00770. ಗತಿಸಿದ ತಾತನ ಜೊತೆ..


00770. ಗತಿಸಿದ ತಾತನ ಜೊತೆ..
________________________


ಕಾಲದ ಜೊತೆ ಹೋಲಿಕೆಯಲ್ಲಿ ಎಲ್ಲರು ಕರುಬುವ ಸಾಮಾನ್ಯ ದೃಶ್ಯ – ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು ಎನ್ನುವ ಅದೇ ರಾಗ, ಅದೇ ತಾಳ, ಅದೇ ಪಲ್ಲವಿ. ಹಳತೆ ಒಳಿತು ಅನ್ನುವ ಲೋಲಕದ ಒಂದು ತುದಿಯಿಂದ, ಹೊಸತೆ ಜಗ ನಿಯಮವೆನ್ನುವ ಮತ್ತೊಂದು ಲೋಲಕದ ತುದಿಯ ನಡುವಲೆಲ್ಲೊ ಕಳೆದುಹೋಗಿರುವ ನಮ್ಮ ಬಾಳುವೆಗಳನ್ನು ಸ್ವಸ್ಥಗೊಳಿಸುವ ತಾತಗಳು (ಅರ್ಥಾತ್ ಪರಂಪರೆಗಳು) ಬಂದಾವೆಯೆ, ಇದ್ದವು ಉಳಿದುಕೊಂಡಾವೆಯೆ ಎನ್ನುವುದು ಯಕ್ಷ ಪ್ರಶ್ನೆ. ಆದರೆ ಈ ಕವನದಲ್ಲಿರುವುದು ಮಾತ್ರ ಬರಿಯ ದೂರುವ ಸ್ವರ !

ಗೊತ್ತ ನಿನಗೆ ತಾತ ?
ಈ ಕಾಲ ಯಮದೂತ
ಸದ್ಯ ನೀನಾದೆ ಸ್ವರ್ಗಸ್ಥ
ನಿನ್ನ ಕಾಲವೆ ಪುಣ್ಯವಂತ..

ಕುಡಿವ ನೀರಿಗೂ ಕಾಸು
ಕೊಟ್ಟು ಹಾಕುತ್ತ ಶೂಸು
ಖಾಲಿ ಹೊಳೆಯ ದಿಟ್ಟಿಸು
ಸೆಲ್ಫಿಗೆ ಕೊಡುತ ಪೋಸು..

ನಿನದಿತ್ತೆಲ್ಲ ಜಗ ಹೊರಗೆ
ಕಟ್ಟಿಹೆವೆಲ್ಲವ ಪೋನೊಳಗೆ
ತಿನ್ನೆ ಖಾತರಿಯಿಲ್ಲ ಹೊತ್ತೊತ್ತಿಗೆ
ಡೇಟಾ ಪ್ಯಾಕು ಗಟ್ಟಿ ಮೊಬೈಲಿಗೆ..

ತಿಂದುಟ್ಟುಣುವುದೇನು ಬಿಡು
ನಿನ್ನ ಹಾಗಲ್ಲ ಹಬ್ಬದ ಜೋಡು
ಕಾಂಚನ ಗಣಿಸದೆ ಕೊಂಡು
ತಂದು ತಿನ್ನುವವರದೆ ದಂಡು..

ನಿನ್ನ ಜೋಬಿತ್ತಾದರು ಖಾಲಿ
ಮನಸಾಗಿತ್ತು ಬಿಡು ಬರಿ ಜಾಲಿ
ನಮ್ಮ ಬ್ಯಾಂಕಾಗುತಲಿದೆ ರೊಕ್ಕ
ಎಷ್ಟು ಹುಡುಕೂ ಮನಶ್ಯಾಂತಿ ಸಿಕ್ಕ..

– ನಾಗೇಶ ಮೈಸೂರು

http://www.graphicsfactory.com/Clip-Art/People/Family/grandfather-fishing0001-157519.html

00769. ಏನು ಮಾತು, ಏನು ಕತೆ ?


