00776. ‘ಲೈಚೀ’ ಎಂಬಿ ಚೀನೀ ಸುಂದರಿಯ ಹಿಂದೆ ಬಿದ್ದು….!


00776. ‘ಲೈಚೀ’ ಎಂಬಿ ಚೀನೀ ಸುಂದರಿಯ ಹಿಂದೆ ಬಿದ್ದು….!
__________________________________________

ಕಳೆದೆರಡು ಮೂರು ವಾರಗಳಿಂದ ಇದ್ದಕ್ಕಿದ್ದಂತೆ ಇಲ್ಲೆಲ್ಲಾ ಸುಪರ್ ಮಾರ್ಕೆಟ್, ಬೀದಿಯ ಹಣ್ಣಂಗಡಿ, ರಸ್ತೆ ಬದಿಯ ತಳ್ಳುಗಾಡಿಯಂಗಡಿಯಲ್ಲೆಲ್ಲ ಕಾಣಿಸಿಕೊಂಡ ತುಸು ಅಪರಿಚಿತ ಹಣ್ಣು ನೋಡಿ, ಯಾವುದಪ್ಪ ಇದು ಎನ್ನುವ ಕುತೂಹಲ ಹುಟ್ಟಿತು.
ಅದರ ನಿವಾರಣೆಗೆಂಬಂತೆ ರಸ್ತೆಯಲ್ಲಿ ಹಾಯ್ದು ಹೋಗುತ್ತಿದ್ದಾಗ ಮೂಲೆಯ ಬದಿಯಲ್ಲಿ ನಿಲ್ಲಿಸಿದ್ದ ಹಣ್ಣಿನ ಗಾಡಿ ಕಂಡಿತ್ತು. ಜತೆಗಿದ್ದ ಮಗ ಬೇರೆ ‘ನಾವು ಅವನ ಹತ್ರ ಹಣ್ಣು ಕೊಳ್ಳೋಣವಾ ? ಅವನಿಗೆ ಹೆಲ್ಪ್ ಆಗುತ್ತೆ’ ಎಂದು ಡೈಲಾಗ್ ಸೇರಿಸಿದಾಗ, ಆ ಭಾವನೆಯನ್ನು ಪೋಷಿಸಬೇಕೆಂಬ ಪ್ರಜ್ಞೆ ಉದಿಸಿ ಜಾಗೃತವಾಗಿ ‘ಸರಿ ನಡಿ’ ಎಂದು ಅತ್ತ ಹೆಜ್ಜೆ ಹಾಕಿದೆ.

ಹೊರಗಿನಿಂದ ಕೆಂಪು ಮತ್ತು ಹಸಿರು ಮಿಶ್ರಿತ ಬಣ್ಣದೊಡನೆ ದುಂಡಾಗಿ ನಿಂಬೆ ಗಾತ್ರದಲಿದ್ದು, ಹೊರ ಚರ್ಮದ ಮೇಲೆಲ್ಲ ಒಂದು ರೀತಿಯ ಮೊಂಡು ಮುಳ್ಳಿನ ರೀತಿಯ ಹೊದಿಕೆ ಹೊದ್ದ ಹಣ್ಣನ್ನು ಕಂಡಾಗ, ಮಿಕ್ಕೆಲ್ಲಾ ಹಣ್ಣುಗಳಿದ್ದರು ಅದನ್ನೇ ಕೊಳ್ಳುವುದೆಂದು ನಿರ್ಧರಿಸಿಯಾಗಿತ್ತು. ಮುಳ್ಳಿನ ಹಾಗೆ ಎಂದು ಹೋಲಿಕೆಯ ಮೇಲೆ ಹೇಳಿದ್ದೆ ಹೊರತು ಅದೇನು ಚುಚ್ಚುವ ಮುಳ್ಳಿನ ತರದ್ದಾಗಿರಲಿಲ್ಲ.. ಆದರ ಹೊರ ರೂಪುರೇಷೆಗದೊಂದು ವಿಶೇಷ ಅಭಿವ್ಯಕ್ತಿಕೆಯಾದಂತಿತ್ತಷ್ಟೆ. ಎಂದಿನಂತೆ ಕೊಳ್ಳುವ ವ್ಯವಹಾರದ ಅದೆ ಸಂದಿಗ್ದತೆ ಎದುರಾಗಿತ್ತು – ಅವನಿಗೆ ನಮ್ಮ ಭಾಷೆ ಬರದು, ನಮಗೆ ಅವನದು ಬರದು. ಯಥಾರೀತಿ ನಮ್ಮ ಮೂಕಾಭಿನಯ ಸಾಮರ್ಥ್ಯ, ವ್ಯವಹಾರ ಚತುರತೆ ಪ್ರಕಟಗೊಳ್ಳಲು ಸರಿಯಾದ ಅವಕಾಶ..!

