01158. ಮೇಜು – ಭದ್ರ – ತಾಪತ್ರಯ – ಉಲ್ಲಂಘನೆ


01158. ಮೇಜು – ಭದ್ರ – ತಾಪತ್ರಯ – ಉಲ್ಲಂಘನೆ

ಮೇಜು ಕೆಳಗಿನ ನೋಟು, ಸ್ವೇಚ್ಛೆಯ ಮೋಜಾಟದೆ ವ್ಯರ್ಥ
ಸುಭದ್ರ ಖಜಾನೆಯಲಿ ಬಚ್ಚಿಟ್ಟ, ಸಂಪದ ಸತ್ತು ಪರಾಗತ
ತಾಪತ್ರಯದ ನಡುವೆಯೂ ಪಾಪ, ಹೊಟ್ಟೆ ಬಟ್ಟೆ ಕಟ್ಟಿ ಉಳಿಕೆ
ಪಾಪಿ ಮಕ್ಕಳಿಂದ ಉಲ್ಲಂಘನೆ ನಿಯಮ, ಧ್ವಂಸ ಅಪ್ಪನ ಗಳಿಕೆ !

– ನಾಗೇಶ ಮೈಸೂರು
೨೭.೦೨.೨೦೧೭
#chouchoupadi

01157. ಬದುಕಿನ ಪಾಕಶಾಲೆ


01157. ಬದುಕಿನ ಪಾಕಶಾಲೆ
_________________________


ಕೊಚ್ಚುತ್ತಿದೆ ಬದುಕು ಮಚ್ಚಲಿ
ಎಳೆಕಾಯ ಎಳನೀರನು ಸುಲಿವಂತೆ
ಬಿಚ್ಚಿದರು ಜುಂಗಿನ ಪದರ ಕಾಯ
ಚಿಪ್ಪೆಲ್ಲೊ ಮಾಯ ತರಿದೆಲ್ಲ ತಿರುಳ..

ಬಿಚ್ಚುತಿದೆ ಉಳ್ಳಾಗಡ್ಡೆಯ ಹಾಗೆ
ಪದರ ಪದರ ಸಿಪ್ಪೆ ಬೆತ್ತಲೆ ಸೇವೆ
ಯಾರಾರ ಮುಂದಿನ ಸರಕಾಗಿ ನಿತ್ಯ
ಸಂಭಾಳಿಸಬೇಕಿದೆ ಕಣ್ಣೀರಿನ ಸಾಂಗತ್ಯ

ಹೆಚ್ಚುತ್ತಿದೆ ಸೊಪ್ಪು ತರಕಾರಿಯ ಹಾಗೆ
ಒಟ್ಟು ಬಿಡದೆ ಜುಟ್ಟು ಕತ್ತರಿಸಿ ಒತ್ತಟ್ಟಿಗಿರಿಸಿ
ಬಿಡುವಂತಿಲ್ಲ ನಿಟ್ಟುಸಿರು ಮುಗಿದಾಯ್ತೆಂದು
ತಬ್ಬೆತ್ತಿಕೊಂಡು ಕುದಿವ ನೀರಲಿ ಬೇಯಿಸುತ..

ನಿಲುವುದಿಲ್ಲ ಅಷ್ಟಕೆ ಬದುಕ ಅಟ್ಟಹಾಸ
ಕಟ್ಟೆತ್ತಿಕೊಂಡು ಬೀಸುಕಲ್ಲು ರುಬ್ಬುಗುಂಡಲಿ
ಜಬ್ಬಿ ಗುದ್ದಿ ಕುಟ್ಟಿ ಒನಕೆಯ ಒರಳಾಡಿಸಿ
ಪುಡಿಗುಟ್ಟಿಸಿ ಜಾಡಿ ಬಂಧನದೆ ದಬ್ಬಿ ಅಮುಕ್ತ..


ಆಧುನಿಕ ಯುಗದಲ್ಲಿನ್ನೂ ಅಧ್ವಾನ
ಮಿಕ್ಸಿ ಗ್ರೈಂಡರ್ ಕಟ್ಟರು ಸ್ಲಯ್ಸರು ಇತ್ಯಾದಿ
ಮೋಟಾರಿನ ನೂರುಪಟ್ಟು ವೇಗದ ತೇಜಿ
ಪಾನೀಯವಾಗಿ ಯಾರದೊ ತುಟಿಪಾಲು !


