00698. ಸೂರ್ಯನ ಎದುರಲ್ಲಿ ಹಾದು ಹೋಗಲಿರುವ ಬುಧಗ್ರಹದ ಅಪರೂಪದ ದೃಶ್ಯ !


00698. ಸೂರ್ಯನ ಎದುರಲ್ಲಿ ಹಾದು ಹೋಗಲಿರುವ ಬುಧಗ್ರಹದ ಅಪರೂಪದ ದೃಶ್ಯ !
________________________________________________________________

ಬುಧಗ್ರಹದ ಸೂರ್ಯಗಮನ – ಸೂರ್ಯನೆದುರಿನ ಹಾದುಹೋಗುವಿಕೆಯನ್ನು ತೋರಿಸುವ ಹಳೆಯ ನಾಸಾ ಉಪಗ್ರಹ ಚಿತ್ರ (ನಾಸಾ ಹ್ಯಾಂಡೌಟ್ ಫೋಟೊ)

ಇದು ಶತಮಾನವೊಂದರಲ್ಲಿ ಕೇವಲ ೧೩ ಬಾರಿ ಮಾತ್ರ ಸಂಭವಿಸುವ ವಿಸ್ಮಯ : ನಮ್ಮ ಸೌರವ್ಯೂಹದಲ್ಲೆ ಅತಿ ಕಿರಿಯನೆಂಬ ಕೀರ್ತಿಗೆ ಪಾತ್ರನಾದ ಬುಧಗ್ರಹವು (ಮರ್ಕ್ಯೂರಿ) ಸೂರ್ಯನ ಮುಂದೆ, ಅತ್ಯಂತ ಸಮೀಪದಿಂದ ಹಾದು ಹೋಗಲಿದೆಯಂತೆ. ಅಮೇರಿಕಾವೂ ಸೇರಿದಂತೆ ಜಗತ್ತಿನ ಬಹುತೇಕ ಭಾಗ, ಬರುವ ಸೋಮವಾರದಂದು ಬುಧಗ್ರಹವು ತನ್ನ ಅತಿಥೇಯ ನಕ್ಷತ್ರವಾದ ಸೂರ್ಯನೆದುರಲೊಂದು ಕಪ್ಪು ಚುಕ್ಕಿಯಾಗಿ ನಿಧಾನವಾಗಿ ಹಾದುಹೋಗಲಿರುವ ಈ ವಿಸ್ಮಯವನ್ನು ಕಾಣಬಹುದು. ಬರಿಗಣ್ಣಿನಿಂದ ಸೂರ್ಯನನ್ನು ನೋಡಲಾಗದ ಕಾರಣ ನೀವು ವಿಶೇಷ ಶೋಧಕವನ್ನಳವಡಿಸಿದ ದೂರದರ್ಶಕದ ಮೂಲಕವೊ ಅಥವಾ ಅಂತರ್ಜಾಲ ಬಿತ್ತರಣೆಗಳ ಮೂಲಕ ಬುಧಗ್ರಹದ ಈ ಕಿರಿಸಂಭ್ರಮಕ್ಕೆ ಸಾಕ್ಷಿಯಾಗಬಹುದು.