ಅವನು ಬೇರೇನೂ ಮಾತಾಡದೆ ನೇರ ಒಂದೊಂದು ಹಣ್ಣು ಕೈಗಿತ್ತು ತನ್ನ ಮಾರಾಟಗಾರಿಕೆ ಚಾತುರ್ಯವನ್ನು ಮಾತಿಲ್ಲದ ಕೃತಿಯಲ್ಲೆ ವ್ಯಕ್ತಪಡಿಸಿದ್ದ. ಬೇಡವೆಂದು ಗೋಣಾಡಿಸುತ್ತಲೆ ನಾವದನ್ನು ತೆಗೆದುಕೊಂಡಾಗಿತ್ತು. ನನಗೆ ಹೊರಗಿನವರು ಎಂದು ಏಮಾರಿಸಿ ರೇಟು ಜಾಸ್ತಿ ಹಾಕುವನೇನೊ ಎನ್ನುವ ಅನುಮಾನ. ಆದರೆ ಮಗ ಆಗಲೇ ಅದರ ಪ್ರಾಥಮಿಕ ಶಸ್ತ್ರಕ್ರಿಯೆ ನಡೆಸುತ್ತ ಅದರ ಹೊರಪದರ ಬಿಚ್ಚುವ ಗಡಿಬಿಡಿಯಲ್ಲಿದ್ದ. ಅದನ್ನು ಗಮನಿಸುತ್ತಿದ್ದಂತೆ ನನಗರಿವಾಗಿತ್ತು – ಸ್ವಲ್ಪ ಜೋರಾಗಿ ಹೆಬ್ಬೆರಳು ಮತ್ತು ತುದಿಬೆರಳುಗಳೆರಡರ ನಡುವೆ ಹಿಡಿದು ಒತ್ತಡ ಹಾಕಿದರೆ ಸಾಕು ಆ ಹೊರಗಿನ ಪದರ ಹೋಳು ಹೊಡೆದಂತೆ ಬಾಯಿಬಿಟ್ಟುಕೊಂಡು ಒಳಗಿನ ಬಿಳಿ ಹಣ್ಣಿನ ದರ್ಶನ ಮಾಡಿಸುತ್ತದೆ – ಅದರ ರಸಭರಿತ ಮೈಯಿಂದ ಹಾರುವ ರಸ ತುಸು ಎಚ್ಚರದಿಂದ ನಿಭಾಯಿಸಿದರೆ ಸಾಕು ಎಂದು. ಹಾಗೆ ತೆಗೆದುಕೊಳ್ಳುತ್ತಿದ್ದ ಹಾಗೆಯೇ ಗೊತ್ತಾಗಿ ಹೋಗಿತ್ತು – ಅದು ಲೈಚಿ ಹಣ್ಣೆಂದು. ಅದುವರೆವಿಗೂ ಬೇಕಾದಷ್ಟು ಸಾರಿ ನೋಡಿದ್ದರೂ, ತಿಂದಿದ್ದರು, ಸಿಪ್ಪೆಯ ಸಮೇತ ನೋಡಿರಲಿಲ್ಲ ಅಷ್ಟೆ. ಒಂದಷ್ಟನ್ನು ಆಯ್ದು ಸಂಜ್ಞಾ ಭಾಷೆಯಲ್ಲಿ ವ್ಯವಹಾರ ನಡೆಸಿ ಹೊತ್ತುಕೊಂಡು ಮುಂದೆ ನಡೆದಿದ್ದೆವು.

ಈಗ ಈ ಹಣ್ಣಿನ ಕುರಿತಾದ ತುಸು ವಿಕ್ಕಿಯಾಧಾರಿತ ಮಾಹಿತಿ – ಲೈಚಿ, ಲಿಚಿ, (lychee, litchi, liechee, liche, lizhi or li zhi, or lichee) ಇತ್ಯಾದಿ ನಾಮಧೇಯಗಳಿಂದ ಕರೆಯಲ್ಪಡುವ ಈ ಹಣ್ಣು ‘ಸೋಪ್ ಬೆರ್ರಿ’ ಕುಟುಂಬದ ‘ಜೀನಸ್ ಲಿಚಿ’ ಬಳಗದ ಏಕೈಕ ಸದಸ್ಯನಂತೆ.


(Picture : https://en.m.wikipedia.org/wiki/File:Litchi_chinensis_fruits.JPG)

