01197. ರಾಧಾಕೃಷ್ಣರ ಒಡಂಬಡಿಕೆ, ಇದು ಕವಿಯೊಬ್ಬನ ಬಡಬಡಿಕೆ..!


01197. ರಾಧಾಕೃಷ್ಣರ ಒಡಂಬಡಿಕೆ, ಇದು ಕವಿಯೊಬ್ಬನ ಬಡಬಡಿಕೆ..!
_______________________________________________________


ರಾಧೆ ಒಂದು ರೀತಿಯ ಕಾಲಾತೀತ ಪಾತ್ರ( ಟೈಮ್ಲೆಸ್ ಕ್ಯಾರೆಕ್ಟರ್) .. ಅವಳ ಹರ್ಷವಾಗಲಿ, ನಲಿವಾಗಲಿ, ನೋವಾಗಲಿ, ಬೇಸರವಾಗಲಿ – ಅಂದಿನಿಂದ ಇಂದಿನವರೆಗೂ ಅವಳೊಡನಾಡಿದ ಯಮುನೆ ಪ್ರವಹಿಸಿದ ಹಾಗೆ ನಿರಂತರವಾಗಿ ಹರಿಯುತ್ತಲೇ ಇದೆ. ಅವಳಾರಾಧಿಸಿದ ಮುರಾರಿಯನ್ನು ಮೀರಿಸಿ ಜನಮಾನಸದ ಅಂತರಾಳದಲ್ಲಿ ಬೇರೂರಿ ನೆಲೆಸಿಬಿಟ್ಟಿರುವ ಅವಳ ಕುರುಹು ಒಂದೇ ? ಎರಡೇ ? ಸಂಗತವಿರಲಿ ಬಿಡಲಿ – ಅದೆಷ್ಟೋ ಹೆಣ್ಣುಗಳ ಕರೆಯುವ ಹೆಸರಾಗಿ ಹಸಿರಾಗಿದ್ದಾಳೆ ರಾಧೆ.. ಗೊಲ್ಲನ ಹಾಡು ಹಾಡುವ ಯಾರೂ ರಾಧೆಯನ್ನು ಬಿಟ್ಟು ಹಾಡುವಂತಿಲ್ಲ.. ಅದರಲ್ಲೂ, ಅವನ ಬಾಲ್ಯದಲಂತು ಅವಳಿಲ್ಲದೆ ಅವನಿಲ್ಲವೆನ್ನುವಷ್ಟು ಆಳದ ಸಾಂಗತ್ಯ.

ಯಾಕೊ ಅಲ್ಲಿಂದಾಚೆಗೆ ಹೋದ ಮಾಧವ ಅವಳನ್ನು ಮಾತ್ರ ಮರೆಯದ ನೆನಪಿನ ಹಾಗೆ ಅಲ್ಲೇ ಬಿಟ್ಟು ಹೊರಟು ಹೋದ. ಬಹುಶಃ ಜತೆಗೊಯ್ದರೆ ತಮ್ಮಿಬ್ಬರ ಸಖ್ಯದ ಶ್ರೇಷ್ಠತೆ, ಅಮರತ್ವ ಸಾರಲಾಗುತ್ತಿರಲಿಲ್ಲ, ರಾಧೆಯ ಮಹತ್ತನ್ನು ಅಜರಾಮರಗೊಳಿಸಲಾಗುತ್ತಿರಲಿಲ್ಲ, ಅವಳ ಸ್ಮರಣೆಯನ್ನು ತನ್ನನ್ನು ಮೀರಿದಂತೆ ಕಾಲಾತೀತಗೊಳಿಸಲಾಗುತ್ತಿರಲಿಲ್ಲ ಎನ್ನುವ ಸ್ಪಷ್ಟ ಅರಿವಿತ್ತೇನೊ ಅವನಿಗೆ; ಅಥವಾ ಅವನನ್ನು ಮೀರಿ ಅಮರಳಾಗುವ ಹಾಗೆ ಮಾಡು – ಎಂದು ತಾನೇ ಕೋರಿಕೊಂಡಿದ್ದಳೇನೊ ರಾಧೆ ? ಹಾಗೆ ಕೋರಿದ ಕೋರಿಕೆಗೆ ತೆರುವ ಬೆಲೆ ತನ್ನ ಪ್ರೇಮವೇ ಎಂದು ಅವಳಿಗರಿವಿತ್ತೋ, ಇಲ್ಲವೋ.. ಹುಡುಗಾಟಕ್ಕೆ ಕೇಳಿದ್ದಳೊ, ಅವನ ಪ್ರೀತಿಯ ಪರೀಕ್ಷೆಗೆ ಕೇಳಿದ್ದಳೊ – ಒಟ್ಟಾರೆ ‘ ಅಸ್ತು ‘ ಎಂದವನ ಮನದಲ್ಲಿ, ಸ್ವತಃ ತಾನೇ ದೂರಾಗಿ, ಅವಳೊಂದಿಗೆ ತನ್ನ ನಿಸ್ವಾರ್ಥವನ್ನು ಸಾರುತ್ತ – ಅದನ್ನು ಸಾಧಿಸಬೇಕೆಂಬ ಆಲೋಚನೆ ಇತ್ತೆಂಬುದು ಅವಳ ತಕ್ಷಣದ ಅರಿವಿಗೆ ಬಂದಿರಲಾರದು.

