01203.ಕಪ್ಪು


01203.ಕಪ್ಪು
________________


ಎದುರಿಗೆ ಕೂತ ಕಪ್ಪು
ಕುಡಿಯದೆ ವಿಧಿಯಿಲ್ಲ
ಅದೇ ಎಲ್ಲಾ ಬಾಯಿಗೂ ;
ಬೀಗ ಹಾಕೊ ಬಿಚ್ಚೊ ಜಾಣ.

ಕಪ್ಪು ತೆರೆದರೆ ಬಿಳಿ ದೊರೆ
ಬಿಚ್ಚಿಕೊಳ್ಳುವ ನಗೆ ಮಲ್ಲಿಗೆ
ಮನಸಾಗದಿದ್ದರಂತೆ ಕತ್ತಲು
ಒಳಗೆಲ್ಲ ತುಂಬಿಕೊಂಡ ದೇಹ..

ಗೆದ್ದಾಗ ಕೊಡುವುದು ಕಪ್ಪೆ
ವಟಗುಟ್ಟಿದರು ಬಣ್ಣದ ಕಪ್ಪೆ ;
ಅಸಲು ಬೆಳ್ಳಿಯಾ ? ಅನುಮಾನ
ತೀರಿಸುವ ಗೆರೆ ಕಪ್ಪು ದೌರ್ಭಾಗ್ಯ..

ಏನಾಗುತ್ತಿತ್ತು ಗೊತ್ತ ಕಪ್ಪಿನ
ಕತ್ತಲಿರದ ಬರಿ ಉರಿ ಬಿಸಿಲು
ಮರದಡಿಯ ನೆರಳು ಉಣಲು
ಆಗುತ್ತಿತ್ತೆಲ್ಲಿ ಬೆತ್ತಲು ಜಗವೆಲ್ಲ

ಸುಖಾ ಸುಮ್ಮನೇಕೆ ಬಿನ್ನಾಣ ?
ಕಪ್ಪನೆಲ್ಲ ಕಿತ್ತು ಹಾಕೋಣ
ಶುರುವಾಗಲಿ ಕೂದಲು ಕಣ್ಣು
ಇದ್ದರೆ ತಾನೆ ಕಪ್ಪ ನೋಡುವ ಪಜೀತಿ !

– ನಾಗೇಶ ಮೈಸೂರು
೦೮.೦೪.೨೦೧೭

01202. ಇದ್ದಕ್ಕಿದ್ದಂತೆ ತಟ್ಟನೆ..


01202. ಇದ್ದಕ್ಕಿದ್ದಂತೆ ತಟ್ಟನೆ..
__________________________


ಇದ್ದಕ್ಕಿದ್ದಂತೆ ತಟ್ಟನೆ
ನಿಂತೇ ಹೋಯಿತೆಲ್ಲ..
ಯಾಕಾಯ್ತೋ ಏನೋ
ತೀರಿದಂತೆ ಋಣಭಾರ..

ಚಡ್ಡಿ ಎಳೆದು ಸಿಂಬಳ
ಸುರಿಸುತ್ತ ಟಿಕ್ಕಿ ಲಗೋರಿ
ಬೈದಾಡುತ್ತ ಪೋಲಿ ಸಂಗ
ಇಂದೆಲ್ಲರು ನಾಪತ್ತೆ ಶಿವನೇ..

ಅವಲಕ್ಕಿ ಪವಲಕ್ಕಿ ರಿಂಗಾಟ
ಅಳಿಗುಳಿ ಚೌಕಾಭಾರ ಪಗಡೆ
ಕುಂಟಾಬಿಲ್ಲೆ ದಡಬಾವಿ ಸಖಿ
ಯಾವ ಕೂಸಿನ ಕುಂಡಿ ಹಿಂದೊ..?

ಅದೇ ಆಡಾಡುತ್ತ ದಾಯಾದಿ
ಹೊಸಮುಖ ಹಸನ್ಮುಖ ವ್ಯಾಧಿ
ಕ್ರಿಕೆಟ್ಟು ಚಾರಣ ಚಿಗುರು ಮೀಸೆ
ದೇಕಿದ ಸೈಕಲ್ಲು ಸಿನಿಮ ಮಾಯ..

ಸಿಕ್ಕಿದರೆಷ್ಟೊ , ದಕ್ಕಿದವೆಷ್ಟೋ ?
ಹೆಜ್ಜೆಜ್ಜೆಗು ಅಡೆತಡೆ ಎಡವಿದ್ದು
ಅಂಟಿಕೊಂಡಿದ್ದೆಷ್ಟೋ ನೂರಾರು
ಕಚ್ಚಿಕೊಳ್ಳದೆ ಹೋಯ್ತೆಲ್ಲ ಯಾಕೋ..

ಬಿಟ್ಟಾಕುತ ಯಾವುದೊ ನಂಟು
ಬೆನ್ನಟ್ಟಿದ್ದು ಬದುಕಿನ ಒಗಟು
ಗಂಡ ಹೆಂಡತಿ ಮಕ್ಕಳು ಮನೆ
ಕಚ್ಚಿದ್ದು ತೆನೆ, ಬಲಿಯದ ಪರಿ ಬೇನೆ !

ತಳ್ಳೋ ಹಾದಿಯ ಕಲ್ಲು ಮುಳ್ಳು
ಸಿಕ್ಕರೂ ಅವಳಾರೋ ಅವನಾರೊ..
ಅರೆಗಳಿಗೆ ಏನನ್ಯೋನ್ಯ ಭ್ರಮೆ ಜಾರೆ
ಗೊತ್ತೇ ಇರದವರಂತಿರಿಸಿದ್ದು ವ್ಯಾಪಾರ..

ಅದೆಲ್ಲಕ್ಕೂ ಮೀರಿದ್ದಿದು ಅನ್ಯಾಯ
ಕಚ್ಚದೇ ಹೋಯ್ತಲ್ಲ ತನ್ನೊಳಗೂ !
ತಾನೇ ತನಗಾಗಿಬಿಟ್ಟರೆ ಅಪರಿಚಿತ
ಯಾವ ಋಣದ ಲೆಕ್ಕಕೆ ಹಾಕೋಣ?

– ನಾಗೇಶ ಮೈಸೂರು
೦೮.೦೪.೨೦೧೭
(Picture source: social media/ internet)