00692. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೦೧-೦೦೦೯)


00692. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೦೧-೦೦೦೯)
_____________________________________________

ಲಲಿತಾ ಸಹಸ್ರ ನಾಮದ ಮೊದಲ ಒಂಭತ್ತು ಹೆಸರಿನ ಭಾಗಶಃ ನಾಮಾರ್ಥಗಳನ್ನು ಹಾಯ್ಕು ಮಾದರಿಯಲ್ಲಿ ಮೂಡಿಸುವ ಯತ್ನ. ಮೇಲ್ನೋಟಕ್ಕೆ ಅರಿವಾಗುವಂತೆ ಇದು ಸುಲಭಕ್ಕೆ ದಕ್ಕದ ಸಂಕ್ಷಿಪ್ತತೆ. ಆದರೂ ಒಂದು ಯತ್ನ – ದೇವಿ ಲಲಿತೆಯ ಸ್ತುತಿಯಾದರೂ ಆದೀತೆಂಬ ನೆಪದಲಿ. ಆ ಯತ್ನದಲ್ಲಿ ಅರ್ಥ ನಷ್ಟವೋ, ಹಾಯ್ಕು ನಿಯಮ ಉಲ್ಲಂಘನೆಯೊ ಆಗಿದ್ದರೆ ಕ್ಷಮೆಯಿರಲಿ 😊

(ಶ್ರೀಯುತ ರವಿಯವರ ಮೂಲ ಇಂಗ್ಲೀಷಿನಲ್ಲಿದ್ದ ಸಹಸ್ರನಾಮ ವಿವರಣೆಯನ್ನು ಕನ್ನಡೀಕರಿಸಿದ ಶ್ರೀ ಶ್ರೀಧರ ಬಂಡ್ರಿಯವರ ವಿವರಣೆಯನ್ನಾಧರಿಸಿ ನಾನು ಬರೆದಿದ್ದ ಪದ್ಯಗಳನ್ನು ಮೂಲವಾಗಿಟ್ಟುಕೊಂಡು ಈ ಹಾಯ್ಕುಗಳನ್ನು ಹೊಸೆದಿದ್ದೇನೆ. ಆ ಮೂಲ ಪದ್ಯಗಳನ್ನು ಜತೆಗೆ ನೀಡಿದ್ದೇನೆ, ತುಸು ಹೆಚ್ಚಿನ ಸ್ಪಷ್ಟತೆಗಾಗಿ)

೦೦೦೧. ಶ್ರೀ ಮಾತಾ
______________

ಬ್ರಹ್ಮಾಂಡ ಮಾತೆ
ಆತ್ಮ ಸಾಕ್ಷಾತ್ಕಾರಕೆ
– ದಾಟಿಸುವಾಕೆ.

ಮಾತೆಗಳಾ ಮಾತೆ ಬ್ರಹ್ಮಾಂಡದ ತಾಯಿ ಲಲಿತೆ
ಆವಿರ್ಭಾವ ಪ್ರಪಂಚ ನಡೆಸಾಣತಿ ಲಯ ಲೀನತೆ
ಸಂಸಾರ ಸಾಗರ ಅಡೆತಡೆ ಕಡೆಗಾತ್ಮಸಾಕ್ಷಾತ್ಕಾರ
ಈಜುತೆ ಪ್ರವಾಹದೆದುರೆ ದಾಟಿಸುತಲಿ ಸಂಸಾರ ||

೦೦೦೨. ಶ್ರೀ ಮಹಾರಾಜ್ಞೀ
________________

ಜಗದ ರಾಣಿ
ನಿಗೂಢ ಬೀಜ ಮಂತ್ರ
– ಜನ್ಮ ವಿಮುಕ್ತಿ.