ಮೂಲತಃ ಚೀನಾದ ‘ಗ್ವಾಂಗ್ ಡೊಂಗ್’ ಮತ್ತು ‘ ಫ್ಯೂಜಿಯನ್’ ಪ್ರಾಂತ್ಯದ ಮೂಲಗಳಿಂದ ಬಂದ ಈ ಹಣ್ಣನ್ನು ಈಗ ಪ್ರಪಂಚದ ಅನೇಕ ಕಡೆಗಳಲ್ಲಿ ಬೆಳೆಯುತ್ತಾರಂತೆ. ನವಿರಾದ, ಬಿಳಿಯ ತಿರುಳಿರುವ ಈ ಹಣ್ಣು ಒಂದು ರೀತಿಯ ಹೂವಿನ ಸುಗಂಧಯುಕ್ತ ವಾಸನೆ ಮತ್ತು ರುಚಿಯನ್ನು ಹೊಂದಿದ್ದು, ಅದರ ನೈಜ ಅನುಭವಕ್ಕಾಗಿ ತಾಜಾ ಸ್ಥಿತಿಯಲ್ಲಿ ಬಿಡಿಸಿ ತಿನ್ನುವುದು ಉತ್ತಮವಂತೆ (ಸಾಧಾರಣ ಹೊಟೇಲುಗಳಲ್ಲಿ ಉಪಹಾರದ ಜೊತೆ ಬಿಡಿಸಿಟ್ಟ ಹಣ್ಣು ತಿಂದೆ ಅಭ್ಯಾಸವಿತ್ತಷ್ಟೆ ನನಗೆ. ಅಲ್ಲಿ ಅದರೊಳಗಿರುವ ಏಕೈಕ ಕಪ್ಪು ಬೀಜವನ್ನು ತೆಗೆದುಬಿಟ್ಟಿರುತ್ತಾರೆ).


ಹತ್ತರಿಂದ ಇಪ್ಪತ್ತೆಂಟು ಮೀಟರು ಉದ್ದ ಬೆಳೆಯಬಲ್ಲ ಮರದಲ್ಲಿ ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುವ ಈ ಹಣ್ಣು ಸುಮಾರು ಐದು ಸೆಂಟಿಮೀಟರಿನಷ್ಟು ಉದ್ದ ಮತ್ತು ನಾಲ್ಕು ಸೆಂಟಿಮೀಟರಿನಷ್ಟು ಅಗಲವಿರುತ್ತದೆಯೆಂದು ಹೇಳುತ್ತಾರೆ. ತಿನ್ನಲನರ್ಹವಾದ ಸಿಪ್ಪೆಯೊಳಗಿನ ಈ ರುಚಿಕರವಾದ ತೆಳು ಪಾರದರ್ಶಕ ಹಣ್ಣು ಚೈನಾ, ಆಗ್ನೇಯೇಷ್ಯಾ, ದಕ್ಷಿಣ ಏಶಿಯಾ ಮತ್ತು ದಕ್ಢಿಣ ಏಶಿಯಾದ ಕೆಲವು ಭಾಗಗಳಲ್ಲಿ ಸುಪ್ರಸಿದ್ದವಂತೆ.


ಚೈನಾ ಇದರ ಬೆಳೆಯುವಿಕೆಯಲ್ಲಿ ಅಗ್ರಗಣ್ಯನಾದರು, ಇದನ್ನು ಬೆಳೆಯುವ ಎರಡನೆ ದೊಡ್ಡ ದೇಶ ಭಾರತವಂತೆ ! ( ಭಾರತದ ಶೇಕಡಾ ೭೦ ಭಾಗ ಬಿಹಾರವೊಂದರಲ್ಲೆ) . ಕ್ರಿಸ್ತಶಕ ೧೦೫೯ರ ಆಸುಪಾಸಿನತನಕದ ಇತಿಹಾಸವಿರುವ ಈ ಹಣ್ಣು ಚೈನಾದ ಅರಮನೆ, ಅಂತಃಪುರಗಳಲ್ಲಿ ವಿಶೇಷವಾದ ಖಾಸಾ ಸ್ಥಾನಮಾನಗಳಿಸಿಕೊಂಡಿತ್ತಂತೆ ಅದರ ರುಚಿಯಿಂದಾಗಿ. ಮೈಕೆಲ್ ಬೊಯ್ಮ್ ಎನ್ನುವ ಪೋಲಿಷ್ ಪಾದ್ರಿ ಇದನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದನೆಂದು ಹೇಳುತ್ತಾರೆ.


ಕರ್ನಾಟಕದಲ್ಲಿ ಸುಪರ್ ಮಾರ್ಕೆಟ್ಟುಗಳಲ್ಲಿ ತಾಜಾ ಹಣ್ಣು ಸಿಗುವ ಸಾಧ್ಯತೆಯಿದ್ದರೆ ತಿಂದುನೋಡಿ – ಖಂಡಿತ ಸುವಾಸನೆ ಮತ್ತು ರುಚಿಯ ವ್ಯತ್ಯಾಸವನ್ನು ಆಸ್ವಾದಿಸುತ್ತೀರಾ ಎಂದು ಹೇಳಬಲ್ಲೆ – ಸ್ವಾನುಭವದ ಮೇಲೆ 😊

– ನಾಗೇಶ ಮೈಸೂರು

(ಆಯ್ದ ಚಿತ್ರ ಮತ್ತು ಮಾಹಿತಿ ಮೂಲ : ವಿಕಿಪೀಡೀಯ)
(Pictures and information source : https://en.m.wikipedia.org/wiki/Lychee)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

3 thoughts on “00776. ‘ಲೈಚೀ’ ಎಂಬಿ ಚೀನೀ ಸುಂದರಿಯ ಹಿಂದೆ ಬಿದ್ದು….!”

ನಿಮ್ಮ ಟಿಪ್ಪಣಿ ಬರೆಯಿರಿ