00735. ಕವಿ(ತೆ)ಗಳ ಬಾಣಂತನ..


00735. ಕವಿ(ತೆ)ಗಳ ಬಾಣಂತನ..
__________________________


ಯಾರಿಗೆ ತಾನೇ ಗೊತ್ತು ?
ಕವಿ(ತೆ)ಗಳ ಗರ್ಭಧಾರಣೆ
ದಿನನಿತ್ಯದ ಪ್ರಸವ ವೇದನೆಗೆ
ಅಂತರಂಗದ ಪ್ರಸೂತಿಗೃಹದಲಿ ತಜ್ಞ
ನಿಷ್ಣಾತರಂತೆ ನಟಿಸುವ ಸೂತಗಿತ್ತಿತನ..

ಹಾಳು ಹೊತ್ತು ಗೊತ್ತಿಲ್ಲದ ಸಂಭೋಗ
ಧುತ್ತೆಂದುದಿಸಿ ಆವರಿಸಿ ತುಣುಕ ಚಳುಕು
ನೋವು, ನಗೆ, ಕುಹುಕ, ವ್ಯಂಗ್ಯ, ಹತಾಶೆ
ಕೋಪದಾಶಯವೆಲ್ಲ ಆವಿಯಾಗುವ ಮೊದಲೆ
ಭರಿಸಿಬಿಡಬೇಕು ಚಕಚಕ ಚಾಕಚಕ್ಯತೆ
ಧರಿಸಿಬಿಡಬೇಕು ಅದೇ ಗಳಿಗೆ ಗರ್ಭದಲಿ
ನವವೊ ಅಭಿನವವೊ ಕ್ಷಣವೊ ದಿನವೊ ಮಾಸವೊ
ಯಾರಿಡುವ ಲೆಕ್ಕಾಚಾರ ಬಸಿರ ಚೀಲ
ಏದುಸಿರ ಬಗಿಲಲಿಟ್ಟು ಮುಲುಗುತ
ಅನುಭವಿಸಬೇಕು ಪ್ರಸವ ಯಾತನೆ..

ಗರ್ಭಪಾತಗಳಾದದ್ದುಂಟು
ಅವಸರದ ಹೆರಿಗೆಯ ಅನುಭಾವ
ಅನುಭೂತಿಗಳದೆ ಸೊಗ ದುಗುಡ ಗೊಂದಲ
ಜಿಗುಟುತನದಲಿ ಬಿಡದೆ ಪ್ರಳಯ ಕಾವ್ಯ
ಹಿಂಡಿ ಕಸುವೆಲ್ಲವ ಪ್ರನಾಳ ಶಿಶು ಜನನ..

ಅಲ್ಲಿಂದ ಶುರು ಬಾಣಂತನಗಳಿಗೆ
ಹುಟ್ಟಿತೇನೊ – ಗಂಡೊ,ಹೆಣ್ಣೊ,ಮತ್ತಾರೊ.. ?
ಕೂಸೆ ಮೂಸೆಯಿಂದೆದ್ದು ನಿಂತು
ಕತ್ತ ಪಟ್ಟಿ ಹಿಡಿದು ದಬಾಯಿಸೊ ಗಮ್ಮತ್ತು ;
ಹುಟ್ಟಿಸಿದ್ದಾರನೆಂದರೆ ಹೇಳಲಿ ಏನ ?
ವೈದ್ಯನಾ ? ತಾಂತ್ರಿಕನಾ ? ಲೆಕ್ಕಿಗನ ? ಜವಾನನಾ ?
ಅಲ್ಲಾರೊ ಕುಳಿತ ಮೌನ ನ್ಯಾಯಾಧೀಶರು
ತೀರ್ಪೀಯುವವರೆಗು ಬದುಕೆಲ್ಲಿ ?
ಉತ್ತರವೆಲ್ಲಿ ಬದುಕಿನ ಗುನುಗಲ್ಲಿ..
ಯಾರು ಓದುವರೊ, ಯಾರ ಮಡಿಲೊ.

ಹರಿದ ಮುದುರಿದ ಬಟ್ಟೆ ಕೊಡವಿ
ಹಾಸಿಟ್ಟು ಜತನದಿ ಮಲಗಿದ ಹಸುಳೆ
ಕಾದು ಕೂರು ನಿನ್ನ ಸರದಿಯ ಸರತಿ ;
ಬರದಿದ್ದರೇನು ಬಿಡು ಹುಟ್ಟೆ ಸಂತೃಪ್ತಿ..
ಅಯೋನಿಜ ಜನುಮ ಭಾವಗಳ ಕೊಳ್ಳಿ
ನೀರಿಗದ್ದಿದಂತೆ ತಂಪು ಪ್ರಸವದಲಿ..

ಸುಮ್ಮನೆ ಕಾಯುವ …
ಮತ್ತೊಂದು ಪ್ರಸವದ ಹೊತ್ತು..
ಜೊತೆಗೆ ಜೊತೆಗಾರರು ಬರುವರು…
ಮುರಿದು ಮೌನದ ಏಕಾಂತವನು…
ನಿರಂತರ ಬಸುರಿ ಪ್ರಸವ ಬಾಣಂತನ
ಕವಿ(ತೆ)ಯಾ ಹಣೆಬರಹ.

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s