ತನ್ನ ಅಂತಃಪುರದ ತುಂಬ ಅದೆಷ್ಟೋ ಮಹಿಷಿಯರಿಗೆ ಪತಿಯಾಗಿದ್ದವನಿಗೆ ರಾಧೆಯೊಬ್ಬಳು ಹೆಚ್ಚಾಗುತ್ತಿರಲಿಲ್ಲ – ಯಾವಾಗ ಬೇಕಿದ್ದರೂ ಅವಳಿಗೆ ಆ ಸ್ಥಾನ ನೀಡಿ ಕೂರಿಸಬಹುದಿತ್ತು. ಆದರೆ ಆಗವಳು ಹಲವಾರು ಸಾವಿರದಲೊಬ್ಬಳಾಗಿ ಕಳೆದುಹೋಗುತ್ತಿದ್ದಳೆ ಹೊರತು, ಈಗಿನಂತೆ ಅವನ ಸರಿಸಮಾನ ಸ್ತರದಲ್ಲಿ ನಿಲ್ಲಲಾಗುತ್ತಿರಲಿಲ್ಲ. ಅವನನ್ನೂ ಮೀರಿದ ಸ್ಮರಣೆಯಾಗಿ, ಭಾವಲೋಕದ ಕೊಂಡಿಯಾಗಿ, ಶುದ್ಧ ಪ್ರೀತಿ-ಪ್ರೇಮದ ಸಂಕೇತವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಈಗಲೂ ಕೃಷ್ಣನೆಂದರೆ ತಟ್ಟನೆ ಮನಸಿಗೆ ಬರುವ ಮೊದಲ ಹೆಸರು ರಾಧೆಯೇ ಹೊರತು ರುಕ್ಮಿಣಿ, ಸತ್ಯಭಾಮೆ, ಜಾಂಬವತಿಗಳಲ್ಲ. ಅಷ್ಟರ ಮಟ್ಟಿನ ಅಮರತ್ವ ದಕ್ಕಬೇಕಿದ್ದರೆ ಅವರಿಬ್ಬರೂ ಬೇರಾಗಲೇಬೇಕಿತ್ತು – ಅವರಿಬ್ಬರ ನೈಜ ಪ್ರೇಮದ ಕರ್ಷ ತನ್ನ ತುತ್ತತುದಿಯಲ್ಲಿರುವಾಗಲೆ. ಅದೇರಿದ ಶಿಖರವನ್ನು ಬಿಟ್ಟು ಕೆಳಗಿಳಿಯದೆ ಅಲ್ಲೇ ಅದಕ್ಕೊಂದು ಶಾಶ್ವತ ಗೋಪುರ ಕಟ್ಟಿ ದೇಗುಲವಾಗಿಸಿ ನಕ್ಕು ಬಿಕ್ಕುತಲೆ ದೂರಾದರವರು. ಕಾಡುವ ನೋವನ್ನವಳಿಗುಳಿಸಿ ತಾನು ನುಂಗಿಕೊಂಡ ನೋವಿಗೆ ನಗುವಿನ, ಕರ್ತವ್ಯದ, ಕಾರ್ಯಭಾರ ರಾಜಕಾರಣದ ಮುಸುಕ್ಹೊದಿಸಿ ಹಿಂದಿರುಗಿ ನೋಡದೆ ನಡೆದ ಮುರುಳಿಗೆ ಗೊತ್ತಿತ್ತು – ತನ್ನ ಪ್ರಭೆಯಡಿ ಸಿಕ್ಕಿದವರಾರು ತನ್ನನ್ನು ಮೀರಿ ಬೆಳಗುವುದು ಅಸಾಧ್ಯ ಎಂದು. ಬಾಲ್ಯದ ಗೆಳತಿಗೆ ಕೊಟ್ಟ ಮಾತು ನಡೆಸಬೇಕೆಂದರೆ ದೂರಾಗುವುದರ ಹೊರತು ಬೇರೆ ದಾರಿಯಿರಲಿಲ್ಲ.

