01200. ಬುಗುರಿ – ಸೋಪು – ಪುನೀತ – ಅಲ್ಪವಿರಾಮ


01200. ಬುಗುರಿ – ಸೋಪು – ಪುನೀತ – ಅಲ್ಪವಿರಾಮ


ಬುಗುರಿಯಂತೆ ಸುತ್ತಿ, ಚಿಗರೆಯಂತೆ ಚಿಮ್ಮಿ ನಲಿವ ಹೆಣ್ಣು
ಅರೆ ಬೆತ್ತಲೆ ಮಜ್ಜನ, ಕುಣಿಯುತ ಸೋಪು ಹಚ್ಚಲೆ ಕಿಚ್ಚು
ಪುನೀತ ಭಾವದಿ ತಾ, ತೆರೆದ ಕಣ್ಣು ಬಿಟ್ಟ ಬಾಯಲಿ ಕೂತು
ನೋಡುವಾಗ ಅಲ್ಪವಿರಾಮವಂತೆ, ನಡುವೆ ಬಹ ಧಾರವಾಹಿ !

– ನಾಗೇಶ ಮೈಸೂರು
೦೬.೦೪.೨೦೧೭
(Picture source : internet / social media)
#chouchoupadi

01199. ತುತ್ತು ಮಳೆ


01199. ತುತ್ತು ಮಳೆ
_____________________


ಮೋಡದವ್ವನಿಕ್ಕಿದ ಹನಿ ತುತ್ತು
ಮುತ್ತು ಮುತ್ತಾಗಿ ಚದುರಿ ಉದುರಿ
ಉಂಡುಂಡೆ ಕೈ ತುತ್ತಾಗಿ ಬಿತ್ತಾ
ಹಿಗ್ಗಿ ಹೀರುತ್ತಾ ಮಣ್ಣವ್ವ ಫಲವತ್ತ

ಯಾರಪ್ಪನದೊ ಅವ್ವನದೊ ಜಗ
ಯಾವಣುವಿಗೆ ಯಾವುದೊ ಬೀಗ
ಜಲದಾಮ್ಲ ಕರಗಿಸಿ ಸರಿ ಬೇಟ
ಹನಿಯುಕ್ಕಿಸಿ ಕಾರಂಜಿಯ ರಸದೂಟ

ಎಂತಪ್ಪ ರಭಸದ ಧಾರೆ ಮುಸಲ
ಸ್ಖಲನದಲೂ ಇರುವುದೇ ಆಕ್ರೋಶ?
ತುಂತುರ ಹೊತ್ತಲಿ ಶಾಂತಿ ಸಂಧಾನ
ಕಿವಿ ಕಚ್ಚೆ ಮಂಥರೆ ಹಠ ಹಿಡಿದ ಕೈಕೆಯೇ

ಏನಾದರಾಗಲಿ ಕೊನೆಗಿಷ್ಟು ಜೀವಜಲ
ಮಣ್ಣುಪಾಲಾಗಿ ಪೊರೆಯುವ ಫಸಲು
ಯಾವ ಕಾಲದ ಒಡಂಬಡಿಕೆ ನಿಸರ್ಗಕೆ
ಬಿಡದೆ ಪಾಲಿಸಿವೆ ಎರಡೂ ಕಡೆ ಬಿಡದೆ

ಪ್ರಕೋಪ ವಿಕೋಪ ಹಿನ್ನಲೆಯ ಸ್ವರೂಪ
ಬಿಟ್ಟೆಲ್ಲ ನೋಡಿದರೆ ಮಣ್ಣ ವಾಸನೆ ಹಿತ
ಹನಿ ಜತೆಗೆ ಹುಟ್ಟಿ ಕವಿ ಕವಿತೆ ಕಾಮನೆ
ಮಿಲನದೋಕುಳಿ ಸ್ಪುರಿಸಿ ಸೃಷ್ಟಿಗೆ ನಾಂದಿ


– ನಾಗೇಶ ಮೈಸೂರು
೦೬.೦೪.೨೦೧೭

(Picture source : social media and self click)