00775. ವಾಕಿಂಗ್ ವಾತ್ಸಾಯನ…..ತೂಕ ರಸಾಯನ!


00775. ವಾಕಿಂಗ್ ವಾತ್ಸಾಯನ…..ತೂಕ ರಸಾಯನ!
_____________________________________

ಬದಲಾಗುತ್ತಿರುವ ಆಧುನಿಕ ಜೀವನಶೈಲಿ ತಂದ ಅನೇಕ ಗ್ರಹಚಾರಗಳಲ್ಲಿ ತುಂಬಾ ತಾಪತ್ರಯದ್ದು ಅಂದರೆ ನಮ್ಮ ದೇಹ ಮತ್ತು ಆರೋಗ್ಯಗಳಿಗೆ ಸಂಬಂಧಿಸಿದ್ದು.. ಸುಖೀ ಆರಾಮೀ ಜೀವನಶೈಲಿಯೊಡನೆ ಉಡುಗೊರೆಯಾಗಿ ಬಂದ ಬೊಜ್ಜು, ಸ್ಥೂಲಕಾಯ, ಬೀಪಿ-ಶುಗರುಗಳ ತರಹದ ಆತ್ಮಸಖರ ಸಾಂಗತ್ಯ ಈಗ ಎಲ್ಲರ ಮನೆಮನೆ ಕಥೆ.. ಅದಕ್ಕೆ ವಾಕಿಂಗ್ ಮಾಡಿಕೊಂಡು ತೂಕ ಇಳಿಸಿಕೊಂಡು ಹೇಗೊ ಆರೋಗ್ಯವಂತರಾಗಿರಲು ಹೆಣಗುವ ಕಥೆ ನಮಗೆ ಚಿರಪರಿಚಿತ ಚಿತ್ರಣ.

ಆ ಒದ್ದಾಟದ ಬಗೆಯ ತುಸು ಲಘು ಹಾಸ್ಯ-ವ್ಯಂಗ್ಯ ಮಿಶ್ರಿತ ಜೋಡೀ ಕವನವೊಂದನ್ನು ೨೦೧೨ ರ ಜೂನಿನಲ್ಲಿ ಬರೆದಿದ್ದೆ.. ಕವನದಲ್ಲಿ ಹೊಸತೇನಿಲ್ಲದಿದ್ದರು ಎಲ್ಲರೂ ಎತ್ತಿ ತೋರಿಸುವ ಅದೇ ಕಾರಣಗಳು ಇಲ್ಲೂ ಅನುರಣಿತವಾಗುತ್ತವೆ ಎನ್ನುವುದಷ್ಟೆ ಗಮನಿಸಬಹುದಾದ ಅಂಶ. ಜತೆಗೆ ಎಲ್ಲರಿಗು ಅದರ ಅರಿವಿದ್ದರೂ ಯಾರು ಹಳೆಯ ತರಕ್ಕೆ ಮರಳಲೂ ಕೂಡ ಸಿದ್ದರಿಲ್ಲ ಎನ್ನುವುದು ಮತ್ತೊಂದು ಆಯಾಮ..

ಅಂದಹಾಗೆ ವಾತ್ಸಾಯನನ ಹೆಸರಿನ ಬಳಕೆ ಕೇವಲ ಉಪಮಾತ್ಮಕ, ಸಾಂಧರ್ಭಿಕ ಪರಿಧಿಯಲಷ್ಟೆ ( ಪ್ರಾಸಕ್ಕೆ ಅಂದುಕೊಂಡರೂ ಸರಿ). ನೈಜ ವಾತ್ಸಾಯನನ ವಸ್ತು ವಿಷಯಕ್ಕೂ ಈ ಕವನಕ್ಕೂ ಯಾವುದೇ ರೀತಿಯ ಸಂಬಂಧವಾಗಲಿ, ನೇರ ಅಥವಾ ಪರೋಕ್ಷ ಕೊಂಡಿಯಾಗಲಿ ಇರುವುದಿಲ್ಲ..😛