ನಿಮ್ಮಲ್ಲಿ ದೂರದರ್ಶಕವಿದ್ದಲ್ಲಿ ದೂರದರ್ಶಕಕ್ಕೆ ಸುರಕ್ಷತೆಯ ಶೋಧಕವನ್ನಳವಡಿಸಿಕೊಂಡು (ನಿಮ್ಮ ಕಣ್ಣುಗಳ ರಕ್ಷಣೆಯ ದೃಷ್ಟಿಯಿಂದ) ನೀವು ಈ ಸಂಘಟನೆಯನ್ನು ವೀಕ್ಷಿಸಬಹುದು. ಒಂದು ವೇಳೆ ಶೋಧಕ ಸಿಗದಿದ್ದರೆ ಒಂದು ಕಾಗದದ ಹಾಳೆಯನ್ನು ಬಳಸಿಕೊಂಡು ನೀವೊಂದು ಕೃತಕ ಹಾಗು ಸುರಕ್ಷಿತ ವೀಕ್ಷಣಾ ವಿಧಾನವನ್ನು ರೂಪಿಸಿಕೊಳ್ಳಬಹುದು. ಸೂರ್ಯನ ಛಾಯೆಯನ್ನು ಕಾಗದವೊಂದರ ಮೇಲೆ ಬಿಳಿಯ ಬಿಲ್ಲೆಯ ರೂಪದಲ್ಲಿ ಪ್ರಕ್ಷೇಪಿಸಿ, ನಂತರ ಬುಧಗ್ರಹವು ಒಂದು ಚುಕ್ಕೆಯ ರೂಪದಲ್ಲಿ ಸೂರ್ಯನಗಲಕ್ಕು ನಿಧಾನಕ್ಕೆ ಸಾಗುವುದನ್ನು ಕಾಣಬಹುದು. ಪರ್ಯಾಯವಾಗಿ ನಾಸಾದ ಅಂತರ್ಜಾಲ ಪುಟ ಅಥವಾ ಸೋಶಿಯಲ್ ಮೀಡಿಯ ಪುಟಗಳಲ್ಲಿ ಹಾಕುವ ನೇರ ಚಿತ್ರಗಳನ್ನು ಕೂಡ ಗಮನಿಸಬಹುದು. ನೀವ್ಯಾವುದಾದರು ಖಗೋಳ ವೀಕ್ಷಣಾಲಯ (ಅಬ್ಸರ್ವೇಟೊರಿ) ಅಥವಾ ವಿಜ್ಞಾನ ಕೇಂದ್ರಗಳ ( ಸೈನ್ಸ್ ಸೆಂಟರು) ಹತ್ತಿರದಲ್ಲಿ ವಾಸಿಸುವವರಾದರೆ, ಅವರ ಕಾರ್ಯಕ್ರಮ ಯೋಚನೆಯನ್ನೊಮ್ಮೆ ವಿಚಾರಿಸಿ ನೋಡುವುದೊಳಿತು – ಬಹುಶಃ ಅವರಲ್ಲಿರಬಹುದಾದ ದೂರದರ್ಶಕದಲ್ಲೊಮ್ಮೆ ಇಣುಕಿ ಈ ಸಂಘಟನೆಯನ್ನು ವೀಕ್ಷಿಸಬಹುದು.

ಇದೇನು ಮಹಾ ? ಯಾವುದೋ ಗ್ರಹದ ಚಲನೆಯನ್ನು ನೋಡಿ ಆಗಬೇಕಾದ್ದರೂ ಏನು ? ಯಾಕಾದರೂ ನೋಡಬೇಕು ಎನ್ನುವ ಅನುಮಾನವಿದ್ದರೆ ಇದೋ ಇಲ್ಲಿದೆ ಒಂದು ಮುಖ್ಯ ಕಾರಣ – ಈ ತಣ್ಣಗಿನ ಪುಟ್ಟ ಗ್ರಹಕ್ಕೆ ಇದೊಂದು ಅತಿ ವಿಶೇಷ ಘಟನೆಯಾದ್ದರಿಂದ.

ಬುಧಗ್ರಹ ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ಬೇಕಾದ ಆವರ್ತನಾವಧಿ ಕೇವಲ ೮೮ ದಿನಗಳಾದ ಕಾರಣ ಅದನ್ನು ನಮ್ಮ ಸೌರವ್ಯೂಹದ ‘ಅತೀ ವೇಗದಲ್ಲಿ ಸುತ್ತುವ ಗ್ರಹ’ ಎಂಬ ಕೀರ್ತಿಗೆ ಭಾಜನವಾಗಿಸಿಬಿಟ್ಟಿದೆ. ಅದೇ ರೀತಿ ನಮ್ಮ ಭೂಮಿ ಸಹ ತನ್ನದೇ ಆದ ಆವರ್ತನಾವಧಿಯಲ್ಲಿ (ಸರಾಸರಿ ೩೬೫ ದಿನ) ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿದೆ. ವಿಭಿನ್ನ ಪ್ರದಕ್ಷಿಣಾ ಪಥಗಳ ಈ ಅಂತರದಿಂದಾಗಿ ಇವೆರಡು ಗ್ರಹಗಳು ಒಂದೇ ನೇರದಲ್ಲಿದ್ದು, ನಾವು ಭೂಮಿಯಿಂದ ಈ ಪುಟ್ಟ ಗ್ರಹದ ರವಿತಾಡನವನ್ನು ನೇರ ದಿಟ್ಟಿಸಬಹುದಾದ ಅವಕಾಶ ತೀರಾ ಅಪರೂಪಕ್ಕೆ ಸಿಗುತ್ತದೆ. ಈ ಬಾರಿಯ ಸಂಘಟನೆ ೨೦೦೬ ರ ನಂತರ ಘಟಿಸುತ್ತಿರುವ ಮೊದಲ ಅವಕಾಶ. ಇಂತಹದ್ದೆ ಮತ್ತೊಂದು ದೃಶ್ಯ ವೀಕ್ಷಿಸಬೇಕೆಂದರೆ ಮತ್ತೆ ೨೦೧೯ರ ತನಕ ಕಾಯಬೇಕು.

