01101.ಕ್ಷಮಿಸು ಸುಧಾಂಶು


01101.ಕ್ಷಮಿಸು ಸುಧಾಂಶು
_______________


ಸುಧಾಂಶು
ನನ್ನನು ಕ್ಷಮಿಸು 😔
ಕಡೆಗಣಿಸಿದ್ದೆಷ್ಟು ನಿನ್ನ
ಆ ಹೊತ್ತು ?
ಚಿಗುರು ಮೀಸೆ ಪ್ರಾಯ ಹೊತ್ತು ;
ಅರಿವಾಗದೇ ಹೋಯ್ತು
ನೀನಲ್ಲ ಎಲ್ಲರ ಹಾಗೆ..

ಬುದ್ಧಿವಂತಿಕೆಯ
ಗೊಂದಲವದೆಷ್ಟೊ ಸುತ್ತು
ತುಣುಕುಗಳ ಕಂಡೂ
ಕಾಣಲಿಲ್ಲ;
ಕಾಡುತ್ತಿದ್ದವೇನೇನೆಲ್ಲ ಬರಿದೆ
ಛೇಡಿಕೆಗೂ ಕಂಗೆಡಲಿಲ್ಲ
ನೀನಲ್ಲ ಎಲ್ಲರ ಹಾಗೆ..

ನಿನ್ನೊಳಸುಳಿಗೆ ನೀನೆ
ಸಿಕ್ಕಿಬಿದ್ದಾಗ ಅಪಹಾಸ್ಯ
ಮಾಡಿದ್ದೆಲ್ಲ ನೆನಪು ಕಹಿ
ಆಗಿತ್ತು ಅವಹೇಳನ;
ನಮ್ಮಂತಲ್ಲದ ನಿನ್ನ ಕೀಳಾಗಿ
ಕಂಡರೂ ಕಾಡಲಿಲ್ಲ ಕೀಳರಿಮೆ
ನೀನಲ್ಲ ಎಲ್ಲರ ಹಾಗೆ..

ಇಂದರಿವಾಗಿಸುತಿದೆ ಪಕ್ವತೆ
ಬುದ್ಧಿಮಾಂದ್ಯತೆ ನಿನ್ನದಾಗಿರಲಿಲ್ಲ
ಮಂದಬುದ್ದಿಯ ಗೊಡ್ಡು ಮನಸು
ನಾವಾಗಿದ್ದು ಅರಿಯದ ವಯಸು ;
ಸರಿಯೊ ತಪ್ಪೊ ವಿಧಿಯೆ
ಪ್ರತಿಕಾರಕಿತ್ತರೆ ಶಿಕ್ಷೆ
ಬಿಡು ನಾವಲ್ಲ ನಿನ್ನಯ ಹಾಗೆ..

ಎಲ್ಲಾದರೂ ಹೇಗಾದರೂ ಇರು
ಈಗಿದ್ದರೆ ಸರಿ ಚೆಂದದ ಬದುಕು
ಯಾರಿಗೆ ಬೇಕು ಅದ್ಭುತ ?
ನೀನಿದ್ದರೆ ಸಾಕು ಸಹಜ..
ಆಶಯದ ನಿಜಾಯತಿಯಾದರು
ಹರಸಲಿ ನಮ್ಮ ಬದುಕಿನ ತುಣುಕ
ನಾವಾಗುವೆವು ನಿನ್ನಯ ಹಾಗೆ !

– ನಾಗೇಶ ಮೈಸೂರು
೨೫.೦೧.೨೦೧೭
(Picture source: Creative Commons)

01100. ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ…


01100. ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ…
__________________________________


ಕಳೆದು ಹೋಗುತಿದೆ ಸಾಲುಸಾಲಾಗಿ
ಒಂದೊಂದೇ ದಿನ ವಾರ ತಿಂಗಳು ವರ್ಷ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಕರಗಿ ಹೋಗುತಿದೆ ಗಳಿಸಿದ್ದೆಲ್ಲ ಧಾರೆ
ಹನಿಹನಿಗೂಡಿ ಹಳ್ಳ ತುಂಬಿದ ಬಳ್ಳ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಮರೆಯಾಗುತಿವೆ ಬಾಲ್ಯದ ಗಟ್ಟಿ ಕೆಳೆ ಸಖ್ಯ
ಸಡಿಲ ಮಣ್ಣು ಹೊಸತು ಯಾಂತ್ರಿಕ ಬಂಧ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಬ್ರಹ್ಮಗಂಟಿಗೂ ನಂಟಿನ ಬಂಧ ಪಣ್ಯವೆ
ಪ್ರೀತಿ ಪ್ರೇಮದಳತೆ ಲೆಕ್ಕಾಚಾರ ಸಗಟು
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಗೊತ್ತು ಗುರಿಯಿರದ ಪಯಣದ ಸಾರೋಟು
ಏರಿ ಹೊಟ್ಟೆಪಾಡಿಗೆ ಶೂನ್ಯದತ್ತ ಸುತ್ತು ನಡಿಗೆ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಕರುಳ ಬಸಿದವರ ಲೆಕ್ಕ ಚುಕ್ತವಾಗದಲ್ಲ
ಕರುಳ ಕುಡಿ ಮರು ಪಾವತಿಸೊ ಕಾಲ ಚಕ್ರ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಹೋದದ್ದೇನು ಬಂದದ್ದೇನು ಗೊಂದಲ ಮೊತ್ತ
ಕೈ ಸಿಗದ ಹಿಡಿತ ಹೇಳಲಾಗದ ವಿವರ ಯಾದಿ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಬದುಕು !

ಹೋಗಲಿ ಬಿಡು ಬಂದದ್ದೆಲ್ಲಾ ಬರಲಿ ತನ್ನಿಚ್ಛೆ
ಹೋದದ್ದು ಮೊದಲೆ ನಿನದಿರಲಿಲ್ಲ ಹೇಗೂ
ಹೋದರೆ ಹೋಗಲಿ ಬಿಡು ಅನ್ನುವಂತಿಲ್ಲ
– ಇದು ಹಾಳು ಬದುಕು..!

– ನಾಗೇಶ ಮೈಸೂರು
೨೫.೦೧.೨೦೧೭

(Picture source: internet )