01149. ಆಸ್ಪತ್ರೆಯ ಹಾಸಿಗೆಯ ಮೇಲೆ…


01149. ಆಸ್ಪತ್ರೆಯ ಹಾಸಿಗೆಯ ಮೇಲೆ…
_______________________________


ಯಾರದೀ ಸದ್ದು ? ದೂರದ ಗೂಡಲಿ
ಎದೆಯಲೇನೋ ತಳಮಳ ಖಾಲಿ ಖಾಲಿ
ರಹದಾರಿಯಿರದ ಮಬ್ಬು ಹಾದಿಯಲಿ
ದೀಪ ಹಚ್ಚಿ ಕಾದು ಕುಳಿತವಳವಳಾರೋ ?

ಗಾಳಿಗೊಡ್ಡಿದ ಸೊಡರು ಕುಣಿವಾ ಜಾಡ್ಯ
ಅಂಟುರೋಗದಂತೆ ಹಿಡಿದ ಕೈ ನಡುಕ
ಸಾರಿನ ಸೌಟನು ನಿಭಾಯಿಸಲಾಗದ ಕರ
ವ್ಯರ್ಥ ಹವಣಿಸಿದೆ ಬತ್ತಿ ಆರಬಿಡದ ತವಕ..

ಹುಚ್ಚುಮಾತಿಗಿಲ್ಲ ಅವೇಳೆ ಅಸಮಯ
ಬಲ್ಲಳೇನೋ ಎದೆಯಾಳದಾಳದಲಿ ಸತ್ಯ
ಬಾರದವನ ಬರಮಾಡಿಕೊಳ್ಳುವ ಬಯಕೆ
ಎಣ್ಣೆ ಬತ್ತಿ ತುಂಬಿಸುತಿದೆ ಆಸೆಯ ದೀವಟಿಕೆ..

ಮುಂದೂಡಲಿಲ್ಲ ಮುನ್ನಡೆಯಲೊಲ್ಲದ ಕರ್ಮ
ಕೈಕಾಲು ಕಟ್ಟಿ ಆಡಿಸಿ ನಗುತಿವೆ ಅಣಕಿಸುತ
ಅರಿತವಳಂತವಳು ಸುಮ್ಮನೆ ನಗುತ ಸುಕ್ಕಲಿ
ಸುಕ್ಕಿನುಂಡೆ ಚಕ್ಕುಲಿ ನಿಪ್ಪಟ್ಟ ಸಿದ್ಧತೆಯಲಿ ಮಗ್ನ..

ಆರದಿರಲವಳ ಹಣತೆ ತೂರಾಡಿದರು ಅತ್ತಿತ್ತ
ಬಾರದ ಜೀವಿಗಳ ನೋಡುವಾಸೆ ಜೀವಂತವಿಡಲಿ
ಬಂದು ಬಂಧವ ಎದೆ ಬಿಚ್ಚಿ ತೋರುವ ಹನುಮ
ಆಗದಿದ್ದರೂ ದೂರದಿಂದಲೆ ಕೊರಗುವ ಹಾಳುಜನ್ಮ..

– ನಾಗೇಶ ಮೈಸೂರು
೨೦.೦೨.೨೦೧೭
(Picture source: internet / social media)

01148. ಗುಟ್ಟಿರುವುದಾಟದಲೆನ್ನುವುದಾ ಮರೆತೆ…


01148. ಗುಟ್ಟಿರುವುದಾಟದಲೆನ್ನುವುದಾ ಮರೆತೆ…
_______________________________
(೩ಕೆ ನಮ್ಮ ಚಿತ್ರ ನಿಮ್ಮ ಕವನ ೪೮)


ಗುಮ್ಮನ ಗುಟ್ಟ ಬಿಡಿಸ ಹೊರಟೆ
ಪರಬೊಮ್ಮನ ಗುಟ್ಟಾ ಬಿಡಿಸಲ್ಹೊರಟೆ
ಬಿಡಿಸುವರೆಂಬ ಭೀತಿಗೆ ನೇಯ್ದ
ಚದುರಂಗದಾಟದ ಮಾಯೆಯ ಜಾಲಾಡಿ..

ಕಾಣುತ್ತಿತ್ತ ನೇರ, ಕಪ್ಪು ಬಿಳಿ ಸಪೂರ
ಕಂಡದ್ದೆಲ್ಲ ನೈಜವೆನ್ನೊ ನೆಟ್ಟ ನೇರ ಅವತಾರ
ಹೆಜ್ಜೆಯಿಕ್ಕುವ ತನಕ ಬಿಕ್ಕರಿವಾಗಲಿಲ್ಲ
ಅರಿವಾಗಿ ನಡಿಗೆ ನಡೆ ಮುಕ್ತನಿಜ ದಕ್ಕಲಿಲ್ಲ..

ಮೋಸ ಹೋಗಲೆಂದು ಹಾಸಿದ ಹಾಸು
ಎಂಟು-ಎಂಟರ ಗುಣಿತದೆ ಕೂತ ಸೊಗದ ಕೂಸು
ಅರವತ್ತನಾಲ್ಕು ವಿದ್ಯೆಗೊಂದೊಂದು ಚೌಕ
ಪ್ರತಿ ಅಂಕಣಕೊಬ್ಬ ದೊರೆ ಕಾವಲಿನ ಪರಿಚಾರಕ..

ಆನೆ ಕುದುರೆ ಒಂಟೆ ರಾಜ ರಾಣಿ ಪದಾತಿ
ಕೊಚ್ಚುವರ ನಡುವೆ ಶೋಧನೆಯ ಹುಚ್ಚು ಸರತಿ
ಅನ್ವೇಷಣೆ ಹೊರಟು ಅರೆಮರುಳು ಕಂಗಾಲು
ಬೇಧಿಸಿಲ್ಲವಿನ್ನು ಯಾರೊಬ್ಬರೂ ಬ್ರಹ್ಮ ತಿರುಳು..

ನಾನೊಬ್ಬ ಪಥಿಕ ಬೇಸತ್ತು ಹುಡುಕಾಟದೆ
ಇರಬಹುದೆ ಗುಟ್ಟು ಹಾಸಿನೊಳಗಡೆ ? ಎಣಿಸಿದೆ
ನೋಡೇಬಿಡಲೆಂದು ಬೀಸಿದೆ ಸುತ್ತಿಗೆ ಪೆಟ್ಟು
ಹಾಸೊಡೆದಿತ್ತು ಚೂರು ಚೂರಾಗಿ ಗಮ್ಯದ ಭೂಪಟ ನಕ್ಷೆ !

– ನಾಗೇಶ ಮೈಸೂರು
೨೦.೦೨.೨೦೧೭