01039. ಬೊಜ್ಜ ಹೊತ್ತು ಸಾಗುವ ಹೊತ್ತು..


01039. ಬೊಜ್ಜ ಹೊತ್ತು ಸಾಗುವ ಹೊತ್ತು..
_____________________________


ಇಪ್ಪತ್ತೈದು ವರ್ಷದ ಬೊಜ್ಜು ಗೆಳೆಯ
ಹೊರೆ ಹೊತ್ತೆ ಸಾಗಿದ್ದು ಗಾಣದೆತ್ತು
ಯಾರಿಗೊ ಯಾರಾರಿಗೊ ದೂಷಣೆ ನಿಷ್ಫಲ
ತೋರುಬೆರಳೊಂದು, ಮಿಕ್ಕ ಮೂರೂ ನಿನ್ನತ್ತಲೆ..

ಹೇಳುವುದು ಸುಲಭ ಮಾಡುವುದೇ ಕಷ್ಟ
ದೂಷಣೆಗಿಳಿಯದೆ ದೂಷಿಸಿಕೊಂಡೆ ಸ್ವಂತ
ಸಂತನಾಗಲಿಲ್ಲ ಅನಂತವಾಯ್ತಷ್ಟೆ ಪಟ್ಟಿ
ಕಣ್ಣಿಗೆ ಕಟ್ಟಿದ ಹೊತ್ತಲು ಕೊರಮರ ಭೀತಿ

ಹೊತ್ತು ಮಹನೀಯನಾದ ಪುನೀತ ಭಾವ
ಕರಗದಿದ್ದೀತೆ ವಯಸ್ಸಿನ ಜೊಜ್ಜ ತದುಕೆ
ಹುಡುಕ್ಹುಡುಕಿ ನಿರ್ಲಿಪ್ತನಾಗಿ ಗೆದ್ದೆನೆಂಬ ಅಹಂ
ಕುಗ್ಗಿ ನಿಕೃಷ್ಟ ನಿಸ್ತೇಜ ತೇಜೋಕಾಂತಿ ಭ್ರಮೆ

ವಯಸಾಯಿತೀಗೀಗ ಆಳಿಗೊಂದೊಂದು ಕಲ್ಲು
ತಪ್ಪೆಲ್ಲಾ ನಿನದೆ ಎಂದುಸುರುವ ಪ್ರತಿ ಸೊಲ್ಲ ಧಾರ್ಷ್ಟ್ಯ
ನಂಬಿಸುತಿದೆ ಬುಡಮೇಲಾಗಿಸಿ ನಂಬಿಕೆಯ ಲಂಗರ
ಮೊದಲಿಪ್ಪತ್ತೈದರ ಉತ್ಸಾಹಕು ತಿಂಗಳ ಮುಟ್ಟ ಸಂಕಟ

ಬೇರೇನ ಬೇಡಲಿ ಯಾರದೊ ಹೊಸವರ್ಷದ ಹೊಸ್ತಿಲು
ಕದ ತಟ್ಟುತ ಬಡಿದೆಬ್ಬಿಸುತಿದೆ ಒಕ್ಕಲೆಬ್ಬಿಸಿ ಪರಂಪರೆ
ಅದೇ ಬೊಜ್ಜನ್ಹೊತ್ತು ಸಾಗಲಿದೆ ಮತ್ತಿಪ್ಪತ್ತೈದು, ಐವತ್ತು
ಹಗುರಾಗಿಸದಿದ್ದರೆ ಬಿಡು, ಹೊರುವ ಶಕ್ತಿಯಾದರೂ ಕೊಡು !

– ನಾಗೇಶ ಮೈಸೂರು
೩೧.೧೨.೨೦೧೬
(Picture from Creative Commons)
Happy New Year – 2017!

