00696. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೯-೦೦೨೭)


00696. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೯-೦೦೨೭)
_____________________________________________

ಲಲಿತಾ ಸಹಸ್ರ ನಾಮದ ಒಂಭತ್ತು (೧೯-೨೭) ಹೆಸರಿನ ಭಾಗಶಃ ನಾಮಾರ್ಥಗಳನ್ನು ಹಾಯ್ಕು ಮಾದರಿಯಲ್ಲಿ ಮೂಡಿಸುವ ಯತ್ನ. ಆ ಯತ್ನದಲ್ಲಿ ಅರ್ಥ ನಷ್ಟವೋ, ಹಾಯ್ಕು ನಿಯಮ ಉಲ್ಲಂಘನೆಯೊ ಆಗಿದ್ದರೆ ಕ್ಷಮೆಯಿರಲಿ 😊

(ಶ್ರೀಯುತ ರವಿಯವರ ಮೂಲ ಇಂಗ್ಲೀಷಿನಲ್ಲಿದ್ದ ಸಹಸ್ರನಾಮ ವಿವರಣೆಯನ್ನು ಕನ್ನಡೀಕರಿಸಿದ ಶ್ರೀ ಶ್ರೀಧರ ಬಂಡ್ರಿಯವರ ವಿವರಣೆಯನ್ನಾಧರಿಸಿ ನಾನು ಬರೆದಿದ್ದ ಪದ್ಯಗಳನ್ನು ಮೂಲವಾಗಿಟ್ಟುಕೊಂಡು ಈ ಹಾಯ್ಕುಗಳನ್ನು ಹೊಸೆದಿದ್ದೇನೆ. ಆ ಮೂಲ ಪದ್ಯಗಳನ್ನು ಜತೆಗೆ ನೀಡಿದ್ದೇನೆ, ತುಸು ಹೆಚ್ಚಿನ ಸ್ಪಷ್ಟತೆಗಾಗಿ)

೦೦೧೯. ನವಚಂಪಕ-ಪುಷ್ಪಾಭ-ನಾಸದಂಡ-ವಿರಾಜಿತಾ
___________________________________

ನೀಳ ನಾಸಿಕ
ಬಿರಿದಂತೆ ಸಂಪಿಗೆ
– ದೇವಿ ಸೊಬಗೆ.

ಸುಕೋಮಲ ಸುಂದರ ಸಂಪಿಗೆ ಬೀರುತ ಪರಿಮಳ
ಸೆರೆ ಹಿಡಿದಂತೆ ಮೈ ಮನ ಸುವಾಸನೆ ಮನದಾಳ
ಬಿರಿದರೆಷ್ಟು ಸೊಗವೆ ನೀಳ ನಾಸಿಕ ಅರಳಿದ ಹೂವೆ
ಹೊಚ್ಚಹೊಸತೆ ಬಿರಿದ ಪುಷ್ಪನಾಸಿಕ ದೇವಿ ಮೊಗದೆ ||

೦೦೨೦. ತಾರಾಕಾಂತಿ-ತಿರಸ್ಕಾರಿ-ನಾಸಭರಣ-ಭಾಸುರಾ
___________________________________

ಮೂಗುತಿ ಮಣಿ
ಗ್ರಹ ಮಂಗಳ ಶುಕ್ರ
– ಹರಿಸೆ ದೋಷ.

ಕೆಂಪು ಮಾಣಿಕ್ಯದಧಿಪತಿ ಮಂಗಳ ವಜ್ರಾಧಿಪತಿ ಶುಕ್ರ
ದೇವೀ ಮೂಗುತಿಯಾಗ್ಹಿಡಿದ ಗ್ರಹ ನಿಯಂತ್ರಣ ಸೂತ್ರ
ಮುತ್ತು ಮಾಣಿಕ್ಯದೆ ಮಿನುಗುವ ಮೂಗುತಿಯ ಧರಿಸೊ
ಲಲಿತಾ ಪೂಜೆಯ ಮಾಡುತೆ ಗ್ರಹದೋಷ ನಿವಾರಿಸೊ ||

೦೦೨೧. ಕದಂಬ-ಮಂಜರೀ-ಕ್ಲುಪ್ತ-ಕರ್ಣಪೂರ-ಮನೋಹರಾ
_____________________________________

ಕದಂಬ ವೃಕ್ಷ
ಹೂ ಸೊಗ ದೇವಿಮುಡಿ
– ಕರ್ಣಾಭರಣ.

ಚಿಂತಾಮಣಿ ದೇವಿಯರಮನೆ ಹೊರಗೆ
ಬಿಡುವ ಕದಂಬವೃಕ್ಷ ಹೂಗಳೆ ಸೊಬಗೆ
ದೇವಿ ಮುಡಿಯೇರಿ ವ್ಯಾಪಿಸವಳಾಕರ್ಣ
ದಿವ್ಯ ಪರಿಮಳ ಸೂಸೋ ಕರ್ಣಾಭರಣ ||

೦೦೨೨. ತಾಟಙ್ಕ-ಯುಗಲೀ-ಭೂತ-ತಪನೋಡುಪ-ಮಂಡಲಾ
_____________________________________

ಸೂರ್ಯಚಂದ್ರರೆ
ಕಿವಿಯೋಲೆ ಇಹದ
– ಚಟುವಟಿಕೆ.