ಟೈಮ್ ಪಾಸಿಗೆ ಅಂದುಕೊಂಡು ಓದಿ.. 😊

೦೧. ವಾಕಿಂಗ್ ವಾತ್ಸಾಯನ….
———————————

ಈಗ
ಆಗಬಾರದಂತೆ ದಪ್ಪ
ಏನೇನು ಮಾಡ್ತಾರಪ್ಪ!
ಓಡಾಡೋದಂತೂ
ಬಸ್ಸು , ಕಾರು, ಬೈಕು
ಕರಗಿಸೋದಕ್ಕೆ ಮಾರ್ನಿಂಗ್ ವಾಕು !
ತಿನ್ನಬಾರದು ನೋಡಿ ಘಾಟು, ಫ್ಯಾಟು, ಮೀಟು, ಸ್ವೀಟೂ
ಎಣ್ಣೆ ಸೋರುವ ವಡೆ, ಬಜ್ಜಿ, ಬೋಂಡ ಆಗಿದ್ರು ಬೊಂಬೊಟ್ಟು !
ಮೊದಲಾದ್ರೆ ಹಬ್ಬಕ್ಕೋ, ಹರಿದಿನಕ್ಕೋ
ಆಗ್ತಿತ್ತು ಔತಣ ಒಬ್ಬಟ್ಟು
ಎಲ್ಲ ಪಾರಾಯಣ
ಈಗ
ಬೀದಿ, ಮೂಲೆಗೊಂದೊಂದು
ರೆಡಿ ಟು ಈಟು, ಚಾಟು, ಬಾರು, ರೆಸ್ಟೋರೆಂಟು!
ಮಾಡೋದೇನಿಲ್ಲ ತ್ರಾಸ
ಬರಿ ತರಬೇಕಷ್ಟೆ ಮನೆಗೆ
ಇಲ್ಲಾ
ಅಲ್ಲಿರಬೇಕಷ್ಟೇ ಕೊನೆಗೆ
ಜೇಬಿಗಷ್ಟು ತುಸು ಖಾಸ
ಆದರು ಆಗುತ್ತಲ್ಲ ಸುಗ್ರಾಸ !
ಎಲ್ಲಿ ಹೋಯಿತೋ
ಮಾಡುತ್ತಿದ್ದ ಅಡುಗೆ, ದಿನಗೆಲಸ
ಸಾಲದ್ದಕ್ಕೆ ವಾರಕ್ಕೊಂದು – ಉಪವಾಸ
ಪಾತ್ರೆ, ಪಗಡೆಗಳೊಂದಿಗೆ
ಎಡಬಿಡದಂತೆ ತಿಕ್ಕಿ ತೊಳೆದಾಟ
ಅರಿವಿರದಂತೆ ಮೈ ಕರಗಿಸುತಿದ್ದ ಹೊಡೆದಾಟ
ತನ್ನಂತಾನೆ ಪರಿಪೋಷಿಸುತಿದ್ದ
ಸಹಜ ಯೋಗಧಾಮ
ವೇಗ ಜೀವನದಲ್ಲಿ ಎಲ್ಲಿ ಹೋಯಿತೋ
ಆ ಸರ್ವ ದೇಹ ವ್ಯಾಯಾಮ
ರಕ್ತ ಬೀಜಾಸುರನಂತೆ ಉಕ್ಕುತ್ತಿದೆಯಲ್ಲ
ಏನೀ ಹೊಸ ಆಯಾಮ?
ಹತ್ತರಿಂದೈದಕ್ಕೆ ಆಗ ಬರುತಿದ್ದ ಪತಿರಾಯ
ರಾತ್ರಿ ಹತ್ತಾದರೂ ಈಗ
ಅವರಿಬ್ಬರ ಆಫೀಸೇ ಮುಗಿಯೊಲ್ಲ!