– ನಾಗೇಶ ಮೈಸೂರು
೨೭.೦೨.೨೦೧೭

(Picture source: internet / social media)

01156. ಇದ್ದಾಗಲೆ ಕೊಡಬಾರದೆ ಹೆಸರ – ಹೇ ಪ್ರಭುವೇ ?


01156. ಇದ್ದಾಗಲೆ ಕೊಡಬಾರದೆ ಹೆಸರ – ಹೇ ಪ್ರಭುವೇ ?
_________________________________________


ಯಾವತ್ತೋ ಹೆಸರಾದರೇನು ಸುಖ ?
ಹೆಸರೇಳುವ ಕಾಯ ಆಳಿದ ಮೇಲೆ…
ಆಳುವ ಹೊತ್ತಲಿ ವಂದಿಮಾಧಗರ ಗದ್ದಲ
ಕಿವಿಗೆ ಬಿದ್ದಾಗ ಜೀವಕೆ ತಂಪು ಅಹಮಿಕೆಗಿಂಪು !

ಮಾಡಿದ್ದೆ ಮಾಡಿದ್ದು ಎಡಬಿಡದೆ ಸಮನೆ
ಗೊತ್ತೂ ಗುರಿಯಿಲ್ಲದ ಕಡೆ ಬಿಲ್ಲು-ಬಾಣ ದ್ರೋಣ
ಬಲ್ಲವರೆಂದರು ಮಾಡಿದ್ದುಣ್ಣೋ ಮಾರಾಯ
ಕೈಗೆ ಬಂದ ತುತ್ತು ಬಾಯಿಗಿಲ್ಲ, ಏನನ್ಯಾಯ ಕಾಲ !

ಮೊದಮೊದಮೊದಲ್ಹವಣಿಕೆ ಸ್ವತ್ತು ಸಂಪತ್ತು
ಸೇರಿದ್ದೇ ಸೇರಿದ್ದು ಬಂತಲ್ಲ ಪ್ರಖ್ಯಾತಿಯ ಹುಚ್ಚು
ಗಂಟಿನ ಜತೆ ನಂಟು ಗುಢಾಣದ್ಹೊಟ್ಟೆ ಅರಳಿತ್ತು
ಏನೇನೆಲ್ಲ ಕಸರತ್ತು ಮಾಡಿಸಿತ್ತು ಹೆಸರಾಗಲು !

ಹಾಳು ನಿಯ್ಯತ್ತಲಿ ಮಾಡಿದರೇನು ಬಂತು ಭಾಗ್ಯ ?
ಪೂರ್ವ ಪುಣ್ಯ ಸುಕೃತ ಕೈಗೂಡದ ಅದೃಷ್ಟ ರೇಖೆ
ಬರೆದೋ ಓದೋ ಸೇವೆಯ ಗೈದೋ ಮೇಲೇರೇ ಕಪ್ಪೆ
ಜಾರುತ ಬಿತ್ತಲ್ಲೆ ಹಳ್ಳಕೆ ಮತ್ತೆ ಕಾಲ ಕೂಡಿ ಬರದೇ..

ಬಂದರೇನು ಫಲ ಸರಿಕಾಲ, ಕಾಲವಾದ ತರುವಾಯ ?
ಕೊನೆಗಾಲದ ಮಬ್ಬಲ್ಲಿ, ಕನಕವೃಷ್ಟಿ ಸುವರ್ಣವೂ ಮಣ್ಣೇ..
ತಿಮಿರಿರುವಾಗಲೆ ಬರಬಾರದೆ, ಬಾಕಿ ಪೊಗರಿನ ಜತೆಗೆ
ತಲೆಗೇರದ ವಿನಯವನಿತ್ತು, ಸಂಭಾಳಿಸೊ ಚಕ್ಯತೆ ಕೊಟ್ಟು..

– ನಾಗೇಶ ಮೈಸೂರು
೨೬.೦೨.೨೦೧೭
(Picture source : internet, social media)

01155. ಪಂಚಭೂತದಿಂದಾದವಳು ಅವಳು ..


01155. ಪಂಚಭೂತದಿಂದಾದವಳು ಅವಳು ..
__________________________________


ಪಂಚಭೂತೋದ್ಭವ ಪ್ರಕೃತಿ
ಚಂಚಲತೆ ಸಹಜಗತಿ
ವಾಯುಜಲದಗ್ನಿಯಾಕಾಶನೆಲ
ಸಮಷ್ಟಿಭಾವದಲೆಂತ ಅಚಲ?