ಅಮರತ್ವದ ಅಮರತ್ವ ಶಿವ ದೇವಿ ಕರ್ಣಾಭರಣ ಕಾರಣ
ಸೂರ್ಯಚಂದ್ರರೆ ಕಿವಿಯೋಲೆ ನಯನ ಪ್ರತಿನಿಧಿಸಿ ಸ್ತನ
ಬೀಜಾಕ್ಷರ ಸಂಯುಕ್ತ ಸಶಕ್ತ ಜಗದ ಚಟುವಟಿಕೆ ಸಮಸ್ತ
ಇಹಜೀವನ ಸ್ಥಿಮಿತತೆ ಕಾರಣ ರವಿ ಶಶಿ ನಿಯಂತ್ರಿಸುತ ||

೦೦೨೩. ಪದ್ಮರಾಗ-ಶಿಲಾಧರ್ಶ-ಪರಿಭಾವಿ-ಕಪೋಲಭೂಃ
_____________________________________

ಪ್ರತಿಫಲನ
ಓಲೆ ಕಪೋಲ ಕೆಂಪು
– ಕರುಣಾ ಚಿಹ್ನೆ.

ಚತುರ್ಚಕ್ರ ಮನ್ಮಥರಥ ವದನ ಶಿವನ ಕಾವ ಕಾಡೊ ರೂಪು
ವಿಶಾಲ ಕಪೋಲದಿ ಪ್ರತಿಫಲಿಸಿ ಕಿವಿಯೋಲೆಯಾ ಹೊಳಪು
ಮೃದು ಪದ್ಮರಾಗ ಮೈ ಕಾಂತಿ ಕದಪು ಮಣಿ ಆಭರಣ ಕೆಂಪು
ಕರ್ಣ ರಥಚಕ್ರ ರವಿಶಶಿಗೂ ಕೆಂಪಲೆ ಕರುಣಾ ಸಂಕೇತ ಕದಪು ||

೦೦೨೪. ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ
_____________________________________

ಕೆಂಪು ತುಟಿಯ
ಹವಳದ ಹೊಳಪು
– ತಾಯ ಸೌಂದರ್ಯ.

ಕೆಂಪು ತುಟಿಗಳ ದೇವಿ ಅಪ್ರತಿಮ ಸ್ವರೂಪ
ತೊಂಡೆಹಣ್ಣುಗಳನ್ನು ಮೀರಿಸುವ ಅಪರೂಪ
ಹೊಳಪೆ ಹವಳದಾ ರೂಪಾಗಿ ಫಳಫಳಿಸಿತ್ತು
ಜಗದೇಕ ಸೌಂದರ್ಯ ಲಲಿತೆಯ ರೂಪಾಯ್ತು ||

೦೦೨೫. ಶುದ್ಧ-ವಿಧ್ಯಾಙ್ಕುರಾಕಾರ-ಧ್ವಿಜಪಂಕ್ತಿತ-ದ್ವಯೋಜ್ವಲಾ
_____________________________________

ಲಲಿತಾ ದಂತ
ಶ್ರೀವಿದ್ಯಾ ರಹಸ್ಯತೆ
– ಅಹಂ ಬ್ರಹ್ಮಾಸ್ಮಿ.

ಶ್ರೀವಿದ್ಯಾ ಸಮರ್ಥತೆ ರಹಸ್ಯತೆಯಾಗಿ ದಂತ ಪಂಕ್ತಿ
ಶುದ್ಧ ಸ್ವಚ್ಚ ವಿದ್ಯಾಜ್ಞಾನ ಅಪ್ಪಟ ಜ್ಞಾನಕಿಹ ಸಾರಥಿ
‘ನಾನು ಅದೆ’ ಅಹಂ ಬ್ರಹ್ಮಾಸ್ಮಿ ಶುದ್ದಾದ್ವೈತ ತತ್ವಾ
ಲಲಿತಾದಂತ ಶ್ರೀವಿದ್ಯೆ ತರ ಕಾಣುವದ್ಭುತ ಮಹತ್ವ ||

೦೦೨೬. ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ
_____________________________________

ಜ್ಞಾನಿ ಅಜ್ಞಾನಿ
ಆಕರ್ಷಿಸೊ ಲಲಿತೆ
– ಪರಿಮಳದೆ.

ಜ್ಞಾನಿ ಜನ ಭಕ್ತಿ ಮುಖೇನ, ಅಮಾಯಕರ ಅಜ್ಞಾನ ಘನ
ಕರ್ಪೂರವೀಟಿಕಾ ಸುಗಂಧವ, ದೇವಿ ಪಸರಿಸಿ ಆಕರ್ಷಣ
ಕೇಸರಿ ಏಲಕ್ಕೀ ಲವಂಗ ಕಸ್ತೂರಿ ಜಾಪತ್ರೆ ಜಾಕಾಯಿಗೆ
ಕಲ್ಲುಸಕ್ಕರೆ ಪುಡಿ ತಾಂಬೂಲದೆ ಪರಿಮಳಿಸೊ ತಾಯಿಗೆ ||

೦೦೨೭. ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ
_____________________________________

ಲಲಿತಾ ದನಿ
ನಾಚಿ ಸರಸ್ವತಿಯ
– ವೀಣೆ ಸಂದೂಕ.

ಆಲಿಸುತಿಹ ಭಕ್ತ ಕೋಟಿಗೆ, ಸುಶ್ರಾವ್ಯ ಮಧುರ ಕರ್ಣಾನಂದ
ಕಲಾಧಿದೇವತೆ ಸರಸ್ವತಿ ಕಚ್ಛಪಿ ವೀಣೆಗೂ ಮೀರಿದ ಸುನಾದ
ಲಲಿತೆಯನೋಲೈಸಲೆ ಶಿವ ಲೀಲೆ ನುಡಿಸಿದರು ವೀಣಾಪಾಣಿ
ದೇವಿ ನುಡಿ ಝೇಂಕಾರಕೆ ನಾಚಿ ಸಂದೂಕ ಸೇರಿಸುವಳೆ ವಾಣಿ ||

– ನಾಗೇಶ ಮೈಸೂರು.

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s