(Picture source: http://www.kannadaprabha.com/supplements/by2coffee/ನಾಚಿಕೆಯ-ಮೊದಲ-ರಾತ್ರಿ/147465.html)
******

೦೨.….ತೂಕ ರಸಾಯನ
_________________

ಕೂತಲ್ಲೇ ಮಾಡಿದರೂ
ದಿನವೆಲ್ಲ ‘ಮನ’ಗೆಲಸ
ಬಿಡುವೆಲ್ಲಿ ಮನೆಗೆಲಸಕ್ಕೆ
ಸಾಕಯ್ತಲ್ಲಾ ಇಡಿ ದಿವಸ
ಸಿಕ್ಕರೆ ಕಣ್ಣಿಗಿಷ್ಟು ನಿದ್ದೆ
ಅದೇ ಹರುಷ!
ಈಗಾಗಿ
ಏನಕ್ಕೂ ಬಿಡುವಿಲ್ಲ ವಾರದಿನ
ಸೋಮವಾರವೆ ಗಮನ
ಎಂದಪ್ಪ ವೀಕೆಂಡಿನಾಗಮನ?
ಎಷ್ಟು ಚಡಪಡಿಕೆ
ಬಂದಾಗಲೂ ವಿಶ್ರಾಂತಿ, ಔಟಿಂಗು, ಫಂಕ್ಷನ್ನುಗಳ
ಪಳೆಯುಳಿಕೆ
ಎಲ್ಲಿದೆಯಯ್ಯ ಸಮಯ
ದೈಹಿಕ ಶ್ರಮ ವ್ಯಾಯಾಮಕೆ
ಫ್ರಿಡ್ಜು, ವಾಶಿಂಗ್, ಮಿಕ್ಸಿ
ತರತರ ಮಷಿನುಗಳೊಡನೆ
ಸುಗಮ ದಾಂಪತ್ಯ
ಹೊಂದಾಣಿಕೆ
ಬಿಡುವೆ ಇಲ್ಲಾ ದೂರದರ್ಶನಕ್ಕೂ
ಎಂಥಾ ವ್ಯಥೆ!
ಇಷ್ಟೆಲ್ಲದರ ಮಧ್ಯೆ
ಗ್ಯಾಸು, ಬಿಪಿ, ಡಯಾಬಿಟಿಸುಗಳ
ಹೊಂಚಾಟಿಕೆ
ಇರದಿದ್ದರೆ
ಯಾರಿಗೆ ತಾನೆ ಚಿಂತೆ
ಬಫೆಯ ಉಂಡಾಟಕೆ!
ಹೆದರಿಸುವ ಡಾಕ್ಟರುಗಳ
ಬಿಲ್ಲು ಪುಂಡಾಟಿಕೆ
ಮೇಲೇಳಲಾಗದ (ಸ್ಥೂಲ)ಕಾಯ
ಹುಟ್ಟಿಸಿದ ಭೀತಿ, ಬಂಡಾಟಕೆ
ಆಗಬಾರದು ದಪ್ಪ
ರುಣರುಣಿಸಿದೆ ಮಂತ್ರ
ಬೂಟಾಟಿಕೆ !
ಈಗಾಗಿ
ಎಲ್ಲರು ಆಗಿ
ಮಂತ್ರಸಿದ್ದಿಗೆ
– ವಾಕಿಂಗ್ ವಾತ್ಸಾಯನ
ಸಿದ್ದಿಸಿಕ್ಕರೆ ಬೀಗಿ
ಕಮ್ಮಿ ಕಾಯದ ಯೋಗಿ
– ತೂಕ ರಸಾಯನ !


(Picture source: http://www.newhealthguide.org/Walking-To-Lose-Weight.html)

– ನಾಗೇಶ ಮೈಸೂರು
೧೦.ಜೂನ್.೨೦೧೨

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s