ತುಯ್ದಾಡುವ ಮನದುಯ್ಯಾಲೆ
ಗಾಳಿದೇವರು ಬಿಡುವನೇನೆ ?
ಬೀಸುತಲಿದ್ದರೆ ತಂಗಾಳಿ ಹಿತ
ಬಿಡದು ಜಲಧಾಳಿ ಸನ್ನಿಹಿತ..

ಯಾವ ಭಾವದ ಗೊಲಸೊ ಕಂಬನಿ
ಧುತ್ತೆಂದವತರಿಸುವ ಅದ್ಭುತ
ತಂಗಾಳಿಗೊ ಬಿರುಗಾಳಿಗೊ ಸೈ
ಬಿರುಸೆಬ್ಬಿಸುವಾಗ್ನಿ ಸಹಚರ ಮುನಿಸೈ..

ಅನುಪಮಾದ್ಯುತಿ ಅಗ್ನಿಭಾವದ ಚಿತ್ತ
ಮಿಲನಾಧಿಕಾ ಬೆಚ್ಚನೆ ಕಾಮನೆ ಹಿತ
ಭುಗಿಲೆದ್ದ ಜ್ವಾಲೆ ಕೆನ್ನಾಲಿಗೆ ಸ್ವಾರ್ಥ
ಆಕಾಶದಗಲ ತಂತಾನೇ ಪಸರಿಸುತ..

ಆಗಸದ ಮನ ವಿಶಾಲ ಹೃದಯ
ತಾವಿದೆಯಲ್ಲಿ ಜಗಕೆಲ್ಲ ಹಂಚುವ ಮಾಯ
ನುಂಗಬಲ್ಲದೆಲ್ಲ ಕದಡಿ ಪ್ರಸರಿಸಿ ದೂರ
ಸರಿಹೊತ್ತಲಿ ಇಳೆಗ್ಹೊತ್ತು ತರಬಲ್ಲ ಅಪಾರ..

ಕ್ಷಮಯಾ ಧರಿತ್ರಿ ಹೀರುತ ಸಕಲ
ವಾಯು ಜಲ ಬೆಂಕಿ ಮನದಾಗಸದಾಳ
ಸಕಲ ಸಂಗಮ ಒಳಗನರಿಯಲೆಂತು ?
ಮೀನ ಹೆಜ್ಜೆಗೆ ಹೋಲಿಸಿ ಹಳಿಯಲೆಂತು..?

ದೂರದಿರು ಇನ್ನಾದರೂ ಪ್ರಕೃತಿ ಚಂಚಲ
ಪುರುಷಕಿಹ ಜಡರೂಪ ಅವಳಿಗಿಲ್ಲ
ಪಂಚಭೂತದ ನಿರಂತರ ಪಾಕಶಾಲೆ ಅವಳು
ಪ್ರೀತಿ ವಾತ್ಸಲ್ಯದ ಗಳಿಗೆಯಲೆ ಹಳಿಯುವಳು..

ಪಂಚಭೂತದ ಪಾಂಚಾಲಿಯ ಗುರುತ್ವ
ಅರಿತಿತ್ತು ಪಾಂಡವಕುಲ ಮಹತ್ವ
ಭರಿಸಲಾಗದ ಧಾರಿಣಿ ಧಾರಣೆಯಲ್ಲ
ಪಂಚಭೂತಗಳೊಂದೊಂದಾದರು ತಾವೆಲ್ಲ !

ಪ್ರಕೃತಿ ಸಹಜ ಚಂಚಲ ಭಾವದ ಚಿತ್ತ
ಅದ್ಭುತ ಪುರುಷ ಮಿಲನ ಸ್ವಗತ
ಪ್ರತಿಭೂತದ ಹಿಗ್ಗುಕುಗ್ಗಿಗೆ ಸಂವಾದಿ
ಪುರುಷವಿತ್ತರೆ ಪ್ರಕೃತಿ ಸಮತೋಲನದಿ.

– ನಾಗೇಶ ಮೈಸೂರು
೨೬.೦೨.೨೦೧೭

(Picture source: internet / social media)

01154. ಕಾಪಾಡೋ ಹರ…


01154. ಕಾಪಾಡೋ ಹರ…
____________________________


ಅದ್ಭುತ ರೂಪ ಮೂರ್ತ
ಅತಿಶಯ ಕಾಣದಮೂರ್ತ
ಅದ್ಭುತಾತಿಶಯ ಸಂಗಮ ಶಿವ
ಲಯದೊಳಾಗಿ ವಿಹಂಗಮ ಭಾವ !

