00818. ಪ್ರಗತಿಯೆಂದರೆ ಏನು ಗೊತ್ತಾ ?


00818. ಪ್ರಗತಿಯೆಂದರೆ ಏನು ಗೊತ್ತಾ ?
______________________________


ಸ್ವಚ್ಚಂದ ನಿಸರ್ಗದಲ್ಲಿ ಈಜುವ ಮೀನ
ಬಲೆ ಬೀಸಿ ಬಲವಂತ ಹಿಡಿದೆತ್ತಿ
ಉಸಿರುಗಟ್ಟುವ ಮೊದಲೇ
ಮೀನಿನ ಪೆಟ್ಟಿಗೆಗೆ ರವಾನಿಸುವಾಟ ;
ದೀಪ ಹಚ್ಚಿ ಕಾರಂಜಿ ಚಿಮ್ಮಿಸಿ
ಕೃತಕ ಕಲ್ಲು ಮರಳು ಕಪ್ಪೆ ಚಿಪ್ಪೆಗಳಿಡುವಾಟ..
ವಿಶಾಲವಿದ್ದ ಬಿಚ್ಚಿಟ್ಟ ಬಯಲಿಂದ
ಇಕ್ಕಟ್ಟಿನ ಗೋಡೆ ಛಾವಣಿಗಳಡಿ ತೂರಿಸಿ
ಉಸಿರಾಡುವ ಗವಾಕ್ಷಿಗಳ ವೈಭವದಾಟ..;
ಸಹಜ ಸಿಗದ ತುತ್ತಿನ ಬುತ್ತಿಯ
ಹಿಡಿಸಲಿ ಬಿಡಲಿ ರುಚಿ ವೈವಿಧ್ಯ ಗಣಿಸದೆ
ಉಂಡುಂಡೆಗಳಾಗಿ ಉದುರಿಸಿ ಸೆಣೆಸಾಟ..
ತಿನ್ನಾಟ ಚೆನ್ನಾಟ ಕಣ್ಣಿಗೆ ರಸದೂಟ..
ಅಂದಚಂದ ಚಮಕು ಸುಣ್ಣ ಬಣ್ಣಗಳ
ಪ್ರಗತಿಯ ತೋರಿಸಿ ಜಗಕೆ ಮೆರೆಯುವಾಟ.

ಆಮೇಲೆಲ್ಲ ಸುಲಭ ನಿತ್ಯದ ಮಜ್ಜನ
ಮೀನಿಗೆಂತ ಸ್ನಾನ ? ಮೂಗು ಮುರಿಯಬೇಡಿ
ಸಾಬೂನು ಶಾಂಪೂ ಹಾಕಿ ತಿಕ್ಕಿ
ಹೊಸ ನೀರಲಿ ತೊಳೆದು ಫಳಫಳ
ದಿನಕೊಂದು ದಿರುಸುಟ್ಟು ಮೆರೆಯುತ್ತ
ಫ್ಯಾಷನ್ನಿನ ಓಣಿಯಲಿ ಮಿಂಚುತ
ವಿಶ್ವ ಸುಂದರಿಯಾಗಿ ನಿಲಬಹುದು
ತೊಟ್ಟರೆಬರೆ ನಾಚಿಸಬಹುದು
ಬಾರದ ಹಳೆ ನೀರಿನ ಮೀನುಗಳ
ನಿಂತು ಅಣಕಿಸುತ ಪ್ರಗತಿಯೆತ್ತರದಲಿ..
ಕಸಿವಿಸಿಯಾಗಿಸಿ ನಾಚಿಸಿ
ಅವರಲೂ ಆಸೆಯುಟ್ಟಿಸಿ ಹೊಸತಿಗೆ
ಹಳತಾಗುತ ಇದ್ದಕಿದ್ದಂತೆ ಅ-ಸಹ್ಯ..!


ಮೀನಿನ ತೊಟ್ಟಿ ದಿರುಸು ದೀಪ ಕಾರಂಜಿ
ಎಲ್ಲವೂ ತುಟ್ಟಿ ಅದೇ ಪ್ರಗತಿಯ ತೆರಿಗೆ
ಕೆರೆ ಕಾಲುವೆ ಹೊಳೆ ನದಿ ಕಡಲು ಬಿಟ್ಟಿ
ಗೋಡೆ ಸೀಮೆಗಳಿಲ್ಲದ ಮುಕ್ತ ಒಡಲು
ಸ್ವೇಚ್ಛೆ ಸ್ವಾತಂತ್ರದ ಆಡಂಬರವಿಲ್ಲದ ಬಾಳು
ಸರಳ ಸರಾಗ ನಿರಾಳ ಬದುಕೇನು ಚೆನ್ನ ?

