01174. ಹೊಂದುವ ಹಂಬಲ..


01174. ಹೊಂದುವ ಹಂಬಲ..
________________________________


ಅದು ಒಗಟೊ, ಜಿಗುಟೊ, ಸಗಟೊ
ಒಟ್ಟಾರೆ ಬೇಕೇ ಬೇಕು
ಬೇಕೆಂದ ಮೇಲಿನ್ನೇನು ಅನುಮಾನ ?
ಬೆನ್ನು ಹತ್ತುವ ಪರಿ ಶಾಪಗ್ರಸ್ತ ಪಿಶಾಚಿ..

ಅದು ಸಿಕ್ಕೇ ಸಿಗಬೇಕು ಸಿಕ್ಕೇ ನೆಮ್ಮದಿ
ಸಿಕ್ಕಬಾರದಿನ್ನಾರ ಕೈಗೂ
ಸಿಕ್ಕುವವರೆಗೂ ಬಿಕ್ಕುತ ರಂಪ ರಣರಂಗ
ಉಸಿರುಗಟ್ಟಿ ಜೀವ ತ್ಯಜಿಸಿತ್ತಂತೆ ದೇಹ..

ಕೈ ವಶವಾಗಲಿಕ್ಕೆ ಏನೆಲ್ಲಾ ಹುನ್ನಾರ
ಕರಗತವಾಗೆ ಏನೆಲ್ಲಾ ಬಾಧೆ
ಕಣ್ಣು ಮುಚ್ಚಿ ತೆರೆದು ನಿದಿರೆಗೆಟ್ಟು ನಿತ್ಯ
ಮನವೊಲಿಸಿಕೊಂಡು ಪಡೆದ ಸತ್ಯ ಸಮಸ್ತ..

ಪಡೆದಾದ ಮೇಲೆಕೊ ನೀರವ ನಿಸ್ಸತ್ವ ಪರಿ
ಹೆಚ್ಚುಗಾರಿಕೆಯೆಲ್ಲ ಕರಗಿ ಮರುಗಿ
ಏನದು ಉಢಾಫೆ ಹಕ್ಕಿನ ವಸ್ತು ನಿರ್ಲಕ್ಷ್ಯ
ಹೊಡೆದಾಡಿದ್ದೆಲ್ಲ ನೇಪಥ್ಯ ನೆಪದ ಸಂಕುಲ..

ಈ ಜೀವ ಜಗದ ಹಂಬಲಗಳೇ ಹಾಗೆ
ಸಿಕ್ಕುವತನಕ ಕಾಡುವ ಪೀಡೆ
ಸಿಕ್ಕ ಮೇಲೇಕೋ ಅಲಕ್ಷ್ಯದ ಅಲಂಕಾರ
ಪ್ರದರ್ಶನಕ್ಕಿಟ್ಟ ಬೆರಗು ಪೊಗರಿನ ಕುರುಹಷ್ಟೆ..!


– ನಾಗೇಶ ಮೈಸೂರು
೧೩.೦೩.೨೦೧೭

(Picture source: Creative Commons )

Advertisements