00769. ಏನು ಮಾತು, ಏನು ಕತೆ ?
__________________________


ಯಾರೆ ಮಧುರ ನೆನಪುಗಳ ಯಾತ್ರೆಗೆ ಹೊರಟರು, ಅದರ ಪ್ರಮುಖ ಅಂಗವಾಗಿ ಎದ್ದು ಕಾಣುವುದು ಮಾತು.. ಮಾತು ಕಟ್ಟಿಕೊಟ್ಟ ಬಂಧ, ಮುರಿದ ಸಖ್ಯ, ಬೆಸೆದ ಅಂತರ, ತೆರೆದಿಟ್ಟ ವ್ಯಕ್ತಿತ್ವ – ಎಲ್ಲವು ಯಾವುದೊ ರೂಪುರೇಷೆಗೆ ಆವರಣ ಹೊದಿಸುತ್ತಾ ಅವರವರ ಕಲ್ಪನೆಯ ಲೋಕ ತೆರೆದಿಡುತ್ತಾ ಹೋಗುತ್ತದೆ. ಕಲ್ಪನೆಗೂ ನೈಜತೆಗು ಇರುವ ಅಂತರವನ್ನು ಎತ್ತಿ ತೋರಿಸುವುದೂ ಸಹ ಇದೇ ಮಾತೆ ಆದರು, ಮೊದಲ ಬುನಾದಿ ಬೀಳುವುದು ಕಲ್ಪನಾಲೋಕದ ಸರಹದ್ದಿನಲ್ಲೆ; ಹೀಗಾಗಿ ಆ ಮಾತಿನ ಪಸೆ ಮುಂದೊಂದೊ ಹಿಂಗಿ ಹೋಗಿ ನಿಸ್ತೇಜವಾಗಿಬಿಡುವ ಕಥೆಯೂ ಉಂಟು. ಅರ್ಥರಾಹಿತ್ಯದ ಮಾತಿನ ಹೆಗಲೇರಿಸಿ, ಕಾಲಯಾನದೊಂದಿಗೆ ಪಕ್ವತೆಯ ಜಗುಲಿಯೆಡೆಗೆ ನೆಗೆಸುತ್ತ ಪರಿಪೂರ್ಣತೆಯತ್ತ ಹೆಜ್ಜೆಯಿಕ್ಕಿಸುವ ಅಪರೂಪದ ಸಂಘಟನೆಗಳೂ ಉಂಟು. ಎರಡರ ನಡುವಿನ ಯಾವುದೊ ಶೂನ್ಯಾಶೂನ್ಯ ಅತಂತ್ರದಲಿ ಸಿಲುಕಿ ಕಳುವಾಗಿ ಹೋಗಿ ತತ್ತರಿಸುವವರ ನಿದರ್ಶನಗಳೂ ಅಪಾರವೆ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಮಾತಿನ ಜಗದಲ್ಲೂ ಪಕ್ವತೆಯ ರೂಪದಲ್ಲಿ ಬದಲಾವಣೆ ಬರುತ್ತಿರಬೇಕು. ಬಂಧದ ಗಂಟು ಭಧ್ರವಾದಂತೆಲ್ಲ ಮಾತಿನ ಸ್ತರ ತನ್ನ ಮೂಲ ಮುಗ್ದತೆ, ಪ್ರಾಮಾಣಿಕತೆಯನ್ನು ಕಳೆದುಕೊಳ್ಳದ ಹಾಗೆ ಪ್ರಬುದ್ಧತೆಯತ್ತ ತನ್ನ ವಿಸ್ತಾರವನ್ನು ಹರವಿಕೊಳ್ಳುತ್ತಾ ಹೋದರೆ ನಿಸ್ತೇಜತೆ, ನಿರ್ಲಿಪ್ತತೆಯ ಬದಲು ಉತ್ಸುಕತೆ, ಪ್ರೇರಣೆಗಳನ್ನು ತುಂಬುವ ಅದ್ಬುತ ಸಾಧನವಾಗಿಬಿಡುತ್ತದೆ ಮಾತೆಂಬ ಮಹಾ ಶಕ್ತಿ. ಅಂತಹವರ ಮಾತು ಇತರರ ಬದುಕಿಗೂ ಪ್ರಭಾವ ಬೀರಬಲ್ಲ ತಾಕತ್ತಿರುವುದು ತಂತಾನೆ ಗೋಚರವಾಗುತ್ತದೆ – ಒಂದು ರೀತಿಯ ವಿಸ್ತರಿಸಿದ ಪ್ರಭಾವಲಯದ ಹಾಗೆ..

