01208. ಇನ್ನೂ ಯಾರೂ ಓದದ ಪುಸ್ತಕ…..


01208. ಇನ್ನೂ ಯಾರೂ ಓದದ ಪುಸ್ತಕ…..
___________________________________


ಇನ್ನೂ ಯಾರೂ ಓದದ, ಪುಸ್ತಕವೀ ಮನಸು
ನೀನಾದರೂ ಮಸ್ತಕಕೇರಿಸಿಕೊಳ್ಳೆಯಾ, ತುಸು ?
ಮುಡಿ ಮಲ್ಲಿಗೆಯಾಗುವ ಚೆಂದ, ಸೊಬಗಿಲ್ಲದಿದ್ದರೇನು
ಹೆಜ್ಜೆಗೆ ಮುಳ್ಳಾಗದ ಜಾಣತನ, ಸೊಗಡಿಲ್ಲವೇನು ?

ನೋಡು ನಾನಾಗಲೊಲ್ಲೆ ಸಿಂಗಾರ, ಚಂದನದ ಗೊಂಬೆ
ತರಲೆಲ್ಲಿಂದ ಫಳಫಳಿಸೊ ಹೊನ್ನ, ಮೈಬಣ್ಣ ತುಂಬೆ ?
ಕಟ್ಟುಮಸ್ತು ಮೈಕಟ್ಟು ವೈಯ್ಯಾರ, ಬೆಡಗಿಗಲ್ಲ ದೊರೆ
ನಯ ನಾಜೂಕಿಲ್ಲ ನಿಜ, ಹತ್ತಾಳಿನ ಸಮ ದುಡಿದರೆ !

ಒರಟು ಮಾತೊಳಗೆ ಮಿಡಿವ, ಹೃದಯಾ ಮೃದುಲ
ಪುಸ್ತಕದ ಮಾತ ಅಷ್ಟಿಷ್ಟಾಡುವ, ನಾಗರೀಕ ಹಂಬಲ
ನೀರೆಯಲ್ಲ ಮಾಮೂಲಿ, ನೀರಾಗಿ ಪಾತ್ರೆಯ ಪಾತ್ರ
ಸೀರೆ ಮಾತ್ರವಲ್ಲ, ನೀನುಡಿಸಿದ್ದೆಲ್ಲ ತೊಡುವ ಸೂತ್ರ !

ಕಪ್ಪು-ಕಸ್ತೂರಿ, ಶ್ರೀಗಂಧ-ಸುಗಂಧ ಅನ್ನುತಾ ಸುಮ್ಮನೆ
ಚಿಗುರಿಸಲಾರೆ ಹುಸಿ ನಿರೀಕ್ಷೆ, ಮಾನವ ಸಹಜ ತಾನೇ ?
ಮೀರಲಾರೆ ಮಿತಿಯ, ದಾಟಲಾರೆ ಗೆರೆ ಸಮತೋಲನ
ಹೊಂದಿಸುವೆ ಹೊಂದಾಣಿಸುವೆ, ಹೊಂದಿಕೊಂಡೆ ನಡೆಯೋಣ !

ರಕ್ಷಾಪುಟವ ನೋಡಿ, ಬದಿಗಿಟ್ಟು ನಡೆದಿಹರು ಮಂದಿ
ಒಳಗಿಲ್ಲದಿದ್ದರು ತಿರುಳು, ಹೊದಿಕೆಗೆ ಮರುಳಾಗಿ ಬಂಧಿ
ನೀನೆಸಗದಿರದೇ ತಪ್ಪ, ಒಮ್ಮೆ ಕೊಂಡುಕೊಳ್ಳೋ ವ್ಯಾಪಾರ
ತಿದ್ದಲೆಲ್ಲಿ ಮತ್ತೆ, ಮರುಗಿದರು ಹಿಂತಿರುಗಲಾಗದ ದೂರ..


– ನಾಗೇಶ ಮೈಸೂರು
೧೦.೦೪.೨೦೧೭
(Picture source: creative commons)

01207. ಒಳ್ಳೆ ಪುಸ್ತಕವಿದೆ, ಬಾ ಓದೇ ಗೆಳತೀ


01207. ಒಳ್ಳೆ ಪುಸ್ತಕವಿದೆ, ಬಾ ಓದೇ ಗೆಳತೀ
___________________________________


ಒಳ್ಳೆ ಪುಸ್ತಕವಿದೆ, ಬಾ ಓದೇ ಗೆಳತೀ
ಬಚ್ಚಿಟ್ಟುಕೊಂಡಿದೆ, ಎದೆ ಗೂಡೊಳಗೆ
ಬರೆದುಕೊಂಡಿದೆ ನಿನ್ನ, ನೆನಪಿನ ಸಾಲ
ಅಸಲು ತೀರಿಸಲಿನ್ನೇನಿದೆ, ಉಪಾಯ ?

ನೀನೆ ಕೊಟ್ಟ ಮುತ್ತು, ಮಾತಾದ ಹೊತ್ತು
ಮಾತನಾಡದೆ ಮೌನ, ಬರೆದುಕೊಂಡಿತ್ತು
ಮೂಕನೆಂದು ಹಂಗಿಸಿ, ನೀ ನಕ್ಕಾ ಗಳಿಗೆ
ನೋಡೀಗ ಹೇಗೆ, ಎಲ್ಲ ಸವಿ ಪದಗಳಾಗಿವೆ !

ಜೋತಾಡೊ ಮೊಳದುದ್ದ, ಮಲ್ಲಿಗೆಯ ಶುದ್ಧ
ಮನಸಿಟ್ಟುಕೊಂಡು ಕಾದೆ, ಎಷ್ಟೊಂದು ಯುದ್ಧ !
ಬಿಟ್ಟುಕೊಡದ ವಾದ, ನಂಬಿದ್ದ ಕಾಯುವ ನಂಟು
ನಮ್ಮ ಕೆಳೆಯನೂ ಕಾದೀತು, ನಂಬಿದ್ದೆ ಗೊತ್ತೇನೆ ?

ಪುಟ್ಟ ಮಗುವಿನಂತೆ, ನಕ್ಕು ಚಿಮ್ಮುವ ನಡಿಗೆ
ಜಾರೋ ಮುಂಗುರುಳ, ಸರಿಸೊ ಸಲಿಗೆ ಒಡನಾಟ
ತಪ್ಪು ತಿಳಿದ್ದಿದ್ದರೆನ್ನುವ, ಭೀತಿಯಲಿ ಅಮುಕ್ತ
ತುಟಿ ಬಿಚ್ಚದೆ ಬರೆದಿದ್ದು, ಸಾವಿರಾರು ಬಗೆ ಕವನ !

ಯಾರೂ ಓದರು, ಯಾರ ಬಳಿಯಿಲ್ಲ ಕೀಲಿ ಕೈ
ನಿನ್ನೊಳಗ ಪುಳಕಿಸಿ, ಮುದ ತರುವ ಖುರ-ಪುಟ
ಒಂದಿನಿತು ಕೊಂಕಿಲ್ಲ, ಹೊಗಳಿಕೆಯ ಮಾತಿಲ್ಲ
ನೀನಿದ್ದ ಹಾಗೆ ಬರೆದ, ಪುಸ್ತಕಕೆ ಮುನ್ನುಡಿಯಾಗು ನೀ !


– ನಾಗೇಶ ಮೈಸೂರು
೧೦.೦೪.೨೦೧೭.
(Picture source : Creative Commons)