01195. ಸರಿದ ಯುಗಾದಿ..


01195. ಸರಿದ ಯುಗಾದಿ..
___________________


(೦೧)
ಹೋಳಿ ಹುಣ್ಣಿಮೆ
ಬಣ್ಣದೋಕುಳಿಯಾಟ
– ಮೌನ ಯುಗಾದಿ

(೦೨)
ಮರೆಸುವುದು
ಮೆರೆವಬ್ಬರ ಸದ್ದು
– ಪರಂಪರೆಯ

(೦೩)
ಆಚರಣೆಯೆ
ಅರ್ಥಹೀನ ಕಪಟ
– ಮನವಿಲ್ಲದೆ

(೦೪)
ಉಗಾದಿ ಬಟ್ಟೆ
ಕಾಯುವ ಕುತೂಹಲ
– ಮಾಲಲಿ ಮಾಯ

(೦೫)
ಯಾಕೋ ನಮನ
ಭಕ್ಷೀಸಿನ ಸಂಭ್ರಮ
– ಸಂಪ್ರದಾಯಕೆ

(೦೬)
ನಮಿಸುತ್ತಿತ್ತು
ಹರಸುತಿತ್ತು ಹಸ್ತ
– ದೂರು ದೂರವ

(೦೭)
ಮಾಡಲೊಲ್ಲರು
ಹಬ್ಬದಡಿಗೆ ನಿತ್ಯ
– ಸಿದ್ದದಡಿಗೆ

(೦೮)
ಹೊರನಾಡಲಿ
ಪಾಕೇಟು ಕ್ಯಾಲೆಂಡರು
– ಹಬ್ಬದ ಲೆಕ್ಕ

(೦೯)
ಸಿಕ್ಕುವುದಿಲ್ಲ
ಹಬ್ಬಕು ಬೇವು ಬೆಲ್ಲ
– ನೀರವ ದಿನ

(೧೦)
ವಾಟ್ಸಪ್ಪಿನಲಿ
ಹಾರೈಕೆ ವಿನಿಮಯ
– ಕಾಪಿ ಪೇಸ್ಟಲಿ

– ನಾಗೇಶ ಮೈಸೂರು
೦೨.೦೪.೨೦೧೭

(Picture source : social media)

Advertisements

01194. ಮೂರ್ಖರ ದಿನವರಿಯದಿರೆ ಮೂರ್ಖ..!


01194. ಮೂರ್ಖರ ದಿನವರಿಯದಿರೆ ಮೂರ್ಖ..!
_____________________________________


ಆಗುತ್ತಿದ್ದರೂ ಪದೇ ಪದೇ ಪ್ರತಿನಿತ್ಯ ಮೂರ್ಖರು
ಆಗಿಬಿಟ್ಟರಿದೊಂದು ದಿನ ಅಪರೂಪಕೆ ಬುದ್ದಿವಂತರು
ಕರೆಯುವುದೇಕೊ ಕಾಣೆ ಈ ದಿನವನು ಮಾತ್ರ
ಒಕ್ಕೊರಲಿನಿಂದ ಎಲ್ಲರು – ಮೂರ್ಖರ ದಿನವೆಂದು !

ಇರಬೇಕಲ್ಲವೆ ಮುನ್ನೆಚ್ಚರಿಕೆ ಸದಾ ಜಾಗೃತ ಸ್ಥಿತಿ ?
ಮುನ್ನೂರರವತ್ನಾಲ್ಕು ದಿನವು ಏತಿ ಎಂದರೆ ಪ್ರೇತಿ
ಏಪ್ರಿಲ್ ಒಂದಕೆ ಮಾತ್ರ ಬಂದಂತೆ ಬುದ್ದಿ ತಟ್ಟನೆ
ಕಟ್ಟೆಚ್ಚರದಲಿ ಕಾಯುವ ವಿಸ್ಮಯವೆ ಅತಿಶಯ..!


ಬೆಳಗೆದ್ದ ಗಳಿಗೆಯಿಂದ ಜಾಗರೂಕನಾಗಿದ್ದರು ಪ್ರಜೆ
ಯಾರ ಚೇಷ್ಟೆಗು ತುತ್ತಾಗದಂತಿದ್ದರು ಏಮಾರಿ ಲಜ್ಜೆ
ಮುನ್ನೆಚ್ಚರವೆ ಇರದ ಮಿಕ್ಕಾ ದಿನಗಳ ಪಾಡೇನು ?
ಮುರ್ಖನಾಗಿ ಮೋಸಹೋಗಿದ್ದೂ ಗೊತ್ತಾಗದ ಮೊದ್ದು..