ತಾಳಿ, ಇದೇನು ಮಹಾ – ಒಂದು ದಶಮಾನಕ್ಕಿಂತ ತುಸು ಹೆಚ್ಚಿನ ಅವಧಿಯಲ್ಲೇ ಘಟಿಸುವುದಾದರು ಅದು ಸುಮಾರು ಬಾರಿ ನಡೆಯುವ ಪ್ರಕ್ರಿಯೆಯೇ ಆದಂತಲ್ಲವೆ ಎನ್ನಬೇಡಿ. ೧೩ ವರ್ಷದ ಸರಾಸರಿಯಲ್ಲಿ ಪರಿಗಣಿಸಿದರು ಒಂದು ಶತಮಾನದಲ್ಲಿ ಎಷ್ಟು ಬಾರಿ ನಡೆಯಲು ಸಾಧ್ಯ ? ಬುಧಗ್ರಹವು ಭೂಮಿ ಮತ್ತು ಸೂರ್ಯನ ನಡುವೆ ಪ್ರತಿ ೧೧೬ ದಿನಕ್ಕೊಮ್ಮೆ ಹಾದು ಹೋಗುತ್ತದೆಯಾದರೂ ಅದರ ಆವರ್ತ ಸಮತಲ ನಮ್ಮ ಭೂಮಿಯ ಆವರ್ತ ಸಮತಲಕ್ಕೆ ಕೆಲವು ಕೋನದಷ್ಟು ವ್ಯತ್ಯಾಸದಲ್ಲಿರುತ್ತದೆ. ಭುವಿಯ ದೃಷ್ಟಿಯಲ್ಲಿ ಬುಧನ ಪ್ರದಕ್ಷಿಣಾ ಪಥವು ಒಂದು ರೀತಿಯ ಓರೆಯಾದ ಪ್ರಕ್ಷೇಪಣಾ ಪಥದಲ್ಲಿರುತ್ತದೆ. ಹೀಗಾಗಿ ಭೂಮಿ ಮತ್ತು ಬುಧಗ್ರಹಗಳೆರಡರ ಪಥಗಳು ಪರಸ್ಪರ ಒಂದನ್ನೊಂದು ಸಂಧಿಸುವ ಅವಕಾಶವೂ ಕೂಡಿಬರಬೇಕು. ಈ ಸಂಯುಕ್ತ ಅಂಶಗಳ ಗಣಿತ ಆ ಸರಾಸರಿ ವರ್ಷಗಳನ್ನು ಏರುಪೇರಾಗಿಸಿಬಿಡುತ್ತದೆಯಾಗಿ ‘ಪ್ರತಿ ಇಂತಿಷ್ಟು ವರ್ಷಗಳಲ್ಲಿ ಇದು ಘಟಿಸುತ್ತದೆ’ ಎಂದು ಸರಳವಾಗಿ ಹೇಳುವಂತಿಲ್ಲ. ಆ ಆವರ್ತನ ಸಂಘಟನೆ ತನ್ನದೇ ಆದ ಮಾದರಿಯನ್ನು ಹೊಂದಿರುವುದಾದರು ಅದು, “ತುಸುಕಾಲ ಪ್ರತಿ ‘ಎಕ್ಸ್’ ವರ್ಷಗಳಿಗೊಮ್ಮೆ, ನಂತರ ‘ವೈ’ ವರ್ಷಗಳಿಗೊಮ್ಮೆ, ಹಾಗೆಯೇ ಮತ್ತೆ ‘ಜಡ್’ ವರ್ಷಗಳಿಗೊಮ್ಮೆ, ಮತ್ತೆ ‘ವೈ’ ವರ್ಷಗಳಿಗೊಮ್ಮೆ, ತದನಂತರ ಮೂರು ಬಾರಿ ‘ಜಡ್’ ವರ್ಷಗಳಿಗೊಮ್ಮೆ….” ಹೀಗೆ ಎರ್ರಾಬಿರ್ರಿಯಾಗಿ ಸಾಗುವ ಕೋಟಲೆ ಲೆಕ್ಕಾಚಾರ.

