00945. ಈ ದಿನದ ಸಲುವಾಗಿ ಸಖಿ


00945. ಈ ದಿನದ ಸಲುವಾಗಿ ಸಖಿ
________________________


ಎಷ್ಟೊಂದು ಪ್ರಶ್ನೆ ಕೇಳುವೆ ಗೆಳತಿ ?
ಉತ್ತರವಿಲ್ಲದ ದಕ್ಷಿಣ ದಿಕ್ಕಲಿ
ನಿಖರತೆ ಸ್ಪಷ್ಟತೆ ಸರಿಯುತ್ತರ ಕಾದರೆ
ಉತ್ತರ ದಕ್ಷಿಣ ನಡಿಗೆ ನಮ್ಮ ಪ್ರೀತಿಗೆ..

ದುರ್ಭರ ಬದುಕಲಿ ಬರಿ ಪಂಥಗಳು
ಯಾರು ತಾನೆ ಸಂತ ಸತ್ಯವಾನರು
ಅಂತೆಂದು ಪ್ರತಿಹೆಜ್ಜೆ ಯೋಜಿಸುವುದುಂಟೆ ?
ಇಟ್ಟರಾಯ್ತು ಎದುರಾಗೊ ಹಾಡಿಗನುಸಾರ..

ವಿರಮಿಸು ವಿಶ್ರಮಿಸು ಅರೆಗಳಿಗೆ ಮೌನ
ಕಟ್ಟಬೇಕಿಲ್ಲ ಒಂದೇ ದಿನದಲ್ಲಿ ಜೀವನ
ಏಕೀ ಧಾವಂತ ಅವಸರದ ಆಯಾಸ
ಅನುಭವಿಸಬಾರದೇ ಈ ಕ್ಷಣದ ಹರ್ಷ ದನಿ..

ಸಿರಿಯಿಲ್ಲ ನೆರಳಿಲ್ಲ ಹೊರುವ ರಥವಿಲ್ಲ
ಪಲ್ಲಕ್ಕಿ ಪಲ್ಲಂಗ ನಿರಾಳತೆಗೂ ಕಲ್ಲು
ಹಾಗೆಂದು ಕೂತರೆ ತಲೆ ಮೇಲೆ ಕೈಹೊತ್ತು
ನಾಳೆಯಾಗುವುದು ಇಂದು ನರೆದ ತಲೆ ಸುತ್ತು..

ಬದುಕುವ ಬಾರೆ ಸಖಿ ಈ ದಿನದ ಸಲುವಾಗಿ
ಸಣ್ಣ ಸಣ್ಣ ಸುಖದಲುಂಟು ಜೀವನ ಭೋಗ
ಹಿಡಿದುಕೊ ಕೈ ಅಪ್ಪಿ ನೇವರಿಸಿಕೊ ಮೈ ಮನ
ಕೇಶದಡಿ ಮುಗುಳುನಗೆ ಮರೆಸಲಿಲ್ಲ ಬವಣೆ..

– ನಾಗೇಶ ಮೈಸೂರು
19.10.2016
(Picture source Creative common)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