ನಿಗೂಢ ಶಕ್ತಿಯುತ ಬೀಜಾಕ್ಷರ, ನಾಮಾವಳಿಯಂತರ್ಗತೆ
ಷೋಡಶೀ ಪರಮ ಮಂತ್ರ, ‘ಪಂಚದಶೀ’ಗೆ ಬೀಜಾಕ್ಷರ ಜತೆ
ಕ್ರಮಬದ್ಧ ವಿಧಿ ವಿಧಾನದಲುಚ್ಚರಿಸೆ ನವ ಲಕ್ಷ ಸಲ ಭಕ್ತಾ
ಜಗ ಪರಿಪಾಲಿಪ ಮಹಾರಾಣಿ, ಪುನರ್ಜನ್ಮ ವಿಮುಕ್ತಿಸುತ ||

೦೦೦೩. ಶ್ರೀಮತ್ ಸಿಂಹಾಸನೇಶ್ವರೀ
_______________________

ಜಗವನಾಳೊ
ಲಕ್ಷ್ಮಿ ಕಟಾಕ್ಷದಾತೆ
– ಬಿಂದು ಪೂಜಿತೆ.

ಜಗವನಾಳುವ ಸಿಂಹಾಸನೇಶ್ವರೀ ಅಂತಿಮ ಲಯಕರಿ
ಲಕ್ಷ್ಮಿಯಾಗೆಲ್ಲ ಐಹಿಕ ಐಶ್ವರ್ಯ ಭಕ್ತಗೀವ ಕರುಣಾಕರಿ
ಅಷ್ಟಸಿಂಹಾಸನಮಂತ್ರ ಉಚ್ಚಾರ ಚತುರ್ಪಾರ್ಶ್ವ ಅರಿತೆ
ಜತೆ ಬಿಂದುಪೂಜೆ ಇಪ್ಪತ್ನಾಲ್ಕು ದೇವತೆಗೊಡತಿ ಲಲಿತೆ ||

೦೦೦೪. ಚಿದಗ್ನಿಕುಂಡ ಸಂಭೂತಾ
______________________

ಅಜ್ಞಾನ ಕರ್ಮ
ಜ್ಞಾನಾಗ್ನಿಕುಂಡ ಸುಟ್ಟ
– ನಿರ್ಗುಣ ಪ್ರಜ್ಞೆ.

ಅಗ್ನಿಕುಂಡ ಸಂಕೇತ ಅಂಧಕಾರವನಟ್ಟುವ ನಿರ್ಗುಣ ಪ್ರಜ್ಞೆ
ಅಜ್ಞಾನದ ಕತ್ತಲ ಮಾಯೆಗೆ ಚೈತನ್ಯ ಸ್ವ-ಪ್ರಕಾಶದೆ ಆಜ್ಞೆ
ಜ್ಞಾನಾಗ್ನಿ ಧಗಧಗನುರಿದು ಬೂದಿಯಾಗಿಸುತೆಲ್ಲಾ ಕರ್ಮ
ಕರ್ಮ ಖಾತೆಯಲಿದ್ದರೆ ಶೂನ್ಯಶೇಷವಿನ್ನಿಲ್ಲದ ಪುನರ್ಜನ್ಮ ||

೦೦೦೫. ದೇವಕಾರ್ಯ ಸಮುದ್ಯತಾ
_______________________

ದೇವ ದಾನವ
ಜ್ಞಾನಾಜ್ಞಾನ ಸಂಕೇತ
– ದೈತ್ಯ ದಮನ.

ಅಜ್ಞಾನ ಅವಿದ್ಯೆ ರಾಕ್ಷಸ, ಜ್ಞಾನ ವಿದ್ಯೆಯೆ ದೇವತೆ ಮೊತ್ತ
ಅಮಾಯಕಪೂಜೆ ಸಾಮಾನ್ಯರೂಪ ಅಸಾಮಾನ್ಯ ನಿಮಿತ್ತ
ಆದಿ ಅಂತ್ಯಾಕಾರರಹಿತ ನಿರ್ಗುಣ ನಿರ್ಲಕ್ಷಣಾ ಪರಮಾತ್ಮ
ಅಸುರ ದಮನಕೆ ಪ್ರಕಾಶರೂಪ ವಿಮರ್ಶಾರೂಪ ಬ್ರಹ್ಮಾತ್ಮ ||

೦೦೦೬. ಉದ್ಯದ್ಭಾನು-ಸಹಸ್ರಾಭಾ
______________________

ಭೌತಿಕ ಧ್ಯಾನ
ಸುಲಭ ; ಸೂಕ್ಷ್ಮ, ಪರ
– ಮಂತ್ರ, ಮನದೆ.