ಬುಧಗ್ರಹವನ್ನು ಬಿಟ್ಟರೆ ನಮಗೂ ಸೂರ್ಯನಿಗು ನಡುವಿರುವ ಶುಕ್ರಗ್ರಹ (ವೀನಸ್) ಕೂಡ ನಮಗೆ ಬುಧಗ್ರಹದಂತಹುದ್ದೆ ಪಥ ಸಂಚಲನ ವೀಕ್ಷಣೆಯ ಅವಕಾಶ ನೀಡುವುದಾದರು – ಅದು ಹೆಚ್ಚು ನಿಧಾನವಾಗಿ ಮತ್ತು ಬುಧಗ್ರಹಕ್ಕಿಂತಲೂ ಕಡಿಮೆಯದಾದ ಓರೆ ಕೋನ ಸಮತಲದಲ್ಲಿ ಘಟಿಸುತ್ತದೆ. ಹೀಗಾಗಿ ನಮ್ಮಾ, ಸೂರ್ಯನ ನಡುವೆ ಹಾದುಹೋಗುವ ಶುಕ್ರನ ಪ್ರಾತ್ಯಕ್ಷಿಕೆಯೂ ಅಪರೂಪದ್ದಾದರು ಸ್ವಲ್ಪ ಹೆಚ್ಚು ಸುಲಭವಾಗಿ ನಿಗಾ ಇಡಬಹುದಾದಂತದ್ದು: ಇಲ್ಲಿ ಇದು ಯಾವಾಗಲು ಎಂಟು ವರ್ಷಗಳ ಅಂತರದಿಂದ ಬೇರ್ಪಟ್ಟ ಒಂದು ಜಂಟಿ ಸಂಘಟನೆಯಾಗಿ (ಯುಗ್ಮದ ಹಾಗೆ) ನಡೆಯುವ ಮತ್ತು ಈ ಜಂಟಿ ಜೋಡಿ ಒಂದು ಶತಮಾನದಲ್ಲಿ ಒಂದು ಸಾರಿ ಮಾತ್ರವೇ ನಡೆಯುವ ಪ್ರಕ್ರಿಯೆ. ನೀವೊಂದು ವೇಳೆ ೨೦೧೨ರ ಹಾದುಹೋಗುವಿಕೆಯನ್ನು ಗಮನಿಸಲಿಲ್ಲವೆಂದಾದರೆ ನಿಮ್ಮ ಅದೃಷ್ಟ ಪರೀಕ್ಷೆಗೆ ಮುಂದಿನ ೨೧೧೭ ರ ತನಕ ಕಾಯಬೇಕು.

ನಮ್ಮ ಸೌರವ್ಯೂಹದ ನೆರೆಹೊರೆಯ ಇಂತಹ ಚಲನೆಗಳು ಇದೇ ಮಾದರಿಯದ್ದೆ. ಅಲ್ಲಿನ ಗ್ರಹಗಳು ತಮ್ಮ ಸೂರ್ಯರ ಮುಂದೆ ಹಾದು ಹೋಗುವ ಹೊತ್ತಲ್ಲಿ ಅವುಗಳ ಇರುವಿಕೆಯನ್ನು ಗಮನಿಸುವುದು ಮಾತ್ರವಲ್ಲದೆ ವಿವಿಧ ಮಾನಕಗಳ ಮೂಲಕ ಅವುಗಳ ಮತ್ತದರ ಸುತ್ತಲಿನ ವಾತಾವರಣವನ್ನು ಅಳೆದು ಅಲ್ಲೇನಾದರು ಜೀವವಿಕಾಸದ ಕುರುಹೇನಾದರು ಇದೆಯೇ ಎಂದು ಅಧ್ಯಯನ ಮಾಡುವುದು ಪ್ರಚಲಿತ ವಿಧಾನ.

