01126. ಪ್ರೇಮಕ್ಕೂ ಪರ್ಮಿಟ್ಟೇ ?


01126. ಪ್ರೇಮಕ್ಕೂ ಪರ್ಮಿಟ್ಟೇ ?
____________________


ಪ್ರೇಮಕ್ಕೂ ಪರ್ಮಿಟ್ಟೇ ?
ಕಣ್ ಕಣ್ ಬಾಯ್ಬಿಟ್ಟೆ..
ಗಂಡ್ಹೆಣ್ಣು ಜೊತೆ ಆದ್ರೆ, ನೀ ಕೆಟ್ಟೆ..
ಬಾಕಿ ಪರಪಂಚ, ಬರಿ ಲೊಳಲೊಟ್ಟೆ..!

ವಯಸ್ಸಿಗ್ ಬಂದ್ ಐವಾನ
ಬುದ್ಧಿ ಮಾತ್ ಕೇಳ್ತಾನಾ ?
ನಿದ್ದಿ ಬರ್ದೇ, ಒದ್ದಾಡೊ ಪ್ರಾಯ
ಹೆಣ್ ಕತ್ತೇನು, ತಲೆ ಕೆಡಿಸೋ ವಿಷ್ಯ !

ಮೈ ನೆರ್ದವ್ಳೆನ್ ಕಮ್ಮಿನಾ ?
ತುಂಬ್ತುಂಬ್ಕೊಂಡ್ ಬಿನ್ನಾಣ
ಮೈಯೆಲ್ಲೊ ಮನ್ಸೆಲ್ಲೊ, ಸಿಕ್ಕಲ್ಲಿ ಹೈರಾಣ
ಕಣ್ಕಣ್ತಪ್ಸಿ ಕದ್ನೋಡೊ, ಒದ್ದಾಟ ಯಾರ್ಗೆಳೋಣ ?

ಒಂದ್ ಹೆಣ್ಗೆ ಒಂದ್ ಗಂಡು
ಯಾಕಾಡ್ತಾನೋ ಚಿನ್ನಿ ದಾಂಡು ?
ಒಂದು ಕಟ್ಟೋಕ್, ನೂರೆಂಟ್ ಜೋಲಿ
ತೆಪ್ಗಾಗೋದು ಕತ್, ಬಿದ್ಮೇಲ್ ತಾಳಿ..!

ಹಾಳ್ ಪ್ರೇಮಾನೊ ಕಾಮಾನೊ
ತೆವಲಿನ್ ಹುಸಿ ಡ್ರಾಮಾನೊ
ಯಾಕೊ ನಿಲ್ವಲ್ದು, ಯಾವ್ದು ಚೌಕಟ್ಟು
ಕೊಟ್ಬುಡಿ ಅವರವರ್ಗೆ, ಅವರ್ದೆ ಪರ್ಮಿಟ್ಟು.. !


– ನಾಗೇಶ ಮೈಸೂರು
೦೬.೦೨.೨೦೧೭
(Picture source: first one – museumartpaintings.com, second one – Creative Commons)

01125. ಐವಾನ, ಸ್ವಲ್ಪ ಜೋಪಾನ…


01125. ಐವಾನ, ಸ್ವಲ್ಪ ಜೋಪಾನ…
____________________________

ನಾ ಸ್ವಾಭಿಮಾನದ ಮುದ್ದೆ
ಚಿಗುರು ಮೀಸೆ ಪೊಗರಿನದೆ
ತಲೆ ಬಾಗಲಿಲ್ಲ ಹಿರಿ ಮೀಸೆಗೂ
ತಗ್ಗಿಸಬೇಡವೆ ಮಾನ ತೆಗೆದು..!


ನಡೆಯುತಿರೆ ಜಟ್ಟಿ ನಾ ಮಲ್ಲ
ಮಿಟ್ಟಿಗು ಮೀಸೆ ಮಣ್ಣಾಗಲಿಲ್ಲ
ಮಿಲಾಯಿಸಿದ ಕೈ ಉಳಿಯಲಿಲ್ಲ
ನಿನ್ನ ಕಣ್ಣಲ್ಲೆ ಕೆಡವಿ ಮುಕ್ಕಿಸಬೇಡ..!

ಊರೂರ ಹೆಣ್ಣುಗಳ ಜಾಲಾಡಿ
ಕೊಚ್ಚೆ ಹಾದಿ ಹಿಡಿಯದ ಕಿಲಾಡಿ
ಕಟ್ಟುಮಸ್ತು ಉಸ್ತಾದ ತಲೆ ತಗ್ಗಿ ನಡಿಗೆ
ಕದ್ದುಕದ್ದು ನಿನ್ನ ನೋಡುವಂತ ಖೇದ..!


ಹೊತ್ತು ತಂದ ಪದಕ ಬಿರುದೆಲ್ಲಾ
ಸಾಲು ನಿಂತವೆಷ್ಟೊ ಮುಗಿದಿಲ್ಲ
ಕರಗಿಸುತ ಇಡುವೆ ನಿನಗೊಡವೆ
ಕಾಡಬೇಡ ನಡುವೆ ಕಾಡೀತು ಸೋಲು..!

ಗುಟ್ಟಲೊಂದು ನಿಜವ ನುಡಿದೇನೇ
ಗೆಲ್ಲುವಾಸೆಗಿಂತ ಸೋಲುವ ತಪನೆ
ಸೋತಾಯ್ತು ನಿನಗೆ ಸೋತರೂ ಕೊನೆಗೆ
ಗೆಲ್ಲಬಹುದು ನಿನ್ನ ಪದಕವಾಗಿಸಿ ಎದೆಗೆ ..!


– ನಾಗೇಶ ಮೈಸೂರು
೦೬.೦೨.೨೦೧೭
(Picture source : Creative Commons)