01206. ಮಂಕುತಿಮ್ಮನ ಕಗ್ಗ ೫೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..


01206. ಮಂಕುತಿಮ್ಮನ ಕಗ್ಗ ೫೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..
ತಿಳಿ ಮೂಢ ಮನವೇ, ಸತ್ಯದಸ್ತಿತ್ವವಿರಬಹುದು ನಡು ಹಾದಿಯಲ್ಲೂ..

01205. ಯಾರೂ ಆಗದ ಘೋರ..


01205. ಯಾರೂ ಆಗದ ಘೋರ..
__________________________

ದುಃಖ ಖೇದವಿದೆ ನನಗೀಗೀಗ
ಸುದ್ದಿಯಾಗುವುದಿಲ್ಲವಲ್ಲ ಎಂದು
ಇದ್ದಾಗಲಂತೂ ಆಗಲಿಲ್ಲ ಆಗುತ್ತಿಲ್ಲ
ಕಂತೆ ಒಗೆದೋದ ಮೇಲೂ ಖೊಟ್ಟಿಯೆ ?

ಸುದ್ಧಿ ಓದಿದಾಗೆಲ್ಲ ತಳಮಳ
ಯಾರೊ ಇನ್ನಿಲ್ಲವಾದ ಸಂತಾಪ
ಯಾವ ಪತ್ರಿಕೆ ಮೂಲೆಗೂ ಸಲ್ಲ
ತುರುಕಲೂ ಅನರ್ಹ ಜೀವ ಜೀವನ..

ಸುದ್ಧಿಯಾಗಬಯಸದ ವೈರಾಗ್ಯ
ಹುಳಿ ದ್ರಾಕ್ಷಿಯ ದಾಟಿದ ಹಂತ
ಮಾಡಬಹುದಿತ್ತೇನೆಲ್ಲ ಬರಿ ಭಜನೆ
ಬಿಡದ ನೆಪಗಳ ಜತೆ ಅಸಹನೆ..

ಮೊತ್ತ ಇರಲಿಲ್ಲ ತಾಕತ್ತು ಸರಕು
ಇದ್ದೆಡೆ ಕೊಡಲಿಲ್ಲ ಮನ ಬಿಡದ ಜರೂರತ್ತು
ಅಲ್ಲೋ ಇಲ್ಲೋ ಗೊಂದಲ ಕಪಿ ಚಿತ್ತ ಜಿಗಿತ
ಸಂಬಳ ಸವಲತ್ತನೆಣಿಸುತ್ತ ನೆಗೆತ ಕುಣಿದಿತ್ತ

ಮಿಕ್ಕಿದ್ದೊಂದಾಸೆ ಅಳಿದುಳಿದ ಕೆಳೆ ಚೂರು
ಸಿಟ್ಟಿಗೊ ಮುಟ್ಟಿಗೊ ಮಾತಾಡದ ಬಂಧು ಬಳಗ
ಅಲ್ಲಿಲ್ಲಿ ಕಿವಿಗೆ ಬಿದ್ದ ಹೆಸರು ಯಾವುದೊ ಋಣಕೆ
ಲೊಚಗುಟ್ಟಿಸಿ ಕ್ಷಣ ಸಂತಾಪ – ದಕ್ಕಿದ್ದಷ್ಟೆ ಈ ಜನ್ಮಕೆ..


– ನಾಗೇಶ ಮೈಸೂರು
೦೭.೦೪.೨೦೧೭
Picture source: Creative Commons

01204. ಅನಿಸುತ್ತಿಲ್ಲ ಏನು..!


01204. ಅನಿಸುತ್ತಿಲ್ಲ ಏನು..!
_________________________


ಅನಿಸುತ್ತಿಲ್ಲ ಏನು
ಮಿಕ್ಕಿಲ್ಲ ಒಳಗೇನು ಇನ್ನು
ನೋಡಲ್ಲಿ ಭರ್ತಿ ಖಾಲಿ ಪಾತ್ರೆ
ನೀ ಕೇಳುವ ಸದ್ದು ನಿಜ ಅದರದ್ದೇ..

ಯಾಕನಿಸುತ್ತಿಲ್ಲ ಗೊತ್ತಿಲ್ಲ
ಹೇಳಲೇನು ಹೊಳೆಯುತ್ತಿಲ್ಲ
ಅಂತನಿಸುವ ದ್ವಂದ್ವಕೆ ಉತ್ತರವೆಲ್ಲಿ
ಹುಡುಕಲಿ ಹೇಳು ? ನನಗಂತೂ ಗೊಂದಲ.

ಅನಿಸುತ್ತಿತ್ತು ಹುಚ್ಚುಚ್ಚಾಗಿ
ಹನಿಸುತಿತ್ತು ಬೇರಾಗಿ ಎದೆಗೆ
ಹುಚ್ಚೆಂದು ದೂರಿ ನೀ ತಳ್ಳಿದ ದೂರ
ಅಳೆದು ನೋಡಲೂ ಯಾಕೋ ಮನಸಿಲ್ಲ..

ಅಂದುಕೊಂಡೇ ಪದೇಪದೆ
ಯಾಕನಿಸುತ್ತಿಲ್ಲ ಅನಿಸುತ್ತಿದೆ ?
ಹಾಗನಿಸುವ ಅನಿಸಿಕೆ ಯಾರನಿಸಿಕೆ ?
ನೀನಿಲ್ಲದ ಭಾವಕೆ, ಅನಿಸಿತೇಕೆ ವ್ಯರ್ಥ ಭುವಿ ?

ಅನಿಸುತ್ತಿಲ್ಲ ಎಂದೆಣಿಸುವುದು
ಮುನಿಸಿನ ದನಿ ಎಂದನಿಸುವುದು
ಮುನಿದ ಮನಕೆ ಮನಸಾದರೆ ನೀನು
ಮತ್ತನಿಸಿಕೆ ಬರಲಿದೆ, ಎಂದನಿಸತೊಡಗಿದೆ !


– ನಾಗೇಶ ಮೈಸೂರು
೦೮.೦೪.೨೦೧೭
Picture source : wiki how, internet / social media