01146. ನಗು ಬಗೆ….


01146. ನಗು ಬಗೆ….
___________________

(೦೧)
ಮುಗುಳ್ನಕ್ಕಳು
ಬಾಡದ ಹೂ ನಕ್ಕಿತು
– ಕವಿ ಕನ್ನಡಿ

(೦೨)
ಮುನ್ನುಡಿ ಬರಿ
ಮಾತಿಲ್ಲ ಕಥೆಯಿಲ್ಲ
– ಮಂದಹಾಸದೆ

(೦೩)
ಕದ್ದು ನೋಡುತ
ತುಟಿಯಂಚು ನಗೆಯ
– ಗೂಢ ರವಾನೆ

(೦೪)
ಹುಬ್ಬೇರಿಸುತ
ಮಾತೆಲ್ಲೋ ಮನಸೆಲ್ಲೊ
– ಮಂದ ಗಮನ

(೦೫)
ನೂರಾರು ಅರ್ಥ
ಅವಳ ನಗೆ ನಿಗೂಢ
– ಅನಂತ ಯಾನ

(೦೬)
ಕಣ್ಣು ಕಣ್ಣಲಿ
ಕಲೆತು ನಿಷೇಧಾಜ್ಞೆ
– ಬಿರುಸು ತುಟಿ

(೦೭)
ನಕ್ಕಳಾ ಮಾತೆ
ಬಿಕ್ಕಿ ಬಿಕ್ಕಿ ಅಳುತ್ತ
– ವಿಷಾದದಲ್ಲಿ

(೦೮)
ಗಹಗಹಿಸೆ
ಅಪಹಾಸ್ಯದ ನಗೆ
– ಅಬ್ಬರವಷ್ಟೇ

(೦೯)
ಕಿಲಕಿಲನೆ
ಜುಳುಜುಳು ಸದ್ದಲ್ಲಿ
– ಮಂಜುಳ ಹನಿ

(೧೦)
ಮರೆಯೆ ಹೇಗೆ
ನಗಿಸು ನನ್ನ ಹೂವೇ
– ನಗೆ ನೆನಪು

– ನಾಗೇಶ ಮೈಸೂರು
೧೮.೦೨.೨೦೧೭

(Pictures : wikihow & Creative Commons)

01145. ಮರಕುಟುಕ


01145. ಮರಕುಟುಕ
_________________________


ಕುಟ್ಟುತ್ತ ಕುಟ್ಟುತ್ತ ಮರಕುಟುಕ
ಮರದಲೆಷ್ಟೊಂದು ತೂತಿನ ಮೊಳೆ
ನೋಡು ನೋಡುತ್ತಾ ಕುಸುರಿ ಆಳಕ್ಕೆ
ಹುಳು ಹುಪ್ಪಡಿ ನುಂಗುತ್ತ ಹೊಂಡದ ಪಥ

ಕುಟುಕುಟುಕುಟುಕುಟು ಕುಟುಕ
ಮೊದಮೊದಲಾಗುತ ಖಾಲಿ ಚುಟುಕ
ಕುಹಕಗಳೇಳು ಕುಸಿಯಬಿಡದೆ ಸುತ್ತಿಗೆ
ಕುಟ್ಟಿದಂತೆಲ್ಲ ಚಿತ್ತಾರ ಸದ್ದಿನ ಶೃಂಗಾರ..

ನೀರವ ಕಾನದೇಕಾಂತದ ನಡಿಗೆ
ಅಚ್ಚ ಹಸಿರುಟ್ಟ ವನಸಿರಿಯುಡುಗೆ
ತಾಳಮೇಳವಿಲ್ಲದ ಸಂತೆ ಗದ್ದಲದಲ್ಲಿ
ಏಕತಾನದ ಹಿನ್ನಲೆ ಸಂಗೀತ ಲಯಬದ್ಧ..

ಕೊಕ್ಕಿನುಳಿಪೆಟ್ಟಿಗೆ ಮೆದುಳೇ ಹಿಡಿಪಟ್ಟಿ
ರಕ್ತ ಮಾಂಸ ಮಜ್ಜೆ ಮಾಡಿಟ್ಟ ಬಿರುಗತ್ತಿ
ಅಡ್ಡಾದಿಡ್ಡಿ ಕುಟ್ಟುತ್ತಲೆ ಕವನದ ಹೆಜ್ಜೆ
ಕವಿಪುಳಕದ ಭಾವಕೆ ಶೋಧನೆ ಜಾಡ್ಯ..

ಕಾವ್ಯ ಕಥನ ರಸಾಸ್ವಾದದ ಹರಕೆ
ಅಸಹನೀಯ ಸದ್ದು ಅರಸಿಕ ಕರ್ಣಕೆ
ಕುಟ್ಟುಕುಟ್ಟುತ್ತಲೇ ಹೂವರಳುವ ಹಾದಿ
ಸದ್ದಿನ ಬೀಸಲೆ ಸಹನೆಯಿದ್ದರೆ ಕಂಸಾಳೆ..

– ನಾಗೇಶ ಮೈಸೂರು
೧೮.೦೨.೨೦೧೭

(Picture from Wikipedia : ಜಾನ್ ಗೌಲ್ಡ್‌ರ ಬರ್ಡ್ಸ್‌ ಆಫ್ ಏಷ್ಯಾದಲ್ಲಿರುವ ಚಿತ್ರಗಳು: https://kn.m.wikipedia.org/wiki/ಚಿಟ್ಟು_ಮರಕುಟುಕ#/media/ಚಿತ್ರ%3APD021_-_Heart-spotted_Woodpecker_lores.jpg)

01144. one more Galib


01144. one more Galib

ಬರಿ ಮಕ್ಕಳಾಟದ ಮೈದಾನದಂತೇ ಕಾಣುತಿದೆ ನನಗೀ ಪ್ರಪಂಚ
ಪ್ರತಿನಿತ್ಯ ಹಗಲಿರುಳು, ದೃಗ್ಗೋಚರ ವೈವಿಧ್ಯಮಯ ಬಾಳಿನ ಕುಂಚ

– ಗಾಲಿಬ್

(ಭಾವಾನುವಾದ : ನಾಗೇಶ ಮೈಸೂರು.ಇಂಗ್ಲಿಷಿನಿಂದ ಮಾಡಿದ ಭಾವಾನುವಾದ , ಸಮರ್ಪಕವಿದೆಯೋ ಇಲ್ಲವೋ ಗೊತ್ತಿಲ್ಲ)

( ವಿಕಿಪೀಡಿಯದಿಂದ:

Translation in English

Just like a child’s playground this world appears to me
Every single night and day, this spectacle I see

– Galib

ಉರ್ದು ಮೂಲ

بازیچۂ اطفال ہے دنیا مرے آگے
ہوتا ہے شب و روز تماشا مرے آگے