02024. ಸೋಲಿನ ಹೂರಣ ಚಾರಣ..


02024. ಸೋಲಿನ ಹೂರಣ ಚಾರಣ..
____________________________


ಸೋಲಿನ ಕೋಲು ಮಾರುದ್ದ
ಬಡಿದದ್ದೇ ಬಡಿದದ್ದು ಸತತ
ಬಿತ್ತಲ್ಲ ಲತ್ತೆ ಬಿದ್ದಲ್ಲಿಗೆ ಮತ್ತೆ ಮತ್ತೆ
ಮುದುರೊರಗುವುದೋ? ಪುಟಿದೇಳುವುದೋ ?
ಚಿಂತನೆಗೂ ಬಿಡದೆ ಚೆಂಡಾಟ..!

ಮೊದಮೊದಲು ಬಿದ್ದಾಗ ಸರಿ
ಗರ್ವದ ಹುರಿಮೀಸೆ ತೀಡಿದ್ದು
ನೋಡೀಗ ಪಟ್ಟನು ತೋರಿಸುವೆ ಗೆದ್ದು ;
ಪೆಟ್ಟೇ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟಾಗ
ಗೆಲಿಸಿದ್ದು ಕದನೋತ್ಸಾಹ, ಸೋಲೇ ಕಂಗಾಲು !

ರಣೋತ್ಸಾಹ ಉನ್ಮಾದದ ಕೇಕೆ
ಬೆತ್ತಕೆ ಬೆನ್ನಾಗುತ ನಡೆದ ಹುಮ್ಮಸು
ಬೆಟ್ಟವೇರುತ ಹೊತ್ತ ಕಲ್ಲು ಒಂದೊಂದು
ಬಂಡೆಯಾಗುವ ಎತ್ತರ ಏದುಸಿರಾಗೋ ಬಿರುಸು
ಪೆಟ್ಟಿಗೊಂದಿಷ್ಟು ಕುಸಿಯುತ್ತಿದ್ದದ್ದು ಬೆವರೊರೆಸುತ್ತ..

ಬಾರಿಸೋ ಬಡಿಗೆಯ ಅದೇ ಲಯ
ಮೆತ್ತನೆ ಪೆಟ್ಟಿಗೂ ಯಾಕೋ ಉಬ್ಬಸ
ತಡೆಯಲಾಗದು ಸಹನೆ ಹಿಡಿಯಲಾಗದು
ಬೆಟ್ಟದ ಬುಡದ ಜಲ್ಲಿಕಲ್ಲೂ ಗುಡ್ಡಾ, ಶಿಖರ ;
ಆದದ್ದಾಗಲಿ ಬಿಡು, ಸೋತು ಕೈ ಚೆಲ್ಲಿದ ಯೋಧ..

ಬಿಡುವೆನೆ ಕಸುವಿಲ್ಲವೆಂದ ಮಾತ್ರಕೆ ?
ಉಸಿರಿರುವವರೆಗೆ ಹೋರಾಡುವ ಬದುಕಾಟ.
ಬೆತ್ತಕಡ್ಡ ಬೆತ್ತಗಳನಾಗಿಸಿ ಕತ್ತಿ, ಗುರಾಣಿ
ಬೆತ್ತದಲೇ ಬೆಟ್ಟಕೊಂದು ಸುರಂಗ ಕೊರೆಯುತ
ಕಾಯುತಿರುವೆ ಸುರಂಗದಾ ತುದಿಯ ಬೆಳಕಿಗೆ…


– ನಾಗೇಶ ಮೈಸೂರು
೩೦.೦೪.೨೦೧೭
(Picture source : internet / social media, Creative Commons)

Advertisements

02023. ಮಂಕುತಿಮ್ಮನ ಕಗ್ಗ ೫೬ ರ ಟಿಪ್ಪಣಿ : ‘ತ್ರಿವಳಿಗಳ ಹಾವಳಿ ಸಂತೆ – ಸಂತ ಹೃದಯದ ತಾಕಲಾಟ’ ರೀಡೂ ಕನ್ನಡದಲ್ಲಿ..


02023. ಮಂಕುತಿಮ್ಮನ ಕಗ್ಗ ೫೬ ರ ಟಿಪ್ಪಣಿ : ‘ತ್ರಿವಳಿಗಳ ಹಾವಳಿ ಸಂತೆ – ಸಂತ ಹೃದಯದ ತಾಕಲಾಟ’ ರೀಡೂ ಕನ್ನಡದಲ್ಲಿ..

02022. ಭುವನೋತ್ಸವ..


02022. ಭುವನೋತ್ಸವ..
_____________________


ಭುವನೋತ್ಸವ ಇಳೆಗುತ್ಸವ
ನಳನಳಿಸೊ ವನ ಮಹೋತ್ಸವ
ಚಿಗುರೆಲೆ ಚಿಗುಚಿಗುರಿ ಪೂರಣ
ವಸಂತ ನಮನ ಹಸಿರು ತೋರಣ..

