01130. ಚುಂಬನಾ ಅವಲಂಬನಾ..


01130. ಚುಂಬನಾ ಅವಲಂಬನಾ..
_________________________________


ಹರಿವ ನೀರು ದಡಗಳ, ಸ್ವತಃ ಚುಂಬಿಸುತ್ತ
ಮುದ್ದಿಸಿ ಹೋದ ಕ್ಷಣಗಣನೆ, ಲೆಕ್ಕದಾನಂತ
ತೀರಿಸಲೆಂತೂ ಋಣ, ಹೊಣೆ ಯಾರದಿತ್ತ ?
ಹೊನಲು ನಕ್ಕಿತ್ತು ಬಿಟ್ಟುಬಿಡು, ನೀ ಋಣದ ಮಾತ
ನಿತ್ಯ ನಿರಂತರ ಸತತ – ನಾನೇ ಋಣಮುಕ್ತ !

ನೀರೆ ಬೆವರಿದ ಹನಿ ಮಣಿಮಾಲೆ ಚುಂಬನ
ಬೆವರಿದ ರೈತನ ಹಣೆಯಲಿ ಜಾರಿ ಸನ್ಮಾನ
ಯೋಧ ಪಟು ಸೇವಕ ಸಾಮಾಜಿಕ ಶ್ರಮಿಕ
ಧಾರೆಯೆರೆದಲ್ಲರ ಕಸು ನುಂಗಿ ತಣಿವಾ ಲೆಕ್ಕ
ಮರಳಿಸುತಿರುವೆ ದಡಕೆ – ಸ್ಪರ್ಶಿಸಿ ಪುಳಕ !


ಎಲ್ಲೊ ಸ್ಪುರಿಸಿದ ಸ್ಫೂರ್ತಿ, ಯಾವುದೊ ಕವಿತೆ
ಎಲ್ಲೊ ಸುರಿದಾವರ್ಷಾ, ಋತುವಿನದು ಬರಿ ಮಾತೆ ?
ಎಲ್ಲೊ ಚೆಲ್ಲಿದ ಹೂವು, ಇನ್ನೆಲ್ಲೊ ಕಂಪು ಇರುಮುಡಿ
ಎಲ್ಲಿಯದೊ ಕೊಳ ಕಾಲುವೆ, ಹನಿಯೊಗ್ಗಟ್ಟು ಗಾರುಡಿ
ನನ್ನೊಡಲ ಸೇರಿದ ಋಣಕೊಂದು ಮುತ್ತಿನ ಜರಡಿ !

ಕೊಟ್ಟು ಕೊಳ್ಳುವ ಪಣ್ಯ, ಯುಗಯುಗದ ಲಾವಣ್ಯ
ಸಜ್ಜನರ ಸೃಜಿಸಿದೆ ಗಣ್ಯ, ಗಣಿಸುತ ಪಾಪಪುಣ್ಯ
ಕತ್ತಿ ಹಿರಿದು ನೆತ್ತರು, ಕೊಚ್ಚೆ ವಿಷದ ಬೀಜ ನೆಟ್ಟರೂ
ಎಲ್ಲೊ ಯಾರೊ ಬಿಡದೆ, ಮೌನವ್ರತವ ತೊಟ್ಟವರು
ಚುಂಬಿಸೆ ಧರ್ಮ, ನೆಲ ಬಸಿರಾಯ್ತು ಇದ್ದೂ ಬಂಜರು..!

ಋಣದ ಮಾತು ಬಿಡಿ, ಕರ್ಮದ ಪಾಲು ಪರಸ್ಪರ
ಶರಧಿಯಿತ್ತರೂ ಮುತ್ತು, ಲವಣ ಬೆರೆಸಿ ಸಂಸ್ಕಾರ
ಯಾರಿಗ್ಯಾವದು ಲಭ್ಯ, ಅವರವರ ಪಾಲಿನ ಸಭ್ಯ
ಆಗುತೆ ಸ್ವಯಂಯೋಗ್ಯ, ಬೆಳೆದರೆ ಹುಟ್ಟಿದಾರಭ್ಯ
ಋಣಮುಕ್ತರಾಗೆ ಚುಂಬಿಸುತ, ಏನೂ ನಿರೀಕ್ಷಿಸದೆ ಪುನಃ !


– ನಾಗೇಶ ಮೈಸೂರು
೩೧.೦೧.೨೦೧೭
(Picture source : second picture from Nagaraj Subba Rao (thanks Nagaraj 🙏😊); other 2 from social media, Creative Commons, internet)
(ಶ್ರೀಪಾದರಾವ್ ಮಂಜುನಾಥರವರ ಸ್ಟೇಟಸ್ ಸಾಲುಗಳಿಟ್ಟ ಪ್ರೇರಣೆ, ಥ್ಯಾಂಕ್ಸ್ ಸಾರ್ ! -‘ ಹರಿವ ನೀರು ದಡಗಳ ಚುಂಬಿಸಿದ ಕ್ಷಣಗಳ ಲೆಕ್ಕವಿಟ್ಟರೆ !!!!! ಋಣ ತೀರಿಸುವ ಹೊಣೆಯಾರದು’.)

01129. ಊನ- ಲಘುಬಗೆ- ಹುರಿಮೀಸೆ-ದಳದಳ (2)


01129. ಊನ- ಲಘುಬಗೆ- ಹುರಿಮೀಸೆ-ದಳದಳ (2)

ಜನ್ಮಾಂತರ ಶಾಪವೇನೋ, ಅಂಗ ಊನ ಜನ್ಮತಃ
ಛೇಡಿಕೆ ಪರಿಹಾಸ್ಯ, ಲಘುಬಗೆ ತರತರ ಸಾಧುವೆ ?
ಕೆಣಕಿ ಕಾಲೆಳೆದವರನು, ಬೀಳಿಸಿ ಹುರಿಮೀಸೆಯ
ತೀಡಲೇನು ಸೊಗ ? ದಳದಳವುದುರಿ ಮಣ್ಣಪಾಲು !

– ನಾಗೇಶ ಮೈಸೂರು
೦೮.೦೨.೨೦೧೭