00795. ಕಾಲದ್ದೇ ತಪ್ಪು..!


00795. ಕಾಲದ್ದೇ ತಪ್ಪು..!
_____________________

ಎಲ್ಲಾ ಕಾಲದ್ದೇ ತಪ್ಪು..!


ಹಾಳು ಕಾಲದ್ದೇ ತಪ್ಪು…
ತಪ್ಪು ಜಾತಕ ಇಟ್ಟುಬಿಟ್ಟನಲ್ಲ
ನಾನಿಲ್ಲಿಗೆ ಬರುವ ಮೊದಲೆ
ಎಲ್ಲಾ ಮಾಡಿಸಿಬಿಟ್ಟ ಯಾರಲ್ಲೊ..

ಏನಾದರು ಮಾಡಿಬಿಡುವೆ
ಅಂದುಕೊಂಡಿದಷ್ಟೆ ಗೊಡವೆ
ಮಾಡಹೊರಟಿದ್ದೆಲ್ಲ ಮಹನೀಯ ಯಾರೊ
ಮಾಡಿ ಮುಗಿಸಿ ಮಿಗಿಸದೆ ಇನಿತು..

ಎಲ್ಲಾ ಅವನದೆ ಗಡಿಬಿಡಿ ತಪ್ಪು
ಒಂದು ಮಾಡಿಬಿಡುತ್ತಿದ್ದೆ ಭೂಮಿ-ಗಗನ
ಕೈ ಹಾಕುವ ಮೊದಲೆ ಯಾರಿಗೊ
ಗುತ್ತಿಗೆ ಕೊಟ್ಟಪಚಾರಕೆ ಕ್ಷಮೆಯಿಲ್ಲ..

ಆದರು ಹುಡುಕಬೇಕಿತ್ತು ಏನಾದರು
ಬಹುಶಃ ಸಿಗುತಿತ್ತೊ ಏನೊ ಅಷ್ಟಿಷ್ಟು
ತುಣುಕಾದರು ಮಿಣುಕಿದರೆ ಸಾಕಿತ್ತು
ಈಗನಿಸಿದರೇನು ? ತಡವಾಗಿದೆ ಬಹಳ..

ಆದರು ನೀನೇ ಹೊಣೆ ಕಾಲ
ಕಾಲವಾಗುವ ತನಕದ ಜಾಲ ನಿನದೆ
ಅತಂತ್ರವಾಗಿಸಿ ನಕ್ಕಿದ್ದು ಬದುಕಿನ ಬರಹ
ಮಿಕ್ಕಿದ್ದು ಸಾಧಿಸಲಿಲ್ಲ ಎನ್ನುವ ಚರಿತೆ ಕುಹುಕ..

– ನಾಗೇಶ ಮೈಸೂರು.
(Picture source: http://www.yankodesign.com/2010/12/14/once-upon-an-untime/)

00794. ಕೈ ಕೊಡೊ ತ್ರಿಶಕ್ತಿಗಳು..


00794. ಕೈ ಕೊಡೊ ತ್ರಿಶಕ್ತಿಗಳು..
___________________________

ಹಾಳು ಕೈ ಕೊಡೊ ತ್ರಿಶಕ್ತಿಗಳು..


ನಾಚಿಕೆಯಾಗುತ್ತೆ
ತಲೆ ಕೆರಿಯೋಕೂ ಯಾಕೊ
ಗೊತ್ತಿಲ್ಲ ಅಂತ ಹೇಳೆದೆಂತೊ ?
ಅದೂ ನರೆತಿದೆ ತಲೆ, ಬಲಿತಿಲ್ಲ ಬುದ್ಧಿ..!

ಒಳಗಡೆ ಕುಬುಸದ ಮನಸ
ಅವನ್ಯಾವನೊ ರಭಸದೆ ಕುಂತವನೆ
ವಯಸೆ ಆಗದ ಎಳಸು ಜೀವ
ಮುಸಿಮುಸಿ ನಕ್ಕು ಕಾಡುವ ಚಿತ್ತ..

ಬಂದವರಾರೊ ಒಳಗ್ಹೊರಗೆ
ಹೋದವರಿನ್ಯಾರೊ ಹೊರಗೊಳಗೆ
ಇದ್ದರೊ ಹೋದರೊ ಗದ್ದಲದಲೆ
ಉರುಳಿದ್ದು ಕಾಲ – ಕಲಿಯಲೆ ಇಲ್ಲ ..!

ಸುತರಾಂ ಲೆಕ್ಕಕಿಡದ ಮಂದಿ
ಹಿಡಿದು ಜಾಡಿಸುತ ಜವಾಬ್ದಾರಿ
ಕಲಿಯೋದಲ್ಲ ಕಲಿಸೋ ಹೊತ್ತು ಅಂದರು..
ಚಾಟಿ ಬೀಸಿದರಾಗಲುಂಟೆ ಪಂಡಿತ ?

ಇತ್ತೆಲ್ಲೊ ಇಚ್ಛಾಶಕ್ತಿ
ಕಳೆದು ಕಾಲ ಜ್ಞಾನ ದಿಕ್ಕುಪಾಲು
ಕನಿಷ್ಠ ಆರಿಸಿ ಪೋಣಿಸಬೇಕಿದೆ, ಯಾಕೊ
ಉರಿದು ಬತ್ತಿಹೋಗಿದೆ ಕ್ರಿಯಾಶಕ್ತಿ..

– ನಾಗೇಶ ಮೈಸೂರು

(Picture source: http://worldartsme.com/mismatch-clipart.html#gal_post_65802_mismatch-clipart-1.jpg)