01075. ಅವಳಾವಳದೊ ನಿರೀಕ್ಷೆ


01075. ಅವಳಾವಳದೊ ನಿರೀಕ್ಷೆ
______________________


ನಮ್ಮ ದೌರ್ಬಲ್ಯಗಳಿಗೊಬ್ಬ
ಹೊರೆ ಹೊರುವ ಜವಾಬ್ದಾರ
ಬೇಕು ಮುಚ್ಚಿಟ್ಟ ಕೃತಿಮಗಳ
ಗುಟ್ಟನರಿತೂ ಮುಚ್ಚಿಡುವ ಕೊರಮ..

ಬಾಳ ಕಾಳಸಂತೆ ಖದೀಮನಲ್ಲ
ನಿಜಾಯತಿ ನಿಜಗುಣ ಅರಿತ
ವಾಸ್ತವವಾದಿ ಅಂತರಂಗದೆ
ಭಾವೋತ್ಕರ್ಷ ಸ್ಪುರಿಸೊ ಬಹಿರಂಗ..

ಮೇಕಪ್ಪುಗಳಡಿ ಮುಚ್ಚಿಟ್ಟ ಹಾಗೆ
ಗೊತ್ತಾ ನೂರೆಂಟಿದೆ ಸರಕು ಮೊತ್ತ
ಅರಿತೆಲ್ಲವ ಅರಿಯದ ಹಾಗೆ ನಟನೆ
ಹುಚ್ಚಾಟ ತೆವಲು ಸಹಿಸೋ ಸಹನೆ..

ನಮ್ಮದದು ಸಹಜ ಗುಣಧರ್ಮ
ಮುಖವಾಡ ಧರಿಸಿಯೆ ಪ್ರಸ್ತುತ
ಸಾಲದಂತೆ ಅಭಿನಯ ದಿರುಸು
ಹೇಳದೆಯು ಕಾಯುವ ಮನಸತ್ವ ..

ಅಂತವನೊಬ್ಬ ಆಗುವ ಅರಸ
ಅಂತರಂಗದ ಕೋಟೆಯ ಸಾಮ್ರಾಜ್ಯ
ಬೇಧಿಸೆಲ್ಲಾ ಅಡೆತಡೆ ತಳ ಊರುವ
ನಿರಂಕುಶ ಪ್ರಭುತ್ವ ಒಳಗನಾಳುವ !

– ನಾಗೇಶ ಮೈಸೂರು
೧೮.೦೧.೨೦೧೭
(Picture : internet / social media)

01074. ವಿರಹ’ಕೊಂದು’ಬಿಡುವ ಸತತ


01074. ವಿರಹ’ಕೊಂದು’ಬಿಡುವ ಸತತ
______________________________


ಹೇಗೆ ಹೇಳಲಿ ವಿರಹ ಯಾತನೆ ಸಖಿ ?
ವಿನಾಕಾರಣ ಮನ ಅಂತರ್ಮುಖಿ
ಅರಸಿ ತೊಳಲಿದೆ ಬಳಲಿ ಒಳಗಿನ ಮೌನ
ಪದಗಳಾಗದು ಯಾಕೊ ಏನೊ ಗ್ರಹಣ… ||೦೧||

ಏನೆಲ್ಲಾ ಬದುಕಿನ ಜಂಜಾಟದ ಹುತ್ತ ಗೊತ್ತಾ?
ಹುಡುಕಿದ್ದು ಮಿಡಿ ನಾಗರಗಳ ಕೆಣಕುತ್ತ
ಭುಸ್ಸೆನ್ನುವ ಭೀತಿಯಾ ನಡುವಲು ಹೆಣಗಿದ್ದೆ
ಕಾಣಬಹುದೇನೋ ನಿನ್ನ ಎನ್ನುವ ದೂರದಾಸೆಯಲಿ ||೦೨||

ಈ ನೌಕೆಯ ಚುಕ್ಕಾಣೆ ಹಿಡಿದು ನಡೆದೆ ನಿಜ
ಕನಸ ಕಾಣುತ ನಿನ್ನ ಕನಸ ಮರೆಯೆ ಹವಣಿಕೆ
ಕನಸೇನು ಜಾರಿ ಕೊಸರುವ ಹಸುಗೂಸೆ ಕರಗೆ ?
ಮತ್ತೆ ಹೆಗಲೇರುವ ಪರಿಗೆ ಮಾಡಲೇನ ಉಪಚಾರ ? ||೦೩||


ನೀ ಸೃಜಿಸಿದ ಶೂನ್ಯಾವತಾರ ಗೊತ್ತಾ ಹೇಗಾಗಿದೆ ?
ತಾಳುವ ದಶಾವತಾರ ಪ್ರತಿಕ್ಷಣ ನೀನಿಲ್ಲದ ಗುಂಗೆ
ಗುನುಗುತ್ತ ನಿನ್ನ ನೆನಪಿನ ಕಣಕಣದ ಜೊತೆ ಸಂಯುಕ್ತ
ನಿರ್ಲಿಪ್ತವಿರಲೆಂತು ಬದುಕಿನ ಹಾದಿ ಯೋಜನ ದೂರ ||೦೪||

ವಾಸ್ತವದ ಬಯಲಲೆಂತು ಹಾರೀತು ಕನಸ ಹಕ್ಕಿ ?
ರೆಕ್ಕೆ ಬಿಚ್ಚಿ ಮುಗಿಲ ಕಡಲ ದಾಟಬೇಕು ಮನಸಾ ಸುಗ್ಗಿ
ನೀನಿಲ್ಲದ ಕೊರೆ ಕಾಡುತಿದೆ ಯಾರು ಹಾರುವರಿಲ್ಲ ಜತೆಗೆ
ಹಾರಬಿಡದ ಸಂಕೋಲೆಗಳಡಿ ನರಳುವ ಜಾತಕಪಕ್ಷಿ ಪಾಡು ||೦೫||


ನೀಡುತ್ತಿದೆ ಅದೆ ಬದುಕು ಸಮಜಾಯಿಷಿ ತ್ಯಾಗದ ಹೆಸರು
ಕೊಲ್ಲುತ ಆಸೆಯ ಬತ್ತಿಗೆ ತಣ್ಣೀರೆರೆದು ದಿನ ನಂದಿಸುತ
ಗೆದ್ದರೆ ಆಗುವೆನೇನೊ ಸಂತ ನಟಿಸಬಹುದು ಧೀಮಂತಿಕೆ
ಗೆಲ್ಲದ ಹುಡಿಮನ ನನ್ನದು ಮರೆಯಲೆಂತು ಕೈಗೆಟುಕದ ಪ್ರೀತಿ ? ||೦೬||

ಕತ್ತರಿಸಿದ ಕೇಶ ನಖ ನೆನಪಾಗಲಿ ಬೆಳೆದರೂ ನೋವಿಲ್ಲ
ಅಂತಿರಲಿ ನಿನ್ನ ನೆನಪು ಇದ್ದರು ಕಾಡದೆ ಜತೆ ಬಿಡದೆ
ಅನ್ನುತೆ ಜತನದೆ ಕಾಪಿಟ್ಟ ನಮ್ಮೊಲವಿನ ಓಲೆಗೆ ಸಿಂಗರಿಸಿ
ಬದುಕಿಡಿ ಬರೆವೆ ಭಾಷ್ಯ ನನಸಾದೀತೆಂಬಾ ಹುಸಿ ಆಸೆಯಲಿ ||೦೭||

– ನಾಗೇಶ ಮೈಸೂರು
೧೮.೦೧.೨೦೧೭
(Pictures: Creative Commons / internet / social media)