಕ್ಕ ಕೆಳೆ ನಿಷ್ಪಲ ನಿರಾಸಕ್ತರ ಬಳಗವೆಂದಲ್ಲ ಅರ್ಥ
ಲೋಕೋಭಿನ್ನರುಚಿಃ ನಾನಾ ಗಮನದೆ ಎಲ್ಲ ಪ್ರವೃತ್ತ …

– ನಾಗೇಶಮೈಸೂರು

00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)


00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)
_______________________________

ಪ್ರತಿ ನಂಟಿಗು ಅವರವರದೇ ವ್ಯಾಖ್ಯೆ, ವಿಮರ್ಶೆ, ಅರ್ಥ – ಮನದ ಗುಣಿತಕನುಸಾರವಾಗಿ. ಹಾಯ್ಕು ಮಾದರಿಯ ಈ ಹನಿಗಳಲ್ಲಿ ಕೆಲವೊಂದನ್ನು ಕಟ್ಟಿಡುವ ಅರೆ-ಸಫಲ ಯತ್ನ.. 😊


(೦೧)
ನಂಟಿನ ಮನ
ಅವರವರ ವ್ಯಾಖ್ಯೆ
– ಮನದ ಗಂಟೆ.

(೦೨)
ನಂಟಿಗೆ ಬೇಕು
ಬೇವು ಬೆಲ್ಲದ ಕಾಲ
– ಅರಿಸುವಾಟ.

(೦೩)
ನಂಟಸ್ತಿಕೆಗೆ
ಅಂತಸ್ತೈಶ್ವರ್ಯ ಲೆಕ್ಕ
– ಮಿಕ್ಕಿದ್ದಾಮೇಲೆ.

(೦೪)
ನಂಟಿನ ಗಂಟು
ಅಂದುಕೊಂಡಿದ್ದೆ ಹೆಚ್ಚು
– ಆಗದೆ ಕಿಚ್ಚು.

(೦೫)
ಗೀಳಾಗಿ ನಂಟು
ಕಾಡುವ ಅನುಪಾತ
– ವಿಲೋಮ ದೂರ.

(೦೬)
ನಂಟಿಗರ್ಥವೆ
ನನದೆನ್ನುವ ಸ್ವಾರ್ಥ
– ಉಬ್ಬರವಿಳಿತ

(೦೭)
ಗಂಟು ಹಾಕಿದ್ದು
ನಂಟೇ ಆದರು ಮೊತ್ತ
– ಗೌರವ ಸೂಕ್ತ.

(೦೮)
ತಪಿಸಿ ನಂಟ
ಹುಡುಕಾಡಿಸೊ ಚಿತ್ತ
– ಸಿಕ್ಕಾಗ ಧೂರ್ತ.

(೦೯)
ನಂಟಿನ ಹಿತ
ಮುದದಷ್ಟೆ ಬೇಸರ
– ಇರಲಿ ನಿಗಾ.

(೧೦)
ನಂಟಿಗೆ ಗುಟ್ಟ
ರಟ್ಟಾಗಿಸೊ ನಂಬಿಕೆ
– ಗುಟ್ಟಾಗಿರಲಿ.

– ನಾಗೇಶ ಮೈಸೂರು

00748. ಬಂಧಕೊಂದಷ್ಟು ತುಣುಕುಗಳು..


00748. ಬಂಧಕೊಂದಷ್ಟು ತುಣುಕುಗಳು..
_______________________________

(೦೧)
ನೀ ದೂರಾಗಿ
ಕರ್ಕಶ ಸದ್ದಾದ ಮಾತು
ಎಷ್ಟೊ ವಾಸಿಯಿತ್ತು;
ಭೀಕರವೀಗ ಅದ ಮೀರಿಸೊ
ಕೊಲ್ಲುವ ಮೌನದ ಮೌನ.

(೦೨)
ಒಪ್ಪಿಕೊಳ್ಳುವ
ಮೊದಲಿತ್ತೆಲ್ಲಿ ಅರಿವೆ ?
ಅರಿವಾದರೇನೀಗ ಬೆತ್ತಲೆ
ಮುಚ್ಚಲೊಲ್ಲದ ಅರಿವೆ
ಮೈ ಮರೆವೆ..

(೦೩)
ಎಲ್ಲಿತ್ತು ಬೇಧ ?
ಅರ್ಧನಾರೀಶ್ವರರಂತೆ
ನಮ್ಮಿಬ್ಬರ ನಡುವೆ ಸೀಮೆ ;
ನಾರಿ ಈಶ್ವರರ ಛೇಧಿಸಿ
ವಿಭಜಿಸಿದ್ದು ಮಾತ್ರ
ಸ್ತ್ರೀಲಿಂಗ ಪುಲ್ಲಿಂಗದ ಮಹಿಮೆ..

(೦೪)
ಹತ್ತಿರವಾಗುತ್ತ ಪರಸ್ಪರ
ಹೊಕ್ಕುತಿಬ್ಬರ ಆವರಣ ಸಂಭ್ರಮ
ಅಸಾಧಾರಣ ಮಿಲನ ;
ಉಸಿರುಗಟ್ಟಿಸೊ ಮೊದಲೆ
ಹಿಂದೆತ್ತಿಕ್ಕದೆ ಒಂದಡಿ ಹೆಜ್ಜೆ ನಡಿಗೆ
ದೂರಾಗಿ ವಿದಾಯಕೆ ಕಾರಣ..

(೦೫)
ಅವರವರ
ಪರ್ಸನಲ್ ಸ್ಪೇಸ್
ಅವರವರಿಗೆ ಅಪ್ಯಾಯ…
ಬಿಟ್ಟುಕೊಂಡರು ಪ್ರೀತಿಗೆ ಒಳಗೆ
ಬೇಲಿಯಾಚೆಯೆ ಸುಳಿದಾಡುತಿರು
ಕಾಯುತ ಆಗಾಗಿಣುಕುವ ಸರಿ ಗಳಿಗೆಗೆ..

– ನಾಗೇಶ ಮೈಸೂರು