01176. ಹೇಳಲಾಗದ ಭಾರ, ಹಿತೈಷಿಗಳಿಗೂ…


01176. ಹೇಳಲಾಗದ ಭಾರ, ಹಿತೈಷಿಗಳಿಗೂ…
_______________________________


ಅವನು ಕೇಳುತ್ತಾನೆ
ಅವಳೂ ಕೇಳುತ್ತಾಳೆ
ಅವರಿವರು ಕೇಳುತಲೇ ಇರುವ ಸದಾ
ಹೇಳಲೇನೆಂದು ಪ್ರತಿನಿತ್ಯದ ಗೋಳು..

ಹೇಳಿದ್ದನೆ ಹೇಳಿ ವಟವಟ
ಬಕಪಕ್ಷಿಯ ಏಕಾಗ್ರ ಚಿತ್ತ
ಬಾರದೇಕೋ ಬಿಡಿಸಲೊಗಟ ಸವರೆ
ಚಿಟಿಕೆ ಚಪ್ಪಾಳೆ ಬರಿ ಮಾತಿನ ಸಾರಥ್ಯ..


ಪಾಪ ಕೇಳುವವರ ಸೌಜನ್ಯ
ಕಡುಪಾಪ ಭೋರ್ಗರೆಯುವ ಮುನ್ನ
ಹೇಳಲಿರಬೇಕಲ್ಲ ನಿಚ್ಚಳ ಕಥೆ ಚಿತ್ರ
ಮಬ್ಬು ಮಸುಕಿನ ರಾಡಿ ಗೊಂದಲ ಸುತ್ತ..

ಕೇಳುವ ಹಿತೈಷಿಗೆ ಕೂಡ
ಹೇಳಲಾಗದ ಸಂಕಟ ನಿಗೂಢ
ಗಾಢ ಸ್ನೇಹಕೂ ಬೇಲಿ ಕಟ್ಟುವ ಜಾಡ್ಯ
ಬದುಕೇ ? ಬವಣೆಯೇ ? ಭಾವನೆಗೂ ಮೌಢ್ಯ..


ಇದು ಸಮಯವಲ್ಲ ಎಂದಾದರೆ
ಬರುವುದೇನು ಜಾಲ ಬಿಡಿಸಿಡುವ ಕಾಲ ?
ಹಗುರಾಗುವುದೇನು ಆತ್ಮದಾಳದ ಒಗರು
ಪೊಗರಡಗಿಸಿ ಮತ್ತೆ ನೆಟ್ಟಲ್ಲೊಂದು ಚಿಗುರು..

– ನಾಗೇಶ ಮೈಸೂರು
೧೩.೦೩.೨೦೧೭
(Picture source : Creative Commons)

Advertisements

01175. ಸಾವಿಗೆದರುತ್ತಿದ್ದೇನೆ


01175. ಸಾವಿಗೆದರುತ್ತಿದ್ದೇನೆ
_______________________


ಸಾವಿಗೆದರುತ್ತಿದ್ದೇನೆ
ನಖಶಿಖಾಂತ ನಡುಗುತ್ತಿದ್ದೇನೆ
ಬರಬಾರದ ಹೊತ್ತಲಿ ಬಂದು ಕಾಡುವ ಅತಿಥಿ
ಹೇಳದೆ ಕೇಳದೆ ಬಂದಾನೆಂಬಾ ಭೀತಿ..

ಯಾರಿಗಿಟ್ಟಿಹನೋ ಗುರಿ
ಮುಟ್ಟಬಾರದ್ದ ಮುಟ್ಟುವ ಪಾಶ
ಹೋಲಿಯಾಡಿಕೊಂಡವರ ಮೇಲೂ ಕೆಸರೆರಚಾಟ
ಬಣ್ಣಗಳ ಬಿಳಿಗು ಕಪ್ಪು ಚೆಲ್ಲುವ ಪ್ರವೀಣ…

ಎಷ್ಟೊಂದು ಬಾಕಿ ಮೊತ್ತ
ತೀರಿಸಬೇಕೆಷ್ಟು ಋಣ ಬಾಧೆ ಕರ್ಮ
ನಂಬಿದ ಜೀವ ನಂಬಿಕೆಯುಳಿಸುವ ಕರ್ತವ್ಯ
ಮೊಸರನ್ನದ ಕಲ್ಲು ಅವಸರದ ಕಾರ್ಯ…

ನಾನಿರದೆಂತಿಹರೊ ಕಾಣೆ
ಮೀನು ತಿಂದೆ ಬದುಕಿದ ಜೀವ
ಹಿಡಿಯಲಿಲ್ಲ ಒಮ್ಮೆಯಾದರೂ ಬಲೆ ಬಿಸಿ
ನೀ ಬಲೆ ಹಾಕಿದರೆ ಅವರೆಂತು ಉಳಿದಾರು ?

ಮಾಡುತ್ತಿಲ್ಲ ಮಾಡುವುದ
ಮಾಡಲುಳಿದಿದೆ ಮಾಡಲು ಬಿಡೊ
ಮಾಡುವೆನೊ ಬಿಡುವೆನೊ ಆಮೇಲಾಗಲಿ
ಸದ್ಯಕೆ ಬಿಟ್ಟುಬಿಡಯ್ಯಾ ನಂ ಪಾಡಿಗೆ..

– ನಾಗೇಶ ಮೈಸೂರು
೧೨.೦೩.೨೦೧೭
(Picture source: Creative Commons)