01038. ತೋಚಿದ್ದ ಗೀಚಿಕೊ ಬದುಕೇ


01038. ತೋಚಿದ್ದ ಗೀಚಿಕೊ ಬದುಕೇ
__________________________


ಏಯ್ ! ಪೆದ್ದು..
ಬರೆದುಕೊ ತೋಚಿದ್ದು
ತೋಚಿದಂತೆ ಬದುಕಿಕೊ
ಇಲ್ಲಿ ಓದುವವರಿಲ್ಲ ಪುಕ್ಕಟೆ
ವೇದಿಕೆ ಸದ್ದುಗದ್ದಲ ಸಗಟು
ಭಣಗುಟ್ಟುವ ಸಭಾಂಗಣ ಹೇಗೂ
ಸಭೆ ಸಂಭ್ರಮ ಮುಗಿದ ಮೇಲೆ
ಈಗಲೂ ಹಾಗೆ…
ಸಮಾರಂಭವಿಲ್ಲದ ತಲ್ಲಣದಂತೆ
ಚಡಪಡಿಕೆ ಬಿಟ್ಟು ಗೀಚಿಕೊ..

ಸ್ತರ ಸ್ಥಾಯಿ ಮಟ್ಟ ಔನ್ನತ್ಯ
ಏನೆಲ್ಲಾ ಪ್ರಬುದ್ಧತೆ ಹುನ್ನಾರ
ಬೆಳೆಯಬೇಕು ಗೊತ್ತಾ ಬೆಳೆದು
ದನಿಯಾಗಬೇಕು ಹರಸೊ ಕೊರಳಿಗೆ
ದಣಿಯಾಗಬೇಕು ಹರಸೊ ಮಟ್ಟಿಗೆ
ಪಾಲಾಗಬೇಕು ಭಾಷಣ ವೇದಿಕೆಗೆ
ಆಗುಹೋಗುವ ಮಾತೆ ಮರುಳೆ ?
ಬಿಟ್ಟುಬಿಡು ಆಸೆ ದುಃಖದ ಮೂಲ
ಮೆಚ್ಚಲೆನ್ನುವುದು ಬೆಂಬಿಡದ ಭೇತಾಳ
ಸುಮ್ಮನೆ ತೋಚಿದ್ದ ಗೀಚಿಕೊ..

ಹರಸಾಹಸ ನಡೆದಿದೆ ಹೊಸತೇ
ಪ್ರಸವ ಯಾತನೆ ಕೋಟಿ ಕೋಟಿ
ಗರ್ಭಪಾತ ಬಸಿರ ಬವಣೆ ಮಧ್ಯೆ
ಸುಸೂತ್ರ ಹೆರಿಗೆ ಶ್ರದ್ಧೆಯ ಸದ್ದು
ಮಿನುಗುತ್ತಿದೆ ನಕ್ಷತ್ರವಲ್ಲಿಲ್ಲೊಂದು
ದಾರಿ ತೋರಿಸುತ ಮಿಣುಕು ಮಂಕು
ಗಹನವಿಲ್ಲದ ಸರಳ ಜೀವನದ ಸತ್ಯ
ಸರಳವೇ ಗಹನವಾಗುವ ದಿಗ್ಭ್ರಮೆ
ಪಾಮರನ ಪದಗಳಾಗಲಿ ಅನಿಸಿಕೆ
ಪಾಡಿಗೆ ತೋಚಿದ್ದ ಗೀಚಿಕೊ ಮನಸೆ..

– ನಾಗೇಶ ಮೈಸೂರು
27.12.2016
(Picture from – Creative Commons)

