01072. ಅರ್ಥವಾಗದ ಕವಿತೆ


01072. ಅರ್ಥವಾಗದ ಕವಿತೆ
________________


ಕವನದೊಳಗರ್ಥ
ಕವನದ ಒಳಾರ್ಥ
ಅರ್ಥವಾದರೆ ಗರ್ಭಿತ
ಅರ್ಥವಾಗದೆ ವ್ಯರ್ಥ ..

ಅರ್ಥವಾಗಿಸಲೆಂದು
ಅರ್ಥೈಸುವ ಸತತ
ಅರ್ಥವಾಗುವುದೊಂದು
ಅರ್ಥವಾಗದ ನೂರು..!

ಅನರ್ಥವಾಗದ ರಚಿತ
ಬಹಿರಂಗಕೆ ಉಚಿತ
ಅಸಮಾಧಾನ ಖಚಿತ
ಅರೆಬರೆಯುಗುಳಿ ಕವಿಚಿತ್ತ..

ಪರರಿಗಾದರು ಅರ್ಥ
ಕವಿಗಾಗಬೇಕಿಲ್ಲ ‘ಅರ್ಥ’
ತೆವಲಿನ ಪಾಡು ನಿಸ್ವಾರ್ಥ
ಪುಕ್ಕಟೆ ಮೆಚ್ಚುಗೆ ಅನಂತ..

ಈ ಕವನ ಅರ್ಥಗರ್ಭಿತ
ಆಗಬಹುದರೆಬರೆ ಅರ್ಥ
ಚಿಂತೆ ಬಿಡು ಕವಿಯ ಪಾಡದೆ
ಕಾಣದ್ದವಗೂ ನೀ ಕಾಣುವೆ..

– ನಾಗೇಶ ಮೈಸೂರು
೧೫.೦೧.೨೦೧೬
(Picture source: Creative Commons)
ಹೀಗೆ ಸುಮ್ನೆ: ಕಠಿಣ ಪದಗಳ ಅರ್ಥ (ಕಠಿಣ ಪದಾರ್ಥ) : ಅರ್ಥ = ಹಣ, ದ್ರವ್ಯ 😛

01071. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨


01071. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨
ಕಗ್ಗ ೪೨ ರ ಮೇಲಿನ ನನ್ನ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ..

*ಮೋಹ-ನೇಹ-ದಾಹಗಳ, ಮಂಕುಹಿಡಿಸೋ ಭ್ರಮೆಯಡಿ..*
– ನಾಗೇಶ್ ಎಮ್. ಎನ್

ಒಮ್ಮೆ ಸುತ್ತ ನೋಡಿದರೆ, ಈ ಜಗದ ಜೀವನಾಡಿಯೆ ಅದರೊಳಗಿರುವ ಸ್ನೇಹ, ಮೋಹ, ದಾಹಾದಿತರದ ರಾಗ ಭಾವಾನುಭೂತಿಗಳ ಸಂಗಮವೆಂದು ಅನಿಸಿಬಿಡುತ್ತದೆ. ವಾಸ್ತವದಲ್ಲಿ ಸೃಷ್ಟಿಯೆಂಬ ಭೌತಿಕ ಜಡ ಸ್ವರೂಪವನ್ನು ನೋಡಿದರೆ ಅದರಲ್ಲೇನು ಉತ್ಸುಕರನ್ನಾಗಿಸುವ, ಭಾವೋದ್ರೇಕದಿಂದ ಪ್ರಚೋದಿತರನ್ನಾಗಿಸುವ ಸರಕೇನು ಇರುವಂತೆ ಕಾಣಿಸುವುದಿಲ್ಲ. ಬರಿಯ ಜಡ ಕಲ್ಲು, ಮಣ್ಣು, ಗಾಳಿ, ಆಕಾಶಗಳ ಜತೆಗೊಂದಷ್ಟು ಸಹಯೋಗದಲ್ಲಿರುವ ವ್ಯೋಮಕಾಯಗಳ ಗಣಿತವನ್ನು ಬಿಟ್ಟರೆ ಅದರಲ್ಲಿ ತೀರಾ ಆಸಕ್ತಿ ಕೆರಳಿಸುವಂತದ್ದೇನು ಇಲ್ಲ.

ಪೂರ್ಣ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

01070. ನಾನೆಂಬ ನಾನತ್ವ…


01070. ನಾನೆಂಬ ನಾನತ್ವ…
__________________


ನಾನೆಂಬ ಅದ್ಭುತ
ಏನೇನೆಲ್ಲ ಮಾಡಿಸುತ
ಆಡಿಸುವಾಟ ಅನಂತ
ಆಡಿಸುವಾತ ಅಮೂರ್ತ.

ಬೆರಗು ನಾನಿಲ್ಲದೆ
ಆಗುತ್ತಿತ್ತೆ ಜಗ ಭೌತಿಕ ?
ನಾನೆಂದವರಳಿದರೂ
ನನ್ನದೆ ಜಗ ಸಂತತ ಸತತ….


ನಾನಾರು ನೀನಾರು ?
ಮೊತ್ತ ಹನ್ನೆರಡಿತ್ತಾ..
ಗಂಡೊಂದು ಹೆಣ್ಣಾರು
ಪುರುಷ ಪ್ರಕೃತಿ ವಿಚಿತ್ರ !

ನಾನವನೆಂಬ ನಿರಾಳ
ನೀರಾಳ ಪಾತಾಳದ ಈಜು
ನಾನು ನೀನೆಂಬ ಕೊಂಡಿ
ಬ್ರಹ್ಮಗಂಟು ನಂಟಿಗೆ ಕೊನೆ..

ನೀ ಮಾಡಬೇಕಿತ್ತೆಲ್ಲ –
ನನ್ನ ಹೆಸರಲಲ್ಲ ಪ್ರಭು..
ನೋಡೀಗ ಅಹಮಿಕೆ ನನ್ನ
ನುಂಗಿ ತೇಗುತಿದೆ ನಾನಾಗಿ..


– ನಾಗೇಶ ಮೈಸೂರು
೧೪.೦೧.೨೦೧೭

(Pictures from Creative Commons and internet / social media )