ಫಾಲಾಕ್ಷನವ ರುದ್ರನೇತ್ರ
ಕೊರಳಾಭರಣ ನಾಗಸೂತ್ರ
ಸೃಷ್ಟಿ ಸ್ಥಿತಿ ನಿರಂತರ ಪಾಕಶಾಲೆ
ಪಾಕ ಪಕ್ವಾಪಕ್ವ ಲಯ ಲೀನ ಲೀಲೆ !

ಹಾಲಾಹಲ ಹಾಲಿನ ಸಮ
ನೀಲಕಂಠ ಜಗವಾಗಿಸೆ ಕ್ಷೇಮ
ಹಿಮ ವೈಭವ ಕೈಲಾಸದ ವಸತಿ
ಮಸಣ ಬೂದಿ ಬುರುಡೆ ನಶ್ವರ ಸಂಗತಿ !

ಹರಿಹರಬ್ರಹ್ಮ ತ್ರಿಮೂರ್ತಿಗಣ
ತ್ರಿಕಾರ್ಯನಿರತ ಸಮಷ್ಟಿ ಸಗುಣ
ನಿರ್ಗುಣ ನಿರ್ಲಿಪ್ತ ನಿರಾಕಾರ ಶೋಧ
ಬ್ರಹ್ಮಾಂಡಕೋಟಿ ವ್ಯಾಪಿಸಲವನ ಕ್ರೋಧ !

ಜಗನ್ಮಾತಾಪಿತಗೆ ನಮಿಪೆ ಸತ್ವ
ಸೃಷ್ಟಿಮೂಲ ಪುರುಷ ಪ್ರಕೃತಿ ತತ್ವ
ಒಂದೆರಡಾಗಿ ಹಲವಾದ ಪರಿ ಗುರುತ್ವ
ನಿರಂತರದ ನಡುವೆ ಮತ್ತೊಂದಾಗೆ ಮಹತ್ವ !

ಶಿವಾಶಿವ ಸದಾಶಿವ ಜಡರೂಪಿ
ಆ ಲಯವಾಗಲಿ ಆಲಯ ಸ್ವರೂಪಿ
ಜಟಾಧರನ ಜಟೆಯಾಗಲಿ ಭದ್ರ ಸುಭದ್ರ
ಕಾಪಿಡೊಳಗೆಮ್ಮನು ದಾಟಿಸಿ ಸಂಸಾರ ಸಮುದ್ರ !

ಅಂತಿಮದಲಿರಲಿ ನಿನ ಡಿಂಡಿಮ
ಢಮರುಗದಲಿ ಅನುರಣಿಸಿ ಸಂಗಮ
ತ್ರಿಶೂಲವಿರಲಿ ಎಚ್ಚರಿಸುವ ಮೊನಚು
ಶಿವ ನಿನ್ನ ಧ್ಯಾನವಾಗಲಿ ಸುರಕ್ಷತೆಯಂಚು !


– ನಾಗೇಶ ಮೈಸೂರು
೨೫.೦೨. ೨೦೧೭

(Picture source : internet / social media)