ಮಕ್ಕಳಾಟಕೆ ಚಂದ ಮಕ್ಕಳಾಟಿಕೆ ಮುಠ್ಠಾಳ ಪಟ್ಟ
ಮಂಡಿಯ ನೆತ್ತರ ಹಾಗಲ್ಲ ಬದುಕ ರೀತಿ ಕಟ್ಟುವ ಚಟ್ಟ
ಅಂತಿದ್ದರು ಯಾಕೀ ಮನ ಮನುಜ ಸಹಜ ದೌರ್ಬಲ್ಯ ?
ಇರಬಾರದೆ ಎಚ್ಚರಿಕೆ ಕನಿಷ್ಠ ದಿಕ್ಕೆಟ್ಟು ಹೋಗದ ಹಾಗೆ…

ಹಾಳಾಗಲಿ ಆಚರಣೆ, ಇರಲಷ್ಟಿಷ್ಟು ಸ್ಮರಣೇ ನಿತ್ಯ
ಮೋಸ ಹೋಗುವವರಿದ್ದೆಡೆ ಮೋಸಗಾರರ ನೃತ್ಯ
ಮೂರ್ಖರಾಗದ ಪರಿ ಮೂರ್ಖತನ, ಸೀಮಿತವಿರೆ ದಿನಕೆ
ಬದಲೊಂದು ದಿನವಾಗೆ ಒಳಿತು, ಮಿಕ್ಕೆಲ್ಲ ದಿನ ಜಾಣತನ..


– ನಾಗೇಶ ಮೈಸೂರು
೦೧.೦೪.೨೦೧೭
(Picture source: Creative Commons)

01193. ತಲೆ ಕೆಟ್ಟ ಹೊತ್ತಲಿ…


01193. ತಲೆ ಕೆಟ್ಟ ಹೊತ್ತಲಿ…
__________________________


(೦೧)
ರೊಚ್ಚೆದ್ದ ಮನ
ಹುಚ್ಚು ಕುದುರೆ ಹತ್ತಿ
– ಕೂತಲ್ಲೇ ಯಾನ

(೦೨)
ಮನದುಗ್ರತೆ
ವ್ಯಗ್ರತೆ ಸಹಚರ
– ವ್ಯಕ್ತ ಅವ್ಯಕ್ತ

(೦೩)
ನಸುನಗುವ
ಮುಸುಡಿಯಡಿ ಕ್ರೌರ್ಯ
– ನಿಗೂಢ ಕಲೆ

(೦೪)
ಉದ್ರಿಕ್ತ ತನು
ಕಾರಿಕೊಂಡಾಗ ಸತ್ಯ
– ಪಿಚ್ಚನೆ ಭಾವ

(೦೫)
ರತಿ ಸುಖಕೆ
ಮನ್ಮಥನ ಬಯಕೆ
– ಮನ ಮಥನ

(೦೬)
ಪರಿಪೂರ್ಣತೆ
ಇಲ್ಲದವರಿಬ್ಬರು
– ಹುಡುಕಿ ಸುಸ್ತು

(೦೭)
ಶಿಸ್ತು ಸಿಂಗಾರ
ಕಾಲವ್ಯಯ ವಿಸ್ಮಯ
– ಕಿತ್ತು ಮಿಲನ

(೦೮)
ತಡವುತಿದೆ
ಉಡುಗೆಯಾಚೆ ಖುದ್ದು
– ಖಾಲಿ ಕೌತುಕ

(೦೯)
ತಲೆ ಕೆಟ್ಟಾಗ
ಬರೆಯಲೇನೋ ಸ್ಫೂರ್ತಿ
– ತಲೆ ಕೆಡಿಸಿ

(೧೦)
ಸಿಗಿದು ಹಾಕೊ
ಸಿಟ್ಟೆಲ್ಲಾ ಪದವಾಗಿ
– ಪ್ರಶಾಂತ ರಸ

– ನಾಗೇಶ ಮೈಸೂರು
೦೧.೦೪.೨೦೧೭
(Picture from Creative Commons)

01192. ಟಿಕೆಟ್ – ಪಾತಾಳ – ತಾಳ್ಮೆ – ಭರ್ಜರಿ


01192. ಟಿಕೆಟ್ – ಪಾತಾಳ – ತಾಳ್ಮೆ – ಭರ್ಜರಿ

(ಟಿಕೆಟ್ – ಪಾತಾಳ – ತಾಳ್ಮೆ – ಭರ್ಜರಿ)