ಬನ್ನಿ ಬನ್ನಿರೆಲ್ಲ ಮೀನಿನ ತೊಟ್ಟಿಗೆ
ಪ್ರಗತಿಯ ತೆರೆಯೇರಿ ನಡೆಯೋಣ
ತುಯ್ದತ್ತ ಒಯ್ದತ್ತ ಚೌಕಟ್ಟಿನೊಳಗೆ
ಮಿತಿ ಮೀರಿದ ಗತಿಯ ನೆರಳಾಗಿ..
ಯಾಕೆಂದರೀಗ ವಿಶಾಲ ಭೂಮಂಡಲವೇ
ದೊಡ್ಡ ಮೀನಿನ ತೊಟ್ಟಿ..
ಹೊಳೆ ನದಿ ಕೆರೆ ಕಾಲುವೆ ಸಾಗರಗಳೆಲ್ಲ
ಈಗ ಅದರೊಳಗೆ !

– ಮೈಸೂರು ನಾಗೇಶ

Picture source 01: http://zeenews.india.com/news/eco-news/iconic-indian-fish-on-verge-of-extinction-study_1595637.html

Picture source 02: http://iowpetcentre.com

00817. ಲಲಿತೆಗೊಂದು ಬಿನ್ನಹ..


00817. ಲಲಿತೆಗೊಂದು ಬಿನ್ನಹ..
_________________________


ಸಹಸ್ರನಾಮದ ಘನತೆ
ನಿನದಲ್ಲವೇ ಶ್ರೀ ಲಲಿತೆ ?
ಸ್ತುತಿಸುವ ಮನಗಳ ನೋವು ನೂರಂತೆ
ನೀ ಕೈ ಹಿಡಿದು ನಡೆಸಬಾರದೆ ಮಾತೇ ?

ಸಾಧಕ ಸಿದ್ದಿಯ ಹಾದಿ
ಹಿಡಿಯ ಹೊರಡೆ ಬುನಾದಿ
ನಡೆಸುವೆ ಚಕ್ರದಲಾರೋಹಣ ಸಹಸ್ರಾರ
ಸಂಸಾರಚಕ್ರದೆ ಹಿಡಿಯಲೆಲ್ಲಿ ನಮ್ಮ ಬ್ರಹ್ಮರಂಧ್ರ ?

ನಮ್ಮ ನಿರೀಕ್ಷೆಗಳಂತೆ ನೂರಾರು
ನಿನ್ನ ಪರೀಕ್ಷೆಗಳಂತೆ ಹಲವಾರು
ಗೆಲಿಸುತ ನಡೆಸುವ ಜಗಜ್ಜನನಿ ನೀನಿದ್ದೂ
ಮಾಯೆಯ ಮುಸುಕಲಿ ಸಿಲುಕಿಸಲೆಂತೆ ಖುದ್ದು ?

ಪಾಮರ ರಾಜ್ಯದ ಪ್ರಜೆ ನಾವು
ಪಂಡಿತರಲ್ಲ ಆಸೆಗಳೆಮ್ಮ ಬಾವು
ಪರಿಹರಿಸಮ್ಮ ನೀನಲ್ಲವೆ ಚೇತನ ಪರಬ್ರಹ್ಮ ?
ಸೃಷ್ಟಿಯ ಸ್ಥಿತಿ ಲಯ ಪರಿಪಾಲನೆ ನಿನ್ನಯ ಧರ್ಮ ..

ನಿತ್ಯ ನಿರಂತರ ಏರಿದ ಕರ್ಮದ ಬಂಡಿ
ಮದ ಮತ್ಸರ ಮೋಹ ಮಮಕಾರಗಳನೊಡ್ಡಿ
ಏಕಿಂತು ಪರೀಕ್ಷಿಸುವೆ ನಿನ್ನದೆ ಸೃಷ್ಟಿ ಜತೆ ಚೆಲ್ಲಾಟವೇ ?
ಬಿಡದೆ ಕಾಪಾಡು ತಾಯೆ, ಕಾಪಿಟ್ಟರದು ತಂತಾನೆ ನಿನ್ನಯ ಗೆಲುವೇ!

– ನಾಗೇಶ ಮೈಸೂರು