ಅದೇನೆ ಇದ್ದರು ಮೊದಮೊದಲ ಮಾತುಗಳ ಎಳಸುತನ, ಕಾತರ, ಆವೇಗ, ಅಪಕ್ವತೆ ಹುಟ್ಟಿಸುವ ನಿರೀಕ್ಷೆ, ನೋವು, ನಲಿವುಗಳಿಗೆ ಸಮನಾಗಲಾರದು ಪ್ರಬುದ್ಧತೆಯ ಹಾದಿ ಹಿಡಿದ ಪಕ್ವ ಮಾತು. ಆ ಹೊತ್ತಲ್ಲಿ ಅರ್ಥಕ್ಕಿಂತ ಖಾಲಿ ಮಾತೆ ಮುಖ್ಯ – ತರ್ಕ, ಸಹಜಾಸಹಜತೆ, ಅರ್ಥರಾಹಿತ್ಯತೆ ಅಲ್ಲಿನ ಪ್ರಶ್ನೆಯೆ ಅಲ್ಲ. ಆದರೆ ಅಲ್ಲಿ ಹರಿದಾಡುವ ಮಾತುಗಳ ಮೊತ್ತ ಮಾತ್ರ ಅಗಾಧ – ಸದಾಸರ್ವದಾ ಅಷ್ಟು ಮಾತಾಡಲಾದರೂ ಏನಿರುತ್ತದೆ ಎಂದು ಸೋಜಿಗಪಡುವಷ್ಟು.. ಅದೆ ಪ್ರಬುದ್ಧ ಜಗದಲ್ಲಿ ಮಾತಿಗೆ ಸಮಯದ ಕಾಲಾವಧಿ ನಿಗದಿಪಡಿಸುತ್ತ ಮಾರುಕಟ್ಟೆಯ ಸರಕಿನ ಪೋಷಾಕು ಹಾಕಿಸಿಬಿಡುತ್ತೇವೆ…!