ಈಗಾಗಲೆ ಈ ರೀತಿಯ ಅಧ್ಯಯನಗಳಿಂದ ನಮ್ಮ ನೆರೆಹೊರೆ ಗ್ರಹಗಳ ಪ್ರದಕ್ಷಿಣಾ ಪಥ ಮತ್ತು ಹಾದುಹೋಗುವಿಕೆಯನ್ನು ಎಷ್ಟು ಆಳವಾಗಿ ಅರಿತಿದ್ದೇವೆಂದರೆ, ಅವುಗಳೀಗ ಮೊದಲಿದ್ದಷ್ಟೆ ಅದ್ಭುತ ವೈಜ್ಞಾನಿಕ ಅವಕಾಶಗಳಾಗಿ ಉಳಿದಿಲ್ಲ.

” ವೈಜ್ಞಾನಿಕವಾಗಿ, ಕೆಲವು ನೂರು ವರ್ಷಗಳ ಹಿಂದೆ ಈ ವಿದ್ಯಾಮಾನಗಳು ಹೆಚ್ಚು ಪ್ರಾಮುಖ್ಯವಾಗಿದ್ದವು” ಎಂದು ‘ದಿ ಪೋಸ್ಟ್’ಗೆ ಹೇಳಿಕೆ ನೀಡಿದವರು ಮೆಸೆಂಜರ ಗಗನ ನೌಕೆಯ ಮುಖ್ಯ ವಿಜ್ಞಾನಿ ನ್ಯಾನಿ ಚಾಬೊಟ್ (ಕಳೆದ ವರ್ಷವಷ್ಟೇ ಮೆಸೆಂಜರ ಆಕಾಶ ನೌಕೆಯ ಬುಧಗ್ರಹಕ್ಕೆ ಅಪ್ಪಳಿಸಿದ ನಂತರ ಅದರ ಚಟುವಟಿಕೆಗಳನ್ನೆಲ್ಲ ಸ್ಥಗಿತಗೊಳಿಸಲಾಯ್ತು).

ಆದರೂ ಈ ಅಡ್ಡ ಹಾಯುವಿಕೆಯಿಂದ ವಿಜ್ಞಾನಿಗಳು ಕೆಲವು ಉಪಯುಕ್ತ ಮಾಹಿತಿಯನ್ನು ಪಡೆಯಬಹುದು. ಸೌರವ್ಯೂಹದಲ್ಲೆ ಅತೀ ತೆಳುವಾದ ಬುಧಗ್ರಹದ ವಾತಾವರಣದ ವಿಶ್ಲೇಷಣೆ ಮಾಡಿ ಅಲ್ಲಿ ಜೀವವಿರುವ ಕುರುಹುಗಳಿಗಾಗಿ ಹುಡುಕಬಹುದು ( ಆ ವಾತಾವರಣದಲ್ಲಿರುವ ಅಣುಗಳ ಮೂಲಕ ಹಾಯ್ದು ಬರುವ ಬೆಳಕನ್ನು ಪರೀಕ್ಷಿಸಿ, ವಿಶ್ಲೇಷಿಸುವ ಮೂಲಕ). ಬುಧಗ್ರಹದ ಜಾಗ ಮತ್ತು ಸೂರ್ಯನ ಮುಂದೆ ಹಾದುಹೋಗುವ ಪ್ರಕ್ರಿಯೆ ಕರಾರುವಾಕ್ಕು ಮತ್ತು ವಿಶ್ವಾಸಾರ್ಹ ನಿಖರತೆಯದ್ದಾಗಿರುವುದರಿಂದ, ಈ ಪ್ರಕ್ರಿಯೆಯನ್ನೇ ಆಧಾರವಾಗಿಟ್ಟುಕೊಂಡು ಗಗನ ನೌಕೆಗಳಲ್ಲಿರುವ ಪರಿಕರ, ಉಪಕರಣಗಳ ಸೂಕ್ಷ್ಮ ನ್ಯೂನತೆಗಳನ್ನು ಪರಿಶೀಲಿಸಿ ಸರಿಪಡಿಸಬಹುದು. ಬುಧಗ್ರಹದ ಸ್ಥಾನಿಕ ಆಧಾರದ ಮೇಲೆ ದೂರದರ್ಶಕಗಳನ್ನು ಸರಿಯಾದ ದಿಕ್ಕಿನತ್ತ ನಿಟ್ಟಿಸುವಂತೆ ಮಾಡಬಹುದಷ್ಟೆ ಅಲ್ಲದೆ, ಕೆಲವು ಉಪಕರಣಗಳ ದೃಷ್ಟಿದೋಷಗಳನ್ನು ಈ ಸಂಘಟನೆಯ ಆಧಾರದ ಮೇಲೆ ಸರಿಪಡಿಸಿಕೊಳ್ಳಬಹುದು.

