01177. ಕಳಚಿದ ಕೊಂಡಿ…


01177. ಕಳಚಿದ ಕೊಂಡಿ…
________________________


ಕೊಂಡಿ ಕೊಂಡಿ ಬೆಸೆದ ಸರಪಳಿ
ಹಾರವಾಗಿತ್ತ ಕೊರಳಲಿ ಜನ್ಮತಃ
ಯಾಕಿಲ್ಲಿ ಪಯಣ ನಿಮಿತ್ತ ಬಂಡಿ
ಗಾಲಿಯುರುಳುತೆ ಕಳಚುವ ಕೊಂಡಿ…

ನಾಮಕರಣ ಕಟ್ಟಿ ಬಟ್ಟೆ ತೋರಣ
ಸೀರೆ ತೊಟ್ಟಿಲಾಗಿ ತೂಗಿಸಿ ಕೊಂಡಿ
ಬೆಸೆದಿತ್ತವಳ ಹಸ್ತಕೆ ಜೋಗುಳ ಜತೆ
ಎದೆ ಹಾಲಿನ ಮಮತೆ ಕಡಿಮೆ ಮಾತೆ ?

ತೂಗಲಿಲ್ಲ ಅವ ಹೆದರಿದ ಗಿರಾಕಿ
ಮುಟ್ಟಲೊ ಬೇಡವೋ ಪುಕ್ಕಲ ಪುರುಷ ಘನ
ಕಿರುಬೆರಳ ಕೊಂಡಿಯಾಗಿಸಿ ಹಿಗ್ಗಿದನವ
ತೋಳಲ್ಹಿಡಿದ ಗಾಬರಿ ಅಚ್ಚರಿಯೆ ಧನ್ಯ..!

ಲೀಲಾಜಾಲದ ಮುದುಕಿ ಒಗೆದಂತೆ ಬಟ್ಟೆ
ಬೆತ್ತಲೆ ಕಾಲಿನ ಹಾಸಿಗೆ ಮುಖವಡಿ ಅತ್ತರೂ
ಬಿಡದೆ ನೀರು ಎಣ್ಣೆ ಹಚ್ಚಿದ ಸುಕ್ಕಿನ ಕೈಕೊಂಡಿ
ರಚ್ಚೆಯ ನಿದಿರೆಯಾಗಿಸಿ ಸಾಂಬ್ರಾಣಿಯ ಮಂಕು..

ಹೊತ್ತು ತಿರುಗಾಡಿಸಿ ಸುತ್ತು ಹಾಕಿಸಿದ ಮುದುಕ
ಗಿಲಕಿ ಗಿರಗಿಟ್ಟಲೆ ಆಟಿಕೆ ಕುಲಾವಿ ಕಾಡಿಗೆ ಕಪ್ಪು
ಬಂದು ಹೋದವರೆಲ್ಲರ ಕೊಂಡಿಯದಾವ ಸರಪಳಿ
ಉಂಡುಂಡೆ ನೆನಪು ಮಸುಕು ಮರೆಯಾಗಿ ಹಿತ್ತಲಲ್ಲಿ..

ಗಾಲಿಯ ಹಾದಿ ಸವೆದಿಲ್ಲ ಮುಚ್ಚಿ ಹೋಗಿದೆ
ಹೂಗಿಡಬಳ್ಳಿ ಬೇಲಿ ಚಿಟ್ಟೆ ಹಕ್ಕಿ ಚಿತ್ತಾರ ಮಾಯ
ಯಾಕೆಲ್ಲ ಕಳಚಿಬಿದ್ದ ಕೊಂಡಿಗಳಾಗಿ ಚೆಲ್ಲಾಪಿಲ್ಲಿ ?
ಬಿದ್ದಿವೆ ಸುತ್ತಲೂ ಹೆಕ್ಕಿ ಜೋಡಿಸಲಾಗದ ವ್ಯಥೆಯಾಗಿ..


– ನಾಗೇಶ ಮೈಸೂರು
೧೭.೦೩.೨೦೧೭
(Picture source: Creative Commons)

Advertisements