01153. ಶಿವರಾತ್ರಿ ಉಪವಾಸ


01153. ಶಿವರಾತ್ರಿ ಉಪವಾಸ 
_______________________


(೦೧)
ಶಿವನ ವಾಸ
ಉಪವಾಸದ ದೇಹ
– ಆತ್ಮದ ಗೂಢ

(೦೨)
ಕಟ್ಟಿದ ಜಟೆ
ಜಾಗರಣೆ ನಿಯಮ
– ಬಿಚ್ಚಬಾರದು

(೦೩)
ಬಿಚ್ಚಿದ ಜಟೆ
ವೀರಭದ್ರನ ವೇಷ
– ಕೊಚ್ಚುವ ಗಂಗೆ

(೦೪)
ಕಣ್ಣಿನ ಸೋಲು
ಕವಿಯುವ ಮಂಪರು
– ಹಾಡ ಹಗಲು

(೦೫)
ಭಜಿಸೋ ಕಾಲ
ಭೋಜನದ ವ್ಯಂಜನ
– ಸಜ್ಜನ ಸಂಗ

(೦೬)
ವನವಾಸದೆ
ಬದುಕೇ ಉಪವಾಸ
– ನಿತ್ಯೋಪಾಸನೆ

(೦೭)
ಜಾಗಟೆ ಗಂಟೆ
ಶಿವನ ಜಾಗರಣೆ
– ಶಬ್ದ ನಿಶ್ಯಬ್ದ

(೦೮)
ಮೌನದ ತಪ
ಆಡಂಬರದ ಪೂಜೆ
– ಸಮತೋಲನ

(೦೯)
ಶೈವ ವೈಷ್ಣವ
ಅವರವರ ಭಾವ
– ಅದ್ವೈತ ದೇವ

(೧೦)
ಜಾಗರಣೆಗೆ
ಹಾಯ್ಕುಗಳುಪವಾಸ
– ಶಿವನ ಬೇಡಿ

– ನಾಗೇಶ ಮೈಸೂರು
೨೫.೦೨. ೨೦೧೭

(Picture source: internet / social media)

01152. ಶಿವರಾತ್ರಿಯ ಶಿವನ ಜತೆ ಸಂವಾದ


01152. ಶಿವರಾತ್ರಿಯ ಶಿವನ ಜತೆ ಸಂವಾದ
________________________________


ನೀನಿರುವೆಯ ಶಿವನೇ ಜತೆಗನುಗಾಲ ?
ನೀನಿಲ್ಲದೆ ಎಂತು ಗೆಲ್ಲಲಿ ಕಲಿಗಾಲ
ನೀನಿದ್ದ ಹೊತ್ತಲಿ ಸುತ್ತೆಲ್ಲ ನಿನ ಧ್ಯಾನ
ನೀನೆಲ್ಲಿ ಮಾಯ? ಮತ್ತೆಲ್ಲ ಅಂತರ್ಧಾನ..

ಐಹಿಕ ಲೌಕಿಕ ತಪನೆ ಕಾಡುವ ಯಾತನೆ
ಅಂತೆಂದು ಬಿಡಲೆಂತು ತೊಲಗದಾಕರ್ಷಣೆ
ನೀನಿಟ್ಟ ಮಾಯೆಯ ಜಾಡೇ ಆವರಿಸಿ ಸುತ್ತ
ಮುಸುಕಾಗಿ ಅಜ್ಞಾನ ಕಾಡಿದೆ ಸೋಲುಣಿಸುತ್ತ..

ಬಿಟ್ಟೆಲ್ಲ ನಿನ್ನಂತೆ ಬೈರಾಗಿಯಾಗಲು ಸಿದ್ಧ
ಮಸಣವೊ ಕೈಲಾಸವೊ ಪಾಲಿಗದೆ ಸಮೃದ್ಧ
ಕೊರೆವ ಹಿಮಗಿರಿ ಕಡೆಗೆ ಬೂದಿಮೈಗೂ ಸನ್ನದ್ಧ
ಕೈಕಟ್ಟು ಕಾಲಿಗೆಡರುತೊಡರು, ಸಂಸಾರ ಗೊದ್ದ..

ಮನಸಾಗುತಲಿದೆ ವೃದ್ಧ ಆಗಲಿಲ್ಲ ಶುದ್ಧಾ
ಬಿಡುತ್ತಿಲ್ಲ ವ್ಯಾಮೋಹ ನಂಬಿದ ಜೀವ ಶ್ರದ್ಧ
ಬಿಟ್ಟೆಲ್ಲ ಕೈಯೆತ್ತಿ ನಮಿಸಬೇಕಿದೆ ನಿನ್ನ ಜೀಯ
ಒಮ್ಮೆಯಾದರೂ ಜಪಿಸಿ ‘ಓಂ ನಮಃ ಶಿವಾಯ ‘

ತಪ್ಪೆಲ್ಲಾ ನಿನದೆ ಬಿಡು, ಬಿಟ್ಟೇಕೆ ಹೋಗುವೆ ಪ್ರಭು ?
ನೆಲೆಸಬಾರದೇ ಮನದೆ, ಅಂತರಂಗದ ವಿಭು
ನೀನಾಗೆ ಆತ್ಮಲಿಂಗ ನೆಲೆಸುತೊಳಗಡೆ ನಿರಂತರ
ಹುಡುಕಲೆ ಬೇಕಿಲ್ಲ ಒಳಗನರಿತರೆ ಜಂಗಮ ಸ್ಥಾವರ !

– ನಾಗೇಶ ಮೈಸೂರು
೨೪.೦೨. ೨೦೧೭

(Picture source : internet / social media)