ಈ ಕೆಳಗಿನ ಎಳಸು ಕವನ ಮೊದಮೊದಲ ಮಾತುಗಳ ಸೋಜಿಗಕ್ಕೆ ಬರೆದ ವ್ಯಾಖ್ಯೆ.. ಆ ಮಾತುಗಳಷ್ಟೇ ಅರ್ಥರಾಹಿತ್ಯತೆ, ಕುತೂಹಲ, ಕನಸು, ಕಲ್ಪನೆಗಳ ಕಲಸುಮೇಲೊಗರದಲ್ಲಿ ಮೂಡಿದ ಲಹರಿ. ಅದನ್ನು ಬರೆಯುವಾಗನಿಸಿದ ಭಾವ ಕೂಡ ಆ ಸ್ತರದ ಮಾತಿನ ಧಾಟಿಯಲ್ಲೇ ಕಾಡಿದ್ದು ನಿಜ – ಆಗ ಆಡಲದೆಷ್ಟೊಂದು ಮಾತಿರುವಂತೆ, ಅದನ್ನು ಹೇಳಲದೆಷ್ಟೊಂದು ಸಾಲುಗಳಿವೆಯಲ್ಲ ? ಎಂದು. ಆದರೆ ಅದು ಹೇಳಿ ಮುಗಿಸಲಾಗದ ಸರಕು ಎಂಬ ಸತ್ಯದರ್ಶನವೂ ಇದ್ದ ಕಾರಣಕ್ಕೆ ಚುಟುಕಲ್ಲೆ ಮುಗಿದಿದೆ. ಹೇಳಬೇಕಾದ್ದಕ್ಕಿಂತ ಹೇಳದೆ ಉಳಿದ ಮಾತುಗಳ ಹಾಗೆ – ಎದುರಿಲ್ಲದಾಗ ಧುತ್ತನೆ ಬಂದು ಕಾಡುತ್ತವೆ, ಎದುರಿದ್ದಾಗ ಅರ್ಧಕ್ಕರ್ಧ
ಹೊರಬರದೆ ಮಾಯವಾಗಿಬಿಡುತ್ತವೆ.. ಅಲ್ಲಿನ ಅಗತ್ಯ, ಅವಶ್ಯಕತೆ ಮಾತನ್ನು ಹೇಳುವುದಾಗಿತ್ತೊ ಅಥವಾ ಒಡನಾಟದ ನಡುವಿನ ಮೌನವನ್ನು ಮುಚ್ಚಲು ಬೇಕಾದ ಸರಕು, ಉರುವಲನ್ನು ಮಾತಿನ ನೆಪದಲ್ಲಿ ಸೇರಿಸುವುದಾಗಿತ್ತೊ ಎನ್ನುವ ಗೊಂದಲ ಮೂಡಿಸುತ್ತ.

ಆ ಗೊಂದಲ, ಗದ್ದಲ, ಪಿಸುಮಾತಿನ ಸೀಕರಣೆ ಈ ಸಾಲುಗಳಲ್ಲೀಗ..

ಎಲ್ಲಿಯದೋ ಆ ಮಾತುಗಳು..?
___________________________

ಏನು ಮಾತು, ಏನು ಕತೆ ?
ಗಂಟೆ ದಿನಗಟ್ಟಲೆಯ ಕವಿತೆ
ಎಲ್ಲಿದ್ದವದೆ ಮಾತು ಪದೆಪದೆ ?
ಆಡಿದ್ದ ಹೊತ್ತು ಜಗ ಮಲಗಿದೆ..

ಹೊತ್ತು ಗೊತ್ತಿಲ್ಲದ ಜಗದಲಿ
ಕಾವಲಿದ್ದವು ಹಗಲಿರುಳು
ಸೇರುತ ಕೂರುತ ಏನೆಲ್ಲಾ
ಮಾತಾಗೆ ಹವಣಿಸಿ ಕಾಯುತ..

ಮಾತಿಗೆ ಜತೆ ಕೂತಾ ಗಳಿಗೆ
ಪರಿವೆಯಿಲ್ಲದೆ ಪರಿಸರಕೆ
ಕನಸ ಹಂಚಿದ್ದು ತುಣುಕಾಗಿ
ಸಂಯಮವಿತ್ತು ಸಾನಿಧ್ಯದಲಿ..

ಸರಿ, ಮಿಕ್ಕ ಮಾತಿಗದೇನರ್ಥ ?
ವ್ಯರ್ಥ ಹುಡುಕಬೇಕೇಕೆ, ಬಿಡು
ಗುಟ್ಟಲ್ಹೇಳಿದೆ ಮಾತಲ್ಲ ಮುಖ್ಯ
ಕುಂಟುನೆಪ ಒಡನಾಟ, ಸಖ್ಯಕೆ..

ಅಚ್ಚರಿಯ ಅರ್ಥಕೋಶ ನಮದು
ಹುಡುಕಲಿಲ್ಲ ಮಾತಲಿ ಜಾಡು
ಮುನಿಸು ಮುದ ಹದ ಮೀರುತಲೆ
ಬೆಸೆದ ಬಗೆಗದಾವ ಕಾವ್ಯ ಸಮವೆ ?

– ನಾಗೇಶ ಮೈಸೂರು
(Picture source:http://m.wikihow.com/)