ಅಗಣಿತ ಅರುಣೋದಯ ದಿನಮಣಿಯಷ್ಟು ಪ್ರಭೆ
ಕುಂಕುಮ ಲೇಪಿತ ಕೆಂಪಿನ ಮೈಕಾಂತೀ ಸೊಬಗೆ
ಭೌತಿಕ ರೂಪವಾಗಿಸಿ ಸುಲಭ ಧ್ಯಾನದಾ ಮಾರ್ಗ
ಸೂಕ್ಷ್ಮರೂಪಕೆ ಮಂತ್ರ ಪರಾರೂಪಕೆ ಮನದ ಜಗ ||

೦೦೦೭. ಚತುರ್ಬಾಹು-ಸಮನ್ವಿತಾ
______________________

ಪ್ರತಿ ಕರವು
ಲಲಿತೆಯ ಮಂತ್ರಿಣಿ
– ಸಹಾಯ ಹಸ್ತ.

ದೇವಿ ಲಲಿತಾಂಬಿಕೆ ಭೌತಿಕ ರೂಪ ಸುನೀತ
ಚತುರ್ಭುಜ ಬಾಹುಗಳಲಿ ದೇವಿ ರಾರಾಜಿತ
ಪ್ರತಿ ಕರವು ಪ್ರತಿನಿಧಿಸೆ ಲಲಿತೆಗೆ ಮಂತ್ರಿಣಿ
ಸಹಾಯದೆ ಜಗ ಪರಿಪಾಲಿಸಿ ಮಾತೆ ವಾಣಿ ||

೦೦೦೮. ರಾಗಸ್ವರೂಪ-ಪಾಶಾಢ್ಯಾ
_______________________

ಎಡದೆ ಪಾಶ
ಭಕ್ತರಾಸೆ ಸೆಳೆವ
– ಅಶ್ವಾರೂಡಿಣಿ.

ಆಶಾ ಪಾಶದ ಕುಣಿಕೆ ಸೆಳೆಯುವ ಹಗ್ಗ
ಭಕ್ತರಾಸೆಯೆಲ್ಲ ಪಾಶದೀ ಸೆಳೆವ ಸೊಗ
ಅಶ್ವಾರೂಢಾದೇವಿ ಪ್ರತಿನಿಧಿಸೊ ಎಡಗೈ
ಇಚ್ಚಾಶಕ್ತಿ ಬಳಸಿ ಆಸೆ ಮರೆಸೊ ತಾಯಿ ||

೦೦೦೯. ಕ್ರೋಧಾಕಾರಂಕುಶೋಜ್ವಲಾ
________________________

ಬಲದಂಕುಶ
ಕ್ರೋಧಾಸೂಯೆ ದ್ವೇಷಕೆ
– ಸಂಪತ್ಕರಿಣಿ.

ಬಲದ ಕೈ ಪ್ರತಿನಿಧಿಸೊ ಸಂಪತ್ಕರಿದೇವಿ ಕೆಲಸ
ಭಕ್ತರ ಕ್ರೋಧ ದ್ವೇಷಾಸೂಯೆ ನಶಿಸುವ ಅಂಕುಶ
ಜ್ಞಾನ ಪ್ರಸಾದಿತೆ ದೇವಿಯ ಸೂಕ್ಷ್ಮಶರೀರ ನಾಮ
ಭಕ್ತ ಜನರೆಲ್ಲರ ಕೆಡುಕು ಕಾಳಿಯಾಗಿ ನಿರ್ನಾಮ ||

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s