“ಇದೊಂದು ರೀತಿ ಕ್ಯಟರಾಕ್ಟ್ ಇದ್ದ ಕಣ್ಣಲ್ಲಿ ಕಾಣುವ ಹಾಗೆ – ಮಂಜು ಕವಿದ ವಾಹನದ ಗಾಜಿನಿಂದ ನೋಡುತ್ತಿರುವ ಹಾಗೆ, ಪ್ರಕಾಶಮಾನ ಹೊಳಪಿನ ಬೆಳಕಿನ ಸುತ್ತ ನಾವು ತಾರಾ ರೀತಿಯ ಪ್ರಭಾವಲಯವನ್ನು ಕಾಣುತ್ತೇವೆ” ಎನ್ನುತ್ತಾರೆ ಮತ್ತೊಬ್ಬ ನಾಸಾ ವಿಜ್ಞಾನಿ ಡೀನ್ ಪೆಸ್ನೇಲ್. ಸೂರ್ಯನ ಅಗಾಧ ಬೆಳಕಿನೆದುರು ಬುಧಗ್ರಹವು ಸಂಪೂರ್ಣ ಕಪ್ಪು ಕಾಯವಾಗಿ ಕಾಣಿಸಿಕೊಳ್ಳುತ್ತದೆಯಾದರು, ಬಳಸುವ ಉಪಕರಣಗಳು ಬೆಳಕನ್ನು ಚದುರಿಸುವ ಬಗೆಯಿಂದಾಗಿ ಅದೊಂದು ತುಸು ಮೆಲುವಾಗಿ ಹೊತ್ತಿಸಿಟ್ಟ ಕಾಯದ ಹಾಗೆ ಕಾಣಿಸಿಕೊಳ್ಳಬಹುದು. ಈ ಸಂಘಟನೆಯ ಹೊತ್ತಿನ ಅವಕಾಶವನ್ನು ಬಳಸಿಕೊಂಡು ವಿಜ್ಞಾನಿಗಳು ಆ ಉಪಕರಣಗಳನ್ನು ತಿದ್ದಿ ಬುಧಗ್ರಹದ ನೈಜ ಬಣ್ಣಗಳನ್ನು ನೋಡುವಂತೆ ಸರಿಪಡಿಸಿಕೊಂಡರೆ, ಅವುಗಳನ್ನು ಮತ್ತಷ್ಟು ಅಜ್ಞಾತ ಕಾಯ ಮತ್ತು ವಸ್ತುಗಳ ಅಧ್ಯಯನಕ್ಕೆ ಮರು ಬಳಸುವ ಹೊತ್ತಿನಲ್ಲಿ ಉಂಟಾಗಬಹುದಾದ ತಪ್ಪೆಣಿಕೆ ಮತ್ತು ಅವಘಡಗಳಿಂದ ಕಾಪಾಡಿದಂತೆ ಆಗುತ್ತದೆ.

ಚಾಬೋಟ್ ಈ ಪ್ರಕ್ರಿಯೆ ನಮ್ಮ ಜನರನ್ನು ಆಕಾಶದತ್ತ ನೋಡುವಂತೆ ಮತ್ತು ನೆರೆಹೊರೆಯ ಗ್ರಹಗಳ ಕುರಿತು ಆಲೋಚಿಸುವಂತೆ ಪ್ರಚೋದಿಸಲೆಂದು ಆಶಿಸುತ್ತಾರೆ. ಕಳೆದ ಶುಕ್ರವಾರ ಆಕೆ ಮತ್ತವಳ ಮೆಸೆಂಜರ ತಂಡದ ಸದಸ್ಯರು ಬುಧಗ್ರಹದ ಸಂಪೂರ್ಣ ಮೇಲ್ಮೆ ಮಾಹಿತಿಯನ್ನೊಳಗೊಂಡ ಮೊಟ್ಟಮೊದಲ ಭೂಪಠವನ್ನು ಬಿಡುಗಡೆ ಮಾಡಿದರು.

