00856. ತಾತನ ಕಾಲದ ಆರಾಮ ಕುರ್ಚಿ


00856. ತಾತನ ಕಾಲದ ಆರಾಮ ಕುರ್ಚಿ
____________________________

Satya HG ಸಾರ್ ಅವರ ಹತ್ರ ಇರೋ ಒಂದು ಆರಾಮ ಚೇರಿನ ಚಿತ್ರದ ಜೊತೆಗೊಂದು ಪೋಸ್ಟ್ ಹಾಕಿದ್ರು (FB). ಅದರ ಜತೆಗೆ ನನಗು ಸ್ವಲ್ಪ ಹಳೆ ನೆನಪು ಕೆದಕಿದಂತಾಗಿ ಆರಾಮ ಕುರ್ಚಿ ಮೇಲೊಂದು ಪದ ಕಟ್ಟಿಸಿಬಿಡ್ತು. ಅದು ಇಲ್ಲಿದೆ – ಸತ್ಯ ಸಾರ್ ಪ್ರೇರಣೆಯಾಗಿದ್ದಕ್ಕೆ ಥ್ಯಾಂಕ್ಸ್ 🙏😊 !


ಆರಾಮ ಚೇರು
ನೆನಪುಗಳದೇ ತೇರು
ತಾತನ ಕಾಲದ ಆಸ್ತಿ
ಮೊಮ್ಮಕ್ಕಳಾಡಿದ್ದೆ ಜಾಸ್ತಿ ! ||

ಹಳೆ ಮರದ ಫ್ರೇಮು
ಆಯತದ ಉದ್ದನೆ ರಿಮ್ಮು
ಮೂರನೆ ಒಂದಳತೆ ತುದಿಗೆ
ಮತ್ತೊಂದಾಯುತ ಕಟ್ಟಿತ್ತೆ ಕೆಳಗೆ ! ||

ಅದರಾ ಹಿಂದಿನ ತುದಿಗೆ
ಚಕ್ಕೆ ಮೆಟ್ಟಿಲು ಕೆತ್ತಿದ ಹಾಗೆ
ಮೂರನೆ ಒಂದುದ್ದದ ಮೇಲಿಂದ
ಮೂರ್ಕಡ್ಡಿಯ ಆಯತ ಕೆಳ ಬಂದ ! ||

ಮೊದಲ ಮೆಟ್ಟಿಲ ಮೇಲೆ ಕೂತ
ನಡು ಮೆಟ್ಟಿಲಿಗೆ ಜಾರಿ ಒರಗುತ್ತಾ
ಮೂರನೆ ಮೆಟ್ಟಿಲಿಗರ್ಧ ಮಲಗುತ್ತಾ
ಕೊನೆ ಮೆಟ್ಟಿಲಿಗಿಡೆ ನಿದಿರಾ ಚಕ್ಕಂದ ! ||

ಹಾಸಿದ ಬಟ್ಟೆ ಸೊಗ ತೂಗಾಟ
ತೂಕಡಿಕೆ ತೊಟ್ಟಿಲ ಮಗುವಾಟ
ತುದಿ ಮಡಚಿ ಹೊಲಿಗೆ ಕೊಳವೆ ತೂಬು
ದುಂಡುದ್ದನೆ ದೊಣ್ಣೆ ತುರುಕೊ ತೂತಿನ ಜೇಬು ! ||

ನೆನಪಲ್ಲಿದೆ ಮಕ್ಕಳದೊಂದೇ ಆಟ
ಕಳಚವಿತಿಟ್ಟು ದೊಣ್ಣೆ ಬಟ್ಟೆಯ ಹಾಸಿಟ್ಟ
ಕೂತವರಲ್ಲೆ ದೊಪ್ಪನೆ ಕುಸಿದು ಅಂಡು
ಸದ್ದಾಗುತ ಲಬಲಬ ಕೂಗೆ ಸೈನ್ಯವೆ ದೌಡು ! ||

ಇತಿಹಾಸ ಚರಿತೆ ಪರಿಕರವಿದ್ದು ದಹ್ಯ
ರಂಗಿನ ಹಂಗಿಲ್ಲದೆ ಹಳೆಬೇರಿನ ಸಾಹಿತ್ಯ
ಹೊಸ ಚಿಗುರುಗಳರಿತಾವೆ ಅಗ್ಗದ ಈ ಸೌಖ್ಯ ?
ಹಳತು ಹೊಸತಿಗೆ ಸೇತುವೆಯಾಗೋ ಸಾಂಗತ್ಯ ! ||

– ನಾಗೇಶ ಮೈಸೂರು

00855. ಯಾರಿಗೆ ಬಂತು ? ಯಾರಿಗೆ ಹೋಯ್ತು ?


