01156. ಇದ್ದಾಗಲೆ ಕೊಡಬಾರದೆ ಹೆಸರ – ಹೇ ಪ್ರಭುವೇ ?


01156. ಇದ್ದಾಗಲೆ ಕೊಡಬಾರದೆ ಹೆಸರ – ಹೇ ಪ್ರಭುವೇ ?
_________________________________________


ಯಾವತ್ತೋ ಹೆಸರಾದರೇನು ಸುಖ ?
ಹೆಸರೇಳುವ ಕಾಯ ಆಳಿದ ಮೇಲೆ…
ಆಳುವ ಹೊತ್ತಲಿ ವಂದಿಮಾಧಗರ ಗದ್ದಲ
ಕಿವಿಗೆ ಬಿದ್ದಾಗ ಜೀವಕೆ ತಂಪು ಅಹಮಿಕೆಗಿಂಪು !

ಮಾಡಿದ್ದೆ ಮಾಡಿದ್ದು ಎಡಬಿಡದೆ ಸಮನೆ
ಗೊತ್ತೂ ಗುರಿಯಿಲ್ಲದ ಕಡೆ ಬಿಲ್ಲು-ಬಾಣ ದ್ರೋಣ
ಬಲ್ಲವರೆಂದರು ಮಾಡಿದ್ದುಣ್ಣೋ ಮಾರಾಯ
ಕೈಗೆ ಬಂದ ತುತ್ತು ಬಾಯಿಗಿಲ್ಲ, ಏನನ್ಯಾಯ ಕಾಲ !

ಮೊದಮೊದಮೊದಲ್ಹವಣಿಕೆ ಸ್ವತ್ತು ಸಂಪತ್ತು
ಸೇರಿದ್ದೇ ಸೇರಿದ್ದು ಬಂತಲ್ಲ ಪ್ರಖ್ಯಾತಿಯ ಹುಚ್ಚು
ಗಂಟಿನ ಜತೆ ನಂಟು ಗುಢಾಣದ್ಹೊಟ್ಟೆ ಅರಳಿತ್ತು
ಏನೇನೆಲ್ಲ ಕಸರತ್ತು ಮಾಡಿಸಿತ್ತು ಹೆಸರಾಗಲು !

ಹಾಳು ನಿಯ್ಯತ್ತಲಿ ಮಾಡಿದರೇನು ಬಂತು ಭಾಗ್ಯ ?
ಪೂರ್ವ ಪುಣ್ಯ ಸುಕೃತ ಕೈಗೂಡದ ಅದೃಷ್ಟ ರೇಖೆ
ಬರೆದೋ ಓದೋ ಸೇವೆಯ ಗೈದೋ ಮೇಲೇರೇ ಕಪ್ಪೆ
ಜಾರುತ ಬಿತ್ತಲ್ಲೆ ಹಳ್ಳಕೆ ಮತ್ತೆ ಕಾಲ ಕೂಡಿ ಬರದೇ..

ಬಂದರೇನು ಫಲ ಸರಿಕಾಲ, ಕಾಲವಾದ ತರುವಾಯ ?
ಕೊನೆಗಾಲದ ಮಬ್ಬಲ್ಲಿ, ಕನಕವೃಷ್ಟಿ ಸುವರ್ಣವೂ ಮಣ್ಣೇ..
ತಿಮಿರಿರುವಾಗಲೆ ಬರಬಾರದೆ, ಬಾಕಿ ಪೊಗರಿನ ಜತೆಗೆ
ತಲೆಗೇರದ ವಿನಯವನಿತ್ತು, ಸಂಭಾಳಿಸೊ ಚಕ್ಯತೆ ಕೊಟ್ಟು..

– ನಾಗೇಶ ಮೈಸೂರು
೨೬.೦೨.೨೦೧೭
(Picture source : internet, social media)