01170. ಪೀಳಿಗೆ


01170. ಪೀಳಿಗೆ
____________________


ತಾತಾ ನೂರಕ್ಕೂ ಮಿಕ್ಕಿ
ಅಪ್ಪ ನೂರರಾಚೀಚೆ
ಮಗ ಅರವತ್ತೋ, ಎಪ್ಪತ್ತೋ
ಮೊಮ್ಮಗನಿಗಿದೆಯಾ ಐವತ್ತು ?

ಪ್ರಗತಿ ಉನ್ನತ ಗಣತಿ
ಪ್ರತಿ ರೋಗಕು ಸರತಿ ಮದ್ದು
ಹುಡುಕುತ್ತೆಲ್ಲ ಸೂಕ್ಷ್ಮಾತಿಸೂಕ್ಷ್ಮ
ಯಾಕಿನ್ನೂ ಹೆಚ್ಚಿಲ್ಲ ಕಾಯದ ವಯಸು ?

ತಿಂದದ್ದನ್ನೆ ಕಾಣೆ ಮಾತ್ರೆ ಮದ್ದು
ತಿಂದಿದ್ದೆಲ್ಲ ದುಡಿದು ಬೆಳೆದಿದ್ದು
ತಿನ್ನದವರನ್ನೆ ಕಾಣೆ ಗುಳಿಗೆ
ದುಡಿದಿದ್ದನು ತಿನ್ನಲೂ ಎಡವಟ್ಟು..

ನೂರಕ್ಕಿತ್ತು ದೃಷ್ಟಿ ಬೇಟೆಯ ಛಲ
ಮೂರಕ್ಕೀಗ ಚಾಳೀಸಿನ ಹಂಬಲ
ದೂರದೃಷ್ಟಿಯ ಮರೆತ ಸಮೀಪ
ಸಾಮೀಪ್ಯದಲಿಲ್ಲ ನೆಮ್ಮದಿ ಬರಿ ಆತಂಕ..

ಪೀಳಿಗೆಯಿಂದ ಪೀಳಿಗೆಗೆ ಏಳಿಗೆ
ಇರಬೇಕಿತ್ತು ಸಂತತಿಯಿಂಸಂತತಿಗೆ
ಯಾಕೋ ಎಲ್ಲೋ ಏನೋ ಎಡವಟ್ಟು
ಇರದವನ ಮೂಲವಿನ್ಯಾಸ ಕುಲಗೆಟ್ಟು..

ವಿಪರ್ಯಾಸ ತೇಲುತ್ತ ಮುಳುಗುತ್ತಾ
ಗೊಣಗುತ್ತ ಮುಲುಗುತ್ತಾ ಪಯಣ
ಹೀಗಿರಲಿಲ್ಲ ತಾತಾಮುತ್ತಾತರ ಯಾತ್ರೆ
ಬದುಕಿದರಲ್ಲ ಎಲ್ಲ ಬದುಕನ್ನಾಗಿಸಿ ಜಾತ್ರೆ !

ಎಚ್ಛೆತ್ತುಕೊಳ್ಳೊ ಹೊತ್ತಲ್ಲಿ ಮಲಗಿ
ಬೆಚ್ಚೆದ್ದು ಕಣ್ಬಿಟ್ಟು ದಿಗ್ಭ್ರಾಂತರಾಗೊ ಸಂದಿಗ್ದ
ಉಣಲಿಲ್ಲ ಉಗುಳಲಿಲ್ಲ ಬಿಸಿತುಪ್ಪ
ಕರ್ಮದ ಹೆಸರಲಿ ಉರುಳಿ ಜೀವನ ಬಂಡಿ..

– ನಾಗೇಶ ಮೈಸೂರು
೦೯.೦೩.೨೦೧೭

(Picture source: Creative Commons)

Advertisements