ಜಲದುತ್ಸವ ಭುವಿ ನಿತ್ಯ ಮಜ್ಜನ
ಧರಣಿ ಭರಣಿ ಚೆಲ್ಲಾಡಿದ ಕ್ಷಣ
ಸ್ಮರಿಸಿದೆಡೆ ವರ್ಷಾಧಾರಣೆ ಕೃಷಿ
ಫಸಲಾಗಿ ವೃಕ್ಷ ಮರಳಿಸೊ ಮಹರ್ಷಿ..

ತರಂಗ ತರಂಗಿಣಿ ಪಾವನ ಪಾನ
ಜೀವ ವಾಯು ಪವನ ಸಂಧಾನ
ಸುಯ್ದಾಡುತ ಸುಳಿಗಾಳಿ ತನನ
ನಿವಾರಿಸಿ ಅವನಿ ಬವಣೆ ತಲ್ಲಣ..

ಹುಡಿಮಣ್ಣ ಸತ್ವ ಪಂಚಭೂತತ್ವ
ಬೀಜಾಂಕುರ ಗರ್ಭದುದರ ಮಹತ್ವ
ಸೃಜನ ಸೃಷ್ಟಿ ನಿರಂತರ ಸಕ್ರೀಯ
ಭೂಮಾತೆ ಆಗರ್ಭ ಖನಿಜ ಸಿರಿಯ..

ಅವಳುತ್ಸವ ನಿತ್ಯೋತ್ಸವ ನಿಯಮ
ಸತ್ಯೋತ್ಸವ ನಿಸರ್ಗದುಪಮಾಯಾಮ
ಪೊರೆಯದಿರೆ ಜತನ ನಿಸ್ಸಾರ ನಿಸ್ತೇಜ
ಸಮಷ್ಟಿಯಾಗಿ ಪಳೆಯುಳಿಕೆ ಪೂರ್ವಜ..

– ನಾಗೇಶ ಮೈಸೂರು
೨೨.೦೪.೨೦೧೭

(Picture source:http://kauaihabitat.org/tag/earth-day/)

02021. ತಲ್ಲೀನ ತನ್ಮಯ ಪ್ರೇಮ..


02021. ತಲ್ಲೀನ ತನ್ಮಯ ಪ್ರೇಮ..
____________________________

ನೇವರಿಸುತಿದೆ ನವಿರಾಗಿ
ನವಿಲು ಗರಿ ಮೆಲುವಾಗಿ
ಆವರಿಸುತ್ತಿದೆ ಮಧುರವಾಗಿ
ನಿನ್ನ ಮುರಳಿಯ ದನಿ ಕೂಗಿ..||

ನುಡಿಸುತಿಹೆಯೊ ಮಾಧವ
ನೋಡಿಹ ನೋಟ ಮಾರ್ದವ
ನನ್ನ ನೋಟಕೆ ಕೀಟಲೆ ಬೇಡ
ಕಲಿತೆ ನಿನ್ನಿಂದಲೆ ಪಡೆದ ಕಡ..||

ಮಾಮರವೋ ಮಯೂರವೋ
ತನ್ಮಯದೇ ಮೈ ಮರೆತವೋ
ಕೋಕಿಲ ಗಣ ನಾದಕೆ ನಾಚುತ
ತೊರೆದವೊ ದನಿ ಮರೆಮಾಚುತ !||

ನಿಜವ ನುಡಿವೆ ಮುರಾರಿ ಗೊಲ್ಲ
ನೀ ನುಡಿಸಿದ ರಾಗವೇ ಗೊತ್ತಿಲ್ಲ
ನೀ ಹಾಡುತ ನಾ ಕೇಳುತ ಭಾವ
ಸ್ತಬ್ಧ ಜಗದಲಿ ನಮ್ಮಿಬ್ಬರದೆ ಜೀವ..||

ನೀ ನೆಟ್ಟ ನೋಟ ಆಹ್ಲಾದ ವರ್ಷ
ಪರಿಶುದ್ಧ ಅಮಲ ನಿರ್ಮಲ ಸ್ಪರ್ಶ
ನೋಡು ಸೆಳೆದು ಸೂಜಿಗಲ್ಲಂತೆ ನನ್ನ
ನಿನ್ನಷ್ಟೆ ತೋರಿದೆ ನಾ ಮಂಪರಲಿ ಮಗ್ನ ..||

– ನಾಗೇಶ ಮೈಸೂರು
೧೬.೦೪.೨೦೧೭
(Photo source : internet / social media)

02020.ಅವಳಂತರಂಗ..


02020.ಅವಳಂತರಂಗ..
_____________________


ನಾ ಬಚ್ಚಿಟ್ಟ ಗುಟ್ಟನೆಲ್ಲ
ಬಿಚ್ಚಿಡುವಂತಿಲ್ಲ ಇನಿಯ
ಯಾಕಾಗಬೇಕು ನಂಟು ?
ಚಿಪ್ಪೊಳಗೆ ಬೆಂದ ಮೊಟ್ಟೆ..