ಸೆಲ್ಫಿ ತೆಗೆಯುವಾಟ, ಯಾಕವಸರ ಸ್ವಯಂ ಟಿಕೆಟ್ ಪಡೆಯೇ
ಬೆಟ್ಟ ಗುಡ್ಡ ಶಿಖರ ತುದಿಯ, ಬಂಡೆಕಲ್ಲಿನಡಿ ಜಾರೇ ಪಾತಾಳ
ತಾಳ್ಮೆಯಿರಲಿ ಸುರಕ್ಷತೆ, ಮುನ್ನೆಚ್ಚರಿಕೆಯಿರೆ ಬದುಕಿಸೊ ಸತ್ಯ
ಜೀವವಿರೆ ಗಟ್ಟಿ ಆಸ್ವಾದನೆ ಸಿಹಿ, ಭರ್ಜರಿ ಚಿತ್ರಕ್ಕಿಂತ ಮುಖ್ಯ !

– ನಾಗೇಶ ಮೈಸೂರು
೦೧.೦೪.೨೦೧೭
chouchoupadi

01191. ರೀಡೂ ಕನ್ನಡದಲಿ ಕಗ್ಗ ೫೩ ರ ಟಿಪ್ಪಣಿ :


01191. ರೀಡೂ ಕನ್ನಡದಲಿ ಕಗ್ಗ ೫೩ ರ ಟಿಪ್ಪಣಿ :

*ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೩*
*ಗುಣದ ಕಾರಣ ಮೂಲ, ವಿಸ್ಮಯದ ಸಂಕೀರ್ಣ ಜಾಲ..!*

ನಾವು ಹುಲ್ಲಿನ ಬಣ್ಣವನ್ನು ನೋಡಿದ ತಕ್ಷಣವೆ ಗ್ರಹಿಸಿಬಿಡುತ್ತೇವೆ – ಅದರ ಬಣ್ಣ ಹಸಿರು ಎಂದು. ಆದರೆ ಆ ಹುಲ್ಲಿಗೆ ಹಾಗೆ ಹಸಿರು ಬಣ್ಣ ಬಂದುದಾದರೂ ಎಲ್ಲಿಂದ ? ಅದೇನು, ಹುಲ್ಲಿಗೆ ನೀರು ಮತ್ತು ಲವಣ ಸತ್ವಗಳನ್ನು ಹೀರಲು ಮತ್ತು ತನ್ಮೂಲಕ ಬೆಳೆಯಲನುವು ಮಾಡಿಕೊಡುವ, ಕಂದು ಬಣ್ಣದ ಬೇರಿಂದ ಒದಗಿದ ಬಣ್ಣವೆ ? ಅಥವಾ ಅವನ್ನೆಲ್ಲ ಬೇರಿಗೆ ಸರಬರಾಜು ಮಾಡುವ ಮೂಲ ಹೊಣೆ ಹೊತ್ತ ಕೆಂಪು ಮಣ್ಣು, ತನ್ನಾಟದ ಮಾಯಾಜಾಲದಲ್ಲಿ ಅಂತಿಮವಾಗಿ ಹುಲ್ಲಿಗೆ ತೊಡಿಸಿದ ಹಸಿರಂಗಿಯೆ ? ಸೋಜಿಗವೆಂದರೆ ಬೇರಾಗಲಿ, ಮಣ್ಣಾಗಲಿ ಎರಡರಲ್ಲು ಹಸಿರು ಬಣ್ಣವೆ ಇಲ್ಲ ! ಆದರೆ ಅವೆರಡರ ಸಖ್ಯ ಮತ್ತು ಪೋಷಣೆಯಲ್ಲಿ ಚಿಗುರುವ ಹುಲ್ಲಿಗೆ ಮಾತ್ರ ಹಸಿರಿನ ದಟ್ಟ ಲೇಪನ..! ‘ಎಲ್ಲಿಂದ ತಂದು ಹಚ್ಚಿದವಪ್ಪಾ ಈ ಹಸಿರನ್ನು ?’ ಎಂದಿಲ್ಲಿ ವಿಸ್ಮಯಗೊಂಡಿದ್ದಾನೆ ಮಂಕುತಿಮ್ಮ.

ಪೂರ್ಣ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

– ನಾಗೇಶ್ ಎಮ್ ಎನ್