” ಇದು ನಿಜಕ್ಕೂ ಸಕಾಲದಲ್ಲಿ ಬಿಡುಗಡೆಯಾಗುತ್ತಿದೆ..” ಮುಂದುವರೆದು ಆಕೆ ನುಡಿದರು ” ಈಗಾದರೆ ಜನಗಳು ಕೂಡ ಆಸಕ್ತಿಯಿಂದ ನೋಡುತ್ತಿರುತ್ತಾರೆ..”

ಈ ಅಧ್ಯಯನ ಕಾಲದಲ್ಲಿ ಆಕೆಯ ತಂಡ ಬುಧಗ್ರಹದ ಕುರಿತು ಅನೇಕ ರೋಚಕ ಮಾಹಿತಿಗಳನ್ನು ಗ್ರಹಿಸಿ ಕಲೆಹಾಕಿದ್ದಾರೆ. ಚಾಬೋಟ್ ನುಡಿಯುತ್ತಾರೆ “ಯಾವುದೊಂದನ್ನು ಇನ್ನೊಂದಕ್ಕಿಂತ ಹೆಚ್ಚು ಪ್ರಮುಖವಾದದ್ದೆಂದು ಗುರುತಿಸಲು ಬಯಸುವುದಿಲ್ಲ” – ಆದರು ಈ ಮೂರು ಕಾಡುವ ಅಂಶಗಳನ್ನು ಗಮನಾರ್ಹವೆಂದು ಪರಿಗಣಿಸುತ್ತಾರೆ:

” ಬುಧಗ್ರಹದಲ್ಲಿರುವ ದೈತ್ಯ ಗಾತ್ರದ ಆಗಾಧ ವಿಸ್ತೀರ್ಣದಲ್ಲಿ, ಯಾವುದೋ ಹಳೆಯ ಕಾಲದಲ್ಲಿ ಅದರ ಮೇಲ್ಮೆಯನ್ನೆಲ್ಲ ಆವರಿಸಿಕೊಂಡಿರುವ ಅಗ್ನಿಪರ್ವತದಿಂದುಗುಳಲ್ಪಟ್ಟ ಲಾವ – ಅಮೇರಿಕದ ಅರ್ಧಕ್ಕಿಂತಲು ಹೆಚ್ಚು ವಿಸ್ತೀರ್ಣದಲ್ಲಿ ಚಾಚಿಕೊಂಡಿರುವಂತದ್ದು, ಮೊದಲನೆಯ ಅಂಶ. ಅಗ್ನಿಪರ್ವತದ ಯಾವ ರೀತಿಯ ಮಹಾನ್ ಪ್ರಕ್ರಿಯೆಯ ಕಾರಣಗಳು ಇಂತಹ ಅಗಾಧ ಗಾತ್ರದ ಪರಿಣಾಮವನ್ನುಂಟು ಮಾಡಿತೆಂಬುದು ತೀವ್ರವಾಗಿ ಕಾಡುವ ಅಂಶ” ಆಕೆ ಹೇಳುತ್ತಾರೆ.

ಬುಧಗ್ರಹದಲ್ಲಿರುವ ಮತ್ತೊಂದು ಕಾಡುವ ಅಂಶವೆಂದರೆ ಬೇರೆಲ್ಲೂ ಕಾಣದ, ಬುಧನ ಮೇಲೆ ಮಾತ್ರ ಕಾಣುವ ‘ಹಾಲೋಸ್’ ಅಥವಾ ‘ಗುಂಡಿ’ ಬಿದ್ದಂತಹ ಗುರುತುಗಳು. ಈ ಚಿಕ್ಕ ಗುಂಡಿ ಗುರುತುಗಳು ಬುಧನ ಮೇಲ್ಮೈ ಪರಿಸರದಲ್ಲಿ ಉಳಿಯಲಾಗದೆ ಮಂಜಿನಂತೆ ಆವಿಯಾಗಿ ಕರಗಿಹೋದ ಬಂಡೆಗಲ್ಲುಗಳು ಉಳಿಸಿಹೋಗಿರುವ ಜಾಗದ ಗುರುತೆನ್ನುವ ಅನುಮಾನ.

” ಬಂಡೆಗಲ್ಲುಗಳು ಸಾಮಾನ್ಯವಾಗಿ ತಂತಾನೆ ವ್ಯೋಮದಲ್ಲಿ ಮಾಯವಾಗಿಹೋಗುವುದಿಲ್ಲ, ಆದರೆ ಬುಧಗ್ರಹದಲ್ಲಿ ಮಾತ್ರ ಹಾಗಾಗುತ್ತದೆ” ಎಂದು ವಿವರಿಸುತ್ತಾರೆ ಚಾಬೋಟ್.

