01109. ಎಚ್ಚರದ ಚಡಪಡಿಕೆ ನಿದಿರೆಯಲ್ಲಿಲ್ಲ..


01109. ಎಚ್ಚರದ ಚಡಪಡಿಕೆ ನಿದಿರೆಯಲ್ಲಿಲ್ಲ..
_______________________________


ನಟ್ಟಿರುಳಿನ ಗಾಢ ರೋಧನ
ತಬ್ಬಿ ಶೀತಲ ಕೊರೆವ ತಬ್ಬಲಿ ಗಾಳಿ
ಮಳೆಯಾಗದ ತೇವದ ಕುಚ್ಚು
ಬೆಚ್ಚನೆ ಗೂಡೊಳಗಿನ ಜೀವ ಬೆಚ್ಚಿದ ಜಾವ
ಗೆಳತಿ, ತಟ್ಟನೆ ಎಚ್ಚರಾಗಿ ಹೋಯ್ತು..

ನಡುಗಿತ್ತು ತನು ಥರಥರ ಕಂಪನ
ಚಳಿಯೆನ್ನೆ ಅಪಮಾನ ಭೀಕರ ಪ್ರಖರ
ಹೊದೆಯಲೆಲ್ಲಿ ನೀನಿಲ್ಲದ ಬಗಲು
ಹೊದ್ದ ಚಾದರ ಮುಚ್ಚಲಿಲ್ಲ ಕಾಲನು
ಗೆಳತಿ, ತಟ್ಟನೆ ಎಚ್ಚರಾಗಿ ಹೋಯ್ತು..


ಬಾನಿಂದ ಬೆಳಕ ಸುರಿವ ತಾರಾಗಣ
ಕ್ಷೀಣದನಿಯ ಮಂಕು ದೀವಿಗೆ ತುಯ್ದಾಟ
ನೀ ಹಚ್ಚಿದ ಕುರುಹೇ ಕಾಣದು ಅಲ್ಲೆಲ್ಲೂ
ನಿನ್ನ ಪಥದೆ ಬೆನ್ನು ಹತ್ತಲು ಅಸಹಾಯಕತೆ
ಗೆಳತಿ, ತಟ್ಟನೆ ಎಚ್ಚರಾಗಿ ಹೋಯ್ತು..

ಕನಸೆಂದರೆ ಕನಸಲ್ಲವೆ ಅಯೋಮಯ
ಗಾಢನಿದ್ದೆಯ ಬಡಿದೆಬ್ಬಿಸುವ ನಿಶ್ಯಬ್ದ ಬಡಿಗೆ
ಮರೆತೆಲ್ಲ ಜಗವ ಶರಣಾಗುವ ಕರಾರು
ತಾನೇ ಮರೆತು ಮೇಘಸಂದೇಶ ಚೆಲ್ಲಿ ಖುದ್ದು
ಗೆಳತಿ, ತಟ್ಟನೆ ಎಚ್ಚರಾಗಿ ಹೋಯ್ತು..


ಹೊತ್ತಲ್ಲದ ಹೊತ್ತು ಎದ್ದು ಕೂತ ಕಳವಳ
ಮತ್ತೆ ಬಾರದು ನಿದಿರೆ ಏಕಾಂಗಿ ನೀರವ
ನಿಶೀಥದಲದೇನೊ ತಲ್ಲಣ ಎದೆಯನುರಣಿತ
ಎಚ್ಚರಿಸೆಲ್ಲೊ ಮಾಯವಾಗಿ ಹೋದ ಕವಿತೆ
ಗೆಳತಿ, ಎಚ್ಚರದ ಚಡಪಡಿಕೆ ನಿದಿರೆಯಲಿಲ್ಲ..

– ನಾಗೇಶ ಮೈಸೂರು
೨೭.೦೧.೨೦೧೭
(Picture source : from Creative Commons / internet / social media / postings online)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s