ರಾಧೆ ತನ್ನ ವಿರಹದ ಬೇಗುದಿ, ದೂರಾದ ಯಾತನೆ, ಸಂಕಟವನ್ನು ಬಿಕ್ಕುತ್ತಲೆ ಯಮುನೆಯ ತಟದಲ್ಲಿ ಹಾಡಾಗಿ ಹೇಳಿಕೊಂಡು ಕೂತುಬಿಟ್ಟಳು – ಅದನ್ನು ಕೇಳಿ ಮರುಗಿದ ಜನಮಾನಸ ತಲತಲಾಂತರದವರೆಗೆ ಅದನ್ನು ಹಾಡಿಕೊಂಡೇ, ಕೊಂಡೊಯ್ಯುವ ಹಾಗೆ ಮಾಡಿ. ತನ್ನ ರಾಜಕೀಯದ ಕ್ರೀಡೆಯಲ್ಲಿ ಮುಳುಗಿ ಅವಳನ್ನು ಮರೆಯಲೆತ್ನಿಸಿದ ಮಾಧವ.

ಪ್ರೀತಿ, ಪ್ರೇಮದ ವಿಷಯ ಬಂದಾಗ, ಅವರಿಬ್ಬರ ದನಿಗೆ ಮಾತಾಗುವ ಪಾಡು ಪ್ರತಿ ಕವಿಯದು – ಅಂದಿನಿಂದ ಇಂದಿನವರೆಗೂ. ಅಂತಹದ್ದೇ ಎರಡು ಗೊಣಗಾಟ, ಗುಣಗಾನ ಈ ಕೆಳಗಿನ ಪದಗಳದು – ಒಂದು ಆಲಾಪ ರಾಧೆಯದಾದರೆ, ಮತ್ತೊಂದು ಕೃಷ್ಣನದು…

ನೀ ಬಯಸಿದ್ದಷ್ಟೇ ನಾ ಕೊಟ್ಟೆ..
_________________________________

ನೆನಪಿದೆಯಾ ರಾಧೆ, ಯಮುನೆಯ ತಟದಿ ನಾವಿಬ್ಬರು
ಗೋವಿನ ಕೋಟೆಯ ನಡುವೆ, ಕೊಳಲ ಗಾನದೇ ತಲ್ಲೀನ
ನುಡಿಸಿತ್ತಲ್ಲೆ ಆಕಳ ಘಂಟಾನಾದ, ಹಿನ್ನಲೆಯಲಿ ತಂಗಾಳಿ
ಒರಗಿ ಕೂತಿದ್ದೆ ನೀನು, ಮುಚ್ಚಿದ ಕಣ್ಣಲಿ ಧನ್ಯತೆ ಸಂಜೀವ..-||

ಮೆಲ್ಲಮೆಲ್ಲನೆ ಹರಿದವಳ, ಜುಳುಜುಳು ಸದ್ದು ಲಾಲನೆ
ಮನವರ್ಪಿಸಿ ಕೂತವಳು, ಮೌನವೇ ಮಾತಾದ ಲಲನೆ
ಸುರಲೋಕವೆ ಧರೆಗಿಳಿದಂತೆ, ಸುರಿದಿತ್ತಲ್ಲಾ ವರ್ಷಾಲಾಪ
ಪೊಟರೆಯ ನೆರಳಿತ್ತಲ್ಲ ಸಖ್ಯ, ನಮದೇ ಲೋಕದ ಸಾಂಗತ್ಯ..||

ಮುಗಿದಿದ್ದರೂ ನನ್ನ ನಾದ, ಮುಂದುವರೆಸಿತ್ತಲ್ಲ ಮಳೆ ಸದ್ಧು
ಮುಂಗುರುಳಡಿ ಕಣ್ಣಲಿ, ಸುರಿದಿತ್ತಲ್ಲ ಆರ್ದ್ರವತೆ ಮಾರ್ದವ
ಕೇಳುತ್ತಿತ್ತೇನೊ ನಯನ, ತುಟಿ ಮಾತಾಗಬಿಡದ ಆರಾಧನಾ
ತದೇಕ ಚಿತ್ತದ ಧ್ಯಾನ, ಹೇಳಬಾರದೇ ಸಖಿ ಮನದಾ ಜೂಜು ?||