01037. ಮಾಟ – ಕೀರ್ತಿ – ಚಿತ್ರವಿಚಿತ್ರ – ನಿರ್ಮಾನುಷ


01037. ಮಾಟ – ಕೀರ್ತಿ – ಚಿತ್ರವಿಚಿತ್ರ – ನಿರ್ಮಾನುಷ


ಚೆಂದದ ಮೈಮಾಟ ಚೆಂದುಳ್ಳಿಗಳ ಪ್ರಸಿದ್ಧ ಪ್ರಮೀಳಾ ರಾಜ್ಯ
ದೇಶವಿದೇಶಗಳಾಚೆ ಪಸರಿಸಿದ ಕೀರ್ತಿ ಕುತೂಹಲಕೆ ಅರ್ಜ್ಯ
ಚಿತ್ರವಿಚಿತ್ರದೀ ರಾಜ್ಯಕೆ ಕಾಲಿಟ್ಟೆ ಅಕಟಕಟಾ ಪಾಳು ನಗರ !
ನಿರ್ಮಾನುಷ ತಾಣದೊಂಟಿ ಹೆಣ್ಣ ಮುಟ್ಟಿದ್ದೇ ಕನಸಿನಿಂದೆಚ್ಚರ 😭

– ನಾಗೇಶ ಮೈಸೂರು
25.12.2016
chouchoupadi

(This picture is licensed under a Creative Commons Attribution-NonCommercial-ShareAlike 3.0 Unported License)

01036. ಮ್ವಾರೇ ಪುಸ್ಕ..


01036. ಮ್ವಾರೇ ಪುಸ್ಕ..
__________________
(ಫೇಸ್ಬುಕ್ಕಿಗೊಂದು ‘ವಸಾ ಎಸ್ರು ಕೊಟ್ಟೀವ್ನಿ..’)


ಮ್ವಾರೇ ಪುಸ್ಕ ಮ್ವಾರೇ ಪುಸ್ಕ
ಪೆನ್ನು ಬಳ್ಪಾ ಎಲ್ಲಾ ಕೈ ಚಳ್ಕಾ
ಫೋನೇ ಸ್ಲೇಟು ನೀನೇ ಥೇಟು
ಬರ್ಕೊಳ್ರಪ್ಪ ನಿಮ್ನಿಮ್ದೇ ಗಿಲೀಟು !

ಒತ್ತಾರೆಗೆದ್ದ ಅಲ್ವಲ್ಲ ಬುದ್ಧ
ಕೈಗ್ಹಿಡ್ಕೊಂಡೋನೆ ಅಲ್ಲೆ ಆಡ್ಬಿದ್ದ
ಸರಿ ಒತ್ತಿದ್ದೇನು ಬಿಟ್ಟಿದ್ದೇನು ?
ಮನ್ಸಿಗ್ಬಂದಂಗೇ ಅಲ್ಲೆ ಕಾನೂನು ..!

ಮ್ವಾರೇ ತೊಳ್ಯೋದಾಮೇಲಿರ್ಲಿ
ಲೈಕಾಮೆಂಟು ಬಿದ್ದೈತೇನಲ್ಲಿ
ಎದ್ದೆ ಬಿದ್ದೆ ಕುಡ್ದು ಉಚ್ಛೆಮಾಡ್ದೆ
ಅಂತೆಲ್ಲ ಬರ್ಕೊ ಹಾಸ್ಗೆನೆ ಬಿಡ್ದೆ..!

ಮ್ವಾರೇಪಟ ಒಂದ ಹಾಕಪ್ಪ ದಿಟ
ಸ್ಟೈಲ್ ಕೂಲು ಇರ್ಲಪ್ಪಾ ಹಾಳ್ಚಟ
ಕಾಣ್ಬಾರ್ದು ದರ್ದು ಹುಳ್ಕು ಪಳ್ಕು
ಕಂಡಿದ್ದೆ ಸತ್ಯ ನೋಡಂಗೆ ಮುಚ್ಚಾಕು !

ನಮ್ನಮ್ಮ ತೆವ್ಲು ಉರಿ ಒಳ್ಗಿನ್ ಬೆಂಕಿ
ತೆಕ್ಕೊಳಕೊಂದು ದಾರಿ ಅವಳಾಕಿ
ಹುಸಾರಪ್ಪೊ ಸುಮ್ಸುಮ್ಕೆ ಬಾಯ್ಬುಡ್ಬೇಡ ಎಲ್ಲ
ಏನ್ ಬಿಟ್ರೆ ಏನ್ ಕ್ವಾಟ್ಲೆ ಯಾರ್ಗು ಗೊತ್ತಿಲ್ಲ !