ವಯಸೊ, ಕೌತುಕವೊ
ಹರೆಯದ ತೇಜೋಷ್ಣವೊ
ಗಾಳಿ ಜಾರಿಸಿದ ಸೆರಗು
ಮನವಾಗಿ ಮ್ಲಾನವದನ..

ಕದ್ದು ಮುಚ್ಚಿ ಬೆಸೆದ ಹಸ್ತ
ಕತ್ತಲು ಹಿತ್ತಲು ಪಾಳುಕೋಟೆ
ಚಪಲ ಮೆಟ್ಟಿತ್ತು ಭೀತಿ ಲೇಪ
ತೊಗಲ ಸ್ಪರ್ಶವೇನು ಲೆಕ್ಕ ಬಿಡು !

ನಡುಗುವ ಕೈ ಪಡೆದ ಪತ್ರ
ಬರೆದುತ್ತರ ಪ್ರೇಮ ಲೋಕ
ಏನುದ್ವೇಗ ನೋಡೀಗ ಪ್ರಶಾಂತ
ಹೊನಲ ಹಾಗೆ ನಿನ್ನ ಮಡಿಲಲಿ..

ನೋಡೀಗ ನನ್ನಂತರಾಳ
ದಾಳಿಂಬೆ ನೆನಪಿನಾ ಸಜ್ಜೆ
ಸಿಪ್ಪೆ ಸುಲಿಯದ ಹಣ್ಣಾಗಿ
ನಿನ್ನ ಸಖ್ಯದ ಸುಖದಲಿರುವೆ ..


– ನಾಗೇಶ ಮೈಸೂರು
೧೯.೦೪.೨೦೧೭
(Picture source : internet / social media)

02019. ಪಕ್ಕದ ಖಾಲಿ ಸೀಟು


02019. ಪಕ್ಕದ ಖಾಲಿ ಸೀಟು
_______________________


(೦೧)
ಪಕ್ಕದ ಖಾಲಿ ಸೀಟು
ನಿನಗೆಂದೇ ಮೀಸಲು
ಬಂದು ಹೋಗುವವರಾರು
ಕೂರುವುದಿಲ್ಲ ಗೊತ್ತಾ ?
ಇನ್ನೂ ನೀನಲ್ಲಿಲ್ಲದ ಸತ್ಯ
ಬಿಡದೆ ಕಾಡುತಿದೆ ನಿಜದಿ

(೦೨)
ಪಕ್ಕದ ಖಾಲಿ ಸೀಟು
ನಿಮದೆ ಅಧಿಕಾರ
ಜಗಳಾಟ ಮುನಿಸಲಿ
ಹಂಚಿಕೊಳ್ಳುವ ವರಾತ
ಗುದ್ದಾಡಲಾರು ಇಲ್ಲದ ಒಂಟಿ
ನಿನಗೀ ಸೀಟೇ ಗಟ್ಟಿ ಸಖ್ಯ

(೦೩)
ಪಕ್ಕದ ಖಾಲಿ ಸೀಟು
ಬೇಕೆಂದಾಗ ಬಾ ಸಖ
ಬಂದು ಹೋಗುವ ತಂಗಾಳಿ
ಬೇಕಿಲ್ಲ ಅನುಮತಿ ಪಾವತಿ
ನೀ ಪಕ್ವತೆಯ ಸರದಾರ
ನೋಡುವೆ ಸಮಯಾಸಮಯ

(೦೪)
ನೀವಿಲ್ಲಿ ಕೂರುವ ಹಕ್ಕು
ನಿಮದೆ ಚಲಾಯಿಸಿ ಕಾಯಿದೆ
ನಿಮಗಿತ್ತ ಸ್ವೇಚ್ಛೆ ಸ್ವಾತ್ಯಂತ್ರ
ಮೀಸಲಿಡದೆಯೂ ಮುಂಗಡ
ಕಾದಿರಿಸದೆಯೂ ಸಂಗಡ
ನಿಮಗಿತ್ತ ಗೌರವ ರಕ್ಷೆ

(೦೫)
ಹೊರಟಾಗ ಕಾರ್ಯನಿಮಿತ್ತ
ನೀ ಒಬ್ಬಂಟಿ ಪಕ್ಕದ ಸೀಟೇ
ನೆನಪಾಗಿಸುತ್ತಿರುವೆ ಸಕಲ
ನಾನೊಬ್ಬಂಟಿಯಲ್ಲ ಜತೆಗೆ
ನೀನಿರುವೆ ಜತೆ ಜತೆ ಖಾಲಿ
ಬಂದು ಹೋಗುವ ಜೀವನ ಶೈಲಿ !

– ನಾಗೇಶ ಮೈಸೂರು
೨೧.೦೪.೨೦೧೭

02018. ಕಗ್ಗ ೫೫ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ


02018. ಕಗ್ಗ ೫೫ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

“ಪ್ರತ್ಯಕ್ಷದಷ್ಟೇ ಸತ್ಯ, ಪ್ರಸ್ತುತ – ಪರೋಕ್ಷಾನುಭವ ಅನುಭೂತಿ !”