‘ಏನ ಹೇಳಲಿ ಮಾಧವ, ಈ ಕ್ಷಣವಾಗದು ನಿರಂತರ ಶಾಶ್ವತ
ನೀರಗುಳ್ಳೆಯ ಹಾಗೆ ಒಡೆದು, ಕರಗಿ ಹೋಗುವುದೆನ್ನುವ ಭೀತಿ
ಭಾವದುತ್ತುಂಗದಲಿದೆ ಮನಗಳು, ಶಿಖರದೆತ್ತರ ತುದಿಯಲ್ಲಿ
ಏರಲಿನ್ನೇನು ಇಲ್ಲ’ ಎಂದಳು, ‘ಬರಿ ಜಾರುವ ದಾರಿಯ ಆತಂಕ..’||

‘ಮಾಡಲಾರೆಯ ಗೊಲ್ಲ, ಈ ಗಳಿಗೆಯ ಶಾಶ್ವತ ?’ ನಿನ್ನಾ ನುಡಿಗೆ
‘ತುಟ್ಟಿ ಬೆಲೆ ದುಬಾರಿ ತೆರಬೇಕು ರಾಧೆ’ ನಾ ನುಡಿದೆ ಚಿಂತೆಯಲಿ
‘ಬಿಡು ಚಿಂತೆ ಮುರಾರಿ, ನನ್ನ ಹೆಸರಾಗಬೇಕು ನಿನ್ನಾ ಗಡಿ ಮೀರಿ
ತೋರಿಬಿಡು ನಿಸ್ವಾರ್ಥ ಪ್ರೀತಿಗೆ, ನಿನ್ನನೆ ಬಿಟ್ಟುಕೊಡು ನನಗಾಗಿ !’||

ಮಿಕ್ಕಿದ್ದೆಲ್ಲ ಇತಿಹಾಸ ಗೆಳತಿ, ನೀ ಬಯಸಿದ್ದನೆ ನಾ ಕೊಟ್ಟೆನಷ್ಟೆ
ಅದೇ ದಿನವಾಯಿತು ಕೊನೆ, ತುಸುತುಸುವೆ ದೂರಕೆ ಸರಿದಿದ್ದೆ
ಸುರಿವ ಮಳೆ ನಿಂತರೂ, ನೀ ಭುವಿಯಾದೆ ಫಲವತ್ತು ಹುಲುಸಾಗಿ
ನಮ್ಮನಟ್ಟಿದ ದೂರವೆ, ದಾರಿಯಾಗಿತ್ತು ಹೆಸರಾಗಿಸೆ ನಮ್ಮಿಬ್ಬರ..||

ನೋಡೀಗ ದ್ವಾಪರ ದಾಟಿ, ಕಲಿಯಡಿಯಿಟ್ಟ ಹೊತ್ತಲು ಈ ಜಗದೆ
ನನ್ನ ಪ್ರೇಮದುಸಿರು ನೀನು, ಮಿಕ್ಕವರೆಲ್ಲ ಮಹಿಷಿಯರಾಗಿ ನೇಪಥ್ಯ
ಕೊಟ್ಟ ಮಾತನುಳಿಸಿಕೊಂಡೆ, ಹೇಳಿಕೊಳಲೆಂತು ದುಃಖವ ಪುರುಷ
ಹೇಳಿಕೊಂಡೇ ಸಾಗಿಹರು, ನನ್ನ ಮರೆತರು ನಿನ್ನ ಮರೆಯದ ಹಾಗೆ..!||

– ನಾಗೇಶ ಮೈಸೂರು
೦೪.೦೪.೨೦೧೭

ನಿನಗಿಂತಲೂ ನಾನೇ ಅಮರ..
_________________________


ಯಮುನಾನದಿ ನದಿ ತೀರ, ಯಾಕೋ ಬಿಕೋ ಅನ್ನುತಿದೆ
ಗೋದಾವರಿ ತಾಯಿ ಮಡಿಲು, ಬಿಕ್ಕುತಿದೆ ಯಾಕೊ ಬರಿದೆ
ಗಂಗೆ ಕೃಷ್ಣಾ ಕಾವೇರಿತನಕ, ಹುಡುಕಾಡಿದರು ಸಿಗಲಿಲ್ಲ
ಎಲ್ಲಿ ಹೋದನೋ ಆ ಗೊಲ್ಲ, ಇನಿತು ಸದ್ದಿಲ್ಲ ಸುಳಿವೇ ಇಲ್ಲ..||