00855. ಯಾರಿಗೆ ಬಂತು ? ಯಾರಿಗೆ ಹೋಯ್ತು ?
___________________________________


ಯಾವ್ಹಳೆ ಸ್ವಾತಂತ್ರ ತಗೋಳಿ
ತಾಳಿ ಕಟ್ದಾಗ್ಲೆ ಕೊಚ್ಕೊಂಡೋಯ್ತು
ಕೋಲೆ ಬಸ್ವನ ಹಾಗೆ ಬದ್ಕು
ಸ್ವಾತಂತ್ರ ಹೆಸರಿಗ್ಮಾತ್ರ ಬಂತು || 🏃 ||

ನಮ್ದೇನ್ ಕಮ್ಮಿ, ಏನ್ ಸ್ವಾತಂತ್ರ ?
ತಾಳಿ ಬಿದ್ದಿದ್ದೆ, ಕೈ ಕಾಲ್ ಕಟಾಕ್ದಂಗಾಯ್ತು
ಹಕ್ಕಿ ಹಂಗೆ ಹಾರ್ಕೊಂಡಿದ್ವಿ ಹೆಂಗೋ
ಆಯ್ಕೊಂಡ್ತಿನ್ನೋ ಕೋಳಿ ಕಾಲ್ಮುರ್ದಾಕ್ಬುಟ್ರು || 💃🏻 ||

ಬೇಕೆಂದಾಗ್ ಏಳ್ತಿದ್ವಿ ಹೊದ್ಕೊಂಡ್ಮಲ್ಗಿದ್ದು
ಕಾಫಿ ತಂದಿಟ್ರುನು ನೂರ್ಸಾರಿ ಕರ್ದು
ಕಟ್ಟಿದ್ದೆ ತಾಳಿ ಆಗ್ಬುಟ್ಲು ಮಹಾಕಾಳಿ
ಹಾಲು ತರ್ಕಾರಿ ಚೀಲ ಐದ್ಗಂಟೆ ಮಬ್ಬಲ್ಲಿ || 🏃 ||

ಜೀತುಕ್ಕೊಂದಾಳು, ಸಿಕ್ಕುದ್ಲು ಅನ್ಕೊಂಡ್ರಾ ?
ಕಟ್ಟೀದ್ ಮೇಲೆ ತಾಳಿ, ಸುಮ್ನಾಯ್ತಾ ಸುಂದ್ರಾ ?
ಬಾಯ್ಮುಚ್ಕೊಂಡ್ಮಾಡೇಳು, ಮರ್ವಾದೆ ಇದ್ರೆ
ತಂದ್ಹಾಕು ತಿಂದಾಕು, ದುಡುದ್ರೇನೆ ಜತೇಗ್ನಿದ್ರೆ ! || 💃🏻 ||

ಪಬ್ಬಲಿತ್ತು ಜೀವ, ಕುಡ್ದು ಹಿಗ್ಗುತ್ತಿತ್ತು ಗಢವ
ಶೋಕಿ ಮಾಡ್ಕೊಂಡಿತ್ತು, ಟ್ವೆಂಟೀ ನೈಂಟೀ ಪರ್ವ
ಹೊರ್ಟೋಯ್ತೆಲ್ಲ ಸ್ವೇಚ್ಛೆ, ಸ್ವಾತಂತ್ರದ್ ಕೈಗೆ ಬೇಡಿ
ದೇಶಕ್ಬಂದಿದ್ದಷ್ಟೆ ನಮ್ದ್, ಕಳದ್ಹೋಗಿದ್ಮರೀಬೇಡಿ ! || 🏃 ||


– ನಾಗೇಶ ಮೈಸೂರು

00854. ಅರಿ ಸ್ವಾತಂತ್ರದ ಬೆಲೆ !


00854. ಅರಿ ಸ್ವಾತಂತ್ರದ ಬೆಲೆ !
_________________________

(Picture 1. http://www.archive.india.gov.in/spotlight/spotlight_archive.php?id=66)

ಅತಂತ್ರದಾಚೆ ಜಿಗಿದು ನೆಗೆದು
ಸ್ವತಂತ್ರ ಮಾತೆ ಬಿಗಿಯಪ್ಪುಗೆ
ಜಿಗಿದವರ ಸಿಗಿದು ಹುಗಿದರಲ್ಲ
ತಾಯ್ನಾಡನು ಪ್ರೀತಿಸಿದ ತಪ್ಪಿಗೆ ! ||

ಇಂದೆಷ್ಟು ಸುಲಭ ಅನುಭವಿಸೆ
ಯಾರದೊ ನೆತ್ತರ ಬಸಿದ ನಗೆ
ನಗಲೂ ಬಿಡದೆ ನರಳಿಸಿದರು
ನಮ್ಮ ಪೀಳಿಗೆ ಗತಿ ಸುಖವಾಗೆ ||

ಸ್ವದೇಶಿ ಮಾಲನೆ ಉಟ್ಟರಲ್ಲ
ಬೆಂಕಿ ವಿದೇಶದ ಬಟ್ಟೆಬರೆಗೆ
ತಿಲಾಂಜಲಿ ತಾವುಟ್ಟು ಖಾದಿ
ನಮಗೀಗ ದೇಶ ವಿದೇಶ ಬಗೆ ||

ಚಳುವಳಿ ಸತ್ಯಾಗ್ರಹ ಹಾದಿ
ಅಹಿಂಸೆ ಹಿಂಸೆ ಒತ್ತಡ ಗಾಢ
ಅನುಯಾಯಿತನ ಬಾಳು ಬಲಿ
ನಮ್ಮನಾಗಿಸಿ ಈ ಜಗದ ಹುಲಿ ||

ಇಂದನುಭವಿಸೊ ಸೌಖ್ಯದ ಬೆಲೆ
ಅರಿಯದ ಜಗ ಸ್ವೇಚ್ಛೆಯ ಬೆನ್ನಲಿ
ನಡೆದಿದೆ ಅರಿಯದೆ ಚರಿತೆ ನೆಲೆ
ಮೂಲ ಮರೆತರೆ ಭವಿತ ಕತ್ತಲಲಿ ||


(Picture2. http://www.mapsofindia.com/history/)

– ನಾಗೇಶ ಮೈಸೂರು