ಚಾಬೋಟ್ ತಮ್ಮ ಬಹುತೇಕ ಗಮನ ಮತ್ತು ಸಮಯವನ್ನು ನಿರಂತರ ಕತ್ತಲ ನೆರಳಿನಲ್ಲಿರುವಂತಿರುವ, ಬುಧಗ್ರಹದ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಉಂಟಾಗುವ ನೀರುಗಡ್ಡೆಗಳ ಅಧ್ಯಯನಕ್ಕೆ ವ್ಯಯಿಸಿದ್ದಾರೆ. ಅವುಗಳ ಇರುವಿಕೆಯ ಸಂಶೋಧನೆಯೇನೊ ಮಹತ್ತರವಾದದ್ದೆ ನಿಜ, ಆದರೆ ಅದು ಮತ್ತಷ್ಟು ಹೊಸ ಪ್ರಶ್ನೆಗಳಿಗೆ ದಾರಿಮಾಡಿಕೊಟ್ಟಿದೆ ಎನ್ನುತ್ತಾರಾಕೆ. ಅವು ಅಲ್ಲಿಗೆ ಬಂದದ್ದಾರು ಹೇಗೆ, ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಾದಲ್ಲಿ, ನೀರು ಹೇಗೆ ಭೂಮಿಗೆ ತನ್ನ ದಾರಿ ಕಂಡುಕೊಂಡಿತು ? ಎನ್ನುವುದರ ಬಗ್ಗೆಯೂ ಬೆಳಕು ಚೆಲ್ಲಲು ಸಾಧ್ಯ ಎನ್ನುವ ಹಿನ್ನಲೆಯಲ್ಲಿ.

ಆಕೆಯೆನ್ನುತ್ತಾರೆ “ವಿಜ್ಞಾನದಲ್ಲಿ ಒಂದು ಸಮಸ್ಯೆ ಬಗೆಹರಿದು ಉತ್ತರ ದೊರಕಿದರೆ, ಅದರ ಹಿಂದೆಯೆ ಕಾಡುವ ನೂರೆಂಟು ಹೊಸ ಪ್ರಶ್ನೆಗಳನ್ನು ಉಳಿಸಿಹೋಗುತ್ತವೆ”

ಸಣ್ಣ ಚುಕ್ಕೆಯಾಗಿ ಬುಧಗ್ರಹ ಸೂರ್ಯನೆದುರು ಹಾದುಹೋಗುವುದನ್ನು ಗಮನಿಸಿ ನೋಡುವುದರಿಂದ ಈ ಪ್ರಶ್ನೆಗಳಿಗೆಲ್ಲ ಉತ್ತರ ದೊರಕಿಬಿಡುವುದೆಂದೇನಲ್ಲ; ಅಷ್ಟೇಕೆ, ಆ ಅಂಶಗಳ ಇರುವಿಕೆಯನ್ನು ಗಮನಿಸಲೂ ಸಹ ಸಾಧ್ಯವಾಗದಿರಬಹುದು. ಆದರೂ ಅದರ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸದಿರಲು ಅಸಾಧ್ಯವಾದ ಕಾರಣ, ಪರಿಶೀಲಿಸಿ ನೋಡಬೇಕಾದ ಅಗತ್ಯ ಇದ್ದೆ ಇರುತ್ತದೆ.

– ಕನ್ನಡ ಸಮೀಪಾನುವಾದ: ನಾಗೇಶ ಮೈಸೂರು

© 2016 ದಿ ವಾಷಿಂಗ್ಟನ್ ಪೋಸ್ಟ್ ( © 2016 The Washington Post )
(ವಾಷಿಂಗ್ಟನ್ ಪೋಸ್ಟಿನಲ್ಲಿ ಪ್ರಕಟಿತವಾದ ಬರಹದ ಕನ್ನಡ ಸಮೀಪಾನುವಾದ; ಎನ್.ಡಿ.ಟೀವಿ (NDTV) ಜಾಲ ಮಾಧ್ಯಮದಲ್ಲಿ ಪ್ರಕಟಿತವಾಗಿದ್ದ ರೂಪದಲ್ಲಿ )

Thanks and best regards,
Nagesha MN

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s