ಗೋಕುಲ ಬಿಟ್ಟು ಹೊರಟವ, ಮಾಧವ ಮತ್ತೆ ಕಾಣಲೇ ಇಲ್ಲ
ಹೋರಾಟ ನಡೆಸುತ್ತದೇನೊ, ಮನದೀ ಪೈಪೋಟಿ ಗಮನಿಸಲಿಲ್ಲ
ಗ್ರಹಿಸಲಿಲ್ಲವೆಂದೆಂತೆನ್ನಲಿ ಅವ, ವೇಗನಿರತ ರಾಜಕೀಯ ದಾಳ
ಗಾಳಕ್ಕೆ ಸಿಕ್ಕ ಪುಡಿ ಮೀನು ಬಲಿ, ಆದಾಗ ತಾನೆ ಭರ್ಜರಿ ಶಿಕಾರಿ ?||

ಮೆಟ್ಟಿಲಾಗಿಸಿಕೊಂಡನೆ ಪೋರ ? ಮೆಟ್ಟಿಲಾದನೆ ಸವರಿ ಮನಸ ?
ಮೆಟ್ಟುವವನಾ ಕಾಯಕ ಅಪಾರ, ಮೆತ್ತೆಯಾಗಿಸಿಕೊಳ್ಳಲೆಂತು ಅವನಾ..
ಬಿಡದಾದರೂ ದುಗುಡ ಪ್ರೀತಿಯದು, ಮುಸುಕ ಹೊದ್ದು ಕಪಟದ ನಾಟಕ
ನಿಷ್ಕಲ್ಮಶ ಪ್ರೇಮ ಬಿರುದು ಭಾರ ಬಿಡು, ಸಾಕಿತ್ತಲ್ಲ ಚರಣದಾಸಿಯ ಚಾಕರಿ..||

ನೋಡಿದೆಯಾ – ದೂರುವುದೂ ಕಠಿಣ, ಆರಾಧಿಸುವ ಜನ ಸುತ್ತಲ ಸಾಗರ
ಆರೋಪಿಸಿದ ಪಟ್ಟ ಪದವಿ ಸೂತ್ರ, ಬೇಡಿದ್ದರೂ ಪಾತ್ರ ಧರಿಸಬೇಕು ವೇಷ
ಭರಿಸಲೆಂತೋ ಸಹನೆಯ ಹೆಸರಲಿ ? ಸ್ವಾರ್ಥಮನದ ಕೂಗಿನ ಮೊನೆಚಲಿ
ತ್ಯಾಗದ ಜತೆ ಹಿರಿತನ ಕಟ್ಟಿಸಿ ಕೈಯ, ಮಾಯ ನೀನು ಬಾಲ್ಯದಲಷ್ಟೆ ಗೆಳೆಯ..||

ಎಲ್ಲಾದರೂ ಇರು ಎಂತಾದರು ಇರು, ಕಾಡುವುದಿಲ್ಲ ಸಾರುವುದಿಲ್ಲ ನನ್ನಾಣೆ
ನೀನಿತ್ತ ವಚನ ಗುಟ್ಟಿನ ಜೀವಾಳ ಬಲ್ಲೆ, ಮಲ್ಲೆಯಾಗುವೆ ಬರಿ ನಿನ್ನ ಕಂಪೆರೆದು
ನಿನ್ನವತಾರದ ಬಿರುಸಿಗೆ ಸಿಕ್ಕ ಮೊಗ್ಗು, ನಾ ಹೂವಾಗರಳದೆ ಉಳಿದ ದೃಷ್ಟಾಂತ
ಮತ್ತೊಬ್ಬಳಿಲ್ಲ ಅದಕೆ ತಾನೇ ಮುರಾರಿ, ಕಾಲ ನನ್ನೇ ಜಪಿಸಿವೆ ನಿನ್ಹೆಸರೇನು ಮೀರಿ !||

– ನಾಗೇಶ ಮೈಸೂರು
೦೪.೦೪.೨೦೧೭

(Picture source : social media)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s