00801. ಕನಸುಗಳು ಬರೆವ ಭಾಷ್ಯ


00801. ಕನಸುಗಳು ಬರೆವ ಭಾಷ್ಯ
_________________________________________

ಕನಸಿಗೊಂದು ಕವನದ ಲಗ್ಗೆ, ಬರಿ ಹೇಳಲಾಗದವುಗಳದೇ ಬುಗ್ಗೆ..!


ಯಾಕೆ ಕಾಡುವುದಿಂತು ಯಾವುದೋ ಕನಸುಗಳು ?
ಮುಂಜಾವಿನ ಬೆರಗಲಿ ಬೆಳಗಿಗೆ ಭಾಷ್ಯವ ಬರೆದು
ಇಬ್ಬನಿ ಹನಿ ಕುದುರಿಸಿ ನಗುವ ಮುತ್ತಿನ ಮಣಿಯ
ಹುಲ್ಲು ಗರಿಕೆಯ ಹಾರ ತೊಟ್ಟುಕೊಂಡೆಲ್ಲಾ ಸೊಗಸ..

ಯಾವ ಯಾವುದೊ ಭಾವ ಜರತಾರಿ ಸೀರೆಯನುಟ್ಟು
ಯಾವುದೋ ಅನುಭೂತಿ ಕುಂಕುಮದ ಹಣೆಬೊಟ್ಟಲಿ
ಏನೊ ಅನುಭವ ಅನುಭಾವದೊಡವೆ ಉಡುತೊಡುಗೆ
ಎಲ್ಲ ಮೇಳೈಸಿದ ಕನಸಲದೆಷ್ಟು ಬಣ್ಣದ ಎರಚಾಟ ?

ಕೈಗೆಟುಕದೆಲ್ಲ ಮುಗಿಲು ಬಗಲಲ್ಲಿ ತೇಲಿವೆ ಮುಕ್ತಾ
ಹಗುರಾದ ಹತ್ತಿಯ ತನು ತಾನು ಹಾರಿದೆ ಬಯಸಿ
ಬಯಕೆಯದೆಲ್ಲ ಗೊಂದಲ ಬಾಂದಳದಲೆಲ್ಲಿದೆ ಆಳ ?
ಹೆಕ್ಕುತ ನಿರಾಳ ಗ್ರಹ ತಾರೆ ನೀಹಾರಿಕೆ ವ್ಯೋಮಕಾಯ..

ಹಿಮವಲ್ಲಿ ಕಣಿವೆ ಕಾಲುವೆ ನದಿ ಜಲ ನೆಲ ಮರ ಬೆಟ್ಟಗುಡ್ಡ
ಒಂದೆಡೆ ಸೇರೆಲ್ಲ ಸಮ್ಮೇಳನ ನಡೆಸುವದೇ ಮಾಯಾಜಾಲ
ಸ್ವಪ್ನದಿ ಮಾತ್ರವೆ ಸ್ವಸ್ಥ ಅಸಂಗತಗಳೆಲ್ಲ ಸಂಗತ ಮೂರ್ತ
ನನಸೆಚ್ಚರದಲಿ ಬಿಡಿಸೆ ಜಟಿಲ ಒಗಟದು ನೆನಪೂ ಅಸ್ವಸ್ಥ..

– ನಾಗೇಶ ಮೈಸೂರು

(Picture source : https://www.urbanpro.com/a/dream-interpretation-analysis-course-india)