– ನಾಗೇಶ ಮೈಸೂರು
೨೩.೧೨.೨೦೧೬

( picture is licensed under a Creative Commons Attribution-NonCommercial-ShareAlike 3.0 Unported License)

01035. ಹೋರಾಟದಲೆ ಗೆಲುವ ನಗೆ..(3k)


01035. ಹೋರಾಟದಲೆ ಗೆಲುವ ನಗೆ..
______________________________
(3K – ನಮ್ಮ ಚಿತ್ರ ನಿಮ್ಮ ಕವನ – ೪೬ ಕ್ಕೆ ಹೊಸೆದ ಕವನ..)


ದುಂಡು ತೆಪ್ಪದ ತಟ್ಟೆಯಗಲ
ತಳದ ನೀರಿಗ್ಹಿಡಿದಿವೆ ಕೊಡೆ
ಮುಗಿಲ ಸೂರ್ಯನು ಒಳಸುಳಿಯೆ
ಅನುಮತಿಸಬೇಕು ಸಂದಿಯಲೆ

ಕಡಿಮೆಯೇನಿಲ್ಲ ತೇಲುವ ತಟ್ಟೆ
ಹಾರುವ ತಟ್ಟೆಗಳಂತೆ ಅದ್ಭುತ
ನೀರಲಿದ್ದು ನೀರಂಟದ ನಿರ್ಲಿಪ್ತ
ಜಾಣತನದಲಿ ಜಲಸಖ್ಯ ಮಿಥ್ಯ

ಅಂತರಾಳದಲೆಷ್ಟಿವೆಯೊ ತಪನೆ?
ಮುಚ್ಚಿದ ಚಾಮರವನೊತ್ತುವರಿಸೆ
ಬಿಡದಲ್ಲ ಛಾವಣಿ ನೆರಳಡಿ ಕೆಸರು
ಬೆಳೆಯಬಿಡದು ದ್ಯುತಿಯಿಲ್ಲದ ಕಾಡು

ಜಾಣರಿಗದಲ್ಲ ಅಡೆತಡೆ ವಿಷಯ
ಹೂವಾಗುವರು ಕೆಸರಿನ ಕಮಲ
ಕಮರದೆ ನೆರಳಡಿ ತಲೆಯೆತ್ತಿ ನಡೆ
ಸಂದಿ ಗೊಂದಿ ನುಸುಳಿ ಬೆಳಕೆಡೆಗೆ

ಆ ತಪನೆ ಯಾತನೆ ಚೇತನವಾಗಿ
ಸುಂದರ ನೈದಿಲೆ ನಗುವ ಹೆಮ್ಮೆ
ಬೆಳೆಯಬಿಡದ ನೂರಾರು ಅಡೆತಡೆ
ನಡುವಲ್ಲೆ ಬಿರಿವ ಹೂ ನಗೆಗೆ ಗೆಲುವು !

– ನಾಗೇಶ ಮೈಸೂರು
೨೨.೧೨.೨೦೧೬

01034. (ಕೆಲ) ಮನೆ ವಾರ್ತೆ


01034. (ಕೆಲ) ಮನೆ ವಾರ್ತೆ
________________________


(೦೧)
ದೂರದರ್ಶನ
ಪಾಕಶಾಲೆ ವೀಕ್ಷಣೆ
– ಹಚ್ಚದ ಒಲೆ

(೦೨)
ಪೋನಲೆ ಎಲ್ಲಾ
ತುಟ್ಟಿಯಾದರು ಸರಿ
– ಹೊಂ ಡೆಲಿವರಿ

(೦೩)
ಜಗದಚ್ಚರಿ
ಮಾಡಲೊಲ್ಲ ಅಡಿಗೆ
– ವೀಕ್ಷಣೆ ಯಾಕೆ ?


