01161. ಯಾರ್ಯಾವ ಲೆಕ್ಕ ಬಿಡು….!


01161. ಯಾರ್ಯಾವ ಲೆಕ್ಕ ಬಿಡು….!
_________________________


ನಮ್ಮನು ನಾವೇ
ಕ್ಷಮಿಸಿಕೊಂಡಿದ್ದೇವೆ
ಸಿಕ್ಕು ಸಿಕ್ಕ ವಿಷಯಕ್ಕೆಲ್ಲ
ಅವರಿವರ ಬೇಡುವುದ ಬಿಟ್ಟು
ಸುಮ್ಮ ಕೊರಗುವುದ ಬಿಟ್ಟು…

ನನ್ನನ್ನು ನಾವೇ ಎಂದು
ಕರೆದುಕೊಂಡ ತಪ್ಪಿಗೂ
ನಾವೇ ಕ್ಷಮಿಸಿಕೊಂಡಿದ್ದೇವೆ
ನಾನೆಂಬ ಅಹಮಿಕೆ ಬದಿಗಿಟ್ಟು
ನಾವೆಂಬ ಹುಸಿ ಪ್ರೌಢಿಮೆ ತೊಟ್ಟು..

ಯಾರದೊ ಕೊಳದ ನೆಲೆಗೆ
ಕಲ್ಲೆಸೆದು ರಾಡಿಯೆಬ್ಬಿಸಿ ಕೆಸರ
ನೈದಿಲೆಗ್ಹಚ್ಚಿ ಕಶ್ಮಲ ಎರಚಾಟ
ತಾವರೆಲೆಯ ದೋಣಿಗು ಸಿಡಿಸಾಟ
– ನಮ್ಮನ್ನು ನಾವೇ ಕ್ಷಮಿಸಿಕೊಂಡಿದ್ದೇವೆ..!

ಮಾಡಲಿತ್ತೆಷ್ಟೊಂದು ಮಾಡದೆ
ಬೇಡಲಿತ್ತೆಷ್ಟೊಂದು ಬೇಡದೆ
ಗತ್ತು ಗಮ್ಮತ್ತಲಿ ಹುಸಿ ವೇಷದೆ
ನಾಟಕವಾಡುತ ನಡೆದ ಅಪರಾಧಕೆ
– ನಮ್ಮನ್ನು ನಾವೇ ಕ್ಷಮಿಸಿಕೊಂಡಿದ್ದೇವೆ..!

ಇರುವಾತನಕ ನಮ್ಮಾಟ ಸರಿಬಿಡಿ
ನಾವೆ ಕ್ಷಮಿಸಿಕೊಳ್ಳಬಹುದು ನಮ್ಮನೆಂಬ ಗೈರತ್ತು
ಇವತ್ತೊಂದು ದಿನ ಅನ್ನುತಲೇ ಪ್ರತಿದಿನ
ವಂಚಿಸಿ ಕೊನೆಗವನ ಮುಂದೆ ನಿಂತಾಗವನೆಂದ
‘ಕ್ಷಮಿಸಿ, ನಾವೂ ನಮ್ಮನ್ನು ಕ್ಷಮಿಸಿಕೊಂಡಿದ್ದೇವೆ…!’

ನಾಗೇಶ ಮೈಸೂರು
೦೩.೦೩.೨೦೧೭

(Picture source: Creative Commons)

Advertisements

01160. ತಪ್ಪು ಜಗದಲ್ಲಿ ತಪ್ಪಿನ ಮಾತೆಲ್ಲಿ ?


01160. ತಪ್ಪು ಜಗದಲ್ಲಿ ತಪ್ಪಿನ ಮಾತೆಲ್ಲಿ ?
___________________________


ತಪ್ಪಿದ್ದರೆ ಕ್ಷಮೆಯಿರಲಿ
ತಪ್ಪು ನಡೆದಿದ್ದರೆ ಕ್ಷಮಿಸು
ತಪ್ಪಾಗಿರದಿದ್ದರೂ ಮುಂಗಡ ಕ್ಷಮಿಸು
ಮುಂದಾಗಬಹುದಾದ ತಪ್ಪಿಗೆ ಇಂದೇ !

ತಪ್ಪು ಒಪ್ಪುಗಳಿಗೆಂತ ಮುಹೂರ್ತ
ಒಪ್ಪತ್ತಿನ ಬದುಕಲು ಸ್ವಾರ್ಥದ ಕೆಳೆ
ತಪ್ಪಾಗದ ಬದುಕೇ ದುಸ್ತರವಾಗಿರೆ
ತಪ್ಪಿಸಲೆಂತು ಒಪ್ಪಿ ಕ್ಷಮಿಸಿಬಿಡು ಮತ್ತೆ !

ಯಾರದೊ ಪರ ಇನ್ನಾರದೊ ವರ
ಯಾರನೋ ಮೆಚ್ಚಿಸೆ ಎಡಬಿಡಂಗಿಯಾಟ
ಸರಿಯಿರಲೆಂತು ಸಕಲ ಮಾಯಾಜಾಲ
ಕ್ಷಮಿಸಿಬಿಡು ಎಲ್ಲ ನಿನ್ನ ಕ್ಷಮಿಸುವರೆಲ್ಲ ..!

ನಿಜಕೂ ಯಾವುದು ಸರಿ ಯಾವುದು ತಪ್ಪು ?
ಎಂಬರಿವೆ ಛಿಧ್ರ ಮೂಗಿನ ನೇರದ ಕ್ಷುದ್ರ
ಯಾರ ನ್ಯಾಯದ ತಕಲಿ ನೇಯ್ಗೆ ಸುಸಂಬದ್ಧ
ತಕ್ಕಡಿಗಿಡದೆ ಕ್ಷಮಿಸು ದೊಡ್ಡ ಮನಸೇ ವೃದ್ಧ..!

ಅಮ್ಮನೊ ತಮ್ಮನೊ ಅಪ್ಪನೊ ತಂಗಿಯೊ
ಅಣ್ಣನೊ ಮಗನೋ ಅಕ್ಕನೊ ಮಗಳೊ
ಹೆಂಡತಿ ಅತ್ತೆ ಮಾವ ಬಂಧು ಕೆಳೆಕೂಟ
ನೀ ಯಾರಾದರೂ ಆಗಿರು ಕ್ಷಮಿಸಿಬಿಡು ಮೊತ್ತ !

– ನಾಗೇಶ ಮೈಸೂರು
೦೩.೦೩.೨೦೧೭

(Picture source: http://photobucket.com/user/andymac23/media/funnydog.jpg.html?filters%5Bterm%5D=funny&filters%5Bprimary%5D=images&filters%5Bfeatured_media%5D=902&filters%5Bsecondary%5D=videos&sort=1&o=4)