01099. ಕಚ’ಗುಳಿಗೆ’ – ೨೪.೦೧.೨೦೧೭


01099. ಕಚ’ಗುಳಿಗೆ’ – ೨೪.೦೧.೨೦೧೭
_____________________

(೦೧)
ವರಸಾಮ್ಯತೆ
ವಯಸ್ಸಿಗಲ್ಲ ಲೆಕ್ಕ
– ಪರಿಪಕ್ವತೆ

(೦೨)
ಕುಳ್ಳು ಎತ್ತರ
ಸರಿ ಜೋಡಿಯಾಗುತ್ತ
– ಸರಾಸರಿಯೆ

(೦೩)
ಕಪ್ಪು ಬಿಳುಪು
ಹಗಲಿರುಳು ಜತೆ
– ಸಂಗಾತಿ ಸುಖ


(೦೪)
ಪೀಚು ಹುಡುಗಿ
ಸ್ಥೂಲಕಾಯ ಹುಡುಗ
– ಮಕ್ಕಳಾಟವೆ

(೦೫)
ಮಲಗೆ ಸರಿ
ಮಕ್ಕಳಾಗುವ ಪರಿ
– ಸೃಷ್ಟಿ ಅದ್ಭುತ

(೦೬)
ಅನುರೂಪತೆ
ಬಾಹ್ಯ ನೋಟ ಗಣಿಸೆ
– ಹೊಂದದ ಚಿತ್ರ

(೦೭)
ಮೌನಿ ಹುಡುಗಿ
ವಾಚಾಳಿ ಅವನಿಗೆ
– ಬಳೆ ಸದ್ದಾಗಿ


(೦೮)
ಮೂಗ ಬಸವ
ಅಮ್ಮಾವ್ರ ಗಂಡ ಪಟ್ಟ
– ಜಾಣ ಕಿವುಡು

(೦೯)
ಬುದ್ಧಿವಂತಿಕೆ
ಸತಿಯಾಗಲಿ ಪತಿ
– ಖರ್ಚಿಗೆ ಕಾಸು

(೧೦)
ಯಜಮಾನತಿ
ಗೃಹ ಬಂಧನ ನೀಡೆ
– ಪ್ರೀತಿಯ ಖೈದಿ

– ನಾಗೇಶ ಮೈಸೂರು
೨೪.೦೧.೨೦೧೭
(Picture source: Creative Commons)

01098. ತುಣುಕಾಟಗಳು – ೨೪.೦೧.೨೦೧೭


01098. ತುಣುಕಾಟಗಳು – ೨೪.೦೧.೨೦೧೭
________________________________


(೦೧)
ಹೆಂಡತಿ ಪ್ರಾಣ
ಹಿಂಡಬಾರದು ಗೊತ್ತಾ
– ಗಂಡ ದೇವರು

(೦೨)
ಗಂಡಾಂತರವ
ದೂರವಿಡೆ ಇರಲಿ
– ಗಂಡ ಅಂತರ

(೦೩)
ಜೊತೆ ಜೊತೆಗೆ
ಇದ್ದರೂ ಸತಿಪತಿ
– ಆಗುವುದಿಲ್ಲ

(೦೪)
ಹೆಣ್ಣು ಗಂಡಸ
ದೌರ್ಬಲ್ಯ ಅರಿತಂತೆ
– ಆಳು ಆಕಾರ

(೦೫)
ಕಂಬನಿ ಹನಿ
ಕಟ್ಟಿ ಮುಳುಗಿಸಿದ
– ನಾರಿ ಸಾಮ್ರಾಜ್ಯ

(೦೬)
ಸಹಗಮನ
ಸತಿ ಕಣ್ತುದಿಯಲ್ಲೆ
– ಪತಿ ಗಮನ

(೦೭)
ಸಂಸಾರ ನೌಕೆ
ಲಂಗರು ನೆಲದಲೆ
– ನಿಲಬಾರದು

(೦೮)
ಗಂಡ ಹೆಂಡತಿ
ಮಕ್ಕಳು ಮನೆ ಗೊನೆ
– ಮಾಗೆ ಹೊಂಬಾಳೆ

(೦೯)
ಸಂಸಾರ ಸುಖ
ಪರಿಪೂರ್ಣತೆ ಶೂನ್ಯ
– ಸಿಕ್ಕುವ ಪೂರ್ಣ

(೧೦)
ಮದನಾರಿಗೆ
ಮದಕರಿ ಮದಕೆ
– ಮದನ ಪ್ರಿಯ

– ನಾಗೇಶ ಮೈಸೂರು
೨೪.೦೧.೨೦೧೭
(Picture source: from internet / social media )

01097. ಬದುಕು, ನೀ ಕಂಡಂತೆ


01097. ಬದುಕು, ನೀ ಕಂಡಂತೆ
__________________________


ಅವರವರು ಕಂಡಂತೆ
ಅವರ ಜೀವನ ಸಂತೆ
ಅವರಿವರು ಕಂಡಂತೆ
ಬಾಳುವುದೇಕೊ ಮತ್ತೆ ?

ಅವರ ಕಣ್ಣಿನ ಸೊಗಸು
ಅವರ ಕನಸಿನ ಕೂಸು
ನೀನಾಗಲೇಕೆ ನನಸು –
ಆದೀತೆಂದು ಮುನಿಸು ?

ಅವರಾಗದ ಅವರ
ನಿನಗೆ ಆರೋಪಿಸುವರ
ನೀನಪ್ಪುವುದೇಕೊ ಸುಮ್ಮ
ನೀನಾಗಿಹೆ ನಿನಗೆ ಬೊಮ್ಮ !

ಯಾಕಿಂಥ ಒಳ ದಂತಕುಳಿ
ನೀನೆ ಶಿಲ್ಪಿ ಕೈಗೆತ್ತಿಕೊ ಉಳಿ
ಉಳಿಗಾಲವಿಲ್ಲ ಯಾರೋ ಕೆತ್ತೆ
ಅರಿವ ಮೊದಲೆ ಪೂರ್ತಿ ಕೆಟ್ಟೆ..!

ಬದುಕು ನೀನು ಕಂಡ ಹಾಗೆ
ಮಡಿಲ ಕೆಂಡ ಸುಡುವ ಬಗೆ
ನೀರುಣಿಸೆ ಇದ್ದಿಲು ತುಂಡು
ನೀರಾದೆಯೊ ಕೊಲುವ ಗುಂಡು..!

– ನಾಗೇಶ ಮೈಸೂರು
೨೪.೦೧.೨೦೧೭
(Picture source: Creative Commons)