(೦೪)
ದಿನಕೊಂದೊಂದು
ಬಿಡದೆ ಕಾಡೋ ಬೇನೆ
– ಅಡಿಗೆ ರಜಾ

(೦೫)
ಅಡಿಗೆ ರಜಾ
ಬುಡದಡಿಗೆ ಸೋಫಾ
– ವ್ಯಾಧಿಗೆ ಮದ್ದು

(೦೬)
ಪ್ರದರ್ಶನಕೆ
ಮೂರ್ಹೊತ್ತು ಪಾಕಶಾಲೆ
– ಊರಲಿ ಮಾನ

(೦೭)
ಪ್ರಾವೀಣ್ಯವಿಲ್ಲ
ಖಾಲಿ ಮಾತಿನ ಡಬ್ಬ
– ನಗಲೂ ದುಃಖ


(೦೮)
ಕೆಲವರಂತೂ
ಬೆಳೆಯಲೇ ಬಿಡರು
– ಮಕ್ಕಳು ಹಾಳು

(೦೯)
ಸುಪ್ರಭಾತಕೆ
ಕಾಫಿಗೂ ಗತಿಯಿಲ್ಲ
– ಮನೋಭಾವನೆ

(೧೦)
ಅರ್ಹತೆಯಲ್ಲ
ಸಾಮಾನ್ಯ ಜ್ಞಾನ ಜಾಣ್ಮೆ
– ಸುಖ ಸಂಸಾರ

ನಾಗೇಶ ಮೈಸೂರು
೨೦.೧೨.೨೦೧೬
(Photos : Creative Commons)

01033. ತನ್ನ ಪಾಡಿಗೆ


01033. ತನ್ನ ಪಾಡಿಗೆ
__________________


(೦೧)
ಬೇಕಿಲ್ಲ ಬಿಡು
ಹೆಸರು ಪ್ರಸಿದ್ಧಿಗೆ
– ಯತ್ನ ಸಿದ್ಧಿಗೆ

(೦೨)
ಬಯಸಲಿಲ್ಲ
ಬಿರುದು ಬಾವಲಿಯ
– ಹಾಡುವ ಹಕ್ಕಿ

(೦೩)
ಹಾರುವ ಹಕ್ಕಿ
ಹಕ್ಕಿಗಾಗಿ ಹೋರಾಟ
– ಬಾನ ಅಖಾಡ

(೦೪)
ಕಿಲಾಡಿ ಹಕ್ಕಿ
ಬಾನಲೊಡ್ಡಿದೆ ಪಂಥ
– ಹಾರದ ಜಗ

(೦೫)
ಚಡಪಡಿಕೆ
ನೆಲದಿಂದ ಬಾಂದಳ
– ಎಷ್ಟೊಂದು ಹಕ್ಕಿ


(೦೬)
ಹುಚ್ಚು ಮನಸೆ
ಎತ್ತರಕಿಲ್ಲ ಕೊನೆ
– ಶೂನ್ಯ ಗಗನ

(೦೭)
ಸಾಧಿಸಿದಷ್ಟು
ಎತ್ತರ ನಿರುತ್ತರ
– ಮತ್ತಷ್ಟೆತ್ತರ

(೦೮)
ಆಸೆ ಅನಂತ
ದಿಗಂತದಲೆ ಜಾಗ
– ಸಿಕ್ಕದ ಕೊನೆ

(೦೯)
ಆಡಿಕೊಂಡಿದೆ
ತನ್ನ ಪಾಡಿಗೆ ತಾನು
– ಮಾಯಾವಿ ಮನ

(೧೦)
ಅದು ನಾನಲ್ಲ
ನಾನು ತೊಟ್ಟ ಪೋಷಾಕು
– ಮಾಯೆ ಮುಸುಕು

ನಾಗೇಶ ಮೈಸೂರು
೧೯.೧೨.೨೦೧೬
(Pictures: Creative common)